ಹೊಸತಲೆಮಾರಿನ ತರುಣರ ಕವಿತೆಗಳನ್ನು ಓದುವಾಗ- ಅವು ಹೊಸತನ್ನು ಹೇಳುವ ಆವೇಶದಲ್ಲಿ ದೊಡ್ಡ ದನಿಯನ್ನು ಪಡೆದುಕೊಂಡೋ; ಅಥವಾ ಅಸ್ಪಷ್ಟ ನುಡಿಚಿತ್ರಗಳನ್ನು ಕಟ್ಟಿಕೊಂಡೋ ಹೊರಬರುತ್ತಿರುವುದು ಸಾಮಾನ್ಯವಾಗಿ ವೇದ್ಯವಾಗುತ್ತದೆ. ಅಥವಾ , ಮತ್ತದೇ ಸವಕಲು ಪ್ರೀತಿ-ಪ್ರೇಮ ,ಮಧುಬಟ್ಟಲು, ತುಟಿ ಮತ್ತಿತರ ಅಂಗಾಂಗಗಳ ಸುತ್ತ ಸುತ್ತುಹಾಕುತ್ತಿರುತ್ತದೆ.
ಕವಿತೆಯನ್ನು ಸರಳವಾಗಿ ಹೇಳುವುದೆಂದರೆ ಇಂದಿನ ದೊಡ್ಡ ದೊಡ್ಡ ವಿಮರ್ಶಕರು ಅಂದುಕೊಳ್ಳುವಂತೆ ಭಾಷಿಕ ದಾರಿದ್ರ್ಯವೇನೂ ಅಲ್ಲ. ಅದೊಂದು ಕಲೆ. ಸರಳಾಭಿವ್ಯಕ್ತಿಯಲ್ಲೇ ಅಪಾರಾರ್ಥವನ್ನು ಹೊಳೆಯಿಸಿಬಿಡುವ ಕ್ರಮ ಹೆಚ್ಚು ಆಪ್ಯಾಯಮಾನ. ಆದರೆ ಕವಿತೆಯ ಸರಳತೆಯು ಮಾತಾಗಿಬಿಡುವ ಅಪಾಯವನ್ನು ನೀಗಿಸಿದ್ದೇ ಆದಲ್ಲಿ ಕವಿಗೂ ಮತ್ತು ಕವಿತೆಗೂ ಯಶಸ್ಸು ಲಭಿಸುತ್ತದೆ.
ನದೀಮ ಸನದಿಯವರ ಹುಲಿಯ ನೆತ್ತಿಗೆ ನೆರಳು ಸಂಕಲನವನ್ನು ಎದುರುಗೊಳ್ಳುವ ಮೊದಲು ಮತ್ತು ನಂತರ ಮೇಲಿನ ಮಾತುಗಳು ಬಂದುಹೋಗಿದ್ದವು; ಬಂದುಹೋದವು. ನದೀಮ ಸನದಿ ಅವರ ಚೊಚ್ಚಲ ಸಂಕಲನವಿದು. ಅವರದು 'ಕಾವ್ಯ ಕುಟುಂಬ'. ಅವರ ಕುಟುಂಬದ ಬಿ.ಎ. ಸನದಿ ಅವರು ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತರು. ಇಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನದೀಮ ಅವರು ಬೆಳಗಾವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾವ್ಯಸ್ಫೂರ್ತಿ ಅವರಿಗೆ ಸ್ವಾಭಾವಿಕವಾಗಿ ಒಲಿದಿದೆ.
ನದೀಮ ಅವರ ಕಾವ್ಯವು ಸಮಕಾಲೀನ ಜಗತ್ತನ್ನು ಅದರ ಅಮಾನವೀಯ ನಡೆಯಿಂದ ಕುಗ್ಗಿಸುವ ಶಕ್ತಿಗಳ ವಿರುದ್ಧ ಹರಿಹಾಯುತ್ತವದೆ.ಅದು ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ, ಜಗತ್ತನ್ನೇ ದಹಿಸುವ ಕಾಡ್ಗಿಚ್ಚು ಕೂಡ
'ಜನರ
ಮನಗಳಲ್ಲಿ ಮನೆಗಳಲ್ಲಿ
ಹೊತ್ತಿ ಉರಿಯುತ್ತಿರುವ
ಕ್ರೋಧಾಗ್ನಿಯ ಕಂಡು
ತಣ್ಣಗಾಗಿದೆ'.
(ಕಾಡ್ಗಿಚ್ಚು)
ಈ ಬಂಡಾಯ ಅನೇಕ ಕಡೆಗಳಲ್ಲಿ ತೆಳುವಾಗಿ ಕಂಡರೂ, ಸರಳವಾಗಿ ಮತ್ತು ಆಪ್ತವಾಗಿ ಕಾಣಿಸಿಕೊಳ್ಳುತ್ತದೆ.
ಹಿಂಸೆಯ ಮುಖ ಮತ್ತು ಅದೇ ಸಂದರ್ಭದಲ್ಲಿನ ಮಾನವೀಯ ಮುಖಗಳನ್ನು 'ಗಲಭೆ' ಕವಿತೆ ಕಟ್ಟಿಕೊಡುತ್ತದೆ.
ಗಲಭೆಕೋರನೊಬ್ಬ
ಓಣಿಯೊಂದರಲಿ ನುಗ್ಗಿ
ಪೇದೆಯೊಬ್ಬನ ಮನೆಗೆ
ಬೆಂಕಿಹಚ್ಚುತ್ತಿದ್ದ
ಬೆಂಕಿ ಬಿದ್ದ ಮನೆಯ ಪೇದೆ
ಜೀವ ಭಯದ ಹಂಗು ತೊರೆದು
ಗಲಭೆಕೋರನ ಮನೆಯ
ಬೆಂಕಿ ನಂದಿಸುತ್ತಿದ್ದ.
(ಗಲಭೆ)
ಸಂಕಲನದ ಶೀರ್ಷಿಕೆ ಕೂಡ ಇದೇ ಮಾದರಿಯದ್ದು- 'ಹುಲಿಯ ನೆತ್ತಿಗೆ ನೆರಳು'. ಹಿಂಸೆಯನ್ನು ಪ್ರೀತಿಯಿಂದ ನಂದಿಸುವ ಬಯಕೆ ಕವಿಯದು. ಸಂಕಲನದ ಉದ್ದಕ್ಕೂ ಈ ಶೋಧ ಕಾಣಿಸುತ್ತದೆ. ಮಧ್ಯೆ ಮಧ್ಯೆ ಮಾತಾಗಿ ಸಿಡಿದು ಕವಿತೆಯ ಆವರಣದಿಂದ ಹೊರಬಂದುಬಿಡುತ್ತವೆ! ಈ ಕೊರತೆಯ ಹೊರತಾಗಿಯೂ ಹದವಾದ ಭಾವ ನಮ್ಮನ್ನು ತಟ್ಟುತ್ತದೆ.
ಹೃದಯ ಗಾಜಿನ ಆಟಿಕೆ
ಒಡೆದೇ ಹೋಯಿತು
ವೇದನೆಗೀಗ ಸಾವಿರ ಮುಖಗಳು
(ಪ್ರೇಮದಹನ)
ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಜ್ಞೆಯುಳ್ಳ ಕವಿತೆಗಳಿವೆ. 'ನೆರೆಮನೆಯ ಮುದುಕಿ' ಕವಿತೆಯ ವಿಡಂಬನೆ ತೀಕ್ಷ್ಣವಾಗಿದೆ. ತೀರಿಕೊಂಡ ಮುದುಕಿಯು
ಮುಚ್ಚಿದ ಕಂಗಳಿಂದ ದಿಟ್ಟಿಸಿ
ನನ್ನನ್ನೇ ನೋಡುತ್ತ
ಒಳಗೊಳಗೇ ನಗುತ್ತಿದ್ದಾಳೆ.
ಒಂದನ್ನು ತುಳಿದು ಮತ್ತೊಂದು ಮೇಲ್ಮೆಗೆ ಬರುವ, ಆ ಮೂಲಕ ಸುಖವನ್ನು ಕಾಣುವ ಸಂಗತಿಯು 'ಆ ಹೂವು'
ಕವಿತೆಯಲ್ಲಿದೆ.
ಹೂವಾಡಗಿತ್ತಿ
ಆ ಮೊಗ್ಗು
ಹೂವಾಗಿ
ಕಣ್ಬಿಡುವ ಮೊದಲೇ
ಕಿತ್ತುತಂದು
ಮಾಲೆಗಳ ಕಟ್ಟಿದಳು
ಭಕ್ತರು
ಅವುಗಳ
ಮಂದಿರ ಮಜಾರಗಳ
ದೇವರುಗಳಿಗೆ
ಮುಡಿಸಿ ಮೆರೆದರು
ವರ್ತಮಾನದ ತಲ್ಲಣಗಳಿಗೆ ದನಿಯಾಗುವಾಗ, ಅದನ್ನು ಅಡಗಿಸುವ ಹುನ್ನಾರಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ನಾಲಿಗೆ ಸೀಳಬಹುದು, ಕೈ ಕಡಿಯಬಹುದು, ಕಾಲು ಮುರಿಯಬಹುದು, ನೀರಿಗೆ ಎಸೆಯಬಹುದು, ಬೆಂಕಿಹಚ್ಚಬಹುದು, ಗುಂಡುಹೊಡೆಯಬಹುದು.. ಇಷ್ಟಾದರೂ ಕವಿತೆ ಸಾಯುವುದಿಲ್ಲ. ಏಕೆಂದರೆ ಕಲೆ/ಕಾವ್ಯಕ್ಕೆ ಕೊಲೆಗಡುಕರಿಲ್ಲ.
ಕವಿತೆ
ಉಸಿರಾಡುತ್ತಲೇ ಇದೆ
(ಆದರೂ)
ಇಡೀ ಸಂಕಲನದ ಹುಡುಕಾಟವೂ ಇದೇ-
ಇದ್ದಾರೆ ಇದ್ದಾರೆ
ಇಲ್ಲಿ ಎಲ್ಲರೂ ಇದ್ದಾರೆ
ಮನುಷ್ಯತ್ವರ ಹೊರತು
ಇಲ್ಲಿ ಎಲ್ಲರೂ ಇದ್ದಾರೆ.
ಇದೇ ಬಗೆಯ ಸರಳತೆಯಲ್ಲಿ ಸಂಕೀರ್ಣತೆಯನ್ನು ಮುಟ್ಟುವ ಕವಿತೆಗಳು ನದೀಮ ಅವರಿಂದ ಹೊರಬರಲಿ.
*
ಕಾಜೂರು ಸತೀಶ್
No comments:
Post a Comment