ಸೂರಕ್ಕಿಗೂ ನನಗೂ ಬಾಲ್ಯಕಾಲದ ನಂಟು. ಅದು ಗೂಡುಕಟ್ಟುವ ಕ್ರಮ, ಗೂಡಿನ ಆಕಾರ, ಮೊಟ್ಟೆ, ಮರಿ, ಮರಿಗಳಿಗೆ ಆಹಾರ.. ಇವನ್ನೆಲ್ಲ ನೋಡಿಕೊಂಡೇ ಬೆಳೆದವನು ನಾನು.
ಮಾರ್ಚ್ ೧ಕ್ಕೆ ಮನೆಯ ಸಮೀಪದ ಗಿಡವೊಂದರಲ್ಲಿ ತನ್ನ ವಂಶವನ್ನು ಬೆಳೆಸುವ ಕಾಯಕಕ್ಕೆ ತಾಯಿ ಸೂರಕ್ಕಿ(Loten's Sunbird)ಯು ಅಡಿಯಿಟ್ಟಿತು.
ಒಂದೊಂದೇ ಎಳೆಗಳನ್ನು ತಂದು ಯಾವ ತಾಂತ್ರಿಕ ಪರಿಣತನೂ ಕಟ್ಟಲಾರದ ಗೂಡೊಂದನ್ನು ಕಟ್ಟಲಾರಂಭಿಸಿತು. ಒಳಗೆ ಹತ್ತಿಯ ಎಳೆಗಳು. AC ಕೋಣೆ! ಹಲವು ವಿಧದ ನಾರುಗಳು(ಪ್ಲಾಸ್ಟಿಕ್ ಕೂಡ!) ತಾಯಿ ಸೂರಕ್ಕಿಯ ಕೊಕ್ಕಿನಲ್ಲಿ ಸಿಕ್ಕು ಸುಂದರ ಆಕೃತಿಯಾಗಿ ರೂಪ ಧರಿಸಿದ್ದವು.
ಮಾರ್ಚ್ 8ಕ್ಕೆ ಸೂರಕ್ಕಿಯ ಗೃಹಪ್ರವೇಶ! ನಮ್ಮ ಹಾಗೆ ಮಂತ್ರ ಹೇಳಿಸದೆ, ಹೋಮ ಹಾಕಿಸದೆ, ಬ್ಯೂಟೀಷಿಯನ್ ಬಳಿ ಹೋಗದೆ, ಎಣ್ಣೆ ಏರಿಸದೆ, ಮೂಳೆ ಜಗಿಯದೆ, ಗಿಫ್ಟುಗಳಿಗೆ ಕಾಯದೆ ಗೂಡು ಸೇರಿತು ತಾಯಕ್ಕಿ! ಹೊರಗಿನಿಂದ 'ನಾನಿದ್ದೇನೆ ಧೈರ್ಯವಾಗಿರು' ಎಂದು ತಂದೆ ಸೂರಕ್ಕಿ(purple sunbird)ಯ ಅಭಯ ದನಿ!
ಮತ್ತೊಂದು ವಾರ ಕಳೆದ ಮೇಲೆ, ತಾಯಿ ಹಕ್ಕಿ ಇಲ್ಲದ ಹೊತ್ತಲ್ಲಿ ಗೂಡಿನೊಳಗೆ ಇಣುಕಿದರೆ ಚುಕ್ಕಿ ಚುಕ್ಕಿಯಿರುವ ಎರಡು ಇಷ್ಟೇ ಇಷ್ಟು ಪುಟ್ಟ ಮೊಟ್ಟೆಗಳು!
ಮತ್ತೆರಡು ವಾರಗಳು 'ಗೃಹಬಂಧನ'ದ ಈ ಸಂದರ್ಭದಲ್ಲಿ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಜಾರಿಹೋಗಿದ್ದವು. ಗೂಡಿನೊಳಗೆ ಇಣುಕಿ ನೋಡಿದೆ: ಮಾಂಸದ ಎರಡು ಮುದ್ದೆಗಳು; ಕೊಕ್ಕು ಅಗಲಿಸುತ್ತಿದ್ದವು! ನನ್ನನ್ನೇ ಕೊಟ್ಟುಬಿಡೋಣವೆಂದರೆ 'ನಾನು ಹಿಡಿಸುವುದಿಲ್ಲ ನಿನ್ನ ಕೊಕ್ಕಿನೊಳಗೆ' ಎಂದು ಹೊರಬಂದೆ.
ಹುಳು ಉಪ್ಪಟೆಗಳನ್ನು ತಂದುಕೊಡುವ ತಾಯಿ ಸೂರಕ್ಕಿ. ಅದು ಆಹಾರ ಅರಸಿ ಹೊರಟಾಗ ಕೊಕ್ಕು ತುಂಬಿಸಿಕೊಂಡು ತಂದೆ ಸೂರಕ್ಕಿಯ ಆಗಮನ. ಆದರೆ ತಾಯಿ ಹಕ್ಕಿಯಷ್ಟು ತಾಳ್ಮೆ ಅದಕ್ಕಿಲ್ಲ- ಬರುವುದು ;ಕೊಡುವುದು ;ಹಾರುವುದು!
ತಂದೆ ಸೂರಕ್ಕಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಕಷ್ಟದ ಕೆಲಸ. ತಾಯಿ ಹಕ್ಕಿಯಾದರೆ ಚೆನ್ನಾಗಿ ಪೋಸ್ ಕೊಡುತ್ತಿತ್ತು. ತಂದೆ ಮತ್ತು ತಾಯಿ ಹಕ್ಕಿಗಳು ನೇರವಾಗಿ ಗೂಡಿನ ಬಳಿ ಬರುತ್ತಿರಲಿಲ್ಲ. ಸ್ವಲ್ಪ ದೂರದಲ್ಲಿ ಕುಳಿತು ಸದ್ದು ಮಾಡುತ್ತಿದ್ದವು. ಸುತ್ತೆಲ್ಲ ಗಮನಿಸಿದ ಮೇಲೆ ಗೂಡಿಗೆ ಪ್ರವೇಶ. ತಂದೆ ಸೂರಕ್ಕಿಯು ಹತ್ತಿರದಲ್ಲಿ ಸಿಗುವ ಇತರೆ ಸೂರಕ್ಕಿಗಳ ಮೇಲೆ ದಾಳಿ ನಡೆಸುತ್ತಿತ್ತು.
ಆ ನಡುವೆ ಒಂದೆರಡು ಜೋರುಮಳೆಗೆ ಗೂಡು ಬಿದ್ದುಹೋಯಿತೇ ಎಂದು ನೋಡಲು ಹೋದರೆ ಮಳೆಹನಿಗಳನ್ನು ಅದು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ!
ಗೂಡಿನೊಳಗಿರುವಾಗ ಮೊದಮೊದಲು ತಾಯಿ ಹಕ್ಕಿಯ ಕೊಕ್ಕಿನ ತುದಿ ಮಾತ್ರ ಕಾಣಿಸುತ್ತಿತ್ತು . ಮರಿಗಳ ಮೈ ಬೆಳೆದಂತೆಲ್ಲ ಪೂರ್ಣ ಕೊಕ್ಕು ಹೊರಬಂತು. ಆಮೇಲೆ ತಲೆಯ ಭಾಗ! ಹತ್ತಿರ ಸುಳಿದರೆ ಪುರ್ರ್! ಆದರೆ ನಿತ್ಯ ನನ್ನನ್ನು ನೋಡುತ್ತಿದ್ದರಿಂದ 'ಇವನೊಬ್ಬ ಪಾಪದ ಮನುಷ್ಯ' ಎಂದು ಅದಕ್ಕೂ ಅರಿವಾಗಿ ಅದು ನಾನು ಹತ್ತಿರ ಹೋದರೂ ಹಾರಿಹೋಗುತ್ತಿರಲಿಲ್ಲ!
ಮರಿಹಕ್ಕಿಗೆ ದನಿ ಬಂದ ಮೇಲೆ ಗೂಡಿನ ಹೊರಕ್ಕೆ ತಲೆಚಾಚಿ ಕೂಗಲು ತೊಡಗಿತು. ಚಂಗನೆ ಗೂಡಿನಿಂದ ಹೊರಜಿಗಿಯಿತು. ಇದ್ದ ಎರಡರಲ್ಲಿ ಒಂದು ಮೊದಲು. ದಿನ ಕಳೆದ ಮೇಲೆ ಮತ್ತೊಂದು. ಹಾರಲು ಹವಣಿಸಿತು; ಭಯಪಟ್ಟಿತು.
ತಾಯಿ ಹಕ್ಕಿ ಬಂದ ಒಡನೆ ತಾಯಿಯನ್ನು ಅನುಕರಿಸುತ್ತಾ ಹಾರಿಹೋಯಿತು. ಏಪ್ರಿಲ್ ೨೦ಕ್ಕೆ ಎರಡನೇ ಹಕ್ಕಿಯೂ ಗೂಡುತೊರೆದು ಸ್ವಾತಂತ್ರ್ಯದ ರೆಕ್ಕೆ ಕಟ್ಟಿಕೊಂಡು ಹಾರಿಹೋಯಿತು.
ಗೂಡು ಖಾಲಿಯಾಗಿದೆ. ಅದರ ನೆನಪುಗಳು ಈಗ ನನ್ನೊಳಗೆ ಗೂಡುಕಟ್ಟಲು ತೊಡಗಿವೆ.
*
-ಕಾಜೂರು ಸತೀಶ್
No comments:
Post a Comment