ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, January 1, 2016

ಪದ್ಯವೊಂದಿರಲಿ ಬೆಳಕಿಗೆ...

ಎಲ್ಲಾ ಅಮವಾಸ್ಯೆಗಳಲ್ಲಿ ಪದ್ಯವೊಂದಿರಲಿ ಬೆಳಕಿಗೆ ಅಂತ ಹೇಳುತ್ತಾ ತನ್ನ ಎಲ್ಲಾ ನೋವಿನ, ಸಂಕಟದ, ಬೇಗುದಿಯ ಗಳಿಗೆಗಳಲ್ಲಿ ಕವಿತೆಯನ್ನು ಉಸಿರಾಡಿಕೊಂಡು, ಕವಿತೆಯನ್ನು ಬಗಲಿಗಿಟ್ಟುಕೊಂಡು ಬದುಕುತ್ತಿರುವ ಹಾಗು ಜೀವಪರ ಕಾಳಜಿಗೆ ಮಿಡಿಯುವ, ವ್ಯವಸ್ತೆಯ ಬಗೆಗಿನ ಕೋಪಕ್ಕೆ ತಣ್ಣಗಿನ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ಜೊತೆಗೆ ಕವಿತೆಯನ್ನು ದೀಪದಂತೆ ಕಾಯ್ದಿಟ್ಟಿಕೊಂಡು ಆರ್ಧ್ರಭಾವವನ್ನು ಸೂಸುವಂತೆ ಏಕಕಾಲದಲ್ಲಿ ಬರೆಯುವ ಕವಿ ನಮ್ಮ ನಡುವೆ ಇರುವ ಕಾಜೂರು ಸತೀಶ್.

ಈ ಹೊತ್ತಿನಲ್ಲಿ ನಮ್ಮ ಕಾಲಮಾನದಲ್ಲಿ ಬರೆಯುತ್ತಿರುವ ಒಬ್ಬ ಅಪ್ಪಟ ಪ್ರತಿಭಾನ್ವಿತ, ಸೃಜನ ಶೀಲ ಕವಿ ಕಾಜೂರು ಸತೀಶ್ ಅಂತ ಹೇಳೋದಿಕ್ಕೆ ಅತೀವ ಸಂತಸ ಮತ್ತು ಹೆಮ್ಮೆಯೆನ್ನಿಸುತ್ತದೆ. ಮೇಲು ನೋಟಕ್ಕೆ ಇಲ್ಲಿನ ಎಲ್ಲಾ ಕವಿತೆಗಳು ಹತಾಶೆ, ಆಕ್ರೋಶವನ್ನಷ್ಟೇ ಉಸಿರಾಡುತ್ತಿದೆ ಅಂತನ್ನಸಿದರೂ, ಸೂಕ್ಷ್ಮವಾಗಿ ಗಮನಿಸಿದರೆ ಬದುಕಿನ ಎಲ್ಲಾ ಸೂಕ್ಶ್ಮ ಒಳ ತೋಟಿಗಳ ಒಳ ಹೊಕ್ಕು ಅವುಗಳನ್ನು ಅಷ್ಟೇ ಧ್ಯಾನದಿಂದ ಆಲಿಸುವ ವ್ಯವಧಾನದ ಕಿವಿ ಸತೀಶ್ ರವರಿಗೆ ದಕ್ಕಿದೆ. ಹಾಗೆಯೇ ಅವುಗಳಿಗೆ ದನಿಯಾಗುವ ಕಲೆ ಕೂಡ ಕಾಜೂರರವರ ಲೇಖನಿಗೆ ಸಿದ್ಧಿಸಿರುವುದರಿಂದಲೇ ಇಲ್ಲಿ ಗಾಯದ ಹೂವುಗಳು ಇತರೇ ಕವನ ಸಂಕಲನಗಳಿಗಿಂತ ತುಸು ಭಿನ್ನವಾಗಿ ನಿಂತಿದೆಯೆನ್ನಿಸುತ್ತದೆ.

ಕಾಲ ಬುಡದಲ್ಲಿ ಸತ್ತು ಬಿದ್ದ ಒಂದು ಸಣ್ಣ ಇರುವೆಯನ್ನ ಸತ್ತಿದೆ ಅಂತ ದೊಡ್ಡದಾಗಿ ಬೊಬ್ಬಿರಿಯುತ್ತಾ ಕಾಲ ಕಳೆಯುವ ಅದೇ ಕ್ಷಣದಲ್ಲಿ, ಸಾಯಲು ಹೊರಟಿರುವ ಮತ್ತೊಂದು ಸಣ್ಣ ಇರುವೆಯು ಬದುಕಿಗಾಗಿ ಅಂಗಲಾಚುವ ಪರಿ, ಎತ್ತರದ ದ್ವನಿಯ ಮುಂದೆ ಹೇಗೆ ಕ್ಷೀಣವಾಗಿ ಕಳೆದು ಹೋಗುತ್ತದೆ...?!. ಈ ಮೂಲಕ ಬಲವಿಲ್ಲದವರ, ಬೆಂಬಲವಿಲ್ಲದವರ ಬದುಕು ಹೇಗೆ ಸದ್ದಡಗಿ ಹೋಗುತ್ತದೆ ಎನ್ನುವುದರನ್ನ ಸಂಕಲನದ ಮೊದಲ ಕವಿತೆ ಪುಟ್ಟದಾದರೂ ಗಟ್ಟಿಯಾಗಿ ವಿಸ್ತಾರದ ನೆಲೆಯಲ್ಲಿ ತೆರೆದಿಡುತ್ತದೆ.


ಒಂಟಿ ಕವಿತೆಯಲ್ಲಿ ಕವಿ ಒಬ್ಬಂಟಿಗ ಅಥವಾ ಏಕಾಂಗಿಯೆಂಬುದನ್ನ ಪರೋಕ್ಷವಾಗಿ ಸೂಚಿಸುತ್ತದೆ. ಇದೊಂದು ಪ್ರತ್ಯಕ್ಷ ರೂಪದ ಹೇಳಿಕೆಯಷ್ಟೆ. ಒಂಟಿ ಎನ್ನುವುದು ಮೇಲ್ನೋಟದ ಒಂದು ಬಾಹ್ಯ ರೂಪವಲ್ಲವಷ್ಟೆ. ಅದು ಪ್ರಶ್ನಿಸುವವರಿಗೆ ಅದು ಸುಲಭದಲ್ಲಿ ಗೋಚರಿಸುವಂತದ್ದಲ್ಲ ಅನ್ನುವುದನ್ನ

'ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲಾ ಕಷ್ಟದ ಕೆಲಸ '

ಅಂತ ಕವಿ, ಆ ಮೂರು ಸಾಲುಗಳಲ್ಲಿ ತಾನು ಒಂಟಿಯಲ್ಲ. ಇವನ್ನೆಲ್ಲಾ ಬಗೆದು ತೋರಿಸುವುದು ಕಷ್ಟದ ಕೆಲಸದವಾದುದರಿಂದ ನನ್ನಂತವರನ್ನಿನ್ನೂ ಒಂಟಿಯಾಗಿಸಿದ್ದಾರೆ ಎನ್ನುವಲ್ಲಿ ಒಂದು ರೀತಿಯಾದ ತಿಳಿ ಹಾಸ್ಯವಿದೆ. ತನ್ನೊಂದಿಗೆ ತನ್ನ ಸುತ್ತು ಮುತ್ತಲಿನ ಅದೆಷ್ಟೋ ಅದೃಶ್ಯವಾದ ಸಂಗತಿಗಳನ್ನು ಕಟ್ಟಿಕೊಂಡು ಗಾಡವಾಗಿ ಬದುಕುತ್ತಿರುವುದು ಸಮಾಜದ ಹೊರಗಣ್ಣಿಗೆ ಹೇಗೆ ಕಾಣಲು ಸಾಧ್ಯ ಅಂತ ಸಣ್ಣಗೆ ತಿವಿಯುವಾಗಿನ ಕವಿಯ ಚಿಂತನೆಗೆ ಮನಸು ಬೆರಗಾಗುವಷ್ಟು ಅಹುದಹುದು ಅನ್ನುತ್ತದೆ.

ಕಾಜೂರುರವರ 'ಗಾಯದ ಹೂವುಗಳು' ಶೀರ್ಷಿಕೆಯೇ ಮೊದಲು ಸ್ವಲ್ಪ ವಿಚಿತ್ರ ಅಂತನ್ನಿಸಿತ್ತು. ಯಾಕೆಂದರೆ ಗಾಯಗೊಂಡ ಹೂಗಳ ಕಲ್ಪನೆಯೇ ತೀರಾ ಭಯ ಹುಟ್ಟಿಸುತ್ತದೆ. ಹೂಗಳು ಗಾಯಗೊಳ್ಳುವುದನ್ನ ಯಾರೂ ಬಯಸುವುದಿಲ್ಲ. ಈ ಆತಂಕದಲ್ಲೇ ಗಾಯಗೊಂಡ ಹೂಗಳನ್ನು ಸ್ವಲ್ಪ ಗಲಿಬಿಲಿಗೊಂಡು ಓದುತ್ತಾ ಹೋದರೆ ಕವಿಯ ಆಶಯ ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ.

'ಗಾಯಗಳು ಹಾಡಬೇಕು
ಕೆಂಪು ಹೂಗಳಾಗಿ..

ಜಗದ ಅವ್ವಂದಿರು ಸುಡುವ
ರೊಟ್ಟಿಯ ಎಸಳುಗಳಾಗಿ ಹಾರಿ
ಹೂವಾಗಬೇಕು..

ಎಲ್ಲ ಗಾಯಗಳೂ ಹೂವುಗಳಾಗಬೇಕು
ನಿರ್ವಾತ ಕತ್ತಲುಗಳಲ್ಲಿ -ನಮ್ಮ ನಿಮ್ಮ ಹೃದಯಗಳಲ್ಲಿ'


ಎನ್ನುವಾಗ ಕವಿಯ ಮನೋಧರ್ಮ ಇಂಗಿತ ಸ್ಪಷ್ಟ ರೂಪ ಪಡೆದುಕೊಳ್ಳುತ್ತದೆ. ಆ ಕ್ಷಣ ನಮ್ಮ ಮನಸು ಕೂಡ ಹೂವಂತೆ ತೊನೆದಾಡುತ್ತದೆ

ಕವಿಗೆ ವ್ಯವಸ್ತೆಯ ಅವ್ಯವಸ್ತೆಯ ಬಗೆಗೆ ಸಿಟ್ಟಿದೆ. ಆ ಅಸಮಧಾನವನ್ನ ಅವರೊಳಗಿನ ಕವಿತೆಗಳ ಮೂಲಕ ಹೊರಗೆಡುವ ಪ್ರಯತ್ನವನ್ನ ಅವರದೇ ನೆಲೆಯಲ್ಲಿ ತುಂಬಾ ವಿಭಿನ್ನವಾಗಿ ಮಾಡುತ್ತಾರೆ. ನೆಲವಿಲ್ಲದವನ ಕವಿತೆಯಲ್ಲಿ ಅವರು ಹೀಗೆ ಬರೆಯುತ್ತಾರೆ..

'ಮರುಭೂಮಿ ಹಿಮಶಿಖರಗಳನ್ನು
ಯಾಕೆ ಅನಾಥವಾಗಲು ಬಿಡುತ್ತೀರಿ
ನಿಮ್ಮ ಪರವಾಗಿ ಸೈಟಿಗೆ ಅರ್ಜಿ ಸಲ್ಲಿಸಿದ್ದೇನೆ'

ಅನ್ನುವಲ್ಲಿನ ಒಂದು ವ್ಯಂಗ್ಯದ ಮೊನಚು ಹಾಗು ಒಂದು ಸಾತ್ವಿಕ ಆಕ್ರೋಶ ಇಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಮತ್ತು ಧ್ವನಿಪೂರ್ಣವಾಗಿದೆ. ಅಂತೆಯೇ ಯಾರದಿದು ಬೇಲಿ ಹಾಕದ ನೆಲ? ಎಂಬಂತ ಸಾಲುಗಳು ಸೀದಾ ನಮ್ಮನ್ನು ತಾಕಿ, ನಮ್ಮೊಳಗೊಂದು ಸಂಚಲನವನ್ನುಂಟು ಮಾಡಿ, ಈ ಒಂದೇ ಒಂದು ಸಾಲು ನಮ್ಮನ್ನು ನಿಂತಲ್ಲೇ ಅಲುಗಾಡಿಸಿ ಬಿಡಬಲ್ಲದು.

ಉತ್ತಮ ಕವಿತೆಗಳ ಲಕ್ಷಣವೇ ಅಂತದ್ದು... ಓದಿ ಮುಗಿದಾದ ಮೇಲೂ ನಮ್ಮೊಳಗೆ ಒಂದು ಹುಯಿಲೆಬ್ಬಿಸಿ ನಮ್ಮನ್ನು ಕಾಡುವಂತೆ ಮಾಡುವಂತದ್ದು. ಹೇಳಿಯೂ ಹೇಳದಂತೆ ನಮಗೇ ಒಂದಿಷ್ಟು ಬಾಕಿ ಬಿಡುವಂತದ್ದು. ಇಂತಹ ಎಲ್ಲಾ ಲಕ್ಷಣಗಳು ಕಾಜೂರುರವರ ಕವಿತೆಯಲ್ಲಿ ಢಾಳಾಗಿ ಕಾಣಸಿಗುತ್ತವೆ. ಈ ನಾಜೂಕಿನ ಕಲೆಗಾರಿಕೆಗಳನ್ನ ಅವರ ಕವಿತೆಗಳು ಸುಲಭದಲ್ಲಿ ಕರಗತ ಮಾಡಿಕೊಂಡಿವೆ ಎನ್ನುವುದಕ್ಕೇ ಈ ಕೆಳಗಿನ ಕವಿತೆಗಳೇ ಸಾಕ್ಷಿ.

ಶಬ್ದ ಸಮರ ಎಂಬ ಕವಿತೆಯಲ್ಲಿ.. ಉಳ್ಳವರ, ಸ್ತಾಪಿತ ಹಿತಾಸಕ್ತಿಗಳ ದಬ್ಬಾಳಿಕೆಯನ್ನ ಎದುರಿಸಿದಷ್ಟೂ ಎದುರಿಗೆ ದಿಟ್ಟವಾಗಿ ನಿಲ್ಲಲಾರದೆ, ತಾನು ಸೋತೇ ಹೋದೆ ಅಂತ ನೆನೆದುಕೊಂಡು ಕವಿ, ಯಾರಿಗೂ ತಲುಪಲಾಗದ, ಮುಟ್ಟಲಾಗದ ಜಾಗದಲ್ಲಿ ಅಡಗಿ ಕುಳಿತು ತಾನು ಸೋತೇ ಅಂತ ಆ ಕ್ಷಣಕ್ಕೆ ಕವಿ ಒಪ್ಪಿಕೊಂಡರೂ....' ಶಬ್ದ 'ಅಲ್ಲಿಗೆ ತಲುಪುವುದೇ ಇಲ್ಲವೆಂದ ಮೇಲೆ .. ಇದು ಸೋಲು ಹೇಗಾದೀತು?. ಇದು ಪರೋಕ್ಷವಾಗಿ ಕವಿಯ ಗೆಲುವೇ ಅಲ್ಲವೇ?. ಇಂತಹ ಹೊಸ ಹೊಳಹುಗಳನ್ನು, ಹೊಸ ತಿರುವುಗಳನ್ನು ಅಚಾನಕ್ಕಾಗಿ ನಮ್ಮ ಮುಂದೆ ತೆರೆದಿಡುವುದರಲ್ಲಿ ಕವಿ ಸಫಲರಾಗುತ್ತಾರೆ.

ಇನ್ನು ಮೈಲಿಗೆ ಪದ್ಯದಲ್ಲೂ ಅಷ್ಟೆ. ಮೈಲಿಗೆ ಮೈಲಿಗೆ ಅಂತ ದೂರೀಕರಿಸುತ್ತಾ ದೂರವಿಟ್ಟಷ್ಟೂ ಅದು ಮತ್ಯಾವುದೋ ರೀತಿ ಯಲ್ಲಿ ನಮ್ಮೊಳಗೆ ಹಾಸು ಹೊಕ್ಕಾಗುವ ಪರಿಯನ್ನು ಕವಿತೆಯೊಳಗೆ ಇಳಿಸಿದ ಪರಿಗೆ ಸೋಜಿಗವಾಗುತ್ತದೆ. ಆ ಮೂಲಕ ಬದುಕಿನ ಅಪ್ಪಟ ಸತ್ಯದ ಅರಿವು ಅನಾವರಣಗೊಳ್ಳುತ್ತದೆ.

ಇನ್ನು ಇಲ್ಲಿನ ಹೆಚ್ಚಿನ ಕವಿತೆಗಳು, ಮುಖಾಮುಖಿಯಾಗುವ ಜೀವನದ ವೈರುದ್ಧ್ಯಗಳು ಹೇಗೆ ನಮ್ಮನ್ನು ಸತಾಯಿಸಿ ಕಂಗೆಡಿಸುತ್ತವೆ.ಆಗೆಲ್ಲಾ ಕವಿ ಹೇಗೆ ಕವಿತೆಗಳಿಗೆ ಮೊರೆ ಹೋಗುತ್ತಾರೆ ಎಂಬುದನ್ನು ಇಲ್ಲಿನ ಕವಿತೆಗಳು ಸಾಕ್ಷೀಕರಿಸುತ್ತವೆ. ಹಾಗೆಯೇ ಬದುಕಿನ ಈ ಎಲ್ಲಾ ಅಸಂಗತಗಳಿಗೆ ಹೇಗೆ ತಾನು ಮೂಕ ಸಾಕ್ಷಿಯಾಗುತ್ತಾ.. ಕವಿತೆಗಳ ಬಲದಿಂದಷ್ಟೇ ಬದುಕುತ್ತಿದ್ದೇನೆ ಎನ್ನುವಲ್ಲಿ, ಹಾಗು ಎಲ್ಲಾ ಅಸಾಹಯಕತೆಗಳ ನಡುವೆ ಕವಿತೆ ನನ್ನನ್ನು ಬದುಕಿಸಬಲ್ಲದು ಎನ್ನುವಲ್ಲಿ ಕವಿತೆಯ ಬಗೆಗೆ ಕವಿಗೆ ಅಪಾರ ನಂಬುಗೆ ಮತ್ತು ಆತ್ಮವಿಶ್ವಾಸ ಇದೆ. ಅದಕ್ಕೇ ಇರಬೇಕು ಯಾರಿಗೂ ದಕ್ಕದ ಸುಟ್ಟ ಹಸಿಮೀನಿನಂತಹ ಕವಿತೆ ಅವರಿಗೆ ದಕ್ಕಿರುವುದು.


ಸಂಕಲದ ಕವಿತೆಗಳಲ್ಲಿ ಬಹುವಾಗಿ ಕಾಡುವ ಕವಿತೆಗಳಲ್ಲಿ ಎಡ ಮತ್ತು ಬಲ ಕವಿತೆಗಳೂ ಒಂದು. ಈ ಕವಿತೆಯನ್ನು ಪದೇ ಪದೇ ಓದಿದಾಗಲೂ ಅನೇಕ ಅರ್ಥ ಸಾಧ್ಯತೆಗಳು ನನ್ನ ವ್ಯಾಪ್ತಿಯನ್ನು ಮೀರುತ್ತಾ ಹೋದದನ್ನು ನೋಡಿ ಬೆರಗುಗೊಂಡಿದ್ದೇನೆ. ಅಂತಹ ಕವಿತೆಗಳು ಇಲ್ಲಿ ಸಾಕಷ್ಟಿವೆ. ಅದರ ಜೊತೆಗೆ ವಿಷಾದ, ನೋವು, ಹತಾಶೆಯ ಎಳೆ ಎಳೆಯನ್ನೇ ಜೋಡಿಸುತ್ತಾ ಕವಿ, ಕವಿತೆ ನೂಲುತ್ತಿದ್ದಾರೇನೋ ಅಂತ ಅನ್ನಿಸಿದರೂ, ಕಡಲಾಚೆಯ ಹುಡುಗಿಗೆ.. ಅನ್ನೋ ಕವಿತೆಯಂತ ಆರ್ಧ್ರ ಕವಿತೆಗಳನ್ನು ಬರೆಯುತ್ತಾ.. ಅಂಗ ಮೀರಿದ ಸಂಗ ನಮ್ಮ ಪ್ರೀತಿ ಎನ್ನುವಂತ ಪ್ರೀತಿಯ ಔನತ್ಯವನ್ನ ಎತ್ತಿ ಹಿಡಿಯಬಲ್ಲಂತಹ ಸಾಲುಗಳನ್ನು ಬರೆಯ ಬಲ್ಲರು. ಅದರ ಜೊತೆಗೆ
ಏನಾದರಾಗಲಿ ಊದುತ್ತಲೇ ಇರುವೆ
ನೀ ಬೆಚ್ಚಗಿರುವುದಷ್ಟೇ ಮುಖ್ಯ.. ಅನ್ನುವಂತಹ ಬೆಚ್ಚಗೆಯ ಸಾಲುಗಳನ್ನು ಆಪ್ತವಾಗಿ ಕಟ್ಟಿಕೊಡಬಲ್ಲರು.
ಇನ್ನು ನಾವಿಬ್ಬರೂ ತೀರಿಕೊಂಡ ಮೇಲೆ ಕವಿತೆಯಲ್ಲಿ ಸತ್ತರೂ ಒಂದಾಗಲು ಬಿಡದ ಅಂತರಗಳನ್ನು ಮೀರಿ, ಹೇಗಾದರೊಮ್ಮೆ ಒಂದಾಗಿಯೇ ತೀರಬೇಕೆನ್ನುವ ಹಪಾಹಪಿ..

'ಭೂಕಂಪವಾಗಲಿ
ಸುನಾಮಿಯಾಗಲಿ
ನಮ್ಮಿಬ್ಬರ ಗೋಡೆಗಳ ಮೇಲೆ
ನಮ್ಮಿಬ್ಬರ ಮಿಲನಕ್ಕಾಗಿ... '

ಅನ್ನುವಂತ ಸಾಲುಗಳನ್ನು ಅವರಿಂದ ಬರೆಯಿಸುತ್ತದೆ. ಅವರ ಅಂತರ್ಯದೊಳಗೆ ತುಡಿಯುವ ಪ್ರೀತಿಯ ಇರುವಿಕೆಯನ್ನ ಇದು ಸಾದರ ಪಡಿಸುತ್ತದೆ.


ಹೀಗೆ.. ಬದುಕಿನ ಎಲ್ಲಾ ಮಜಲುಗಳಲ್ಲಿ ನಿಂತುಕೊಂಡು ಕವಿತೆ ಕಣ್ಣಿನಿಂದ ನೋಡುವ, ಕವಿತೆಯ ಮೂಲಕ ಅದನ್ನು ಸಶಕ್ತವಾಗಿ ಕಟ್ಟಿಕೊಡುವ ಪ್ರಯತ್ನವನ್ನ ಇಲ್ಲಿನ ಕವಿತೆಗಳು ಮಾಡಿವೆ. ಆದರೆ ಇವೆಲ್ಲದರ ನಡುವೆಯೂ ಇಲ್ಲಿನ ಕವಿತೆಗಳು ಹೆಚ್ಚು ಸಂಕೀರ್ಣತೆಯಿಂದ ಮೊದಲ ಓದಿಗೆ ನಮ್ಮನ್ನು ತಲುಪುವುದಿಲ್ಲವೇನೋ ಎಂಬ ಭಾವನೆ ಕೂಡ ಬರುತ್ತದೆ. ಅದರ ಜೊತೆಗೆ ಆರಂಭವೂ ಅಂತ್ಯವೂ ಒಂದಕ್ಕೊಂದು ತಾಳೆಯಾಗದೆ ಎಲ್ಲೋ ಒಂದು ಕಡೆ ಮೂಲಧಾತು ದಿಕ್ಕುತಪ್ಪಿದಂತೆ ಅನ್ನಿಸುವುದು ಕೂಡ ಸುಳ್ಳಲ್ಲ. ಕೆಲವು ಕವಿತೆಗಳು ಇಂತಹ ಗೊಂದಲಕ್ಕೆ ನೂಕಿದಾಗ, ಬಹುಷ:ಇದು ನನ್ನ ಸೀಮಿತ ಅರಿವಿನ ಕೊರತೆಯೇನೋ ಅಂತ ಕಳವಳಿಸಿದ್ದೇನೆ.

ಇದೆಲ್ಲವನ್ನು ಮೀರಿಯೂ 'ಗಾಯದ ಹೂವುಗಳು 'ಒಂದು ಉತ್ತಮ ಕವಿತೆಗಳ ಸಂಕಲನ. ಪ್ರಸಕ್ತ ವರ್ಷದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನ ಈ ಸಂಕಲನ ತನ್ನ ಮುಡಿಗೇರಿಸಿಕೊಂಡಿದೆ. ಗಾಯದ ಹೂವುಗಳನ್ನು ಕೈಗೆತ್ತಿಕೊಂಡು ಅದನ್ನು ಮೃದುವಾಗಿ ಸವರುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಖುಷಿಯ ಕ್ಷಣ ನಮ್ಮದಾಗಲಿ. ಅಂತೆಯೇ ಜಗದ ಎಲ್ಲಾ ನೋವುಗಳು, ಗಾಯಗಳು ಹೂವುಗಳಾಗಿ ಅರಳಿಕೊಳ್ಳಲೆಂಬ ಕವಿಯ ಆಶಯ ನಮ್ಮದೂ ಕೂಡ ಆಗಲಿ.

ಸಹೃದಯ ಕವಿ ಕಾಜೂರು ಸತೀಶ್ ರವರಿಗೆ ಅಭಿನಂದನೆಗಳು.
*


.... ಸ್ಮಿತಾ ಅಮೃತರಾಜ್. ಸಂಪಾಜೆ.

ಹಸಿರು
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ ತಾ
ಕೊಡಗು.. ೫೭೪೨೩೪

1 comment: