ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ ಕಷ್ಟದ ಕೆಲಸ
ಕಾಜೂರು ಸತೀಶ್ ಅವರ ಒಂಟಿ ಕವನದ ಸಾಲುಗಳೊಂದಿಗೆ ಗಾಯದ ಹೂವುಗಳ ಅನಿಸಿಕೆಯನ್ನು ನನ್ನ ಅರಿವಿಗೆ ನಿಲುಕಿದಂತೆ ತುಸು ತಲ್ಲಣದಿಂದಲೇ ಮುಂದಿಡುತ್ತೇನೆ.
ಕಾಜೂರು ಕೊಡಗಿನ ಬರಹಗಾರರಲ್ಲಿ ಮುಂಚೂಣಿಯಲ್ಲಿರುವುದನ್ನು -ಕಡೆಂಗೋಡ್ಲು- ಪುರಸ್ಕೃತ ಗಾಯದ ಹೂವುಗಳು ಪರಿಮಳಿಸಿವೆ.
ಈ ಲೋಕ ಕಲುಷಿತಗೊಂಡಿರುವುದನ್ನು ತುಂಬಾ ಸೂಕ್ಷ್ಮವಾಗಿ ವೀಕ್ಷಿಸುತ್ತಾ ಆತಂಕದಿಂದ ಕವಿತೆಗಳ ಗರ್ಭದಲ್ಲಿರಿಸಿ, ಸುಖಪ್ರಸವದಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಸದಾ ಏಕಾಂಗಿಯಾಗಿ ಕ್ರಿಯಾಶೀಲರಾಗಿ ಇರಬಯಸುವ ಇವರ ತುಡಿತ ಕವಿತೆಯ ಸಾಲುಗಳಲ್ಲಿ ಮಿಡಿತಗೊಂಡಿವೆ. ಮನುಷ್ಯನ ಕಿರಾತಕ ಮನಸ್ಸುಗಳನ್ನು ಖಾಲಿ ಡಬ್ಬಕ್ಕೆ ಹೋಲಿಸಿ ಮೊಳೆತ ಭಾವ ತೀವ್ರತೆಯನ್ನು ಕವಿತೆಯಲ್ಲಿ ಬಿಂಬಿಸುವಾಗ, ಮೌನ ಪ್ರತಿಭಟನೆಯ ಕಾವು ವೇದ್ಯವಾಗುತ್ತದೆ.
ಈ ಕಾಲಘಟ್ಟದ ಮನುಷ್ಯ ಮನಸ್ಸುಗಳನ್ನು ಮಾತ್ರವಲ್ಲ, ಸುತ್ತಲಿನ ಚರಾಚರಗಳನ್ನೂ, ಎಲ್ಲರ ತಾತ್ಸಾರಕ್ಕೊಳಗಾಗುವ ವಸ್ತುಗಳನ್ನು ಗಮನಿಸುತ್ತಾ ವ್ಯವಸ್ಥೆಯ ಹುದುಲಲ್ಲಿ ಸಿಕ್ಕಿಕೊಂಡು ವ್ಯಸನಿಯಾಗಿರುವುದನ್ನು ಕವಿತೆಗಳ ಮೂಲಕ ಮುಲಾಜಿಲ್ಲದೆ ಕಕ್ಕಿದ್ದಾರೆ.
ಗಾಯದ ಹೂವುಗಳು ಹೆಸರೇ ಸೂಚಿಸುವಂತೆ ಕವಿಮನಸ್ಸು ಬದುಕಿನ ದುರವಸ್ಥೆಗಳನ್ನು ನೋಡಿ ರೊಚ್ಚಿನಿಂದ ಬುಸುಗುಟ್ಟಿದೆ. ಆವೇಶದಿಂದ ಶೋಷಕ ಶಕ್ತಿಗಳೆಡೆ ದೃಷ್ಟಿ ಹರಿಸುವಂತೆ ಓದುಗ ಮನಸ್ಸಿಗೆ ವೇದ್ಯವಾಗಿದೆ. ಅಲ್ಲದೆ ಚಿತ್ತವನ್ನು ಕಲಕುತ್ತಾ
ಭಯಾಶ್ಚರ್ಯ, ಸ್ತುತಿಯಿಂದಾವೃತವಾಗಿದೆ.
ಹೀಗೂ ಬರೆಯಲು ಸಾಧ್ಯ ಎಂಬುದನ್ನು ಸಾಕ್ಷೀಕರಿಸಿದ ಕಾಜೂರರು ಭವಿಷ್ಯದಲ್ಲಿ ಖಂಡಿತಾ ಈ ನಾಡು ಗುರುತಿಸುವ ಕವಿಯಾಗುವರು ಎಂಬುದನ್ನು ಅವರ ಕವಿತೆಗಳ 'ಪಡೆ'ಯೇ ಘೋಷಿಸಿವೆ.
ಮೂಳೆ, ಮಾಂಸ, ರಕ್ತದ ತಕರಾರುಗಳು ನನಗೆ ಅರ್ಥವಾಗದೆ ದಿಗಿಲುಗೊಳಿಸಿ ತಲ್ಲಣಕ್ಕೊಳಗಾಗಿರುವುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಮುಂದಿನ ಕವಿತೆಗಳ ತುಂಬೆಲ್ಲಾ ಭಾವ ಸೌಂದರ್ಯದಲ್ಲಿ ನವರಸಗಳು ಮೇಳೈಸುವ ಪರಿಸರ ಒದಗಿ ಬರಲಿ ಎಂದು ಆಶಿಸುತ್ತಾನೆ. ಮೃದುಮನದ ಕೊಡಗಿನ ಕವಿಸಹೋದರನಿಗೆ ಮಡಿಲು ತುಂಬಾ ಯಶಸ್ಸು ಅಕ್ಷಯಪಾತ್ರೆಯಾಗಲಿ. ಇದು ಈ ಅಕ್ಕನ ನಿರೀಕ್ಷೆ.
**
-ಸುನೀತಾ ಲೋಕೇಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, January 18, 2016
'ಗಾಯದ ಹೂವುಗಳು' ಕುರಿತು ಸುನೀತಾ ಲೋಕೇಶ್ ಅವರ ನುಡಿಗಳು
Sunday, January 17, 2016
ದಿನಚರಿ-15
ಈ ಮನುಷ್ಯ ಎಷ್ಟು ಸ್ವಾರ್ಥಿ ಎಂಬುದನ್ನು ನೆನೆದಾಗ ನನ್ನ ಮೇಲೆ ನನಗೇ ಅಸಹ್ಯತೆ ಹುಟ್ಟುತ್ತದೆ. ಉದಾಹರಣೆಗೆ- ನಾನು ಯಾರಿಗಾದರೂ ಕರೆಮಾಡುತ್ತಿದ್ದೇನೆ ಎಂದರೆ ಅದರಲ್ಲಿ ನನ್ನ ಸ್ವಾರ್ಥವಿರುತ್ತದೆ. ಯಾರಾದರೂ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ಎಂದರೆ ಅದರಲ್ಲಿ ಅವರ ಸ್ವಾರ್ಥವಿರುತ್ತದೆ.
ಆದರೆ, ಪ್ರಾಣಿಗಳ ಈ ಬಗೆಯ ಅಂತರಾವಲಂಬನೆಯಲ್ಲಿ ಪ್ರೀತಿಯ ಲೇಪನವಿರುತ್ತದೆ. ಅದಕ್ಕೇ, ನನಗನಿಸುವುದು- ಪ್ರೀತಿಸಿದರೆ, ಪ್ರೀತಿಸುವುದಾದರೆ ಪ್ರಾಣಿಗಳನ್ನು ಪ್ರೀತಿಸಬೇಕು!
*
ಕಾಜೂರು ಸತೀಶ್
Friday, January 15, 2016
ಇನ್ನಾವ ರೂಪಕಗಳು ಬೇಕು ನಿಮಗೆ?!
ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶ್ ಅವರ ಕವನ ಸಂಕಲನ ಗಾಯದ ಹೂವುಗಳು. ಭಿನ್ನ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ.
ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ ಆಂತರ್ಯವನ್ನು ಕಡೆದು ಕಡೆದು ನಾವು ಪಡೆದುಕೊಳ್ಳಬೇಕು. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಇದು ಯುವ ಕವಿಯೋರ್ವರ ಕವಿತೆಗಳೆಂದು ಖಂಡಿತ ನಮಗನಿಸುವುದಿಲ್ಲ. ಏಕೆಂದರೆ ಅಂತಹ ಆಳವಾದ ಜೀವನಾನುಭವವಿದೆ:
"ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ
ಏನು?
ಕೇಳಿಸುತ್ತಿಲ್ಲವೇ?
ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*
ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರು ಬದುಕಿಸು
ನನ್ನ ಕಾಲಬುಡದಲ್ಲಿ".
ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ಜೀವಾಳ. ಬಡತನದ ಬವಣೆ, ಅಪ್ರಾಮಾಣಿಕತೆ, ಹುಸಿ ಪ್ರೀತಿ, ನಂಬಿಕೆ ದ್ರೋಹ, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿತೆಗಳಲ್ಲಿವೆ.
"ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.
ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ"
ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದು, ಕಾಯ್ದಿರಿಸಿಕೊಂಡಿದ್ದಾರೆ!
"ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರಬರುವ ಹೊತ್ತಲ್ಲಿ ಜೇಬಿನ ತುತ್ತತುದಿಯ ದಾರಕ್ಕೆ
ಪದ್ಯಗಳು ಜೋತುಬಿದ್ದಿದ್ದವು
ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ"
ಎನ್ನುವ ಕವಿಗೆ ಜೀವನದ ಬಗ್ಗೆ ಅದಮ್ಯಆಶಾವಾದವಿದೆ. ಇಂತಹ ಭರವಸೆ ಇವರ ಕವಿತೆಯ ತಳಹದಿ.
ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ.
"ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ...
ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..."
ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಶೋಷಿತರ ಪರವಾದ ಸ್ವರ. ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಮನಮುಟ್ಟುವ ಕವಿತೆಗಳಿವೆ.
"ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲುದು
ಹಣ್ಣೂ ತಿನ್ನಬಲ್ಲುದು..."
"ಎಲ್ಲಾದರುದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೆ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು
ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರು ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು."
ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯಕ್ಕೆ ತೋರುಬೆರಳಾಗಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದುಕೊಳ್ಳು
ವುದರಲ್ಲಿ ಯಾವುದೇ ಸಂಶಯವಿಲ್ಲ.
"ಸಾವಿರಾರು ಬಿಳಿ ಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?"
ಈ ಅಜ್ಞಾನಿಯ ದಿನಚರಿಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ.ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್ ರವರ ಕಾವ್ಯ ಹಾದಿಯಲ್ಲಿ ಸುಂದರ ಹೂವುಗಳು ಅರಳಿ ನಿಲ್ಲುವ ಎಲ್ಲಾ ಸೂಚನೆಯೂ ಸಂಕಲನದಲ್ಲಿದೆ.
*
ಸಂಗೀತಾ ರವಿರಾಜ್
ಗಾಯದ ಹೂಗಳು ಮತ್ತು ನನ್ನ ಪಾಡಿಗೆ ನಾನು
ಅಪರೂಪದ ಮಾತು,ಅದರಲ್ಲಿರುವ ಅಗಾಧ ಆಪ್ತತೆ ಮತ್ತು ಸದಾ ಕಾಡುವ ಅವರ ಮುಗ್ಧತೆ... ಕಾಜೂರರ ಬಗ್ಗೆ ಬರೆದಷ್ಟೂ ಸಾಲದು.ಕಾಲೇಜ್ ಮೇಟಾಗಿ,ಒಂದೇ ಸಂಸ್ಥೆಯಲ್ಲಿ ದುಡಿದು ನಂತರ ಇದೀಗ ಒಂದೇ ಇಲಾಖೆಯಲ್ಲಿ ದುಡಿಯುತ್ತಿದ್ದರೂ ಓರ್ವ ಶಿಕ್ಷಕನಾಗಿ,ಕವಿಯಾಗಿ ಗುರುತಿಸಿದಕ್ಕಿಂತ ಒಬ್ಬ ಜೀವದ ಗೆಳೆಯನಾಗಿ ನನ್ನ ಹೃದಯದಲ್ಲಿ ಸದಾ ಬೆಚ್ಚಗಿರುವುದು ನಿಜಕ್ಕೂ ನನಗೆ ಹೆಮ್ಮೆಯ ವಿಷಯ.ಕಾಜೂರರ ಕಾವ್ಯಲಹರಿಯನ್ನು ಆಸ್ವಾದಿಸುವಲ್ಲಿ ಈ ಲೇಖನ ನಿಮ್ಮನ್ನು ಪ್ರೇರೇಪಿಸಿದಲ್ಲಿ ಅದು ನನ್ನ ಪಾಲಿನ ಸೌಭಾಗ್ಯ.
" ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ ಕಷ್ಟದ ಕೆಲಸ,,." ಎಂದು ಹಾಡಿಕೊಳ್ಳುವ ಸತೀಶ್ ಬಹಳಷ್ಟು ಸಹೃದಯರಿಗೆ ಒಂದು ವಿಸ್ಮಯ,ನಿಗೂಢ ಪ್ರಶ್ನೆ...ಒಬ್ಬ ಜೆನ್ ಗುರುವಿನಂತೆ,ಪ್ರವಾದಿಯಂತೆ ತನ್ನಷ್ಟಕ್ಕೆ ಹಾಡಿಕೊಳ್ಳುವ ಸತೀಶ್ ಬೆಳಕಿನೊಂದಿಗೆ ಕತ್ತಲನ್ನೂ ಪ್ರೀತಿಸುವವರು,ನಲಿವಿನಂತೆಯೇ ನೋವನ್ನೂ ಬಾಚಿ ತಬ್ಬಿಕೊಂಡಿರುವವರು.ಅದಕ್ಕೇನೋ ಅವರ ಗಾಯಗಳು ಹೂವಾಗಿ ಆಮೇಲೆ ಕವಿತೆಗಳಾಗಿ ನಮ್ಮನ್ನು ಈ ಪರಿಯಾಗಿ ಕಾಡುತ್ತಿರುವುದೇನೋ.
'ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳುಗಳು' ,'ನೋಟೀಸು' ,' ಸಲಾಮು' ,ನನ್ನ ಕವಿತೆ' ,'ಬಲಿ ' , 'ಅರ್ಥವಾಗಿರಬಹುದು'... ಮುಂತಾದ ಕವಿತೆಗಳು ಓದುಗರನ್ನು ಅತ್ಯಂತ ತೀವ್ರ ಭಾವೋದ್ರೇಕಕ್ಕೆ ನೂಕಬಲ್ಲ ಕವಿತೆಗಳು.ಒಬ್ಬ ಕವಿ ಕೊಳೆತು ನಾರುವ ತನ್ನ ಸಮಾಜವನ್ನು ಪ್ರತಿನಿಧಿಸುವಾಗ ಇದಕ್ಕಿಂತ ಯಾವ ರೀತಿಯ ಕವಿತೆಗಳು ಹುಟ್ಟಲು ಸಾಧ್ಯ?! ಕಾಜೂರರ ಈ ಸಂವೇದನಾಶೀಲತೆಯೆಂಬುದು ನಮ್ಮ ಬಹಳಷ್ಟು ಸಹೃದಯಿಗಳಿಗೆ ' ಒಂದು ಮೌನದ ಮಾತು'ಎಂದಾಗಿರಬಹುದು ಎಂದು ನಾನು ಭಾವಿಸುತ್ತೇನೆ.ಆದರೆ ನನ್ನ ಜೀವದ ಜೀವ ಉಸಿರಿನ ಉಸಿರಾದ ಕಾಜೂರರ ಈ ಕವಿತೆಗಳು ಉದ್ರಿಕ್ತಗೊಂಡ ಜ್ವಾಲಾಮುಖಿಗಳಾಗಿ,ಮೈಯೊಳಗೆಲ್ಲಾ ಬೆಂಕಿಹೊತ್ತು ಹೊರಗೆ ತಣ್ಣಗಿರುವ ಬಾಂಬಿನಂತೆಯೇ ಕಾಣುತ್ತದೆ..ಒಂದು ವಿಶೇಷವೆಂದರೆ ಈ ಕವಿತೆಗಳು 'ಆಕ್ರೋಶ'ವಲ್ಲ. ಬದಲಿಗೆ ಬರಲೇಬೇಕಾದ ಆದರೆ ಎಂದೂ ಬಾರದ ಭವ್ಯ ಕ್ರಾಂತಿಗೊಂದು ವಿಷಾದದ ಮುನ್ನುಡಿ,ಪ್ರೀತಿಯ ಕರೆಯೋಲೆ.
ವಿಶೇಷ ಆರ್ಥಿಕ ವಲಯ,ಕೈಗಾರೀಕರಣ,ಭ್ರಷ್ಟಾಚಾರ ಮುಂತಾದ ಬಡಿತಕ್ಕೆ ತುತ್ತಾಗಿ ಕಾಡುಪಾಲಾದ ಜನರು ಬಂದೂಕು ಹಿಡಿದಾಗ ' ನಕ್ಸಲ' ರೆಂದು ಬೇಟೆಯಾಡುವ ಸಮಾಜ ಮತ್ತು ಸರಕಾರ ಒಬ್ಬ ಬರಹಗಾರನನ್ನು ಬೇಟೆಯಾಡಿದಾಗ ಸುಮ್ಮಗಿರುವುದೇಕೆ? ಈ ಮೌನಕ್ಕೇ ಸವಾಲೆಸೆಯುವಂತಹ ' ಅರ್ಥವಾಗಿರಬಹುದು' ,' ಇರುವೆ ಸತ್ತಿದೆ ಕಾಲ ಬುಡದಲ್ಲಿ ' , 'ಬೇಲಿ ' , ' ನೀನು ಸತ್ತಾಗ ನಿನ್ನ ಅಂಗಿ ಧರಿಸಿ ಬರೆದದ್ದು ' ಮುಂತಾದ ಕವಿತೆಗಳನ್ನು ನಾವು ಕಾಣಬಹುದು.
ಕಾಜೂರರ ಕವಿತೆಗಳು ಈ ಮಾದರಿಯಲ್ಲಿ ಹುಚ್ಚೆಬ್ಬಿಸಿ ಕಾಡಲು ಕಾರಣವಾದರೂ ಏನು? ಬಹುಶಃ ಈ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದೇನೋ. ಪಾಶ್ಚಾತ್ಯ ಮತ್ತು ಮಲೆಯಾಳಂ ಸಾಹಿತ್ಯದ ಆಳವಾದ ಜ್ಞಾನ ಮತ್ತು ತನ್ನ ಸಮಾಜದ ಒಳಿತು ಕೆಡುಕುಗಳಿಗೆ ಅವರು ತೋರುವ ಸಂವೇದನಾಶೀಲತೆ ಇವಿಷ್ಟು ಅವರ ಕವಿತೆಗಳ ಹಿಂದೆ ಮೋಡಿ ಮಾಡುವ ಅಂಶಗಳು..ಆದರೆ ನೋಡಿ, ಪಾಶ್ಚಾತ್ಯ- ಮಲೆಯಾಳಂ ಸಾಹಿತ್ಯದ ಅಮಲಿನಲ್ಲಿ ತೂರಾಡಿದರೂ ತನ್ನ ಸಂಸ್ಕೃತಿಯ ಮತ್ತು ತನ್ನತನದ ಜಾಡು ಬಿಡದೆ ನೆಲಮೂಲದ ಕವಿಯಾಗಿ ಕಂಗೊಳಿಸುತ್ತಿರುವುದು ಅವರ ಧೀಮಂತಿಕೆ. ಅವರ ಈ ಕಾವ್ಯಕೃಷಿಯಲ್ಲಿ ಮಹತ್ವದ ಹಾಗೂ ನಿರ್ಣಾಯಕ ಪಾತ್ರ ವಹಿಸಿದ್ದು ಅವರ ರೋಚಕ ಅನುವಾದಗಳು ಎಂಬುದು ನನ್ನ ಅನ್ನಿಸಿಕೆ.
' ನನ್ನ ಜನರೇ
ನಿಮ್ಮಲ್ಲುಕ್ಕುವ ಜಲಪಾತಗಳ
...............
ನಿತ್ಯ ಮೋಹಿಸುತ್ತೇನೆ [ ಕಾಡು ಕವಿತೆ ]
ಅವರವರ ಮರಣದ ಹಾಡು
ಅವರವರಿಗೇ ಕೇಳಿಸುವುದು.,
.........
ಕೀಲುಕೀಲುಗಳಲ್ಲೂ
ಹಳಿಬದಲಿಸುವ ಸದ್ದು,,,.[ ಮರಣದ ಹಾಡು]
ಶತಮಾನಗಳ ಎಣಿಸಿ
ಬರೆದಿಟ್ಟುಕೊಳ್ಳಬಹುದು
ಅಪ್ಪನ ಸಾಲದ ಪುಸ್ತಕದಲ್ಲಿ [ಹಾವು]
ಮುಂತಾದ ಕವಿತೆಗಳಲ್ಲಿ ಬರುವ ಪ್ರತಿಮೆಗಳು ಮತ್ತು ಕವಿತೆ ಕಟ್ಟುವ ಶೈಲಿ ಕನ್ನಡ ಕಾವ್ಯ ಜಗತ್ತಿನಲ್ಲೇ ವಿಶಿಷ್ಟವಾದುದು. ಪ್ರತಿಮೆ ಮತ್ತು ಪದಗಳನ್ನು ದುಡಿಸಿಕೊಳ್ಳುವ ಅವರ ಚಾಲಾಕಿತನ ಒಂದು ಕವಿತೆಯನ್ನು ಸದ್ದಿಲ್ಲದೇ ಕನ್ನಡಿಯಾಗಿಸಿ ನಮ್ಮ ಮುಂದೆ ಎದ್ದು ನಿಲ್ಲಿಸುತ್ತದೆ.ಪ್ರಾಸದ ಹಂಗಿಲ್ಲದೆ ಕವಿತ್ವದ ತೆಕ್ಕೆಗೆ ಬಿದ್ದು ಪದಪದಗಳ ಮೂಲಕ ಓದುಗನಲ್ಲಿರುವ ಸಂವೇದನಾಶೀಲತೆಯನ್ನು ಜಾಗೃತಗೊಳಿಸುವುದು ಇವರಿಗದೆಷ್ಟು ಸಲೀಸು,,..!
ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಕಾಜೂರರ ಕವಿತೆಗಳಲ್ಲಿ ಉಮ್ಮಳಿಸುವ ಪ್ರೀತಿ:
ಈ ಕತ್ತಲಲ್ಲಿ ನಿನ್ನ ಸಂದೇಶಗಳು
ಚಂದ್ರನಿಂದ ರವಾನೆಯಾಗುತ್ತಿವೆ
ನೀನಲ್ಲಿ ಹಿಂಡುತ್ತಿರುವ
ಕಣ್ಣ, ಬೆವರ ಸದ್ದನ್ನು
ಇಬ್ಬನಿಗಳು ಅನುಕರಿಸುತ್ತಿವೆ ಇಲ್ಲಿ [ ಕಡಲಾಚೆಯ ಹುಡುಗಿಗೆ]
ಬಾಡೂಟವ ಹಂಚುವಾಗ
ಅಗರಬತ್ತಿಯ ವಿಷಾದದ ಹೊಗೆ
ನನ್ನ ಕೊಂದು ಬಿಡಲಿ [ ನಾವಿಬ್ಬರೂ ತೀರಿಕೊಂಡ ಮೇಲೆ ]
ನನ್ನ ಹೊರಮೈಯ ಮಾಂಸವನ್ನು ಹಿಂಡಿ
ಒಣಗಿಸಿಡುತ್ತೇನೆ
ಕಾಮವಿಲ್ಲದ ಅದನ್ನು ನೀನು
ಪ್ರೀತಿಯಿಂದ ಅಪ್ಪಿಕೊಳ್ಳಬಹುದು,. [ ನೀನು ನನ್ನ ಜತೆ ಬದುಕಿಕೊಳ್ಳಬಹುದು ]
ಟಿ.ವಿ. ,ಇಂಟರ್ನೆಟ್ಟು,ಸಿನೆಮಾಗಳ ಆರ್ಭಟಕ್ಕೆ ಪ್ರೀತಿಯ ಪರಿಭಾಷೆಯೇ ತರಗೆಲೆಯಂತೆ ತೂರಾಡುತ್ತಿರುವ ಈ ಕಾಲದಲ್ಲಿ ಕಾಜೂರರ ಕವಿತೆಗಳಲ್ಲಿನ ' ಅಂಗ ಮೀರಿದ ಪ್ರೇಮ ' ಓದುಗನ ಹೃದಯದಲ್ಲಿ ಬೆಚ್ಚಗಿನ ಆಪ್ತತೆಯನ್ನು ಮೂಡಿಸುತ್ತದೆ.
ಹೊರಗಿನ ಜಗತ್ತಿನಿಂದ ದೂರ ಬಹು ದೂರ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಪ್ರಕೃತಿಯೊಂದಿಗೆ ದಿನದೂಡುತ್ತಿರುವ ನಮ್ಮಿಬ್ಬರ ಶಾಲೆಗಳಲ್ಲಿ- ಊರಿನಲ್ಲಿ ದಿನ ಬೆಳಗಾದರೆ ಕಂಡುಬರುವ ಮುಗ್ಧ ಮುಖಗಳು, ಅವರು ತೊಡುವ ಮುಖವಾಡ,ಅದರೊಳಗಿನ ವಿಚಿತ್ರ-ನಿಗೂಢ ಜೀವನಚಿತ್ರಗಳು,ಒಡೆದ ಕುಟುಂಬಗಳ ಕಣ್ಣೀರು,ನಿಟ್ಟುಸಿರು,...ಮಾನವೀಯತೆ ಮತ್ತು
ಪ್ರಕೃತಿಯ ಮೇಲೆ ನಿರಂತರವಾಗಿ ನಡೆವ ಅತ್ಯಾಚಾರ, ಜತೆಗೆ ಸರಕಾರದ ಸಿಕ್ಕಾಪಟ್ಟೆ ನಿರ್ಲಕ್ಷ್ಯ, ಭ್ರಷ್ಟಾಚಾರ ಇವೆಲ್ಲಾ ಸೇರಿ ಪದಗಳಾಗಿ ಪ್ರತಿಮೆಗಳಾಗಿ ಕಾಡಿಕಾಡಿ ಕಡೆಗೊಮ್ಮೆ ಕವಿತೆಗಳಾಗಿ ತನ್ನಷ್ಟಕ್ಕೆ ಹಾಡಿಕೊಳ್ಳುತ್ತವೆ,ಸುಮ್ಮಗೆ ಹರಿದು ಬಿಡುತ್ತವೆ,,, ಇಂತಹ ನಿಟ್ಟುಸಿರುಗಳ ಭಾರಕ್ಕೆ ಜಗ್ಗಿದ ಕವಿತೆಗಳ ಪುಸ್ತಕ ' ಗಾಯದ ಹೂಗಳು ' ಯಾವ ಶಿಫಾರಸ್ಸುಗಳಿಲ್ಲದೆ,ಒತ್ತಡವಿಲ್ಲದೆ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದದ್ದು ನಿಜಕ್ಕೂ ಸಂತಸದ ವಿಚಾರವಲ್ಲವೇ!?
ಆಲ್ಬರ್ಟ್ ಕ್ಯಾಮಸ್ ರಂತೆ ನಿರೀಶ್ವರವಾದಿಯಾಗಿ, ಸಿಲ್ವಿಯಾ ಪ್ಲಾತ್ ಳಂತೆ ವಿಷಾದವನ್ನು,ರೂಮಿಯಂತೆ ,ಗಿಬ್ರಾನನಂತೆ ತಣ್ಣಗೆ ಉಸುರಿ ಬಿಡುವ ಕಾಜೂರರ ಕವಿತೆಗಳು ಎಂದೂ ಓದುಗನ ನಿರೀಕ್ಷೆಯನ್ನು ಹುಸಿಗೊಳಿಸುವುದೇ ಇಲ್ಲ. ಓದಿದಷ್ಟೂ ಸಾಲದಾಗಿ ಇನ್ನೂ ಇನ್ನೂ ಓದಿಸಿಕೊಳ್ಳುವ ಗಾಯದ ಹೂಗಳು ಇನ್ನಷ್ಟು ಅರಳಲಿ ಎಂಬುದು ನನ್ನ ಹಾರೈಕೆ.
*
ಜಾನ್ ಸುಂಟಿಕೊಪ್ಪ
Wednesday, January 6, 2016
ಮಬ್ಬುಗತ್ತಲಿಗೆ ಹಣತೆ ಹಚ್ಚಿಡುವ ಕಥೆಗಳು
'ನಡೆದೂ ಮುಗಿಯದ ಹಾದಿ'ಯ ನೆನಪು ಇನ್ನೂ ಹಸಿಯಾಗಿರುವಾಗ ಮಾರುತಿ ದಾಸಣ್ಣವರ ಅವರು 'ಮಬ್ಬುಗತ್ತಲ ಮಣ್ಣ ಹಣತೆ'ಯನ್ನು ಹಚ್ಚಿಟ್ಟಿದ್ದಾರೆ. ಆ ಹಣತೆಯ ಬೆಳಕಲ್ಲಿ ಮಗುವೊಂದನ್ನು ಮಲಗಿಸುವ ಹಾಗೆ ಕಥೆ ಹೇಳಲು ತೊಡಗಿದ್ದಾರೆ. ಅದಕ್ಕಾಗಿಯೇ ಅವರು ಸರಳ- ಸಲೀಸಾದ ಅಭಿವ್ಯಕ್ತಿಯ ಮಾದರಿಯನ್ನು ಆಯ್ದುಕೊಂಡಿದ್ದಾರೆ. ಪರಂಪರೆಯನ್ನು ಅನುಕರಿಸದೆ ಅಥವಾ ಹೊಸತನಕ್ಕೆ ಹಪಹಪಿಸದೆ, ಉಕ್ಕಿದಂತೆ ಉಸುರಿದ್ದಾರೆ. ಲೋಕದ ಮಬ್ಬುಗತ್ತಲೆಯನ್ನು ಪರಿಚಯಿಸುತ್ತಲೇ ಹಣತೆ ಹಚ್ಚಿಟ್ಟು ಕತ್ತಲನ್ನು ದೂರೀಕರಿಸುವ ಮಾರ್ಗವನ್ನು ಶೋಧಿಸಿದ್ದಾರೆ.
ಹತ್ತು ಕಥೆಗಳಿರುವ 'ಮಬ್ಬುಗತ್ತಲ ಮಣ್ಣ ಹಣತೆ'ಯ ಮೊದಲ ಹಾಗೂ ಶಕ್ತವಾದ ಕಥೆ 'ಸುದಾರಣಾ'. ಇದು ಹೊಲೆಯರು ಮತ್ತು ಮೇಲ್ಜಾತಿಯವರ ನಡುವಿನ ಮುಖಾಮುಖಿ. ಸುಧಾರಣೆಯ ಕನಸು ಹೊತ್ತ ಹನುಮನ ಚಿಂತನೆಗಳು ತನ್ನ ಸಮುದಾಯದಿಂದಲೇ ತಿರಸ್ಕೃತಗೊಳ್ಳುವ ಕಥೆ. ಹೊಲೆಯರ ಸಮಾಜ ಮಂದಿರಕ್ಕೆ ಮಂಜೂರಾದ ಹಣವನ್ನು ಊರ ಗೌಡನು ಗುಡಿ ಕಟ್ಟಲು ಬಳಸಿಕೊಳ್ಳುವ ತಂತ್ರ ಹೂಡುತ್ತಾನೆ. ಅದನ್ನು ಪ್ರಶ್ನಿಸುವ ಹನುಮನಿಗೆ ತನ್ನವರಿಂದಲೇ ಬೆಂಬಲ ವ್ಯಕ್ತವಾಗುವುದಿಲ್ಲ. ಗೌಡನಿಂದ ಕೊಲೆ - ಬಹಿಷ್ಕಾರದ ಬೆದರಿಕೆಗಳನ್ನು ಅನುಭವಿಸಬೇಕಾಗುತ್ತದೆ. ಈ ನಡುವೆ ಗೌಡನು ತನ್ನ ಎದುರಾಳಿ ಚೇರ್ಮನ್ ಬಸಪ್ಪನನ್ನು ಕೊಲ್ಲಿಸುವುದು, ಅದರ ಆಪಾದನೆ ಹನುಮನ ಮೇಲೆ ಬರುವುದು- ಇವು ಇಂದಿನ ರಾಜಕೀಯ ಸ್ಥಿತಿಯ ಮತ್ತು ದಮನಿತರ ದಾರುಣ ಸ್ಥಿತಿಯ ಅನಾವರಣ. ದಲಿತರ ಸುಧಾರಣೆಯ ಸ್ವರೂಪವನ್ನು ತಾತ್ತ್ವಿಕವಾಗಿ ವಿವೇಚಿಸುವ ಈ ಕಥೆಯು, ಗುಡಿ ಎನ್ನುವ ಸಮಾಜ ಮಂದಿರ, ಅದರ ಎದುರಿಗಿರುವ ಟೊಳ್ಳು ಬಸರೀಗಿಡವನ್ನು ಭಯ ಮತ್ತು ಅಭದ್ರತೆಯ ಕಾರಣಗಳಿಂದ ಒಪ್ಪಿಕೊಳ್ಳುವುದನ್ನು ವಿಶ್ಲೇಷಿಸಲಾಗಿದೆ.
ಚಂದ್ರು ಎಂಬ ಯುವಕ ಚಂದ್ರಿಯಾಗುವ, ಸಾಮಾಜಿಕ ಮೌಢ್ಯತೆಗೆ ಸಿಕ್ಕಿ ದೇವದಾಸಿಯಾಗಿ ಬದುಕನ್ನು ಸುಟ್ಟುಕೊಳ್ಳುವ ದುರಂತಕತೆಯಾಗಿ 'ಮಾಯಕಾರ್ತಿ ನೀನೇ' ವ್ಯಕ್ತವಾಗಿದೆ.
ಬಾಲ್ಯ ಮತ್ತು ಗ್ರಾಮೀಣ ಬದುಕು ಇಲ್ಲಿನ ಎಲ್ಲ ಕಥೆಗಳ ಮುಖ್ಯ ಆಕರ. ಕಥೆಗಾರರು ತಮ್ಮ ಯಾನವನ್ನು ಹಲವು ದಿಕ್ಕುಗಳಿಗೆ ವಿಸ್ತರಿಸಿದರೂ, ಮತ್ತೆ ಮತ್ತೆ ಮರಳುವಂತೆ ಮಾಡುವ ಹಳ್ಳಿಯ 'ಕಾಂತತ್ವ' ಇಲ್ಲಿ ಕೆಲಸ ಮಾಡುತ್ತದೆ. ಜಾತಿ ಮತ್ತು ಅಂತಸ್ತುಗಳು ಸ್ನೇಹವನ್ನು ಕಸಿಯುವ ಸಂಗತಿಗಳು 'ಚೆಳಮಾರ ಹಾದಿ' ಕಥೆಯಲ್ಲಿ ಕಾಣುತ್ತವೆ. ಗೆಳೆಯ ಮಹೇಶ ತನ್ನೂರಿನ ಹುಡುಗಿಯನ್ನು ಬಸಿರು ಮಾಡಿದರೂ, ನಿರೂಪಕರ ಸಾಂಗತ್ಯದಿಂದ ಅವಳನ್ನೇ ಮದುವೆಯಾಗಿ ಸಾರ್ಥಕ ಜೀವನ ನಡೆಸುವ ಕಥೆಯಿದು.
'ಅವನೆಂಬ ಇವನು' ಕಥೆಯು ಅಸಂಗತ ನೆಲೆಯಲ್ಲಿ ಮೊದಲ್ಗೊಂಡು ಸಂಗತವಾಗುತ್ತಾ ಮತ್ತೆ ಅಸಂಗತತೆಯಲ್ಲಿ ಕೊನೆಗೊಳ್ಳುತ್ತದೆ. ಜಾತಿ ಮತ್ತು ಆರ್ಥಿಕ ಅಸಮಾನತೆಗಳು ಪ್ರೀತಿಯನ್ನು ಇನ್ನಿಲ್ಲವಾಗಿಸುವ ದುರಂತ ಚಿತ್ರಣ ಈ ಕಥೆಯಲ್ಲಿದೆ.ಉಳಿದೆಲ್ಲ ಕಥೆಗಳಿಗಿಂತ ಭಿನ್ನತೆಯನ್ನು ಈ ಕಥೆಯು ಕಾಯ್ದುಕೊಂಡಿದೆ.
'ಮನಕೊಂದು ಮಾತ ಹೇಳದೇ' ಕಥೆಯು ಮಧ್ಯಮ ವರ್ಗದ ಆರ್ಥಿಕ ಬವಣೆಗಳನ್ನು ಹೇಮಂತನ ಮಾನಸಿಕ ಆಘಾತ; ಶಿಕ್ಷಕನಾಗಿದ್ದರೂ ಬದುಕು ನಿರ್ವಹಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಸಂಗತಿಗಳ ಮೂಲಕ ಕಟ್ಟಿಕೊಡುತ್ತದೆ.
'ಈಶ್ವರ್ ಅಲ್ಲಾ ತೇರೇ ನಾಮ್' - ಕೋಮು ಸಾಮುರಸ್ಯಕ್ಕೆ ಹೆಸರಾಗಿದ್ದ ರಾಮಾಪುರವು ರಾಜಕೀಯ ಪ್ರವೇಶಿಸುವಿಕೆಯ ಮೂಲಕ vote bank ಎನ್ನುವುದು ಹೇಗೆಲ್ಲ ಸಮಾಜವನ್ನು ಛಿದ್ರಗೊಳಿಸುತ್ತದೆ ಎಂಬ ಕಥೆ. ಊರ ಗೌಡ ಮಾರುತೆಪ್ಪನ ಮಗ ರಮೇಶ ಮತ್ತು ಕುದುಸಾಬನ ಮಗಳು ಶಬನವ್ವ ಪರಸ್ಪರ ಪ್ರೀತಿಸಿ ಊರುಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಊರಿಗೇ ಕಲಿಸಿದ ಘಟನೆಯನ್ನು ಮೇಲ್ಮೆಗೆ ತಂದು, ಅದನ್ನೇ ರಾಮಾಪುರದ ಶಾಂತಿ ಸ್ಥಾಪನೆಗೆ ಔಷಧಿಯಂತೆ ಬಳಸುತ್ತಾರೆ ಕಥೆಗಾರರು.
ನಗರೀಕರಣದ ಸೂಚನೆ ಮತ್ತು ವೃದ್ಧಾಪ್ಯದ ಬವಣೆಗಳು ಸಿಂಗೆ ಮಾಸ್ತರರ ಮೂಲಕ ವ್ಯಕ್ತಗೊಂಡು ಆತ್ಮಹತ್ಯೆಯೇ ಪರಿಹಾರವಲ್ಲವೆಂಬುದನ್ನು ಸೂಚಿಸುತ್ತದೆ. ಮಗ ಮತ್ತು ಸೊಸೆಯಿಂದ ಹಿಂಸೆಗೆ ಒಳಗಾದರೂ, ಸೊಸೆಯ ಹೆಸರಿಗೆ ಉಯಿಲು ಬರೆದಿಡುವುದು, ಗುರು-ಶಿಷ್ಯರ ಸಂಬಂಧ - ಇವು 'ಮಾಸ್ತರರು ಮತ್ತು ಬಸರೀ ಮರವು' ಕಥೆಯನ್ನು ತುಂಬಿಕೊಂಡಿವೆ.
*
ಬಾಲ್ಯ ಹಾಗೂ ಹಳ್ಳಿಯನ್ನು ಒಟ್ಟೊಟ್ಟಾಗಿಟ್ಟು ಗಾಢವಾಗಿ ಜೀವಿಸುತ್ತಾ ಹೆಣೆದ ಕಥೆಗಳಿವು. ಮತ್ತೆ ಮತ್ತೆ ಪ್ರವೇಶಿಸುವ ಚಳಮಾರ ಬೀದಿ, ಬಸರೀಮರ, ಕಾಲೇಜಿನ ದಿನಗಳು, ಗೋಕಾಕ, ಶಿಕ್ಷಕ ವೃತ್ತಿ.. ಹೀಗೆ ಬಾಲ್ಯ ಹಾಗೂ ಭೂತಕ್ಕೆ ಹಿಂತಿರುಗುವ ಪುನರಾವರ್ತನೆಗಳು ಜೀವನಾನುಭವಗಳ ಸಾಂದ್ರ ಅಭಿವ್ಯಕ್ತಿಗಳಾಗಿ ಕಾಣಸಿಗುತ್ತವೆ. ಹಾಗೆಯೇ ಜಾತಿ ಪದ್ಧತಿ , ಮೂಢನಂಬಿಕೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಕೌಟುಂಬಿಕ ವಿಘಟನೆ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಮೀರುವ ದಾರಿಯನ್ನು ಶೋಧಿಸುತ್ತವೆ.
ಇಲ್ಲಿ ಕಾಡುವ ಸಂಗತಿಯೆಂದರೆ- ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡಿರುವ ಮಾರುತಿ ದಾಸಣ್ಣವರ ಅವರು ಯಾಕೆ ತಮ್ಮ ಕಥೆಗಳಿಗೆ ಈ ಬಗೆಯ ಅಭಿವ್ಯಕ್ತಿಯ ಮಾರ್ಗವನ್ನು ಹುಡುಕಿಕೊಂಡರು ಎನ್ನುವುದು. ಏಕೆಂದರೆ ಕಥಾಸಂರಚನೆಯು ಇಷ್ಟು ಸರಳವಾಗುತ್ತಾ ಹೋದಾಗ ತಾತ್ತ್ವಿಕವಾಗಿ ಕಥೆಯು ಸಡಿಲಗೊಂಡು 'ವಾಚ್ಯ'ವಾಗುವ ಅಪಾಯವನ್ನೆದುರಿಸುತ್ತದೆ! ಮಿಕ್ಕಂತೆ ನೆಲಮೂಲದ ಓರ್ವ ಉತ್ತಮ ಕಥೆಗಾರರನ್ನು ಇವರಲ್ಲಿ ಕಾಣಬಹುದು.
"ಅವರಿಗೆ ಕತ್ತಲನ್ನೂದೂ ಎಷ್ಟೊಂದು ಒಗ್ಗಿ ಹೋಗೇತೆಲಾ" ಎಂಬ ಸುಧಾರಣಾವಾದಿ ಮಹೇಶನ ಮಾತುಗಳಂತೆ, ಇರುವ ಕತ್ತಲಿಗೆ ಮದ್ದಾಗಿ ಮಣ್ಣ ಹಣತೆ ಹಚ್ಚಿದ್ದಾರೆ. ಕೃತ್ರಿಮತೆಯ ಸೋಗಿಲ್ಲದ ಆ 'ಮಣ್ಣ' ಹಣತೆಯಲ್ಲಿ ಎಣ್ಣೆ ತೀರದಿರಲಿ ಎಂಬ ಕಥೆಗಾರರ ಆಶಯ ನಮ್ಮೆಲ್ಲರದೂ ಹೌದು.
ಮತ್ತೆ ಮತ್ತೆ ಪ್ರೀತಿಯನ್ನು ತಮ್ಮ ಬರಹ ಮತ್ತು ಬದುಕುಗಳ ಮೂಲಕ ಹಂಚುತ್ತಿರುವ ಮಾರುತಿ ದಾಸಣ್ಣವರ ಅವರಿಗೆ ಅತ್ಯಂತ ಕಿರಿಯವನಾಗಿ ಶುಭಾಶಯಗಳನ್ನು ಕೋರುತ್ತೇನೆ.
**
-ಕಾಜೂರು ಸತೀಶ್
Tuesday, January 5, 2016
ದಿನಚರಿ -14
ಮೊನ್ನೆ ಮೈಸೂರಿನಲ್ಲಿ ಕಾಲೇಜೊಂದರಿಂದ ಹೊರಬಂದು ರಸ್ತೆಗಿಳಿದಿದ್ದಷ್ಟೆ- ಒಬ್ಬರು ಬೈಕ್ ನಿಲ್ಲಿಸಿ ಬನ್ನಿ ಎಂದರು. ಹಿಂದೆ ಮುಂದೆ ಯೋಚಿಸದೆ ಹತ್ತಿಕೊಂಡೆ. ನಾನು ತಲುಪಬೇಕಾದ ಸ್ಥಳವನ್ನು ವಿಚಾರಿಸಿದರು. ಹಾಗೆ ನನ್ನನ್ನು ಇಳಿಸಿ ನನ್ನ Thanksಗೂ ಕಾಯದೆ ಹೊರಟುಹೋದರು.
ನನ್ನಿಂದ Thanks ಅನ್ನು ಬಯಸಿದ್ದಿದ್ದರೆ ಆ ಮನುಷ್ಯ ಹೀಗೆ ಮತ್ತೆ ಮತ್ತೆ ನೆನಪಾಗುತ್ತಿರಲಿಲ್ಲವೋ ಏನೋ!
*
-ಕಾಜೂರು ಸತೀಶ್
Sunday, January 3, 2016
ಕ್ಷಮಿಸಿಬಿಡಿ
(ಪೆರುಮಾಳ್ ಮುರುಗನ್ ಅವರಿಗೆ )
ಕ್ಷಮಿಸಿಬಿಡಿ ನನ್ನನ್ನು
ಬರೆದದ್ದಕ್ಕೆ
ಬರೆಯದಿದ್ದುದಕ್ಕೆ
ಬರೆಯಲು ಸಾಧ್ಯವಿರುವುದಕ್ಕೆ
ಬರೆಯಲು ಸಾಧ್ಯವಿಲ್ಲವಿರುವುದಕ್ಕೆ.
ಕ್ಷಮಿಸಿ
ಮರಗಳು ಹೂಬಿಡುವುದಕ್ಕೆ
ಹೂವು ಕಾಯಾಗುವುದಕ್ಕೆ
ವಸಂತವನ್ನೂ, ಚಿನ್ನವನ್ನೂ, ನೀರನ್ನೂ
ಮಣ್ಣಿನಾಳದಲ್ಲಿ ಹೂತಿಟ್ಟಿದ್ದಕ್ಕೆ
ಚಂದ್ರ ವೃದ್ಧಿಸುವುದಕ್ಕೆ, ಕ್ಷಯಿಸುವುದಕ್ಕೆ
ಸೂರ್ಯ ಅಸ್ತಮಿಸುವುದಕ್ಕೆ
ಚರಗಳ ಚಲನೆಗೆ
ಅಚರಗಳ ಸ್ಥಿರತೆಗೆ.
ಭೂಮಿಯಲ್ಲಿ ಇಷ್ಟೊಂದು ಬಣ್ಣಗಳ ತುಂಬಿದ್ದಕ್ಕೆ
ರಕ್ತವನ್ನು ಇಷ್ಟೊಂದು ಕೆಂಪಾಗಿಸಿದ್ದಕ್ಕೆ
ಎಲೆಯಲ್ಲಿ ಕಾಡನ್ನೂ, ಮಳೆಯಲ್ಲಿ ಆಕಾಶವನ್ನೂ,
ಮಣ್ಣ ಕಣಕಣದಲ್ಲಿ ನಕ್ಷತ್ರಗಳನ್ನೂ ಹುದುಗಿಸಿದ್ದಕ್ಕೆ
ಶಾಯಿಯಲ್ಲಿ ಕನಸ ತುಂಬಿದ್ದಕ್ಕೆ.
ಮಾತುಗಳಲ್ಲಿ ಇಷ್ಟೆಲ್ಲ ಅರ್ಥವನ್ನು
ಮೊಗೆಮೊಗೆದು ತುಂಬಿಟ್ಟಿದ್ದಕ್ಕೆ
ದಿನ-ದಿನಾಂಕಗಳಲ್ಲಿ
ಚರಿತ್ರೆಯನ್ನು ಕಟ್ಟಿಟ್ಟಿದ್ದಕ್ಕೆ
ನೆನ್ನೆಯಲ್ಲಿ ಇವತ್ತನ್ನೂ
ಇವತ್ತಿನಲ್ಲಿ ನಾಳೆಯನ್ನೂ ಅಡಗಿಸಿಟ್ಟಿದ್ದಕ್ಕೆ
ಭಂಗಿಯಲ್ಲಿ ನೃತ್ಯವನ್ನೂ
ನಿಸರ್ಗದಲ್ಲಿ ಪ್ರತೀಕವನ್ನೂ ತುಂಬಿ
ಸೃಷ್ಟಿಕರ್ತನ ಸೃಷ್ಟಿಸಿದ್ದಕ್ಕೆ.
ಕ್ಷಮಿಸಿಬಿಡಿ ಭೂಕಂಪಗಳ, ಸುನಾಮಿಗಳ
ಕ್ಷಮಿಸಿಬಿಡಿ ಬಿರುಗಾಳಿಗಳ, ಚಂಡಮಾರುತಗಳ.
ಈ ಭೂಮಿಯೊಂದು
ಕೆಟ್ಟುಹೋದ ಯಂತ್ರ
ನನ್ನೊಬ್ಬನಿಂದ ಮಾತ್ರ
ಇದು ರಿಪೇರಿಯಾಗುವುದಿಲ್ಲ.
ನಾನಾದರೋ ರಾಜ್ಯವೇ ಇಲ್ಲದ ರಾಜ ಪೆರುಮಾಳ್
ಆಯುಧಗಳೇ ಇಲ್ಲದ ದೈವ ಮುರುಗ
ದನಿಯೇ ಇರದ ಜೀವ.
ಹುಡುಕಿಕೊಡಿ
ಬಲಿ ಕೇಳದ ದೇವರನ್ನು
ಭಯಕ್ಕೆ ತತ್ತರಿಸದ ಮನುಷ್ಯರನ್ನು.
ಕಂಡುಹಿಡಿಯಿರಿ ಈಗ
ಹೊಸ ಭಾಷೆಯನ್ನು
ಲಿಪಿಯನ್ನು.
**
ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್
ಕನ್ನಡಕ್ಕೆ- ಕಾಜೂರು ಸತೀಶ್
Friday, January 1, 2016
ದಿನಚರಿ -13
ಎಲ್ಲಿಯವರೆಗೆ ಈ ಮನುಷ್ಯರು ಓಟುಹಾಕಲು ಹಣ ಪಡೆಯುತ್ತಾರೋ, ಅಲ್ಲಿಯವರೆಗೆ ಅವರಿರುವ ದೇಶದ ಅಭಿವೃದ್ಧಿಯ ಕುರಿತ ಮಾತುಗಳು ಮೂರ್ಖತನದ ಪರಮಾವಧಿಯಷ್ಟೆ.
*
-ಕಾಜೂರು ಸತೀಶ್
ಪದ್ಯವೊಂದಿರಲಿ ಬೆಳಕಿಗೆ...
ಈ ಹೊತ್ತಿನಲ್ಲಿ ನಮ್ಮ ಕಾಲಮಾನದಲ್ಲಿ ಬರೆಯುತ್ತಿರುವ ಒಬ್ಬ ಅಪ್ಪಟ ಪ್ರತಿಭಾನ್ವಿತ, ಸೃಜನ ಶೀಲ ಕವಿ ಕಾಜೂರು ಸತೀಶ್ ಅಂತ ಹೇಳೋದಿಕ್ಕೆ ಅತೀವ ಸಂತಸ ಮತ್ತು ಹೆಮ್ಮೆಯೆನ್ನಿಸುತ್ತದೆ. ಮೇಲು ನೋಟಕ್ಕೆ ಇಲ್ಲಿನ ಎಲ್ಲಾ ಕವಿತೆಗಳು ಹತಾಶೆ, ಆಕ್ರೋಶವನ್ನಷ್ಟೇ ಉಸಿರಾಡುತ್ತಿದೆ ಅಂತನ್ನಸಿದರೂ, ಸೂಕ್ಷ್ಮವಾಗಿ ಗಮನಿಸಿದರೆ ಬದುಕಿನ ಎಲ್ಲಾ ಸೂಕ್ಶ್ಮ ಒಳ ತೋಟಿಗಳ ಒಳ ಹೊಕ್ಕು ಅವುಗಳನ್ನು ಅಷ್ಟೇ ಧ್ಯಾನದಿಂದ ಆಲಿಸುವ ವ್ಯವಧಾನದ ಕಿವಿ ಸತೀಶ್ ರವರಿಗೆ ದಕ್ಕಿದೆ. ಹಾಗೆಯೇ ಅವುಗಳಿಗೆ ದನಿಯಾಗುವ ಕಲೆ ಕೂಡ ಕಾಜೂರರವರ ಲೇಖನಿಗೆ ಸಿದ್ಧಿಸಿರುವುದರಿಂದಲೇ ಇಲ್ಲಿ ಗಾಯದ ಹೂವುಗಳು ಇತರೇ ಕವನ ಸಂಕಲನಗಳಿಗಿಂತ ತುಸು ಭಿನ್ನವಾಗಿ ನಿಂತಿದೆಯೆನ್ನಿಸುತ್ತದೆ.
ಕಾಲ ಬುಡದಲ್ಲಿ ಸತ್ತು ಬಿದ್ದ ಒಂದು ಸಣ್ಣ ಇರುವೆಯನ್ನ ಸತ್ತಿದೆ ಅಂತ ದೊಡ್ಡದಾಗಿ ಬೊಬ್ಬಿರಿಯುತ್ತಾ ಕಾಲ ಕಳೆಯುವ ಅದೇ ಕ್ಷಣದಲ್ಲಿ, ಸಾಯಲು ಹೊರಟಿರುವ ಮತ್ತೊಂದು ಸಣ್ಣ ಇರುವೆಯು ಬದುಕಿಗಾಗಿ ಅಂಗಲಾಚುವ ಪರಿ, ಎತ್ತರದ ದ್ವನಿಯ ಮುಂದೆ ಹೇಗೆ ಕ್ಷೀಣವಾಗಿ ಕಳೆದು ಹೋಗುತ್ತದೆ...?!. ಈ ಮೂಲಕ ಬಲವಿಲ್ಲದವರ, ಬೆಂಬಲವಿಲ್ಲದವರ ಬದುಕು ಹೇಗೆ ಸದ್ದಡಗಿ ಹೋಗುತ್ತದೆ ಎನ್ನುವುದರನ್ನ ಸಂಕಲನದ ಮೊದಲ ಕವಿತೆ ಪುಟ್ಟದಾದರೂ ಗಟ್ಟಿಯಾಗಿ ವಿಸ್ತಾರದ ನೆಲೆಯಲ್ಲಿ ತೆರೆದಿಡುತ್ತದೆ.
ಒಂಟಿ ಕವಿತೆಯಲ್ಲಿ ಕವಿ ಒಬ್ಬಂಟಿಗ ಅಥವಾ ಏಕಾಂಗಿಯೆಂಬುದನ್ನ ಪರೋಕ್ಷವಾಗಿ ಸೂಚಿಸುತ್ತದೆ. ಇದೊಂದು ಪ್ರತ್ಯಕ್ಷ ರೂಪದ ಹೇಳಿಕೆಯಷ್ಟೆ. ಒಂಟಿ ಎನ್ನುವುದು ಮೇಲ್ನೋಟದ ಒಂದು ಬಾಹ್ಯ ರೂಪವಲ್ಲವಷ್ಟೆ. ಅದು ಪ್ರಶ್ನಿಸುವವರಿಗೆ ಅದು ಸುಲಭದಲ್ಲಿ ಗೋಚರಿಸುವಂತದ್ದಲ್ಲ ಅನ್ನುವುದನ್ನ
'ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲಾ ಕಷ್ಟದ ಕೆಲಸ '
ಅಂತ ಕವಿ, ಆ ಮೂರು ಸಾಲುಗಳಲ್ಲಿ ತಾನು ಒಂಟಿಯಲ್ಲ. ಇವನ್ನೆಲ್ಲಾ ಬಗೆದು ತೋರಿಸುವುದು ಕಷ್ಟದ ಕೆಲಸದವಾದುದರಿಂದ ನನ್ನಂತವರನ್ನಿನ್ನೂ ಒಂಟಿಯಾಗಿಸಿದ್ದಾರೆ ಎನ್ನುವಲ್ಲಿ ಒಂದು ರೀತಿಯಾದ ತಿಳಿ ಹಾಸ್ಯವಿದೆ. ತನ್ನೊಂದಿಗೆ ತನ್ನ ಸುತ್ತು ಮುತ್ತಲಿನ ಅದೆಷ್ಟೋ ಅದೃಶ್ಯವಾದ ಸಂಗತಿಗಳನ್ನು ಕಟ್ಟಿಕೊಂಡು ಗಾಡವಾಗಿ ಬದುಕುತ್ತಿರುವುದು ಸಮಾಜದ ಹೊರಗಣ್ಣಿಗೆ ಹೇಗೆ ಕಾಣಲು ಸಾಧ್ಯ ಅಂತ ಸಣ್ಣಗೆ ತಿವಿಯುವಾಗಿನ ಕವಿಯ ಚಿಂತನೆಗೆ ಮನಸು ಬೆರಗಾಗುವಷ್ಟು ಅಹುದಹುದು ಅನ್ನುತ್ತದೆ.
ಕಾಜೂರುರವರ 'ಗಾಯದ ಹೂವುಗಳು' ಶೀರ್ಷಿಕೆಯೇ ಮೊದಲು ಸ್ವಲ್ಪ ವಿಚಿತ್ರ ಅಂತನ್ನಿಸಿತ್ತು. ಯಾಕೆಂದರೆ ಗಾಯಗೊಂಡ ಹೂಗಳ ಕಲ್ಪನೆಯೇ ತೀರಾ ಭಯ ಹುಟ್ಟಿಸುತ್ತದೆ. ಹೂಗಳು ಗಾಯಗೊಳ್ಳುವುದನ್ನ ಯಾರೂ ಬಯಸುವುದಿಲ್ಲ. ಈ ಆತಂಕದಲ್ಲೇ ಗಾಯಗೊಂಡ ಹೂಗಳನ್ನು ಸ್ವಲ್ಪ ಗಲಿಬಿಲಿಗೊಂಡು ಓದುತ್ತಾ ಹೋದರೆ ಕವಿಯ ಆಶಯ ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ.
'ಗಾಯಗಳು ಹಾಡಬೇಕು
ಕೆಂಪು ಹೂಗಳಾಗಿ..
ಜಗದ ಅವ್ವಂದಿರು ಸುಡುವ
ರೊಟ್ಟಿಯ ಎಸಳುಗಳಾಗಿ ಹಾರಿ
ಹೂವಾಗಬೇಕು..
ಎಲ್ಲ ಗಾಯಗಳೂ ಹೂವುಗಳಾಗಬೇಕು
ನಿರ್ವಾತ ಕತ್ತಲುಗಳಲ್ಲಿ -ನಮ್ಮ ನಿಮ್ಮ ಹೃದಯಗಳಲ್ಲಿ'
ಎನ್ನುವಾಗ ಕವಿಯ ಮನೋಧರ್ಮ ಇಂಗಿತ ಸ್ಪಷ್ಟ ರೂಪ ಪಡೆದುಕೊಳ್ಳುತ್ತದೆ. ಆ ಕ್ಷಣ ನಮ್ಮ ಮನಸು ಕೂಡ ಹೂವಂತೆ ತೊನೆದಾಡುತ್ತದೆ
ಕವಿಗೆ ವ್ಯವಸ್ತೆಯ ಅವ್ಯವಸ್ತೆಯ ಬಗೆಗೆ ಸಿಟ್ಟಿದೆ. ಆ ಅಸಮಧಾನವನ್ನ ಅವರೊಳಗಿನ ಕವಿತೆಗಳ ಮೂಲಕ ಹೊರಗೆಡುವ ಪ್ರಯತ್ನವನ್ನ ಅವರದೇ ನೆಲೆಯಲ್ಲಿ ತುಂಬಾ ವಿಭಿನ್ನವಾಗಿ ಮಾಡುತ್ತಾರೆ. ನೆಲವಿಲ್ಲದವನ ಕವಿತೆಯಲ್ಲಿ ಅವರು ಹೀಗೆ ಬರೆಯುತ್ತಾರೆ..
'ಮರುಭೂಮಿ ಹಿಮಶಿಖರಗಳನ್ನು
ಯಾಕೆ ಅನಾಥವಾಗಲು ಬಿಡುತ್ತೀರಿ
ನಿಮ್ಮ ಪರವಾಗಿ ಸೈಟಿಗೆ ಅರ್ಜಿ ಸಲ್ಲಿಸಿದ್ದೇನೆ'
ಅನ್ನುವಲ್ಲಿನ ಒಂದು ವ್ಯಂಗ್ಯದ ಮೊನಚು ಹಾಗು ಒಂದು ಸಾತ್ವಿಕ ಆಕ್ರೋಶ ಇಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಮತ್ತು ಧ್ವನಿಪೂರ್ಣವಾಗಿದೆ. ಅಂತೆಯೇ ಯಾರದಿದು ಬೇಲಿ ಹಾಕದ ನೆಲ? ಎಂಬಂತ ಸಾಲುಗಳು ಸೀದಾ ನಮ್ಮನ್ನು ತಾಕಿ, ನಮ್ಮೊಳಗೊಂದು ಸಂಚಲನವನ್ನುಂಟು ಮಾಡಿ, ಈ ಒಂದೇ ಒಂದು ಸಾಲು ನಮ್ಮನ್ನು ನಿಂತಲ್ಲೇ ಅಲುಗಾಡಿಸಿ ಬಿಡಬಲ್ಲದು.
ಉತ್ತಮ ಕವಿತೆಗಳ ಲಕ್ಷಣವೇ ಅಂತದ್ದು... ಓದಿ ಮುಗಿದಾದ ಮೇಲೂ ನಮ್ಮೊಳಗೆ ಒಂದು ಹುಯಿಲೆಬ್ಬಿಸಿ ನಮ್ಮನ್ನು ಕಾಡುವಂತೆ ಮಾಡುವಂತದ್ದು. ಹೇಳಿಯೂ ಹೇಳದಂತೆ ನಮಗೇ ಒಂದಿಷ್ಟು ಬಾಕಿ ಬಿಡುವಂತದ್ದು. ಇಂತಹ ಎಲ್ಲಾ ಲಕ್ಷಣಗಳು ಕಾಜೂರುರವರ ಕವಿತೆಯಲ್ಲಿ ಢಾಳಾಗಿ ಕಾಣಸಿಗುತ್ತವೆ. ಈ ನಾಜೂಕಿನ ಕಲೆಗಾರಿಕೆಗಳನ್ನ ಅವರ ಕವಿತೆಗಳು ಸುಲಭದಲ್ಲಿ ಕರಗತ ಮಾಡಿಕೊಂಡಿವೆ ಎನ್ನುವುದಕ್ಕೇ ಈ ಕೆಳಗಿನ ಕವಿತೆಗಳೇ ಸಾಕ್ಷಿ.
ಶಬ್ದ ಸಮರ ಎಂಬ ಕವಿತೆಯಲ್ಲಿ.. ಉಳ್ಳವರ, ಸ್ತಾಪಿತ ಹಿತಾಸಕ್ತಿಗಳ ದಬ್ಬಾಳಿಕೆಯನ್ನ ಎದುರಿಸಿದಷ್ಟೂ ಎದುರಿಗೆ ದಿಟ್ಟವಾಗಿ ನಿಲ್ಲಲಾರದೆ, ತಾನು ಸೋತೇ ಹೋದೆ ಅಂತ ನೆನೆದುಕೊಂಡು ಕವಿ, ಯಾರಿಗೂ ತಲುಪಲಾಗದ, ಮುಟ್ಟಲಾಗದ ಜಾಗದಲ್ಲಿ ಅಡಗಿ ಕುಳಿತು ತಾನು ಸೋತೇ ಅಂತ ಆ ಕ್ಷಣಕ್ಕೆ ಕವಿ ಒಪ್ಪಿಕೊಂಡರೂ....' ಶಬ್ದ 'ಅಲ್ಲಿಗೆ ತಲುಪುವುದೇ ಇಲ್ಲವೆಂದ ಮೇಲೆ .. ಇದು ಸೋಲು ಹೇಗಾದೀತು?. ಇದು ಪರೋಕ್ಷವಾಗಿ ಕವಿಯ ಗೆಲುವೇ ಅಲ್ಲವೇ?. ಇಂತಹ ಹೊಸ ಹೊಳಹುಗಳನ್ನು, ಹೊಸ ತಿರುವುಗಳನ್ನು ಅಚಾನಕ್ಕಾಗಿ ನಮ್ಮ ಮುಂದೆ ತೆರೆದಿಡುವುದರಲ್ಲಿ ಕವಿ ಸಫಲರಾಗುತ್ತಾರೆ.
ಇನ್ನು ಮೈಲಿಗೆ ಪದ್ಯದಲ್ಲೂ ಅಷ್ಟೆ. ಮೈಲಿಗೆ ಮೈಲಿಗೆ ಅಂತ ದೂರೀಕರಿಸುತ್ತಾ ದೂರವಿಟ್ಟಷ್ಟೂ ಅದು ಮತ್ಯಾವುದೋ ರೀತಿ ಯಲ್ಲಿ ನಮ್ಮೊಳಗೆ ಹಾಸು ಹೊಕ್ಕಾಗುವ ಪರಿಯನ್ನು ಕವಿತೆಯೊಳಗೆ ಇಳಿಸಿದ ಪರಿಗೆ ಸೋಜಿಗವಾಗುತ್ತದೆ. ಆ ಮೂಲಕ ಬದುಕಿನ ಅಪ್ಪಟ ಸತ್ಯದ ಅರಿವು ಅನಾವರಣಗೊಳ್ಳುತ್ತದೆ.
ಇನ್ನು ಇಲ್ಲಿನ ಹೆಚ್ಚಿನ ಕವಿತೆಗಳು, ಮುಖಾಮುಖಿಯಾಗುವ ಜೀವನದ ವೈರುದ್ಧ್ಯಗಳು ಹೇಗೆ ನಮ್ಮನ್ನು ಸತಾಯಿಸಿ ಕಂಗೆಡಿಸುತ್ತವೆ.ಆಗೆಲ್ಲಾ ಕವಿ ಹೇಗೆ ಕವಿತೆಗಳಿಗೆ ಮೊರೆ ಹೋಗುತ್ತಾರೆ ಎಂಬುದನ್ನು ಇಲ್ಲಿನ ಕವಿತೆಗಳು ಸಾಕ್ಷೀಕರಿಸುತ್ತವೆ. ಹಾಗೆಯೇ ಬದುಕಿನ ಈ ಎಲ್ಲಾ ಅಸಂಗತಗಳಿಗೆ ಹೇಗೆ ತಾನು ಮೂಕ ಸಾಕ್ಷಿಯಾಗುತ್ತಾ.. ಕವಿತೆಗಳ ಬಲದಿಂದಷ್ಟೇ ಬದುಕುತ್ತಿದ್ದೇನೆ ಎನ್ನುವಲ್ಲಿ, ಹಾಗು ಎಲ್ಲಾ ಅಸಾಹಯಕತೆಗಳ ನಡುವೆ ಕವಿತೆ ನನ್ನನ್ನು ಬದುಕಿಸಬಲ್ಲದು ಎನ್ನುವಲ್ಲಿ ಕವಿತೆಯ ಬಗೆಗೆ ಕವಿಗೆ ಅಪಾರ ನಂಬುಗೆ ಮತ್ತು ಆತ್ಮವಿಶ್ವಾಸ ಇದೆ. ಅದಕ್ಕೇ ಇರಬೇಕು ಯಾರಿಗೂ ದಕ್ಕದ ಸುಟ್ಟ ಹಸಿಮೀನಿನಂತಹ ಕವಿತೆ ಅವರಿಗೆ ದಕ್ಕಿರುವುದು.
ಸಂಕಲದ ಕವಿತೆಗಳಲ್ಲಿ ಬಹುವಾಗಿ ಕಾಡುವ ಕವಿತೆಗಳಲ್ಲಿ ಎಡ ಮತ್ತು ಬಲ ಕವಿತೆಗಳೂ ಒಂದು. ಈ ಕವಿತೆಯನ್ನು ಪದೇ ಪದೇ ಓದಿದಾಗಲೂ ಅನೇಕ ಅರ್ಥ ಸಾಧ್ಯತೆಗಳು ನನ್ನ ವ್ಯಾಪ್ತಿಯನ್ನು ಮೀರುತ್ತಾ ಹೋದದನ್ನು ನೋಡಿ ಬೆರಗುಗೊಂಡಿದ್ದೇನೆ. ಅಂತಹ ಕವಿತೆಗಳು ಇಲ್ಲಿ ಸಾಕಷ್ಟಿವೆ. ಅದರ ಜೊತೆಗೆ ವಿಷಾದ, ನೋವು, ಹತಾಶೆಯ ಎಳೆ ಎಳೆಯನ್ನೇ ಜೋಡಿಸುತ್ತಾ ಕವಿ, ಕವಿತೆ ನೂಲುತ್ತಿದ್ದಾರೇನೋ ಅಂತ ಅನ್ನಿಸಿದರೂ, ಕಡಲಾಚೆಯ ಹುಡುಗಿಗೆ.. ಅನ್ನೋ ಕವಿತೆಯಂತ ಆರ್ಧ್ರ ಕವಿತೆಗಳನ್ನು ಬರೆಯುತ್ತಾ.. ಅಂಗ ಮೀರಿದ ಸಂಗ ನಮ್ಮ ಪ್ರೀತಿ ಎನ್ನುವಂತ ಪ್ರೀತಿಯ ಔನತ್ಯವನ್ನ ಎತ್ತಿ ಹಿಡಿಯಬಲ್ಲಂತಹ ಸಾಲುಗಳನ್ನು ಬರೆಯ ಬಲ್ಲರು. ಅದರ ಜೊತೆಗೆ
ಏನಾದರಾಗಲಿ ಊದುತ್ತಲೇ ಇರುವೆ
ನೀ ಬೆಚ್ಚಗಿರುವುದಷ್ಟೇ ಮುಖ್ಯ.. ಅನ್ನುವಂತಹ ಬೆಚ್ಚಗೆಯ ಸಾಲುಗಳನ್ನು ಆಪ್ತವಾಗಿ ಕಟ್ಟಿಕೊಡಬಲ್ಲರು.
ಇನ್ನು ನಾವಿಬ್ಬರೂ ತೀರಿಕೊಂಡ ಮೇಲೆ ಕವಿತೆಯಲ್ಲಿ ಸತ್ತರೂ ಒಂದಾಗಲು ಬಿಡದ ಅಂತರಗಳನ್ನು ಮೀರಿ, ಹೇಗಾದರೊಮ್ಮೆ ಒಂದಾಗಿಯೇ ತೀರಬೇಕೆನ್ನುವ ಹಪಾಹಪಿ..
'ಭೂಕಂಪವಾಗಲಿ
ಸುನಾಮಿಯಾಗಲಿ
ನಮ್ಮಿಬ್ಬರ ಗೋಡೆಗಳ ಮೇಲೆ
ನಮ್ಮಿಬ್ಬರ ಮಿಲನಕ್ಕಾಗಿ... '
ಅನ್ನುವಂತ ಸಾಲುಗಳನ್ನು ಅವರಿಂದ ಬರೆಯಿಸುತ್ತದೆ. ಅವರ ಅಂತರ್ಯದೊಳಗೆ ತುಡಿಯುವ ಪ್ರೀತಿಯ ಇರುವಿಕೆಯನ್ನ ಇದು ಸಾದರ ಪಡಿಸುತ್ತದೆ.
ಹೀಗೆ.. ಬದುಕಿನ ಎಲ್ಲಾ ಮಜಲುಗಳಲ್ಲಿ ನಿಂತುಕೊಂಡು ಕವಿತೆ ಕಣ್ಣಿನಿಂದ ನೋಡುವ, ಕವಿತೆಯ ಮೂಲಕ ಅದನ್ನು ಸಶಕ್ತವಾಗಿ ಕಟ್ಟಿಕೊಡುವ ಪ್ರಯತ್ನವನ್ನ ಇಲ್ಲಿನ ಕವಿತೆಗಳು ಮಾಡಿವೆ. ಆದರೆ ಇವೆಲ್ಲದರ ನಡುವೆಯೂ ಇಲ್ಲಿನ ಕವಿತೆಗಳು ಹೆಚ್ಚು ಸಂಕೀರ್ಣತೆಯಿಂದ ಮೊದಲ ಓದಿಗೆ ನಮ್ಮನ್ನು ತಲುಪುವುದಿಲ್ಲವೇನೋ ಎಂಬ ಭಾವನೆ ಕೂಡ ಬರುತ್ತದೆ. ಅದರ ಜೊತೆಗೆ ಆರಂಭವೂ ಅಂತ್ಯವೂ ಒಂದಕ್ಕೊಂದು ತಾಳೆಯಾಗದೆ ಎಲ್ಲೋ ಒಂದು ಕಡೆ ಮೂಲಧಾತು ದಿಕ್ಕುತಪ್ಪಿದಂತೆ ಅನ್ನಿಸುವುದು ಕೂಡ ಸುಳ್ಳಲ್ಲ. ಕೆಲವು ಕವಿತೆಗಳು ಇಂತಹ ಗೊಂದಲಕ್ಕೆ ನೂಕಿದಾಗ, ಬಹುಷ:ಇದು ನನ್ನ ಸೀಮಿತ ಅರಿವಿನ ಕೊರತೆಯೇನೋ ಅಂತ ಕಳವಳಿಸಿದ್ದೇನೆ.
ಇದೆಲ್ಲವನ್ನು ಮೀರಿಯೂ 'ಗಾಯದ ಹೂವುಗಳು 'ಒಂದು ಉತ್ತಮ ಕವಿತೆಗಳ ಸಂಕಲನ. ಪ್ರಸಕ್ತ ವರ್ಷದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನ ಈ ಸಂಕಲನ ತನ್ನ ಮುಡಿಗೇರಿಸಿಕೊಂಡಿದೆ. ಗಾಯದ ಹೂವುಗಳನ್ನು ಕೈಗೆತ್ತಿಕೊಂಡು ಅದನ್ನು ಮೃದುವಾಗಿ ಸವರುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಖುಷಿಯ ಕ್ಷಣ ನಮ್ಮದಾಗಲಿ. ಅಂತೆಯೇ ಜಗದ ಎಲ್ಲಾ ನೋವುಗಳು, ಗಾಯಗಳು ಹೂವುಗಳಾಗಿ ಅರಳಿಕೊಳ್ಳಲೆಂಬ ಕವಿಯ ಆಶಯ ನಮ್ಮದೂ ಕೂಡ ಆಗಲಿ.
ಸಹೃದಯ ಕವಿ ಕಾಜೂರು ಸತೀಶ್ ರವರಿಗೆ ಅಭಿನಂದನೆಗಳು.
*
.... ಸ್ಮಿತಾ ಅಮೃತರಾಜ್. ಸಂಪಾಜೆ.
ಹಸಿರು
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ ತಾ
ಕೊಡಗು.. ೫೭೪೨೩೪
ನನ್ನ ಪುಸ್ತಕದ ಕುರಿತು ಕೆ.ವಿ. ತಿರುಮಲೇಶ್ ಅವರ ಮಾತು
ಶ್ರೀ ಸತೀಶ್ ಅವರಿಗೆ
ನಮಸ್ಕಾರ! ನೀವು ಕಳಿಸಿದ `ಗಾಯದ ಹೂವುಗಳು’ ಕವನ ಸಂಕಲನ ಸಿಕ್ಕಿದೆ. ಮೇಲಿಂದ ಮೇಲೆ ಓದಿ ನನಗನಿಸಿದ್ದೆಂದರೆ: ಒಬ್ಬ ಮೇಜರ್ ಕವಿಯಾಗುವ ಲಕ್ಷಣಗಳು ನಿಮ್ಮಲ್ಲಿ ಇವೆ. ನಿಮ್ಮ ಆಯ್ಕೆಯ ವಸ್ತುಗಳು—ಇರುವೆ, ಹಾವು, ಕಿಟಿಕಿ, ನದಿ, ಬೋನ್ಸಾಯ್ ಮುಂತಾದವು—ನನಗೆ ತುಂಬಾ ಆಕರ್ಷಣೀಯ. `ಚಪ್ಪಲಿ’ ಕವಿತೆಯೊಂದು ಎಲ್ಲಾ ಕವಿತೆಗಳನ್ನು ಹೇಳುವ ಕವಿತೆಯಂತಿದೆ! ತುಂಬ ಚೆನ್ನಾಗಿದೆ. ಇದಕ್ಕಿಂತ ಹೆಚ್ಚು ಹೇಳುವುದಕ್ಕೇನಿದೆ? ಕವಿತೆ ಬರೆಯುತ್ತಲೇ ಇರಿ.
ನಿಮ್ಮ
ಕೆ.ವಿ.ತಿರುಮಲೇಶ್
ದಿನಚರಿ- 12
ಮಕ್ಕಳ ಹೆಸರನ್ನು ಇಂಗ್ಲಿಷಿನಲ್ಲಿ ಬರೆದಿಟ್ಟಿರಬೇಕಿತ್ತು. ಹಾಗೆ, ಬೆರಳೆಣಿಕೆಯಷ್ಟೇ ಇರುವ ಮಕ್ಕಳ ಹೆಸರುಗಳನ್ನು ಆ ಮೇಷ್ಟ್ರು ಬರೆದುಕೊಟ್ಟರು. ಆ ಹೆಸರುಗಳನ್ನು ನೋಡಿ ಬೆಚ್ಚಿಹೋದೆ. ಬಹುತೇಕ ಹೆಸರುಗಳು 'ಕೋಮಾ' ಹಂತದಲ್ಲಿದ್ದವು! ಉದಾಹರಣೆಗೆ - RMSHA, SHIPPA( ರಮೇಶ, ಶಿಲ್ಪ ಎಂಬ ಹೆಸರುಗಳು ಹೀಗೆ ರೂಪಾಂತರ ಹೊಂದಿದ್ದವು!)
'ಇದೇನು ಸಾರ್, ಇಂಥಾ ಹೆಸರುಗಳು'? ಇರುವ ಹಾಗೆ ಓದಿ ಅವರನ್ನು ಕೇಳಿದೆ. ತುಂಬಾ ಚೆನ್ನಾಗಿ ಉತ್ತರಿಸಿದರು: 'ಅವರು ಕೂಲಿ ಕಾರ್ಮಿಕರ ಮಕ್ಕಳು. ಅವರ ಪೋಷಕರಿಗೆ ಮಕ್ಕಳ ಹೆಸರೂ ಹೇಳಲೂ ಬರೋದಿಲ್ಲ. ಅವರು ಹೇಳಿದ ಹಾಗೆ ಬರೆದುಕೊಂಡೆ!'
ವೃತ್ತಿನಿರತ ಶಿಕ್ಷಕರ ಗುಣಮಟ್ಟವನ್ನು ಪರೀಕ್ಷಿಸದ, ನಿವೃತ್ತಿಯ ವಯಸ್ಸನ್ನು ಏರಿಸುತ್ತಲೇ ಇರುವ ವ್ಯವಸ್ಥೆಯ ಬಗ್ಗೆ ಸಹಿಸಲಸಾಧ್ಯವಾದಷ್ಟು ಸಿಟ್ಟು ಬಂತು.
ಆ ದಿನದ ನನ್ನ ಏಕಾಂತವೂ ಹಾಳಾಗಿ ಹೋಯಿತು.
**
-ಕಾಜೂರು ಸತೀಶ್
-
ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.) ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...