ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, April 22, 2020

ಒಂಟಿ



ಒಂಟಿಯಾಗಿರುವವರ ಕೋಣೆಯಲಿ
ಎಂದೋ ಮನೆ ತೊರೆದು ಹೋದವರ ಪರಿಮಳ

ಸುತ್ತ
ಗಸ್ತು ತಿರುಗುವವರು
ಬೇಟೆಯ ಹುಡುಕಿ ಅಲೆವವರು
ಸಾಲು ಸಾಲಾಗಿ ಸಾಗುವವರು
ಮೂಲೆ ಮುಡುಕುಗಳಲಿ ಬಲೆ ಹೆಣೆವವರು

ಕಿಟಕಿಯಾಚೆ
ತಿಳಿ ಗಾಢ ಹಸಿರು ಹಳದಿ.
ಬಣ್ಣಗಳ ಉನ್ಮಾದವನು
ಎಲೆಗಳಲಿ ಹಿಡಿದಿಡುತಿದೆ ಗಾಳಿ
ಮಣ್ಣ ತುಂಬ ನೆರಳ ಹಾಸು

ಒಂಟಿಯಾಗಿರುವವರ ಇಳಿಸಂಜೆಯಲಿ
ಜೊತೆಗಿವೆ ಪಟಪಟ ರೆಕ್ಕೆ ಬಡಿತಗಳು
ಹಚ್ಚ ಹಸಿರ ನೆನಪ ನಡುವೆ
ಸುರಿವ ಕೆಂಬಣ್ಣದ ಸೂರ್ಯಧಾರೆ

ಒಂಟಿಯಾಗಿರುವವರ ಒಳಗೆ
ರಕ್ತದಂತೆ ಹರಿವ ಕತ್ತಲು

ಇರುಳ ಇರಿದು ಬೆಳೆವ
ಒಂಟಿ ಚಂದಿರ.
*


ಮಲಯಾಳಂ ಮೂಲ- ಚಿತ್ರ ಕೆ ಪಿ


ಕನ್ನಡಕ್ಕೆ- ಕಾಜೂರು ಸತೀಶ್

Tuesday, April 21, 2020

ಗೃಹಬಂಧನದ ಅವಧಿಯ ಸೂರಕ್ಕಿ ಕಥನ



ಸೂರಕ್ಕಿಗೂ ನನಗೂ ಬಾಲ್ಯಕಾಲದ ನಂಟು. ಅದು ಗೂಡುಕಟ್ಟುವ ಕ್ರಮ, ಗೂಡಿನ ಆಕಾರ, ಮೊಟ್ಟೆ, ಮರಿ, ಮರಿಗಳಿಗೆ ಆಹಾರ.. ಇವನ್ನೆಲ್ಲ ನೋಡಿಕೊಂಡೇ ಬೆಳೆದವನು ನಾನು.



ಮಾರ್ಚ್ ೧ಕ್ಕೆ ಮನೆಯ ಸಮೀಪದ ಗಿಡವೊಂದರಲ್ಲಿ ತನ್ನ ವಂಶವನ್ನು ಬೆಳೆಸುವ ಕಾಯಕಕ್ಕೆ ತಾಯಿ ಸೂರಕ್ಕಿ(Loten's Sunbird)ಯು ಅಡಿಯಿಟ್ಟಿತು.


 ಒಂದೊಂದೇ ಎಳೆಗಳನ್ನು ತಂದು ಯಾವ ತಾಂತ್ರಿಕ ಪರಿಣತನೂ ಕಟ್ಟಲಾರದ ಗೂಡೊಂದನ್ನು ಕಟ್ಟಲಾರಂಭಿಸಿತು. ಒಳಗೆ ಹತ್ತಿಯ ಎಳೆಗಳು. AC ಕೋಣೆ! ಹಲವು ವಿಧದ ನಾರುಗಳು(ಪ್ಲಾಸ್ಟಿಕ್ ಕೂಡ!) ತಾಯಿ ಸೂರಕ್ಕಿಯ ಕೊಕ್ಕಿನಲ್ಲಿ ಸಿಕ್ಕು ಸುಂದರ ಆಕೃತಿಯಾಗಿ ರೂಪ ಧರಿಸಿದ್ದವು. 


ಮಾರ್ಚ್ 8ಕ್ಕೆ ಸೂರಕ್ಕಿಯ  ಗೃಹಪ್ರವೇಶ! ನಮ್ಮ ಹಾಗೆ ಮಂತ್ರ ಹೇಳಿಸದೆ, ಹೋಮ ಹಾಕಿಸದೆ, ಬ್ಯೂಟೀಷಿಯನ್ ಬಳಿ ಹೋಗದೆ, ಎಣ್ಣೆ ಏರಿಸದೆ, ಮೂಳೆ ಜಗಿಯದೆ, ಗಿಫ್ಟುಗಳಿಗೆ ಕಾಯದೆ ಗೂಡು ಸೇರಿತು ತಾಯಕ್ಕಿ!  ಹೊರಗಿನಿಂದ 'ನಾನಿದ್ದೇನೆ ಧೈರ್ಯವಾಗಿರು' ಎಂದು ತಂದೆ ಸೂರಕ್ಕಿ(purple sunbird)ಯ ಅಭಯ ದನಿ!


ಮತ್ತೊಂದು ವಾರ ಕಳೆದ ಮೇಲೆ, ತಾಯಿ ಹಕ್ಕಿ ಇಲ್ಲದ ಹೊತ್ತಲ್ಲಿ ಗೂಡಿನೊಳಗೆ ಇಣುಕಿದರೆ  ಚುಕ್ಕಿ ಚುಕ್ಕಿಯಿರುವ ಎರಡು ಇಷ್ಟೇ ಇಷ್ಟು ಪುಟ್ಟ ಮೊಟ್ಟೆಗಳು! 

ಮತ್ತೆರಡು ವಾರಗಳು 'ಗೃಹಬಂಧನ'ದ ಈ ಸಂದರ್ಭದಲ್ಲಿ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಜಾರಿಹೋಗಿದ್ದವು. ಗೂಡಿನೊಳಗೆ  ಇಣುಕಿ ನೋಡಿದೆ: ಮಾಂಸದ ಎರಡು ಮುದ್ದೆಗಳು; ಕೊಕ್ಕು ಅಗಲಿಸುತ್ತಿದ್ದವು! ನನ್ನನ್ನೇ ಕೊಟ್ಟುಬಿಡೋಣವೆಂದರೆ  'ನಾನು ಹಿಡಿಸುವುದಿಲ್ಲ ನಿನ್ನ ಕೊಕ್ಕಿನೊಳಗೆ' ಎಂದು ಹೊರಬಂದೆ. 



ಹುಳು ಉಪ್ಪಟೆಗಳನ್ನು ತಂದುಕೊಡುವ ತಾಯಿ ಸೂರಕ್ಕಿ. ಅದು ಆಹಾರ ಅರಸಿ ಹೊರಟಾಗ ಕೊಕ್ಕು ತುಂಬಿಸಿಕೊಂಡು ತಂದೆ ಸೂರಕ್ಕಿಯ ಆಗಮನ. ಆದರೆ ತಾಯಿ ಹಕ್ಕಿಯಷ್ಟು ತಾಳ್ಮೆ ಅದಕ್ಕಿಲ್ಲ- ಬರುವುದು ;ಕೊಡುವುದು ;ಹಾರುವುದು!


 ತಂದೆ ಸೂರಕ್ಕಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಕಷ್ಟದ ಕೆಲಸ. ತಾಯಿ ಹಕ್ಕಿಯಾದರೆ ಚೆನ್ನಾಗಿ ಪೋಸ್ ಕೊಡುತ್ತಿತ್ತು. ತಂದೆ ಮತ್ತು ತಾಯಿ ಹಕ್ಕಿಗಳು  ನೇರವಾಗಿ ಗೂಡಿನ ಬಳಿ ಬರುತ್ತಿರಲಿಲ್ಲ. ಸ್ವಲ್ಪ ದೂರದಲ್ಲಿ ಕುಳಿತು ಸದ್ದು ಮಾಡುತ್ತಿದ್ದವು. ಸುತ್ತೆಲ್ಲ ಗಮನಿಸಿದ ಮೇಲೆ ಗೂಡಿಗೆ ಪ್ರವೇಶ. ತಂದೆ ಸೂರಕ್ಕಿಯು ಹತ್ತಿರದಲ್ಲಿ ಸಿಗುವ ಇತರೆ ಸೂರಕ್ಕಿಗಳ ಮೇಲೆ ದಾಳಿ ನಡೆಸುತ್ತಿತ್ತು.
  
ಆ ನಡುವೆ ಒಂದೆರಡು ಜೋರುಮಳೆಗೆ ಗೂಡು ಬಿದ್ದುಹೋಯಿತೇ ಎಂದು ನೋಡಲು ಹೋದರೆ ಮಳೆಹನಿಗಳನ್ನು ಅದು ಹತ್ತಿರಕ್ಕೂ  ಬಿಟ್ಟುಕೊಂಡಿರಲಿಲ್ಲ! 



ಗೂಡಿನೊಳಗಿರುವಾಗ ಮೊದಮೊದಲು ತಾಯಿ ಹಕ್ಕಿಯ ಕೊಕ್ಕಿನ ತುದಿ ಮಾತ್ರ ಕಾಣಿಸುತ್ತಿತ್ತು . ಮರಿಗಳ ಮೈ ಬೆಳೆದಂತೆಲ್ಲ ಪೂರ್ಣ ಕೊಕ್ಕು ಹೊರಬಂತು. ಆಮೇಲೆ ತಲೆಯ ಭಾಗ! ಹತ್ತಿರ ಸುಳಿದರೆ ಪುರ್ರ್! ಆದರೆ ನಿತ್ಯ ನನ್ನನ್ನು ನೋಡುತ್ತಿದ್ದರಿಂದ 'ಇವನೊಬ್ಬ ಪಾಪದ ಮನುಷ್ಯ' ಎಂದು ಅದಕ್ಕೂ ಅರಿವಾಗಿ ಅದು ನಾನು ಹತ್ತಿರ ಹೋದರೂ ಹಾರಿಹೋಗುತ್ತಿರಲಿಲ್ಲ!


ಮರಿಹಕ್ಕಿಗೆ ದನಿ ಬಂದ ಮೇಲೆ ಗೂಡಿನ ಹೊರಕ್ಕೆ ತಲೆಚಾಚಿ ಕೂಗಲು ತೊಡಗಿತು. ಚಂಗನೆ ಗೂಡಿನಿಂದ ಹೊರಜಿಗಿಯಿತು. ಇದ್ದ ಎರಡರಲ್ಲಿ ಒಂದು ಮೊದಲು. ದಿನ ಕಳೆದ ಮೇಲೆ ಮತ್ತೊಂದು. ಹಾರಲು ಹವಣಿಸಿತು; ಭಯಪಟ್ಟಿತು. 

ತಾಯಿ ಹಕ್ಕಿ ಬಂದ ಒಡನೆ ತಾಯಿಯನ್ನು ಅನುಕರಿಸುತ್ತಾ ಹಾರಿಹೋಯಿತು. ಏಪ್ರಿಲ್ ೨೦ಕ್ಕೆ ಎರಡನೇ ಹಕ್ಕಿಯೂ ಗೂಡುತೊರೆದು ಸ್ವಾತಂತ್ರ್ಯದ ರೆಕ್ಕೆ ಕಟ್ಟಿಕೊಂಡು ಹಾರಿಹೋಯಿತು.


ಗೂಡು ಖಾಲಿಯಾಗಿದೆ. ಅದರ ನೆನಪುಗಳು ಈಗ ನನ್ನೊಳಗೆ ಗೂಡುಕಟ್ಟಲು ತೊಡಗಿವೆ.
*


-ಕಾಜೂರು ಸತೀಶ್ 

Monday, April 20, 2020

ಕೊಂಬು



ಟೀಚರ್ ಕರಿಹಲಗೆಯಲ್ಲಿ ಕುದುರೆಯ ಚಿತ್ರ ಬಿಡಿಸಿದರು
ಮಕ್ಕಳು ನಕಲು ಮಾಡಿದರು

ಎಲ್ಲಾ ಕುದುರೆಗಳಿಗೂ ಕೊಂಬುಗಳು!
ಮಕ್ಕಳ ಚಿತ್ರ ಕಂಡ ಟೀಚರಿನ ಪಿತ್ತ ನೆತ್ತಿಗೇರಿತು
ಬೆತ್ತ ಕೈಗೆತ್ತಿಕೊಂಡರು

ಹಸ್ತದಿಂದ ನೋವು ಮಾಯುವ ಮುನ್ನವೇ
ಎಲ್ಲ ಮಕ್ಕಳೂ ಒಕ್ಕೊರಲಿನಲಿ ಹೇಳಿದರು:
'ನೀವೆಷ್ಟು ಬೇಕಾದ್ರೂ ಹೊಡೀರಿ ಟೀಚರ್...
ನಮ್ಮ ಕುದುರೆಗಳಿಗೆ ಕೊಂಬಿರ್ತವೆ
ಕೊಂಬಿರೋ ಕುದುರೆಗಳೇ ನಮಗಿಷ್ಟ'

ಅದೇ ರಾತ್ರಿ
ಟೀಚರಿಗೆ ನಿದ್ದೆ ಹತ್ತಲಿಲ್ಲ
ಇನ್ನೇನು ನಿದ್ದೆಹತ್ತಬೇಕು ಎನ್ನುವಾಗ
ಗುಂಪುಗೂಡಿ ಬಂದ ಕೊಂಬುಗಳು
"ಟೀಚರೇ...."
*


ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ


ಕನ್ನಡಕ್ಕೆ- ಕಾಜೂರು ಸತೀಶ್

ಕವಿತೆ



ಕವಿತೆ- ಹಗಲು ದಣಿವಾಗಿ
ರಾತ್ರಿ ನಿದಿರೆಯಾಗಿ ಬರುತ್ತದೆ
ಬೆಳಿಗ್ಗೆ ಹಾಸಿಗೆಯಿಂದೇಳುವಾಗ ಕೇಳುತ್ತದೆ:
'ಹಸಿವಾಗ್ತಿದೆಯಾ? ರಾತ್ರಿ ಊಟ ಮಾಡಿರ್ಲಿಲ್ವಾ?'
*


ಹಿಂದಿ ಮೂಲ- ಮಂಗಳೇಶ್ ಡಬರಾಲ್


ಕನ್ನಡಕ್ಕೆ- ಕಾಜೂರು ಸತೀಶ್

Saturday, April 18, 2020

ಒಮ್ಮೆಯೂ



ಅಮ್ಮ
ಅಕ್ಕಂದಿರು
ಗುಡಿಸಲು
ಹಾಯಾಗಿ ನಿದ್ದೆಗೆ ಜಾರಿದ ಮೇಲೆ
ಸೀಮೆಎಣ್ಣೆ ಪರಿಮಳವಿರುವ ಕತ್ತಲೆಯಿಂದೆದ್ದು
ಮಗು ಅಳುತ್ತಾ ಪ್ರಾರ್ಥಿಸಿತು:
'ನನಗೊಂದು ಸವೆಯದ ಮುರಿಯದ ಪೆನ್ಸಿಲ್ ಕೊಡು ದೇವರೇ..'

ಚಂದದ ಪೆನ್ಸಿಲೊಂದು ಕೈಸೇರಿತು
ಜೊತೆಗೊಂದು ದನಿ:
'ಜೋಪಾನವಾಗಿಟ್ಟುಕೊ
ಒಮ್ಮೆಯೂ ಬರೆಯಬೇಡ'.
*


ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ 


ಕನ್ನಡಕ್ಕೆ- ಕಾಜೂರು ಸತೀಶ್

Wednesday, April 15, 2020

ದಿಕ್ಕು ದೆಸೆಯಿಲ್ಲದ ಮನಸ್ಸು ಮತ್ತು ಹೃದಯವಿಲ್ಲದ ತಂತ್ರಜ್ಞಾನ

ಮನಸ್ಸು!
ರೂಪ ಆಕಾರಗಳಿರಲಿ- ಅದಕ್ಕೊಂದು ಕೇಂದ್ರ ಅನ್ನೋದೇ ಇರುವುದಿಲ್ಲ. ಯಾವಾಗ ಖಾಲಿತನ ಆವರಿಸುತ್ತದೋ, ಅದು ವೈರಸ್ಸುಗಳ ಹಾಗೆ ತಮಗಿಷ್ಟ ಬಂದ ಕಡೆ ಹೋಗಿ ಕುಳಿತು ಅಲ್ಲಿ ಬಿಡಾರ ಹೂಡಲು ಹವಣಿಸುತ್ತದೆ.

ಈ ದಿನಮಾನಗಳಲ್ಲಿ ಮನಸ್ಸನ್ನು ಆಳುತ್ತಿರುವುದು 'ಮೊಬೈಲ್' ಎಂಬ ಸರ್ವಾಧಿಕಾರಿ. ಮೊಬೈಲಿನ ಒಳಗಿಳಿದಷ್ಟೂ ಮನಸ್ಸು ಚಂಚಲಗೊಳ್ಳುತ್ತಾ ಕಂಡಕಂಡಲ್ಲಿ ನೆಲೆಯೂರಲು ಹೆಣಗುತ್ತದೆ. ಕಡೆಗೆ 'ಕಾಮ'ದ ಬೇರಿನೊಳಗೆ ಆಧಿಪತ್ಯ ಸ್ಥಾಪಿಸುತ್ತದೆ. ಆಗ ಸ್ವಂತಿಕೆ ಸಾಯುತ್ತದೆ; ಏಕಾಗ್ರತೆಗೆ ಗೆದ್ದಲು ಹತ್ತುತ್ತದೆ; ಗುಣಾತ್ಮಕತೆ ಮಣ್ಣುಪಾಲಾಗುತ್ತದೆ; ಅಸ್ತಿತ್ವದ ಬುಡ ಅಲುಗಾಡುತ್ತದೆ.

ಮನುಷ್ಯ ಸುಖವನ್ನು ಅರಸಿ ಹೊರಡುವ ಈ ಓಟದ ನಡುವೆ ಕೆಲವು ಮನಸ್ಸುಗಳು ತಮಗೆ ಸಿಗದೇ ಇರುವ ಪ್ರೀತಿಯನ್ನು ಹುಡುಕಿ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತವೆ. ಅದರಲ್ಲಿ ಶುದ್ಧ ಪ್ರೇಮವೂ ಒಂದಷ್ಟು ಪ್ರಾಪ್ತಿಯಾಗುತ್ತದೆ. ಆದರೂ ಅವುಗಳ ಸ್ವರೂಪ ತಾತ್ಕಾಲಿಕವಾದದ್ದು.

ತಂತ್ರಜ್ಞಾನ ಬೆಳೆದಷ್ಟೂ ಅದರ ನೇರ ದಾಳಿ ಮನಸ್ಸಿನ ಮೇಲೆಯೇ. ಮನುಷ್ಯನ ಕಣ್ಣು ಮತ್ತು ಸಮಯ ಅದಕ್ಕೆ ಆಹಾರ. ಅಂತಹ ಕಾಲದಲ್ಲಿ ಎದುರಿಗಿರುವ ಮನುಷ್ಯ ಅಮುಖ್ಯ ಮನಸ್ಸಿಗೆ . ಕಣ್ಣೆದುರಿಗಿನ ಸಂಬಂಧಗಳು ಗೌಣ ಅದಕ್ಕೆ. ಎದುರಿಗಿಲ್ಲದ ಆಕೃತಿಗಳೊಂದಿಗೆ ಅದು ಸಂಬಂಧ ಬೆಳೆಸುತ್ತದೆ. ಅದನ್ನೇ ಸುಖಿಸುತ್ತದೆ.

ನವತಂತ್ರಜ್ಞಾನದ ಆಚೆಗಿದ್ದುಕೊಂಡು ಅಸ್ತಿತ್ವ ಕಂಡುಕೊಳ್ಳುವವರನ್ನೊಮ್ಮೆ ಮಾತನಾಡಿಸಿದಾಗ ಮನಸ್ಸು ಹಾದಿ ತಪ್ಪುತ್ತಿರುವ ಸಂಗತಿಗಳು ಸ್ಪಷ್ಟವಾಗುತ್ತಾ ಹೋಗುತ್ತವೆ.
*


-ಕಾಜೂರು ಸತೀಶ್

Tuesday, April 14, 2020

ಕೋಳಿ ಮತ್ತು ನರಿ

ಕೋಳಿ ಮತ್ತು ನರಿ ಪರಸ್ಪರ ಪ್ರೀತಿಸುತ್ತಿದ್ದವು
ಅಗಾಧ ಪ್ರೇಮ .

ಸಂಸಾರದ ಕನಸು ಹೊತ್ತು
ಸಮಾಜದ ಕೆಂಗಣ್ಣಿಗೆ ತುತ್ತಾಗಲು ಧೈರ್ಯ ಸಾಲದೆ
ಓಡಿಹೋದವು ಅವೆರಡೂ ಒಂದು ಮುಂಜಾವದಲ್ಲಿ

ಮನೆ ಬಿಟ್ಟು ಊರು ತೊರೆದು
ಕಾಡು ತೋಡುಗಳ ದಾಟಿ
ಪಾಳು ಬಾವಿಯೊಂದರ ಬಳಿ
ದಣಿದು ಕುಳಿತವು

'ನನ್ನ ಕಣಕಣದಲ್ಲೂ ನೀನೇ ತುಂಬಿರುವೆ'
ಕೋಳಿಯು ಹೇಳಿತು ನರಿಗೆ

ಮಾತಿಗೆ ಮರುಳಾದ ನರಿಯನ್ನು
ಜೀವಂತ ಕುಟುಕಿ ತಿನ್ನಲಾರಂಭಿಸಿತು ಕೋಳಿ.

ಕೋಳಿ ಮತ್ತು ನರಿ ಪರಸ್ಪರ ಪ್ರೀತಿಸುತ್ತಿದ್ದವು
ಅಗಾಧ ಪ್ರೇಮ!
*


ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ 




ಕನ್ನಡಕ್ಕೆ- ಕಾಜೂರು ಸತೀಶ್ 

ನೆರೆಮನೆಯವ



ಕಂಡರೆ ಸಾಕು
ಬೊಗಳಿ ಕಚ್ಚುವಂತೆ ಬರುತ್ತಿದ್ದ ನನ್ನ ನೆರೆಮನೆಯವ
ಒಂದು ದಿನ ಇದ್ದಕ್ಕಿದ್ದಂತೆ ಮನುಷ್ಯನಾಗಿಬಿಟ್ಟ

ಆಶ್ಚರ್ಯ! ಎಷ್ಟು ಯೋಚಿಸಿದರೂ ಅರ್ಥವಾಗಲಿಲ್ಲ ನನಗೆ.

ಕಚಗುಳಿಯಿಟ್ಟು ನಕ್ಕ, ನಗಿಸಿದ
ಮನೆಗೆ ಆಹ್ವಾನಿಸಿದ
ನನ್ನ ಮಕ್ಕಳ ಮುದ್ದಿಸಿದ
ಮನೆಯವಳ ಕ್ಷೇಮ ವಿಚಾರಿಸಿದ
ನನ್ನನ್ನಾವರಿಸಿದ

ಬದುಕು ಪ್ರೀತಿ
ಕಲೆ ವಾಣಿಜ್ಯ
ಕವಿತೆ ಹೋರಾಟ
ಸೂತ್ರ ಸಿದ್ಧಾಂತ...
ಅಳೆದು ತೂಗಿ
ಮುರಿದು ಕಟ್ಟಿ
ಮಾತನಾಡಿದ

ಆದರೆ,
ಒಂದು ಮಾತ್ರ ಹೇಳಲಿಲ್ಲ-
ನನ್ನ ನೋಡಿದಾಗಲೆಲ್ಲ
ಕುಂಯ್ಗುಟ್ಟಿ ಬಾಲ ಅಲ್ಲಾಡಿಸಿ
ಮೈಮೇಲೇರಿ ನೆಕ್ಕುತ್ತಿದ್ದ
ಅವನ ಸಾಕುನಾಯಿಗೆ ಏನಾಯಿತೆಂದು!
*


ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ


ಕನ್ನಡಕ್ಕೆ - ಕಾಜೂರು ಸತೀಶ್