ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, August 17, 2020

ಭಾರದ್ವಾಜರ 'ಕ್ರಮಣ' - ಕೊಡಗಿನ ಕಾದಂಬರಿ ಲೋಕದ ವಿಶಿಷ್ಟ ಕ್ರಮಣ

ಭಾರದ್ವಾಜ ಕೆ ಆನಂದತೀರ್ಥ ಅವರ 'ಕ್ರಮಣ' ಕಾದಂಬರಿಯನ್ನು ಓದಿದೆ. 'ಕಳೆದುಕೊಂಡವರು' ಓದಿದಾಗ ಅನಿಸಿದ ಅದೇ ಖುಷಿಯ ಅನುಭವ ಮತ್ತೆ ಜೊತೆಯಾಯಿತು.


ಕನ್ನಡ ಸಾಹಿತ್ಯದಲ್ಲಿ ಪುರೋಹಿತಶಾಹಿ ನೆಲೆಯನ್ನು ಅದರ ಒಳಗಿದ್ದುಕೊಂಡೇ ಹಲವು ಆಯಾಮಗಳಲ್ಲಿ ಗ್ರಹಿಸಿದ, ವಿಶ್ಲೇಷಿಸಿದ ಅನೇಕರಿದ್ದಾರೆ. Critical Insider ಅನಂತಮೂರ್ತಿಯವರ 'ಸಂಸ್ಕಾರ' ಆ ನೆಲೆಯಲ್ಲಿ ಹೆಚ್ಚು ಗಮನಿಸಬೇಕಾದ ಕೃತಿ. ನನ್ನ ಓದಿನ ಮಿತಿಯಲ್ಲಿ, ಅದರ ನಂತರ ನನಗೆ ಮುಖ್ಯವೆನಿಸಿದ ಕೃತಿ ಭಾರದ್ವಾಜರ 'ಕ್ರಮಣ'.

'ಕ್ರಮಣ'ದ ಪಾತ್ರಗಳ ವರ್ತನೆಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಹಲವು ತಾತ್ತ್ವಿಕ ಕೋನಗಳಲ್ಲಿ ಶೋಧಿಸಬಹುದು[oedipus complex(ಭಾರ್ಗವನಿಗೆ ತನ್ನ ತಾಯಿಯ ಪ್ರಾಯದ ಹೆಂಗಸಿನೊಂದಿಗಿದ್ದ ಲೈಂಗಿಕ ಸಂಬಂಧ) ,dream consciousness(ಅಂಜಿಯ ಕನಸಿನಲ್ಲಿ ಶಾಸ್ತ್ರಿಗಳು ಬಂದು ಸಾವಿಗೆ ಕಾರಣ ತಿಳಿಸಿದ್ದು]. ಪ್ರತೀ ಪಾತ್ರದ ಎರಡು ಮುಖಗಳನ್ನು ,ಎರಡು ಧ್ರುವಗಳನ್ನು ಕಾದಂಬರಿ ಮುಟ್ಟಿನೋಡುತ್ತದೆ. ಪಾತ್ರಗಳನ್ನು ಕೇವಲ ವಿಜ್ರಂಭಿಸುವುದು ಅಥವಾ ಹೀಗಳೆಯುವುದನ್ನು ಮಾಡದೆ, ನಿರ್ಣಯಗಳನ್ನು ಓದುಗನಿಗೂ ಪೂರ್ಣವಾಗಿ ಬಿಟ್ಟುಕೊಡದೆ ಚಲಿಸುತ್ತದೆ. ಎಂದರೆ, ಮಾನವೀಯ ಹುಡುಕಾಟವೇ ಈ ಕಾದಂಬರಿಯ ಹಿಂದಿರುವ ಕೇಂದ್ರ ಪ್ರಜ್ಞೆ .

'ಕ್ರಮಣ'ವು ಒಂದು ವರ್ಗದ/ವ್ಯವಸ್ಥೆಯ ಟೀಕೆಯಷ್ಟೇ ಆಗಿ ಉಳಿದುಬಿಡುವುದಿಲ್ಲ. ಅದರಲ್ಲಿ ಚಿಕಿತ್ಸಕ ದೃಷ್ಟಿಕೋನವಿದೆ. ಕಾಮ, ಲೈಂಗಿಕತೆಯ ಕುರಿತು ಹೇಳುವಾಗಲೂ ಕೇವಲ ಉದ್ರೇಕಕಾರಿ ವರ್ತನೆಗೆ ಅದು ನಿಂತಿಬಿಡುವುದಿಲ್ಲ. ಲೈಂಗಿಕತೆಯ ಪಾವಿತ್ರ್ಯತೆಯನ್ನು ಅದು ಕಾಪಾಡುತ್ತದೆ.
*


ಅವರ ಭಾಷಿಕ ಬಳಕೆ ಅಭಿವ್ಯಕ್ತಿಯ ಕ್ರಮ, ಮತ್ತು ಚಿಂತನಾ ಕ್ರಮಕ್ಕೆ ಕೆಳಗಿನ ವಾಕ್ಯಗಳು ಸಾಕ್ಷಿ:

¶'ನಾನು ಸತ್ತಮೇಲೆ ನನ್ನ ತಿಥಿ ಗಿಥಿ ಅಂತ ಏನೂ ಮಾಡೋದು ಬೇಡ. ನನ್ನ ಹೆಣ ಸುಟ್ಟ ನಂತರ ಬೂದಿನ ಹೊಳೆಗೋ ಕೆರೆಗೋ ಬಿಡು, ಅಲ್ಲಿಗೆ ಮುಗೀತು. ಯಾವನ್ಗೋ ಅನ್ನ ಹಾಕೋ ಚಟ ಬೇಡ. ಯಾವನು ನಿಜವಾಗಿ ಹಸಿದಿರುತ್ತಾನೋ ಅವನಿಗೆ ಊಟ ಹಾಕು ಸಾಕು. ಅದಕ್ಕೆ ಇಂತದೇ ತಿಥಿ ಅಂತ ಏನೂ ಇರೋದಿಲ್ಲ...'


¶'ನಮ್ಮ ಮೆರವಣಿಗೆ ಹೊರಟಿತು. ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಇದ್ದ ಕಾರಣ ಜೀಪು ಗುಂಡಿಗೆ ಇಳಿದಾಗ ಮುಗ್ಗರಿಸಿದಂತೆ ಆಗುತ್ತಿತ್ತು. ನಾವು ನಿಂತಿದ್ದವರು ಹಿಂದೆ ಮುಂದೆ ಜೋಲಾಡುತ್ತಿದ್ದೆವು..'


¶'ಇವನು ಹುಟ್ಟಿದಾಗ ನಾನು ಗಂಡೋ ಹೆಣ್ಣೋ ಅಂತ ಕೇಳಲಿಲ್ಲ . ಬದಲಿಗೆ ಮಗುವಿನ ಕಾಲು ಸರಿ ಇದ್ಯಾ ಅಂತ ಕೇಳಿದ್ದೆ. ಎಲ್ಲಿ ನನ್ನ ಮಗು ನನ್ನ ಹಾಗೆ ಕಾಲು ಊನವಾಗಿ ಹುಟ್ಟಿಬಿಡುತ್ತೋ ಅನ್ನುವ ಭಯ ನಂಗೆ ಇತ್ತು.'

*
ಕಾಲು ಊನ ಎನ್ನುವ ಕಾರಣಕ್ಕೆ ಸ್ವ-ಜಾತಿಯಲ್ಲಿ ಹೆಣ್ಣು ಸಿಗದಿದ್ದಾಗ ಕೃಷ್ಣಶಾಸ್ತ್ರಿ , ತನಗಿಂತ ಆರು ವರ್ಷ ದೊಡ್ಡವರೂ, ದೇವಸ್ಥಾನದಲ್ಲಿ ಕಸ ಗುಡಿಸುವವರೂ,ವಿಧವೆಯೂ ಆದ ಗೌರಮ್ಮನನ್ನು ಮದುವೆಯಾಗುತ್ತಾರೆ. ಆ ಕಾರಣಕ್ಕಾಗಿ ಕುಟುಂಬದಿಂದ ಹೊರಹಾಕಲ್ಪಡುತ್ತಾರೆ, ಪೂಜೆ ಮಾಡುವ ಕೆಲಸವನ್ನೂ ಕಳೆದುಕೊಳ್ಳುತ್ತಾರೆ.

ಗೌರಮ್ಮ ತೀರಿಕೊಂಡ ಮೇಲೆ ಮಗ ಭಾರ್ಗವನೊಂದಿಗೆ ಬದುಕುವ ಶಾಸ್ತ್ರಿಗಳಿಗೆ ಕೃಷಿ ಮತ್ತು 'ಶಾಸ್ತ್ರ ಹೇಳುವ' ಕಾಯಕ. ತನ್ನಲ್ಲಿ ಬರುವವರ ಸಮಸ್ಯೆಗಳನ್ನು ಆಲಿಸಿ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿ ಪರಿಹಾರ ಸೂಚಿಸುತ್ತಿದ್ದರು.
ಸುಲಿಗೆಗಿಂತ ಜನರ ಒಳಿತು ಅವರ ಉದ್ದೇಶವಾಗಿತ್ತು. ಜನ ಅದನ್ನು ಮಾಂತ್ರಿಕ ಶಕ್ತಿ ಎಂದುಕೊಂಡಿದ್ದರು. ಆದರೆ, ಮೌಢ್ಯವನ್ನು ಬಿತ್ತುವ, ಅಮಾಯಕರ ತಲೆಯೊಡೆಯುವ ಕೆಲಸವನ್ನು ಶಾಸ್ತ್ರಿಗಳು ಮಾಡುವುದಿಲ್ಲ.

ರಾಷ್ಟ್ರೀಯ ಓಟಗಾರನಾಗುವ ಕನಸು ಹೊತ್ತ ಭಾರ್ಗವನಿಗೆ ಮೊಟ್ಟೆ ಮತ್ತು ಮಾಂಸ ತಿನ್ನುವ ಅಗತ್ಯ ಬಂದಾಗ ಅದಕ್ಕೆ ಶಾಸ್ತ್ರಿಗಳ ತಕರಾರೇನೂ ಎದುರಾಗುವುದಿಲ್ಲ.( "ನೀನು ಕುಂಟನ ಮಗ ಓಡ್ತೀನಿ ಅಂತೀಯ, ಓಡೋದಾದರೆ ಓಡು, ಮೊಟ್ಟೆ ಅಲ್ಲ ಮಾಂಸ ಬೇಕಾದ್ರೂ ತಿನ್ನು"). ಆ ಮೂಲಕ ಆಹಾರ ಪದ್ಧತಿಯ ಕುರಿತ ಗ್ರಹೀತಗಳನ್ನು (ದನದ ಮಾಂಸದ ಕುರಿತೂ)ಕಾದಂಬರಿಕಾರರು ಬಿಡಿಸುತ್ತಾರೆ.


ತನ್ನ ಮಗ ವಿಧವೆಯಾದ ಕೆಲಸದವಳೊಡನೆ ಕೂಡುತ್ತಿರುವ ವಿಚಾರವನ್ನು ಅರಿತಿದ್ದರೂ ತೋರಗೊಡದೆ, ಅವಳಿಗೆ ಮತ್ತೊಂದು ಮದುವೆ ಮಾಡಿಸುತ್ತಾರೆ.ಮಗ ಮತ್ತು ಅವಳ ಸಂಬಂಧ, ತನ್ನ ಪತ್ನಿಯನ್ನು ಪರೋಕ್ಷವಾಗಿ ಕೊಂದ ವಿಚಾರಗಳು ಸಾಯುವ ದಿನ ಬರೆದ ಪತ್ರದಿಂದ ವೇದ್ಯವಾಗುತ್ತದೆ.


ಮನೆಗೆಲಸಕ್ಕಿದ್ದ ಅಂಜಿಯ ಪ್ರಾಮಾಣಿಕತೆ ಇಲ್ಲಿ ಗಮನ ಸೆಳೆಯುತ್ತದೆ. ಕುಂಟನ ಮಗ ಓಟಗಾರನಾಗುವ ಬಗೆಯೂ ಕೂಡ ಸಿದ್ಧಮಾದರಿಯನ್ನು ಮುರಿಯುವ ಪ್ರತೀಕ.
*


ಒಂದು ತುದಿಯಲ್ಲಿ ಉಳಿದುಕೊಳ್ಳುವ ಹಂಬಲ, ಇನ್ನೊಂದು ತುದಿಯಲ್ಲಿ ನಶ್ವರತೆ, ಒಂದೆಡೆ ನಂಬಿಕೆ ಮತ್ತೊಂದೆಡೆ ಹುಸಿತನ...ಈ ದ್ವಂದ್ವಗಳ ಜಿಜ್ಞಾಸೆ ಕಾದಂಬರಿಯಲ್ಲಿದೆ.

ಹಸಿವು ಮತ್ತು ಆಹಾರ ಪದ್ಧತಿ , ನಂಬಿಕೆ ಮತ್ತು ವಾಸ್ತವ, ಅಹಮ್ಮಿಕೆ ಮತ್ತು ಮುಗ್ಧತೆ, ಪ್ರೇಮ ಮತ್ತು ಕಾಮ, ಜಾತಿ ಮತ್ತು ಪೂರ್ವಗ್ರಹ, ನೀತಿ ಮತ್ತು ಅನೀತಿ, ಸ್ತ್ರೀ ಮತ್ತು ಪುರುಷ - ಇವುಗಳ ಮುಖಾಮುಖಿ ಕಾದಂಬರಿಯ ಉದ್ದಕ್ಕೂ ಕಾಣಸಿಗುತ್ತದೆ.
*

'ಕ್ರಮಣ'ದಲ್ಲಿ ಕೃಷ್ಣಶಾಸ್ತ್ರಿಯು ತೀರಿಕೊಳ್ಳುವವರೆಗೆ ಇದ್ದ ಜೀವಂತಿಕೆಯು ಅದರ ಉತ್ತರಾರ್ಧದಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಭಾರ್ಗವನ ತೀರ್ಥಯಾತ್ರೆಯ ಸನ್ನಿವೇಶದಲ್ಲಿ ಪ್ರವಾಸದ ವಿವರಗಳೇ ಇಡಿಕಿರಿದಂತೆ ಅನಿಸುತ್ತದೆ. ಭೌಗೋಳಿಕ ವಾಸ್ತವವನ್ನು ಕಾದಂಬರಿಯ ವಾಸ್ತವದೊಂದಿಗೆ ಮಿಳಿತಗೊಳಿಸಲು ಹೊರಡುವಾಗ ಈ ಬಗೆಯ ಸಂದಿಗ್ಧತೆಗಳು ಓದುಗನಲ್ಲಿ ಕಾಡುತ್ತವೆ.

*


ಎಂದಿನಂತೆ ಭಾರದ್ವಾಜರ ಕೃತಿಗಳು ಚರ್ಚೆಗೆ ಒಳಗಾಗಲಿಲ್ಲ. ಕನಿಷ್ಟ ಜಿಲ್ಲೆಯ ಒಳಗೆಯಾದರೂ ಇದು ನಡೆಯಬೇಕಿತ್ತು/ನಡೆಯಬಹುದಿತ್ತು. ಭಾರತೀಸುತರ ನಂತರದ ಕೊಡಗಿನ ಪ್ರಮುಖ ಕಾದಂಬರಿಕಾರ ಭಾರದ್ವಾಜರ ಕೃತಿಗಳು ಈ ನಾಡಿಗೆ ತಲುಪಲಿ. ಹೇಗಾದರೂ ಸರಿ.

ನನ್ನನ್ನು ಓದಿಸಿದ ಅವರಿಗೆ ಋಣಿ.
*
ಕಾಜೂರು ಸತೀಶ್



No comments:

Post a Comment