ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 19, 2018

ನಷ್ಟ

ಮೊದಲ ನೋಟದಲ್ಲಿ
ಅಥವಾ
ಪ್ರೀತಿಯ ಮೊದಲ ಪರ್ವದಲ್ಲಿ
ನನಗೆ ನನ್ನ ಕಣ್ಣುಗಳು ನಷ್ಟವಾದವು.

ಎರಡನೇ ಭೇಟಿಯಲ್ಲಿ
ಅಥವಾ
ಪ್ರೀತಿಯ ಮಧ್ಯ ಪರ್ವದಲ್ಲಿ
ನನಗೆ ನನ್ನ ಹೃದಯ ನಷ್ಟವಾಯಿತು.

ಮೂರನೆಯ ಸಮಾಗಮದಲ್ಲಿ
ಅಥವಾ
ಪ್ರೀತಿಯ ಮೂರನೇ ಪರ್ವದಲ್ಲಿ
ನನಗೆ ನಾನೇ ನಷ್ಟವಾದೆ.

ನಾಲ್ಕನೆಯ ಭೇಟಿಯ ಮೊದಲು
ಅಥವಾ
ಪ್ರೀತಿಯ ಅಂತ್ಯ ಪರ್ವದ ಮೊದಲು
ಗೇರುಮರದ ಕೊಂಬೆಯಲ್ಲಿ
ನಾನು ನೇತಾಡಿಕೊಂಡಿದ್ದೆ.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್

ഉദ്യാനപാലക൯

അഞ്ചാറ് പൂ പറിച്ചതിനു ശേഷം
ഇന്നു മകളുടെ ജന്മദിനം എന്നോർത്തു ഉദ്യാനപാലക൯.

സ്നേഹംകൊണ്ടു ആറാമത്തെ പൂ പറിച്ച് മകള്‍ക്കെന്നു കീശയിലിട്ടു

പിറ്റേദിവസം തുണി അലക്കും മുമ്പ് കീശയിൽ തപ്പുമ്പോൾ
അവള്ക്കത് കിട്ടി.
*

കന്നഡ കവിത - ജയന്ത് കായ്കിണി

പരിഭാഷ - കാജൂരു സതീശ്

ನೀರಿನಿಂದೆದ್ದದ್ದು

ಬಿರುಸು ಮಳೆ
ರಭಸ ಪ್ರವಾಹದಿಂದೆದ್ದ ಒಂದು ಹುಳು
ಗಡಗಡ ಚಳಿಯ ತಾಳಲಾರದೆ
ಕರಿಮೆಣಸು ಬಳ್ಳಿಯ ಮೇಲೆ ಹತ್ತಿ ಮರೆಯಲ್ಲಿ ಕುಳಿತಿದೆ.

ಅಲುಗಾಡುತ್ತಿಲ್ಲ ಅದು.

ಮೆಣಸುಬಳ್ಳಿಯ ಸುತ್ತಿದ ಮರಕ್ಕೀಗ
ಗಡಗಡಗಡ ಚಳಿ!
*

ಮಲಯಾಳಂ ಮೂಲ- ಎಂ.ಪಿ.ಪ್ರತೀಷ್

ಕನ್ನಡಕ್ಕೆ - ಕಾಜೂರು ಸತೀಶ್

Friday, July 13, 2018

ಯಾನ ಮುಗಿಸಿದ ಮಂಜುನಾಥ

ಆಗಷ್ಟೇ  ಫೇಸ್ಬುಕ್ಕಿಗೆ ಮುಖ ತೋರಿಸಿದ್ದೆ. ಎಲ್ಲೆಲ್ಲೋ ಹರಿದು ಹಂಚಿಹೋದವರೆಲ್ಲ ಒಟ್ಟಿಗೆ ಠಿಕಾಣಿ ಹೂಡತೊಡಗಿದ್ದ ಕಾಲ.

ಒಂದು ಹೊಸ ಹೆಸರಿನ 'ರಿಕ್ವೆಸ್ಟ್' ಬಂದಿತ್ತು. 'ಯಾರು?' ಎಂದು ಯೋಚಿಸುತ್ತಿರುವಾಗಲೇ ಇನ್ಬಾಕ್ಸಿಗೆ ಒಂದು ಸಂದೇಶ!

ಎಂದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಕವಿತೆಯನ್ನು ನೆನಪಿಟ್ಟುಕೊಂಡು ಬದುಕುತ್ತಿದ್ದವರೊಬ್ಬರು ಸಿಕ್ಕರು.

ಕುತೂಹಲದಿಂದ ಅವರ ಕವಿತೆಗಳನ್ನು ಓದಿದೆ. ಕವಿತೆಗಳ ಮೇಲಿರುವ ನನ್ನ ನಕಾರಾತ್ಮಕ ಧೋರಣೆಯಿಂದಲೋ ಏನೋ, ಅಷ್ಟೇನೂ ಕಾಡಲಿಲ್ಲ.

ಅವರ ಮೊದಲ ಕಥಾಸಂಕಲನ 'ಮುಗಿಲ ಮಾಯೆಯ ಕರುಣೆ' ನನ್ನ ಕೈಸೇರಿತು. ಅವರ ಕಥಾಪ್ರತಿಭೆಯ ಎದುರು ಮೂಕನಾದೆ; ರೋಮಾಂಚನಗೊಂಡೆ!

ಸ್ವಲ್ಪ ದಿನಗಳ ನಂತರ ಕೇಂದ್ರವೇ ಇಲ್ಲದ ನನ್ನ ಕತೆಯೊಂದನ್ನು ಕಳಿಸಿದ್ದೆ. ಕತೆ ಇಷ್ಟವಾಗದ್ದನ್ನು ತಿಳಿಸಿದರು. ಅವರ ಪ್ರಾಮಾಣಿಕತೆಯನ್ನು ತುಂಬಾ ಮೆಚ್ಚಿಕೊಂಡೆ.

ಮೊನ್ನೆ ಮೊನ್ನೆ ಬದುಕನ್ನು ಬದುಕಲಾರದೆ ಹೋಗಿಬಿಟ್ಟರು. ಒಂದು ಸೂಚನೆಯನ್ನು ಕೂಡ ನೀಡಲಿಲ್ಲ. ಕರುಣೆಯಿಲ್ಲದ ಬದುಕು ಅವರನ್ನು ನುಂಗಿ ಗಟಗಟ ನೀರು ಕುಡಿದಿತ್ತು!

ಪ್ರಿಯ ಮಂಜುನಾಥ ಪಿ. ಬೆಳಗಾವಿ ( Manjunath P Belagavi), ಹೀಗಾಗಬಾರದಿತ್ತು!

Sunday, July 1, 2018

ಒಂದು ಕವಿತೆಯ ಚರಮಗೀತೆ

ನನ್ನ ಕವಿತೆ ತೀರಿಕೊಂಡ ದಿನ
ಮಳೆ, ಕಣ್ಣು, ನದಿ, ಹೆಂಚು, ಮರ...
ಮತ್ತ್ಯಾರನ್ನೂ ಅಳಲು ಬಿಡಲಿಲ್ಲ 
ಶಬ್ದಕೋಶದ ಅವರ ಪದಗಳ ರಾಶಿ ಹಾಕಿ
ಮೈಕುಸದ್ದನ್ನು ಸುರಿದು ಬೆಂಕಿಹಚ್ಚಿದೆ


ನನ್ನ ಪ್ರೀತಿಯ ಮಳೆ ತೊಟ್ಟಿಕ್ಕತೊಡಗಿದೆ-
ಎಷ್ಟು ಅದುಮಿಟ್ಟುಕೊಂಡರೂ ಗಾಳಿಯ ಕಣ್ಣುಗಳಿಂದ.
ಇನ್ನೂ ಅರ್ಧ ಬೆಂದಿದ್ದಷ್ಟೆ
ಹೊಗೆಯಾಡುತ್ತಿದೆ
ತಲೆ ಸಿಡಿಯಿತೋ ಏನೋ
ಹಾಗೇ ಬಿಟ್ಟರೆ ತೋಳಗಳು ಎಳೆದೊಯ್ಯುತ್ತವೆ


ನಿದ್ದೆಗೆಟ್ಟು ಕಾಯುತ್ತಿದ್ದೇನೆ.

ಈ ತಡರಾತ್ರಿಯಲ್ಲಿ ಕತ್ತಲಿನ ಒಳಗೆ ಹಗಲು ನುಸುಳದ ಹಾಗೆ
ಯಾವುದೋ ನಾಯಿಯೊಂದು ಬೊಗಳುತ್ತಾ ಕಾಯುತ್ತಿದೆ
ವಿದ್ಯುತ್ತು - ಕಂಬಗಳ ಕಂಬಿಗಳಲ್ಲಿ ಬಾವಲಿಯೊಂದಿಗೆ ಜೋತಾಡುತ್ತಾ ಮಲಗಿದೆ

ಹಾಡುತ್ತಿರುವ ಮತ್ತದೇ ಮಿಡತೆಯನ್ನು ಕರೆದು
ಕವಿತೆ ಸತ್ತ ನೆನಪನ್ನು ಮರುಕಳಿಸಿಕೊಳ್ಳಲು ಇಷ್ಟವಿಲ್ಲ ನನಗೆ.

ಈ ಪದಕ್ಕೆ ಪೌಡರ್ ಬಳಿಯಬೇಕಿತ್ತು
ಈ ವಾಕ್ಯಕ್ಕೆ ಕೋಟು ಇದ್ದಿದ್ದರೆ ಚೆನ್ನಿತ್ತು
ಇದರ ಹಿಂದೆ ಮುಂದೆ ಇನ್ನೊಂದಿಷ್ಟು ಉಬ್ಬಿಕೊಂಡಿರಬೇಕಿತ್ತು
ಎಂದೆಲ್ಲಾ ನುಡಿದವರ ಎಂಜಲು ಬತ್ತಿದೆ
ಅಲ್ಲೀಗ ಒಂದು ಕ್ಯಾಕ್ಟಸ್ಸು ಕೂಡ ಬೆಳೆಯುತ್ತಿಲ್ಲ.

ತಪ್ಪಿತಸ್ಥರ ಮೊದಲ ಸಾಲಿನಲ್ಲಿರುವ ನನ್ನ ಹೆಸರು
ಈಗಾಗಲೇ ನೇಣುಬಿಗಿದುಕೊಂಡಿದೆ ಡೆತ್ ನೋಟ್ ಕೂಡ ಬರೆದಿಡದೆ
*

ಸತ್ತುಹೋದ, ಅರ್ಧಬೆಂದ ಕವಿತೆಯಲ್ಲೊಂದು ಗಿಡಹುಟ್ಟಿದೆ
ನನ್ನ ಕಣ್ಣಗುಡ್ಡೆಗಳಂಥಾ ಎರಡು ಕಪ್ಪು ಹೂವುಗಳು ಅದರ ಮುಖದಲ್ಲಿ.

ನಾನೀಗ ಹೂವಿನ ಕಣ್ಣುಗಳಲ್ಲಿ ನೋಡುತ್ತಿದ್ದೇನೆ ಅದನ್ನು.
*

ಕಾಜೂರು ಸತೀಶ್

Hotel

ಊಟಕ್ಕೆಂದು ಹೋಟೆಲಿನ ಬಳಿಬಂದೆ
ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿದೆ!

ಎಲ್ಲಿ ಹೋಗಿರಬಹುದು ಅದು
ಬೆವರಲ್ಲಿ ತೋಯ್ದ ತನ್ನ ಅಂಗಿಯ ಕಳಚಿಟ್ಟು?

ಮುತ್ತುತ್ತಿರಬಹುದು ಈಗಲೂ
ಆ ಅನಾಮಿಕ ನೊಣಗಳು
ಅದನ್ನೇ ಹಿಂಬಾಲಿಸಿಕೊಂಡು.

ಪಿಚಕ್ಕೆಂದು ಉಗುಳುತ್ತಿದ್ದ ವಾಶ್ ಬೇಸಿನ್
ಯಾವ ಬರಗಾಲದ ಧ್ಯಾನದಲ್ಲಿರಬಹುದು ಈಗ?

ಪಾಪ, ಉಸಿರಾಡಿ-ಬಿಡಲು ಒಂದು 'ಧಮ್ಮು' ಹೊಗೆಯೂ ಸಿಕ್ಕಿರಲಿಕ್ಕಿಲ್ಲ

ಹೋಗಿರಬಹುದು ಮುದ್ದಾಡಿಬರಲು
ಟವಲಿನ ಬೆವರು ಸೂರ್ಯನನ್ನು!

ತಿಂದಿದ್ದು ಹೆಚ್ಚಾಗಿ 'ಅರ್ಜೆಂಟಾ'ಯಿತೇ?
ಅಥವಾ ಊರಿನ ಉಸಾಬರಿ ಇದಕೂ ಅಂಟಿತೇ?

ಆ ಒಲೆಗೆ ಇಂದು ಊಟವಿರಲಿಕ್ಕಿಲ್ಲ!
ನನಗಾದರೋ ಉಪವಾಸ ಇದ್ದೂ ಇದ್ದೂ ಅಭ್ಯಾಸವಿದೆ!
*

ಕಾಜೂರು ಸತೀಶ್

(ಕಳೆದ ಸೋಮವಾರ. ಗ್ಯಾಸ್ ಮುಗಿದಿತ್ತು. ಅಂಗಡಿಗಳೆಲ್ಲ ಮುಚ್ಚಿದ್ದವು. ಹೋಟೆಲಿಗೆ ಹೋದರೆ ಅದೂ ಕೂಡ ಬಾಗಿಲು ಹಾಕಿ ಎಲ್ಲೋ ಹೊರಟುಹೋಗಿತ್ತು!)