ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, June 30, 2020

ಕಾಗುಣಿತ, ABCD, ಅಧಿಕಾರಿ, ನಿರುದ್ಯೋಗಿ etc!

KAS ಅಧಿಕಾರಿಯೊಬ್ಬರು ಬರೆದುಕೊಂಡಿದ್ದ ತಮ್ಮ ಆ ದಿನದ ಅನುಭವಗಳನ್ನು ಓದುತ್ತಿದ್ದೆ. ಕನ್ನಡ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡಿದ್ದ ಅವರ ಬರೆವಣಿಗೆಯಲ್ಲಿ ಅನೇಕ ಕಾಗುಣಿತದ ತಪ್ಪುಗಳಿದ್ದವು!
*

' ಇದು ನಿಜ್ವಾಗಿಯೂ ಅವರೇ ಬರ್ದಿದ್ದಾ?'
'ಹೌದು'
'ಏಳ್ನೇ ಕ್ಲಾಸ್ fail ಆದವ್ರೂ ಇದ್ಕಿಂತ ತಪ್ಪಿಲ್ದೆ ಬರೀತಾರೆ'
'(smiley )'

ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಸಂದೇಶವನ್ನು ಓದಿ ದೂರದೇಶದ ಒಬ್ಬರು ಹೀಗೆ ಪ್ರತಿಕ್ರಿಯಿಸಿದ್ದರು.
*

"ಕಾಗುಣಿತ ತಿಳಿಯದ ಕನ್ನಡ ಮೇಷ್ಟ್ರು , singular- pluralಗಳಿದ್ದಾಗ ಬಳಸಬೇಕಾದ ಕ್ರಿಯಾಪದಗಳ ಅರಿವೂ ಇಲ್ಲದ ಇಂಗ್ಲೀಷ್ ಮೇಷ್ಟ್ರು ..." ಇಂತಹ ಸಂಗತಿಗಳು ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿರುತ್ತವೆ. ಓದು-ಬರೆಹಗಳನ್ನು ಚೆನ್ನಾಗಿಯೇ ಬಲ್ಲ ಇಂಥವರ ವಿದ್ಯಾರ್ಥಿಗಳು ಮತ್ತು ಕೈಕೆಳಗೆ ದುಡಿಯುವ ನೌಕರರು ತಮ್ಮ ಹಣೆಬರೆಹವನ್ನು ಶಪಿಸಿಕೊಂಡು ಆಯುಷ್ಯವನ್ನು ಮುಗಿಸಿಬಿಡುತ್ತಾರೆ.

ಮತ್ತೆ 'ಅದೇ' ಪರಂಪರೆ ಬೆಳೆದು ನಿಲ್ಲುತ್ತದೆ.
*

ನನಗೆ ಎಷ್ಟೋ ಬಾರಿ ಅನಿಸಿವುದು : 'ಆಡಳಿತಾತ್ಮಕ ವಿಭಾಗದ ಉನ್ನತ ಹುದ್ದೆಯಲ್ಲಿರುವವರಿಗೆ ಓದು-ಬರೆಹ ಬೇಕಿಲ್ಲ. ವ್ಯಾವಹಾರಿಕ ಜ್ಞಾನ ಮತ್ತು ತಂತ್ರ ಇದ್ದರೆ ಸಾಕು (IQಗಿಂತ EQ). ಅವರಿಗೆ ತಂತ್ರಜ್ಞಾನದ ಬಳಕೆ ಗೊತ್ತಿರಲೇಬೇಕೆಂದೇನೂ ಇಲ್ಲ. ಆ ಕೆಲಸವನ್ನು ಅವರ ಅಧೀನದಲ್ಲಿರುವ ನೌಕರರು ಮಾಡುತ್ತಾರೆ. ಹಾಗಾಗಿ ಅಂಥವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯವಾದರೂ ಏನು!' ಎಂದು.
*
ಕಾಗುಣಿತ ತಿಳಿಯದಿರುವವರನ್ನು ಆಯ್ಕೆ ಮಾಡುವ ಮೌಲ್ಯಮಾಪಕನಿಗೂ ಕಾಗುಣಿತ ತಿಳಿದಿರುವುದಿಲ್ಲ. ಎಲ್ಲೋ ಸಂಭವಿಸಿದ ಭ್ರಷ್ಟತೆ ಇಡೀ ವ್ಯವಸ್ಥೆಯನ್ನೇ ಹೇಗೆ ಬುಡಮೇಲು ಮಾಡುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇದು.
*
ಏಳು ಪದವಿಗಳನ್ನು ಪಡೆದಿರುವ ಬಳ್ಳಾರಿಯ ವ್ಯಕ್ತಿಯೊಬ್ಬರು (ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸುತ್ತಿರುವ) ಬರೆದ 'ನನಗೊಂದು ನೌಕರಿ ಒದಗಿಸಿ' ಎಂಬ ಪತ್ರವನ್ನು ನೋಡಿ ಇವೆಲ್ಲಾ ಮನಸ್ಸಿನಲ್ಲಿ ಬಂದುಹೋದವು. ನಮಗೆ ನಾವೇ ಶಿಕ್ಷೆ ವಿಧಿಸಿಕೊಳ್ಳಬೇಕಾದ ಕಾಲದಲ್ಲಿ ಇಂತಹ ಶಿಕ್ಷೆಗಳು ನಮಗೆ ಪ್ರಾಪ್ತಿಯಾಗುತ್ತಲೇ ಇರುತ್ತವೆ!
*

-ಕಾಜೂರು ಸತೀಶ್

Tuesday, June 23, 2020

ಹಿಂದುಳಿದವನು



ಎಲ್ಲರೂ ಏರುದನಿಯಲ್ಲಿ ಮಾತನಾಡುತ್ತಿದ್ದಾಗ
ಇವನು ಸದಾ ಮೌನಿಯಾಗಿರುತ್ತಿದ್ದ

ಎಲ್ಲರೂ ಸರಸರ ನಡೆಯುತ್ತಿದ್ದಾಗ
ಇವನು ಸದಾ ಹಿಂದಿರುತ್ತಿದ್ದ

ಎಲ್ಲರೂ ಗಬಗಬ ತಿನ್ನುವುದರಲ್ಲಿ ಮುಳುಗಿದ್ದಾಗ
ಇವನು ಮಂಕಾಗಿ ಮೂಲೆಯಲ್ಲಿ ಕುಳಿತಿರುತ್ತಿದ್ದ

ಎಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದಾಗ
ಇವನು ಕತ್ತಲ ಶೂನ್ಯದೊಳಗೆ ಕಣ್ಣುನೆಟ್ಟಿರುತ್ತಿದ್ದ

ಆದರೂ
ಗುಂಡಿನ ದಾಳಿ ನಡೆದಾಗ
ಮೊದಲು ಸತ್ತುಬಿದ್ದದ್ದು ಇವನೇ ಆಗಿದ್ದ.
*


ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್


Sunday, June 21, 2020

Ant is Dead



#Kannada: Kajooru Sathish


#English: Kamalakar Bhat


Ant is Dead
------------------
Listen up,
An ant is dead at my feet.

What?
Don't you hear me?

I am saying this loudly
An ant is dead at my feet.
*
Lord,
When death comes to me
Let at least one ant remain alive
At my feet
To thus loudly call out.

------------------------------------

ಇರುವೆ ಸತ್ತಿದೆ
------------------

ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ

ಏನು?
ಕೇಳಿಸುತ್ತಿಲ್ಲವೇ?

ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*

ಪ್ರಭೂ..
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲ ಬುಡದಲ್ಲಿ.
---

-#ಕಾಜೂರು_ಸತೀಶ್

Footwear that We Are



#Kanada: Kajooru Sathish


#English: Kamalakar Bhat

Footwear
Is what we are;
While mother earth bearing us lies nonchalantly under every foot
We are not embarrassed at being trampled, again and again.
Though one is on the left, another on the right, one east, another west,
There are no conflicts, murders, bloodshed among us.
When you take off and keep us in pairs,
We are like a husband-wife at bed time, a perfect couple.

If your eyes that now have no memories of the soil, should trip
Shit, thorn, spittle bathe us;
Only in your minds are the touch-me-not purity
We, who keep moving ahead to show you the way
Have the rains for cleansing us for sure.

Footwear that we are, forever the outcast,
Untouchables even for temple, mosque, church;
We have been created by skinning and drying out history.
As village water that belongs to none deems us untouchable
As the tar road of the village is decreed for use only of the wheels
We walk along the fence upon grass and grime.

Toes, that were prone to trip and be crushed,
How could you forget us, thus?
Us, who helped you to move on
Even when we ourselves were asphyxiated?

I salute the scraggy hungry dogs
Who consume us!
**

ಚಪ್ಪಲಿಗಳು
-----------------------------

ಚಪ್ಪಲಿಗಳು ನಾವು
ಹೊತ್ತ ನೆಲದವ್ವನೇ ಪಾದದಡಿಯಲ್ಲಿ ತಣ್ಣಗೆ ಮಲಗಿರುವಾಗ
ಸದಾ ತುಳಿಸಿ ತುಳಿಸಿ ತಳಕ್ಕಿಳಿವ ಮುಜುಗರವಿಲ್ಲ ನಮಗೆ
ಒಂದು ಎಡ ಒಂದು ಬಲ, ಒಂದು ಪೂರ್ವ ಮತ್ತೊಂದು ಪಶ್ಚಿಮ
ಇಂತಿದ್ದರೂ ಕಲಹ ಕೊಲೆ ರಕ್ತಪಾತವಿಲ್ಲ ನಮ್ಮ ನಡುವೆ
ನೀವು ಕಳಚಿ ಒಟ್ಟೊಟ್ಟಿಗಿಡುವಾಗ
ಉಂಡು ಮಲಗುವಾಗಿನ ಥೇಟ್ ಪತಿ ಪತ್ನಿಯರು ನಾವು

ಮಣ್ಣ ಪೂರ್ತಿ ಮರೆತ ನಿಮ್ಮ ಕಣ್ಣುಗಳು ಎಡವಿಬಿದ್ದರೆ
ಮಲ, ಮುಳ್ಳು, ಜಗಿದುಗುಳಿದ ಪರಾಗುಗಳ ಮಜ್ಜನ ನಮಗೆ
ಬಿಡಿಸಲಾಗದಂತಿರುವ ಮಡಿ, ಸೂತಕಗಳೆಲ್ಲ ನಿಮ್ಮ ಮನಸ್ಸಿಗಷ್ಟೆ
ಮುಂದೆ ಮುಂದೆಯೇ ಸಾಗಿ ದಾರಿ ತೋರುವ ನಮಗೆ
ಶುದ್ಧಗೊಳ್ಳಲು ಇದ್ದೇಯಿದೆ ಭರವಸೆಯ ಮಳೆಯ ತೀರ್ಥ

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕೃತರು
ಮಸೀದಿ ಮಂದಿರ ಇಗರ್ಜಿಗಳಿಗೂ ಅಸ್ಪೃಶ್ಯರು
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ
ಯಾರಿಗೂ ಸೇರಿರದ ಊರ ನೀರೇ ಮುಟ್ಟಿಸಿಕೊಳ್ಳದಿರುವಾಗ
ಊರ ಡಾಂಬರು ರಸ್ತೆಯೆಲ್ಲ ಚಕ್ರಗಳಿಗೇ ಮೀಸಲೆಂದು ಷರಾ ಬರೆದಿರುವಾಗ
ಬೇಲಿ ಬದಿಯ ಹುಲ್ಲು ಮಣ್ಣುಗಳಲ್ಲೇ ನಮ್ಮ ನಡಿಗೆ

ಎಡವಿ ನಜ್ಜುಗುಜ್ಜಾಗುತ್ತಿದ್ದ ಹೆಬ್ಬೆರಳುಗಳೇ
ಹೀಗೆ ಮರೆಯಬಹುದೇ ನಮ್ಮ?
ನಮ್ಮ ಉಂಗುಷ್ಟದ ಕೊರಳ ಉಸಿರುಗಟ್ಟಿಸಿದರೂ
ನಿಮ್ಮ ಮುನ್ನಡೆಸಿದ ನಮ್ಮ?

ನಮ್ಮ ತಿನ್ನುವ ಹಸಿದ ನರಪೇತಲ ನಾಯಿಗಳೇ
ನಿಮಗೆ ಶರಣು.

Sunday, June 7, 2020

ಕೌತುಕವಾಗುಳಿಯುವ ಭಾರದ್ವಾಜರ 'ಕೌತುಕವಲ್ಲದ ಕ್ಷಣಗಳು' ಕೃತಿಯ ಒಂದು ಸುತ್ತು..


ತಮ್ಮ ಪಾಡಿಗೆ ತಾವು ಬರೆಯುತ್ತಾ ಹಾರ- ತುರಾಯಿ, ವೇದಿಕೆ,ಗೋಷ್ಠಿಗಳಿಂದ ಬಹುದೂರ ಉಳಿದವರು ಭಾರದ್ವಾಜ ಕೆ ಆನಂದತೀರ್ಥರು. ನಮ್ಮ ನಡುವೆ ಇದ್ದರೂ ಇವರ ಕೃತಿಗಳನ್ನು ಇಷ್ಟು ಕಾಲ ಓದಿರಲಿಲ್ಲ. 'ಕಳೆದುಕೊಂಡವರು' ಕಾದಂಬರಿಯನ್ನು ಓದಿದ ಮೇಲೆ ಇಂತಹ ಸೂಕ್ಷ್ಮ ಸಂವೇದನೆಯ ವ್ಯಕ್ತಿಯೊಬ್ಬರು ನಮ್ಮ ನಡುವೆ ಕಳೆದುಹೋಗಿರುವ ಕುರಿತು ಮರುಕ ಹುಟ್ಟಿತು. 

ಸಾಹಿತ್ಯದ ವಿವಿಧ ಮಾದರಿಗಳನ್ನು ಸ್ಪರ್ಶಿಸಿರುವ ಭಾರದ್ವಾಜರ 'ಕೌತುಕವಲ್ಲದ ಕ್ಷಣಗಳು' ಕೃತಿಯನ್ನು ಇಂದು ಓದಿದೆ(ಲಲಿತ ಪ್ರಬಂಧ).


ಇವರ ಕೃತಿಗಳ ವೈಶಿಷ್ಟ್ಯವೆಂದರೆ ಅಲ್ಲಿ ಮುನ್ನುಡಿ-ಬೆನ್ನುಡಿಗಳ ಭಾರವಿಲ್ಲ. 'ನನ್ನ ಮಿತಿ ನನಗೆ ತಿಳಿದಿದೆ; ತಿಳಿದಷ್ಟು ಬರೆಯುತ್ತೇನೆ' ಎಂದುಕೊಂಡು ಬರೆಯುವ ಇವರಿಗೆ ಮುನ್ನುಡಿ-ಬೆನ್ನುಡಿಗಳ ಅಗತ್ಯವೂ ಇಲ್ಲ.
*

'ಕೌತುಕವಲ್ಲದ ಕ್ಷಣಗಳು' ಕೃತಿಯ ಕುರಿತು 'ಇದು ಲಲಿತ ಪ್ರಬಂಧಗಳ ಸಂಗ್ರಹವೋ ಅಥವಾ ಸಣ್ಣಕತೆಗಳ ಸಂಕಲನವೋ ಅಥವಾ ಮೇಲಿನ ಯಾವ ಲಕ್ಷಣವೂ ಇಲ್ಲದ ಅವಲಕ್ಷಣವೋ ಅನ್ನುವುದು ನನಗೆ ಸ್ಪಷ್ಟವಾಗಬೇಕಾದರೆ ಈ ಪುಸ್ತಕವನ್ನು ನೀವು ಓದಿ ಪ್ರತಿಕ್ರಿಯೆ ನೀಡಬೇಕು' ಎಂದಿದ್ದಾರೆ. ತಮ್ಮ ಮಿತಿಯನ್ನು ಕಂಡುಕೊಳ್ಳುವ ಬಗೆ ಅದು. ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣ ಈ ಕೃತಿ. ಸಣ್ಣಕತೆ , ಲಲಿತ ಪ್ರಬಂಧ , ವೈಚಾರಿಕ ಲೇಖನ - ಈ ಮೂರು ಪ್ರಕಾರಗಳೂ ಇದರಲ್ಲಿ ಬೆರೆತಿವೆ. ಓದುಗ ಎದುರಿಸಬಹುದಾದ ಏಕತಾನತೆಯನ್ನು ಈ fusion ನಿವಾರಿಸಿಬಿಡುತ್ತದೆ.

ಲಲಿತ ಪ್ರಬಂಧಗಳು ಒಂದು ಕೇಂದ್ರದ ಸುತ್ತ ಗಿರಕಿ ಹೊಡೆಯುತ್ತಾ ಅದನ್ನು  ಎತ್ತೆತ್ತಲೋ ಹಿಗ್ಗಿಸಿ ಕೇಂದ್ರಕ್ಕೆ ಮತ್ತೆ  ಬಂದು ಕುಳಿತುಬಿಡುವ ಪ್ರಕಾರ. ಭಾರದ್ವಾಜರ 'ಕಾಡು ಬೆಳೆಸಿದ ಪರಿ' ಇಲ್ಲಿರುವ ಉಳಿದೆಲ್ಲವುಗಳಿಗಿಂತ ರಾಚನಿಕ ದೃಷ್ಟಿಯಿಂದ ಲಲಿತ ಪ್ರಬಂಧವನ್ನು ಹೋಲುತ್ತದೆ. 

ಹಾಸ್ಯ/ವಿಡಂಬನೆ(satire)ಯಂತಹ ಗಂಭೀರ ಅಭಿವ್ಯಕ್ತಿ ಮತ್ತೊಂದಿಲ್ಲ. ಅದಕ್ಕೆ ಅಷ್ಟು ಮೊನಚು ಮತ್ತು ಪ್ರಖರತೆ. ಪಡ್ಡೆಹುಡುಗರನ್ನು ಸಂತೃಪ್ತಿಗೊಳಿಸುವ ಹಾಸ್ಯ silly ಆಗಿ ಒಂದಷ್ಟು ನಗಿಸಿ ಸತ್ತುಬಿಡುತ್ತದೆ. ಆದರೆ ಭಾರದ್ವಾಜರ ಈ ಕೃತಿಯಲ್ಲಿ ಎದುರಾಗುವ ಹಾಸ್ಯ ಪ್ರಸಂಗಗಳು ಗ್ರಾಮೀಣ ಬದುಕಿನಲ್ಲಿ ಘಟಿಸಿದ್ದು, ಘಟಿಸುವಂಥದ್ದು. ಅದರ ಒಳಗೆ ಗಹನವಾದ ಚಿಂತನೆ ತಾತ್ತ್ವಿಕತೆಗಳಿವೆ.

ಗ್ರಾಮಸಭೆ ತೆರೆದು ತೋರಿಸುವ ಗುಂಪುಗಾರಿಕೆ, ಭ್ರಷ್ಟಾಚಾರ ; ಚುನಾವಣೆಯು ಸೃಷ್ಟಿಸುವ ಸಾಮಾಜಿಕ, ಆರ್ಥಿಕ , ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಗಳು; ಚೀಟಿಕಟ್ಟಿ ಮೋಸಕ್ಕೊಳಗಾದವರ ವರ್ತನೆಗಳು; ಮನುಷ್ಯನ Identity Crisis; ಮೌಢ್ಯ, ವಾಸ್ತವ ಮತ್ತು ಕ್ರಾಂತಿ; ಕೃಷಿ ಮತ್ತು ಪರಿಸರ; ಜೀವನ ಪ್ರೀತಿ ಮತ್ತು ಹೋರಾಟದ ಬದುಕು; ಸ್ತ್ರೀ ಚಿತ್ರಣ- ಇಂತಹ ಸಾಮಾನ್ಯ ಸಂಗತಿಗಳನ್ನು ಗ್ರಾಮೀಣ ಬದುಕಿನ ಲಯದೊಂದಿಗೆ ಗ್ರಹಿಸಿ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ(ಮುದ್ರಣ ದೋಷಗಳಿವೆ ಅಲ್ಲಲ್ಲಿ).

ಇನ್ನೆರಡು ಕೃತಿಗಳು ನನ್ನ ಎದುರಿಗಿವೆ. ಓದುವಾಗಲೆಲ್ಲ ಈ ಮನುಷ್ಯ ಯಾಕೆ ಹೀಗೆ ಅಜ್ಞಾತವಾಗಿ ಉಳಿದುಬಿಟ್ಟರು ಎಂಬ ಸಂಗತಿ ಕಾಡುತ್ತಲೇ ಇದೆ. ಓದಿಸುತ್ತಿರುವ ಅವರಿಗೆ ಶರಣು.
*



ಕಾಜೂರು ಸತೀಶ್






Saturday, June 6, 2020

ಪರದೆ

ಪರದೆಯ ಮೇಲಿನ ನಟ
ಇವಳಿಗೆ ಇಷ್ಟವಾದ
ಪರದೆಯ ಮೇಲಿನ ನಟಿ
ಇವನಿಗೆ ಇಷ್ಟವಾದಳು

ಇವರಿಬ್ಬರ ಒಳಗೆ
ಪರದೆಯ ಮೇಲಿನ ಅವರಿಬ್ಬರ ಮೇಲೆ
ಮೋಹ ಮತ್ತು ಕಾಮ

ಪರದೆಯ ಮೇಲಿನ ನಟ
ವೃದ್ಧಾಪ್ಯ ಬಂದು ತೀರಿಕೊಂಡಿದ್ದ
ಪರದೆಯ ಮೇಲಿನ ನಟಿಗೆ
ಅಕಾಲಿಕ ಮರಣ

ಅವರಿಬ್ಬರು ತೀರಿಕೊಂಡ ವಿಷಯ
ಇವರಿಬ್ಬರಿಗೆ ತಿಳಿದಿಲ್ಲ
(ಇವರಿಬ್ಬರು ಬದುಕಿರುವ ವಿಷಯ
ಅವರಿಗೂ)

ಅವರಿಬ್ಬರು ತೀರಿಕೊಂಡ
ಎಷ್ಟೋ ವರ್ಷದ ಬಳಿಕ
ಇವರಿಬ್ಬರ ಒಳಗೆ
ಅವರ ಮೇಲೆ ಮೋಹ ಮತ್ತು ಕಾಮ

ಹೀಗೆ ಪರದೆಯ ಮೇಲಿನ ಅವರಿಬ್ಬರು
ಪರದೆಯ ಹೊರಗಿನ ಇವರಿಬ್ಬರು
ಮತ್ತು ನಡುವಿನ ನಾವು
*


ಕಾಜೂರು ಸತೀಶ್