ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, February 24, 2018

ಎರಡು ಸಾಲಿನ ಗಪದ್ಯ

ಮನೆಗೆ ಬೀಗ ಹಾಕುವಾಗ
ಜೇಬು ಮುಟ್ಟಿ ನೋಡಿಕೊಳ್ಳುತ್ತೇನೆ
ಪರ್ಸು, ಪೆನ್ನು, ಮೊಬೈಲು...
'ಹ್ಞಾಂ... ಇವೆ!'

'ಏನೋ ಮರೆತೆ' ಎಂಬ ವಸ್ತು
ಮಿದುಳ ತುದಿಯಲ್ಲೆಲ್ಲೋ
ಕೋಣೆಯ ಕಪಾಟಿನಲ್ಲೆಲ್ಲೋ
ಉಳಿಯದ ಹಾಗೆ
ಚೀಟಿಯಲ್ಲಿ ಎರಡು ಸಾಲುಗಳಾಗಿ ಹಡೆದು
ಮಡಿಸಿ ಜೇಬಲ್ಲಿಟ್ಟುಕೊಳ್ಳುತ್ತೇನೆ.

'ಈ ದೇಹ ಇಂದೇ ಮಣ್ಣಿಗೆ ಬಿದ್ದರೆ
ಹುಟ್ಟಲು ಬಿಡಿ'
ಎಂದರೆ ಪದ್ಯವಷ್ಟೇ ಆಗುತ್ತದೆ.
'ನಂಗೆ ಗದ್ದಲ ಅಂದ್ರೆ ಆಗಲ್ಲ
ಪದ್ಯದ್ಹಾಗೆ ಇದ್ದುಬಿಡಿ'
ಎಂದರೂ.

ಅದಕ್ಕೋಸ್ಕರವೇ ಎರಡು ಸಾಲು:
'ಈ ದೇಹವನ್ನು ಮೆಡಿಕಲ್ ಕಾಲೇಜಿಗೆ ಕೊಟ್ಟುಬಿಡಿ
ದಯವಿಟ್ಟು ಮನೆಗೆ ಒಯ್ಯದಿರಿ'.

(ನನ್ನ ಎಟಿಎಂ ಪಿನ್ - )

*

ಕಾಜೂರು ಸತೀಶ್

ಗೋಡೆಚಿತ್ರ

ಗೋಡೆಚಿತ್ರ
------------
ಕೂದಲ ಹರಡಿದ್ದಾಳೆ ಹುಡುಗಿ.
ಅವಳ ಕಣ್ಣಲ್ಲಿ ಬಿರಿದ ಹೂಬಿಸಿಲು.
ಒಂದೇ ಒಂದು ನೋಟ ಸಾಕು
ಗೋಡೆ ದಾಟಿ ಒಳಗಿಳಿದೇಬಿಡುವಳು.

ನುಗ್ಗಿ ಬರುತ್ತದೆ ಸಲಗಗಳ ಗುಂಪು
ಗೋಡೆಯ ಕೆಡವಿ.
ಉಕ್ಕೇರಿ ಬರುತ್ತದೆ
ಅಲೆಗಳ ಹೊತ್ತು ಸರೋವರ.
ಮೀನು ಸಿಗದ ಮಿಂಚುಳ್ಳಿ
ಅಡಗುತ್ತದೆ ಎಲೆಮರೆಯಲ್ಲಿ.
ಕಾಡಿಗೆ ಇನ್ನಿಲ್ಲದ ತುಡಿತ.

ಕೋಣೆಗೆ ಹಾರುತ್ತದೊಂದು ಚಿಟ್ಟೆ.
ತೇವಗೊಂಡ ಕಲ್ಲಿನಲ್ಲಿ
ಹಬ್ಬಿದ ಬಳ್ಳಿಯಲ್ಲಿ
ಬಿಸಿಲುಪರ್ವತದ ನೆತ್ತಿಯಲ್ಲಿ
ಕೊಕ್ಕು ಅಲುಗಾಡುವ ಸದ್ದಿನಲ್ಲಿ
ಮಳೆಹನಿಗಳ ತುಂಬಿಕೊಳ್ಳುವ ಎಲೆಯಲ್ಲಿ
'ಮುಟ್ಟಿದರೆ ಮುನಿ'ಯ ನೆನಪಿನಲ್ಲಿ
ಹಾರಿಕೊಂಡಿರುತ್ತದೆ ಚಿಟ್ಟೆ.

ಕತ್ತಲು ಬೀಳುವ ಮುನ್ನವೇ
ಗೋಡೆಗಂಟಿಕೊಳ್ಳುತ್ತದೆ.
ಚಿಟ್ಟೆಯ ರೆಕ್ಕೆಯ ಒಳಗಿಳಿದರೆ
ಕಣ್ಣೊಂದು ಹೂವು
ಅದರೊಳಗೆ ಜೇನು
ಹಾರುವ ಪರಾಗ.

ಕೋಣೆಯ ಒಳಗೆ
ಅರಳುತ್ತದೊಂದು ಲೋಕ
*

ಮಲಯಾಳಂ ಮೂಲ- ಚಿತ್ರಾ ಕೆ.ಪಿ

ಕನ್ನಡಕ್ಕೆ - ಕಾಜೂರು ಸತೀಶ್

ಮರುನೋಟ

ಬಿರುಬೇಸಿಗೆಯ ಬರ.
ಬಿರಿದ ಹೂವೊಂದು
ಕಿಟಕಿಯೆಡೆಗೆ ನೋಡುತಿದೆ.

ಮೊಟ್ಟಮೊದಲ ಸಲ
ಹೂವಿನ ಕಣ್ಣಿಗೆ ಸಿಕ್ಕ
ಕಿಟಕಿಯೊಳಗಿನ ಚಿತ್ರವಾಗುತ್ತೇನೆ.

ಗಾಳಿಗೆ ಹೊಯ್ದಾಡುವ ಹೂವಿಗೆ
ಇನ್ನಿಲ್ಲದ ಕನಿಕರ ನನ್ನ ಮೇಲೆ.

ಕಣ್ಣುಗಳಲ್ಲಿ ಅದು
ನನ್ನ ನಗ್ನತೆಯ ಗೀಚುತ್ತದೆ
ಈ ಒಡಲ ಕಳಚಿಡುತ್ತೇನೆ ನಾನು.
ಒಡಲು ನನ್ನ ಕಳಚಿಟ್ಟುಬಿಡುತ್ತದೆ.

ನಿದ್ದೆಯಲ್ಲಿ
ನಾನು
ವಸಂತದ ಪೈರುಗಳ
ಕೊಯ್ದು ರಾಶಿಹಾಕುತ್ತೇನೆ.
*

ಮಲಯಾಳಂ ಮೂಲ : ಚಿತ್ರಾ ಕೆ.ಪಿ.

ಕನ್ನಡಕ್ಕೆ : ಕಾಜೂರು ಸತೀಶ್

ಮಾತ್ರೆ

ಜ್ವರ ಒಲೆ ಉರಿಸುತ್ತಿದೆಯೇ?
ಹೃದಯ ಶವಾಸನದಲ್ಲಿದೆಯೇ?
ಶ್ವಾಸಕೋಶ ಬಲೂನು ಊದುತ್ತಿದೆಯೇ?
ಮೂತ್ರಪಿಂಡ ವಿಚ್ಛೇದನೆ ಕೊಟ್ಟಿತೇ?
ಸಿಹಿ ಹೆಚ್ಚಿ ಹೆಜ್ಜೇನುಗಳು ದಾಳಿಯಿಟ್ಟವೇ?
ಕೀಲು ನೂಲು ಪೋಣಿಸಿ ಮೂಳೆಗಳ ಹೊಲಿಯುತ್ತಿದೆಯೇ?

ಮುಟ್ಟಿ ನೋಡಿದೆ-
ಪುಟ್ಟ ಮಾತ್ರೆ.
ತೆರೆದೇ ಇರುವ
ಪುಟ್ಟ ಬಾಯಿ.
ತಿನ್ನಬೇಕು ನೋವು
ಅಹೋರಾತ್ರಿ.
ಪಾಪ!

ಹೊಟ್ಟೆ ತುಂಬಿದ ಮೇಲೆ
ಅದರ ಗಡಿಯಾರದಾಕಾರದ
'ಟಿಕ್ ಟಿಕ್' ಮಾತಿನ ಮೂತಿಗೆ
ಲಕ್ವಾ ಹೊಡೆದು
ಉದರದೊಳಗಿಟ್ಟುಕೊಂಡು
ಅದರ ತಾಯಿಯಾದವರಿಗೆ
ದೀರ್ಘ ಕುಂಭಕ!

ಅಂದ ಹಾಗೆ
ನನ್ನ ಟೋಕನ್ ಸಂಖ್ಯೆಯನ್ನು ಮರೆತೇಬಿಟ್ಟೆ!
*


ಕಾಜೂರು ಸತೀಶ್

Monday, February 12, 2018

ಇರುಳ ಹಿಂಡಿ ಬೆಳಕ ಹರಡಿ

ಇಡೀ ರಾತ್ರಿ
ಹಳೆಯ ಬಟ್ಟೆಗಳನ್ನು ತಂದು ಮುಳುಗಿಸಿ
ಸ್ವಲ್ಪ ಸ್ವಲ್ಪವೇ ಹಿಂಡತೊಡಗಿದೆ
ಮನೆಯ ಹಿಂದಿರುವ ತೊಟ್ಟಿಯಲ್ಲಿ.

ಸಾಕುಸಾಕಾಗಿ ಹೋಯ್ತು...
ಆಕಾಶ, ಭೂಮಿಗಳಿಗೆ
ಸ್ವಲ್ಪ ಸ್ವಲ್ಪವೇ ಬೆಳಕಿನ ಸಿಂಚನ
ಶುಭ್ರವಾಗೆದ್ದು ಬಂದ ಸೂರ್ಯ
ಮರದ ಕೊಂಬೆಗಳ ನಡುವೆ
ಇಣುಕಿನೋಡಿತು ನನ್ನನ್ನು ಮಾತ್ಸರ್ಯದಿಂದ.

ಭೂಮಿಗೆ ಬೆಳಕು ತರಿಸಿ
ನನ್ನನ್ನು ನಾನು ಮರೆತುಬಿಟ್ಟೆ
ಮಧ್ಯಾಹ್ನ, ಸಂಜೆಗಳನ್ನೆಲ್ಲ ಮರೆತುಬಿಟ್ಟೆ
ಮನೆಯ ಹಿಂದಿರುವ ತೊಟ್ಟಿಯಲ್ಲಿ ಅಡಗಿಸಿಟ್ಟ ಕತ್ತಲು
ಮೆಲ್ಲಮೆಲ್ಲಗೆ ಹಬ್ಬುವುದನ್ನೂ ಕೂಡ.

ಬಂತು ಅದು
ಎರಡು ಕಣ್ಣುಗಳಿಗೂ
ತಡಕಾಡಿ ಹುಡುಕಲು ಹೊರಟಿರುವೆ
ಆ ಹಳೆಯ ಬಟ್ಟೆಗಳನ್ನು.
*

ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

Saturday, February 10, 2018

ಮದುವೆ

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ನಡೆಯಿತು
ಊರ ಮಂದಿಯೆಲ್ಲ ಬಂದು
ಉಂಡು ಹರಸಿ ಹೋದರು.

ಕಾಗೆಗೆ ಬಿಳಿಯಂಗಿ
ಬೆಳ್ಳಕ್ಕಿಗೆ ಕಪ್ಪು ಸೀರೆ
ಏನು ಅಂದ ಏನು ಚಂದ ಅಬ್ಬಬ್ಬಬ್ಬಬ್ಬಾ
ಥೇಟ್ ರಾಜ ರಾಣಿಯರಂತೆ ಹಹ್ಹಹ್ಹಹ್ಹಹ್ಹಾ.

ಕುಡಿಯಲು ಅತ್ತಿ ಬೇರಿನ ನೀರು
ತಿನ್ನಲು ಕಾಡಿನ ಹಣ್ಣುಗಳು
ಜೊತೆಗೆ ಹುರಿದ ಏಡಿ ಮೀನು
ಗಮ್ಮತ್ತೋ ಗಮ್ಮತ್ತು.

ಮರಕುಟಿಗ ಡೋಲು ಬಾರಿಸಿ
ಕೋಗಿಲೆ ಪೀಪಿ ಊದಿ
ಕಪ್ಪೆಗಳೆಲ್ಲ ಹಾಡು ಹಾಡಿ
ಸಂಭ್ರಮವೋ ಸಂಭ್ರಮ.

ಉದ್ದ ಉಗುರಿನ ಪಾರು ಜೊತೆ
ಹುಲಿಯಣ್ಣನ ತಕತಕ ಕುಣ ತ
ಡೊಳ್ಳು ಹೊಟ್ಟೆ ಮಾರನ್ಜೊತೆ
ಆನೆಯಕ್ಕನ ತಕಥೈ ಕುಣಿತ .

ಕಾಗೆ ಮತ್ತು ಬೆಳ್ಳಕ್ಕಿಯ
ಮದುವೆಯು ಮುಗಿಯಿತು
ಊರ ಮಂದಿಯ ಬಾಯ್ತುಂಬ
ಮದುವೆಯದೇ ಮಾತು.
*

ಕಾಜೂರು ಸತೀಶ್

ನಮ್ಮ ಪಿಂಕು

ನಮ್ಮ ಪಿಂಕುವಿಗೆ ಇಂದು ಒಂದು ವರ್ಷ ತುಂಬುತ್ತೆ
‘ಹ್ಯಾಪಿ ಬರ್ತ್‍ಡೇ’ ಅಂದ್ರೆ ಬಾಲ ಅಲ್ಲಾಡ್ಸುತ್ತೆ.

ಕೇಕು ತಂದು ಕ್ಯಾಂಡಲ್ ಹಚ್ಚಿ ಚಾಕು ಕೊಟ್ಟುಬಿಟ್ಟರೆ
ಕುಂಯ್ಕುಂಯ್ಗುಟ್ಟಿ ಜೊಲ್ಲು ಸುರಿಸಿ ಬಾಲ ಅಲ್ಲಾಡ್ಸುತ್ತೆ.

‘ಹಂಚಿ ಬಾ ತಗೋ’ ಎಂದು ಕೇಕು ಕೊಟ್ಟುಬಿಟ್ಟರೆ
ಮರದ ಕೆಳಗೆ ಎಲ್ಲಾ ತಿಂದು ಮೂತಿ ಒರೆಸಿ ಬರುತ್ತೆ.

‘ಅಯ್ಯೋ ಪೆದ್ದು ಹೀಗೇಕ್ಮಾಡ್ದೆ’ ಎಂದು ಕೇಳಿಬಿಟ್ಟರೆ
ಕಿವಿ ಬಾಗ್ಸಿ ಶರಣೆಂದು ಮುದುರಿ ಮಲ್ಕೊಳ್ಳುತ್ತೆ.
*

ಕಾಜೂರು ಸತೀಶ್