ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 17, 2024

ಅಪ್ಪನೆಂದರೆ

ಅಪ್ಪನೆಂದರೆ ಹೆಗಲು
ಸಂಸಾರಕೆ ಹಗಲು
ಸೋರುವ ಬದುಕಿಗೆ
ಜಾರದ ಸೂರು

ಒತ್ತಾರೆ ಹೊತ್ತು, ಮೌನವ ಹೊತ್ತು
ಬೆವರ ಹೊಳೆಯಲಿ ಮೈತೊಳೆದು ನಿಂತು
ಉರಿವ ಗಾಯದ ನಡುವೆ ನಗುವ ಹೂವಿರಿಸಿ
ಆಳಬಾವಿಯಿಂದ ಬೆಳಕ ತುಂಬಿರಿಸಿ

ಹುಟ್ಟಾದರೆ ಸಾವಾದರೆ ಹುಟ್ಟುಹಾಕುತಾ
ನೋವು-ನಲಿವಿನ, ಅಲೆಯನು ದಾಟುತಾ
ಹಬ್ಬವ ಮದುವೆಯ ಹೆಗಲಲ್ಲಿ ಇಟ್ಟು
ಉರಿವ ಗಾಯದ ತುಟಿಗೆ ನಗುವನ್ನಿಟ್ಟು

ಕಣ್ಣು ಉಕ್ಕಿದರೆ ಕತ್ತಲಲಿ ತುಳುಕಿಸಿ
ಕುಸಿದು ಕುಳಿತರೆ ತುಟಿ ಕಚ್ಚಿ ಇರಿಸಿ
ಪ್ರೀತಿಯ ಬೀಗವನು ಎದೆಯೊಳಗೇ ಜಡಿದು
ಸದ್ದಿಲ್ಲದೆ ನಡೆವನು ತನ್ನೂರನು ತೊರೆದು
*
ಕಾಜೂರು ಸತೀಶ್ 

ಪ್ರೀತಿಯ ಮರವೇ

ಪ್ರೀತಿಯ ಮರವೇ
ತೋಳ ಚಾಚೀ ಜಗಕೆ 
ಬಿಸಿಲ ಹಗೆಯ ಜಗಕೆ
ನೆರಳ ಹಾಸಿಗೆ ಹಾಸು


ಎಲೆಯಂತಿರುವೆ ನಾನು 
ಓ ಎಲೆ ಮರವೇ
ಗಾಳಿಯೇ ಆಗಿ ಜೀವವೇ ಆಗಿ
ನಾಕ ನಾಸಿಕದ ಒಳಗೆಲ್ಲ ಸುಳಿವೆ||ಪ್ರೀತಿಯ ಮರವೇ||


ಹೂವಂತಿರುವೆ ನಾನು
ಓ ಎಲೆ ಗಿಡವೇ 
ಎದೆಯ ಜೇನಿನ ಹನಿಯೇ ಆಗಿ 
ಕಣ್ಣ ಬಣ್ಣದಲಿ ಅದ್ದುತಲಿರುವೆ||ಪ್ರೀತಿಯ ಮರವೇ||


ಹಣ್ಣಂತಿರುವೆ ನಾನು
 ಓ ಎಲೆ ಮರವೇ
ಹಸಿವ ಉದರಕೆ ಅಮೃತವೇ ಆಗಿ
ಜೀವಜಾಲವನು ತಣಿಸುತಲಿರುವೆ 
||ಪ್ರೀತಿಯ ಮರವೇ||

ಲತೆಯಂತಿರುವೆ ನಾನು
 ಓ ಪ್ರಿಯ ಮರವೇ 
ಅಂಗ ಸಂಗದಲಿ ಏಕವೇ ಆಗಿ
ಒಲವಿನ ನಡುವನು ಬಳಸುತಲಿರುವೆ || ಪ್ರೀತಿಯ ಮರವೇ||


ಬೇರಂತಿರುವೆ ನಾನು
 ಓ ಪ್ರಿಯ ಮರವೇ 
ಆಳದಾಳಕೆ ಇಳಿದು
ಪ್ರೀತಿಯ ಮೊಗೆವೆ||ಪ್ರೀತಿಯ ಮರವೇ||
*
ಕಾಜೂರು ಸತೀಶ್ 

ಅಮ್ಮ

ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ


ಗರ್ಭದಲ್ಲೇ ಲಾಲಿ ಹಾಡಿ ತನ್ನ ಕುಡಿಯ ಮಲಗಿಸುವಳು
ಚಕ್ರವ್ಯೂಹವನ್ನೇ ಮುರಿಯುವಂಥ ಕಥೆಯ ಕಲಿಸುವವಳು
||ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ||


ತಾನು ಹಸಿದು ತನ್ನ ಕೂಸಿಗಾಗಿ ಅನ್ನ ಉಣಿಸುವವಳು
ಪರರಿಗಾಗಿ ಉರಿದು ನಗುವ ನಂದಾದೀಪ ಅವಳು
||ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ||


ಜಗದ ಸಕಲ ಪ್ರೀತಿಯನೆಲ್ಲ ತನ್ನೊಡಲಲಿ ತುಂಬುವವಳು
ಕಣ್ಣನೀರಿನಂಥ ಕಡಲಿನಂತೆ ಹರಡಿ ಬೆಳೆಯುವವಳು
||ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ||


ನೆಲಮುಗಿಲಿನಂತೆ ಅವಳು ಕಾಯುವಳು ಸಹಿಸುವಳು
ತುಳಿದರೂ ನೋಯದಂಥ ಭೂಮಿತಾಯಿಯಂಥವಳು
||ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ||
*
ಕಾಜೂರು ಸತೀಶ್

ಆ ತೀರ

ಆ ತೀರದಲ್ಲಿ ಸುಳಿಗಾಳಿಯೊಂದು
ನಿನ್ನ ಸವರಿ ಇಲ್ಲಿ ಸುಳಿದು
ಹಾಡ ಸುರಿಸುತಿದೆ
ಒಲವಿನ ಕಡಲ ಹರಿಸುತಿದೆ//ಆ ತೀರದಲ್ಲಿ//

ನನ್ನ ನಿನ್ನ ನಡುವೆ ಕಡಲೆಂಬುದಿಲ್ಲ
ನನ್ನ ನಿನ್ನ ನಡುವೆ ಗಡಿಯೆಂಬುದಿಲ್ಲ
ನೆತ್ತಿಯೊಳಗಿನ ಒಂದು ಗೆರೆಯ ಅಳಿಸಬೇಕಷ್ಟೇ
ಕಣ್ಣಪೊರೆಯ ಸುಲಿದು ರವಿಗೆ ಉಣಿಸಬೇಕಷ್ಟೇ//ಆ ತೀರದಲ್ಲಿ//

ನನ್ನ ಮುಟ್ಟುವ ಸೂರ್ಯ ನಿನ್ನ ಚಂದಿರನು
ನಿನ್ನ ಸೋಕುವ ಚಂದಿರ ನನ್ನ ಸೂರ್ಯನು
ಆ ತೀರದ ನಿನ್ನ ಬಿಳಿಮೋಡದ ಮೊಗವು
ನನ್ನ ಮೈಯ್ಯ ಕಾರ್ಮೋಡದ ಕೂಡಿ ಹನಿಯುವುದು//ಆ ತೀರದಲ್ಲಿ//

ನಿನ್ನ ತೀರದ ಮೌನ ನನ್ನ ಮೌನದ ನಡುವೆ
ಯಾರೋ ಎಸೆದ ಪದದ ಈಟಿಗೆ ಸದ್ದು ಮಾಡುತಿದೆ
ನಿನ್ನ ನೆತ್ತರ ಹೂವಿಗೆ ನನ್ನ ಗಾಯದ ಬಣ್ಣ
ನನ್ನ ನಿನ್ನಯ ನಂಟನು ತಡೆವರಾರಿಲ್ಲಿ?//ಆ ತೀರದಲ್ಲಿ//
*
ಕಾಜೂರು ಸತೀಶ್ 

ಮತ್ತೆ ಮಳೆಯಾಗುತಿದೆ

ಮತ್ತೆ ಮಳೆಯಾಗುತಿದೆ
ನೆನಪು ಹರಿದಾಡುತಿದೆ
ಮರೆತಿದ್ದ ಗತವೆಲ್ಲ ಮೊಳಕೆಯೊಡೆದೇಳುತಿದೆ//ಮತ್ತೆ//

ಕಣ್ಣು ಹಸಿರಾಗುತಿದೆ
ಮಣ್ಣು ಅನ್ನ ಕಲಸುತಿದೆ
ರವಿ ಮತ್ತೆ ತವರಿಗೆ ಹೆರಿಗೆಗೆ ಜಾರುತಿದೆ//ಮತ್ತೆ//

ಬೆಟ್ಟ ಮೈಮರೆಯುತಿದೆ
ನೆಲದ ಗಾಯ ಮಾಯುತಿದೆ
ಗುಳೆಹೋದ ಕನಸೆಲ್ಲ ಮರಳಿಮನೆ ಸೇರುತಿದೆ//ಮತ್ತೆ//

ಮರವು ಉಸಿರ ನುಡಿಸುತಿದೆ
ಸಿಡಿಲು ಒಡಲ ಬರೆಯುತಿದೆ
ಜಲವು ಎಳೆದ ಚಿತ್ರ ನೆಲಕೆ ಚೆಲುವ ಸಿಹಿಯುಣಿಸುತಿದೆ//ಮತ್ತೆ//

ಮುಗಿಲ ಪದ ಸೋರುತಿದೆ
ಮೌನದ ಒಲೆಯಾರುತಿದೆ
ನೆಲದ ಬಿರುಕು ನಭದ ಕಣ್ಣಿಗೆರಚಿ ಹನಿಯ ಚೆಲ್ಲುತಿದೆ//ಮತ್ತೆ//
*

ಕಾಜೂರು ಸತೀಶ್

ಕಂತ್ರಿನಾಯಿ



ಕುಂಯ್ಕುಂಯ್ಗುಟ್ಟಿ ಮೈನುಲಿದು
ನಿಯತ್ತು ನಡೆದುಬರುತ್ತದೆ ಹಿಡಿತುತ್ತಿನ ನೆಪಕ್ಕಾಗಿ

ಅಲ್ಲೆಲ್ಲೋ 'ಕಂತ್ರಿನಾಯಿ' ಎಂಬೋ ಶಬುದ ಬೈಗುಳದ ಜೋಗುಳವಾಗಿ
ಹಾಡಿ ಹಾಡಿ ಮಲಗಿಸುತ್ತಿದೆ ಜಗವನ್ನು

ಪ್ರೀತಿಯನು ತುಂಬಿ ತೊನೆವ ಬಾಲದ ಕಟಾವಿಗಾಗಿ
ಕಠಾರಿಯ ಹರಿತಗೊಳಿಸುತ್ತಿದ್ದಾನೆ ಯಜಮಾನ

'ರಾಜ' 'ರಾಣಿ' ಎಂದು ಹೆಸರಿಡೋಣವೆಂದರೆ
'ಖಿತ್ಮೀರ್'* ಎಂದು ಹೆಸರಿಡೋಣವೆಂದರೆ
ಕವಿಯ ಮನೆಯಲ್ಲಿ ಕಂತ್ರಿನಾಯಿಗಳು ಬಲು ಅಪರೂಪ

ಕಾಯುವ ಮನೆಯೊಳಗೆ ಕೋಣೆಗಳೆಷ್ಟಿವೆಯೋ ತಿಳಿದಿಲ್ಲ
ಗೋಡೆಗಳೇ ಇಲ್ಲದ ಮೇಲೆ ಜಗತ್ತು ಎಷ್ಟು ದೊಡ್ಡ ಮನೆ

ಬೀದಿಬದಿಯ ಮಲ ತಿಂದರೂ ಗಬ್ಬೆದ್ದು ನಾರುವುದಿಲ್ಲ ಪ್ರೀತಿ
ಬೀದಿಯ ಬಲ್ಲವರು ಲೋಕ ಆಳಬಲ್ಲರು.
*

ಕಾಜೂರು ಸತೀಶ್


*ಖಿತ್ಮೀರ್ - ಖುರಾನಿನಲ್ಲಿ ಸ್ವರ್ಗ ಪ್ರವೇಶ ಪಡೆದ ನಾಯಿ

Saturday, October 12, 2024

ಜಿಗಣೆ


ಸಾ ಸಾ ಇದೇನು ಸಾ ಬೆರಳಿಗಂಟಿಕೊಂಡಿದ್ದು
ಚೂರೂ ನೋವು ಆಗದ ಹಾಗೆ ರಕ್ತಹೀರಿಕೊಂಡಿದ್ದು

ಸಾ ಸಾ ಇದ್ಯಾಕೆ ಸಾ ಬೆರಳ ತಿನ್ನೋದಿಲ್ಲ ಇದು
ಬರೀ ರಕ್ತ ಕುಡ್ಕಂಡಿದ್ರೆ ಬದ್ಕೋದ್ಹೇಗೆ ಹೇಳಿ ಇದು

ಸಾ ಸಾ ಇದೆಲ್ಲಿ ಸಾ ರಾತ್ರಿಯಲ್ಲಿ ಮಲ್ಗೋದು
ಚಳಿಚಳಿ ಆಗಲ್ವೇನು ಮಳೆಗಾಲ ಅಲ್ವಾ ಇದು

ಸಾ ಸಾ ಅದ್ಯಾಕೆ ಸಾ ಇಲ್ಲೀತನಕ ಬಂದಿದ್ದು
ಮನೆಕಟ್ಟೋ ಯೋಚ್ನೆ ಬಂತಾ ಅದ್ಕೂ ಇಲ್ಲಿಗೆ ಬಂದು.

*
ಕಾಜೂರು ಸತೀಶ್

ಆ ಹುಡುಗ

ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.)

ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತರನ್ನು ಮತ್ತೊಮ್ಮೆ ವೇದಿಕೆಯಲ್ಲಿ ಹಾಡಿಸುತ್ತಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ವಿರಾಜಪೇಟೆಯ ಹುಡುಗನೊಬ್ಬ 'ನೀಲಗಗನದೊಳು ಮೇಘಗಳಾ..' ಗೀತೆಯನ್ನು ಅದ್ಭುತವಾಗಿ ಹಾಡಿದ(ಅವನ ಬಲಗೈ ಮುರಿದಿತ್ತು, ಅದನ್ನು ಹೊಟ್ಟೆಗೆ ಆತುಕೊಂಡೇ ಹಾಡಿದ್ದ).

ಅಷ್ಟು ಗಾಢವಾಗಿ ಅವನು ನನ್ನನ್ನು ಕಲಕಿದ್ದ!

ಆಮೇಲೆ ಅವನು ಎಲ್ಲಾದರೂ ಸಿಗುತ್ತಾನೆಯೇ ಎಂದು ಕಾಯುತ್ತಿದ್ದೆ; ಹಲವು ವೇದಿಕೆಗಳಲ್ಲಿ ಹುಡುಕುತ್ತಿದ್ದೆ.


ಮೊನ್ನೆ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಅದೇ ಹುಡುಗನನ್ನು ಹೋಲುವ ವ್ಯಕ್ತಿಯೊಬ್ಬರು ಬಂದು ತಮ್ಮ ಸಂಗೀತ ಯಾನದ ಜಾಡುಗಳನ್ನು ಭಾವುಕವಾಗಿ ನೆನಪಿಸಿಕೊಳ್ಳುತ್ತಿದ್ದರು! ನನ್ನ ನೆನಪುಗಳಲ್ಲಿ ಬಾಳುತ್ತಿರುವ ಆ ಹುಡುಗ ಇವರೇ ಆಗಿದ್ದರೆ, ಈ ನೆನಪಿನಿಂದ ಬಿಡುಗಡೆಗೊಂಡು ಕೃತಾರ್ಥನಾಗುತ್ತೇನೆ!
*
ಹೀಗೆ ಬರೆದು ಗೆಳೆಯ ರಂಜಿತ್ ಕವಲಪಾರ ಅವರಿಗೆ ಕಳಿಸಿದ್ದೆ. ಅವರು ಅದನ್ನು ನಾನು ಅಂದುಕೊಂಡಿದ್ದ ಸಂಗೀತ ನಿರ್ದೇಶಕರ ತಾಯಿಯೊಂದಿಗೆ ಚರ್ಚಿಸಿ 'ಅವರ ತಾಯಿಯೊಡನೆ ಈಗ ಮಾತನಾಡಿದೆ. ಆ ಹುಡುಗ ಚರಣ್ ಅವರು ಅಲ್ಲ... ಹುಡುಕಾಟ ಮುಂದುವರೆಯಲಿ..' ಎಂದು ಸಂದೇಶ ಕಳುಹಿಸಿದರು!

ಆ ಹುಡುಗನಿಗೂ ಈ ಸಂಗೀತ ನಿರ್ದೇಶಕರಿಗೂ ಹೆಚ್ಚು ತಾಳೆಹೊಂದುತ್ತದಾದ್ದರಿಂದ ಮತ್ತೊಂದು ಸಂದೇಶ ಎಸೆದೆ - 'ಉಳಿದದ್ದು ಮರೆತಿರಬಹುದು. ಕೈ ಮುರಿದಿದ್ದು ನೆನಪಿನಲ್ಲಿರುತ್ತೆ' .



ಈ ದಿನ ರಂಜಿತ್ ಕಡೆಯಿಂದ ಮತ್ತೊಂದು ಸಂದೇಶ : ' ನೀವು ಹುಡುಕುತ್ತಿದ್ದ ವ್ಯಕ್ತಿ ಇವರೇ!' ಹೀಗೆನ್ನುತ್ತಾ ಆ ಹುಡುಗನೆಂಬೋ ಪ್ರತಿಭಾವಂತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಅಮ್ಮನ ದೂರವಾಣಿ ಸಂಖ್ಯೆ ನೀಡಿ ಮಾತನಾಡಿ ಎಂದರು.


'ಅವನ ಕೈ ಮುರಿದಿಲ್ಲ' ಎಂದರಂತೆ ಅವರ ಅಮ್ಮ. ಖಚಿತಪಡಿಸಿಕೊಳ್ಳಲು ಮಗನನ್ನೇ ಕೇಳಿದರಂತೆ. ಮಗ ' ನಾನೇ ಅವನು' ಎಂದರಂತೆ.

ಈಗ ಮಾತನಾಡಿದೆ. ಚರಣ್ ರಾಜ್ ( ಇಲ್ಲಿ ಕ್ಲಿಕ್ಕಿಸಿ) ಅವರೊಂದಿಗೂ!

ಇನ್ನು , ಎರಡು ದಶಕಗಳಿಂದ ಜೊತೆಗಿದ್ದ ಆ ನೆನಪುಗಳನ್ನು ಬಿಡುಗಡೆಗೊಳಿಸುವೆ. ಅದೇ ಬುತ್ತಿಯಲ್ಲಿ ಚರಣ್ ರಾಜ್ ಅವರ ಸಂಗೀತಯಾನದ ದಾರಿಗಳನ್ನು ಮತ್ತದರ ನೆನಪುಗಳನ್ನು ತುಂಬಿಕೊಳ್ಳುವೆ.
*
ಕಾಜೂರು ಸತೀಶ್


Saturday, October 5, 2024

ಸಾವು

ಮಗು ತಪ್ಪಿಸಿಕೊಂಡಿತ್ತು.

ಶವಾಗಾರದಿಂದ ಕರೆ ಬಂದಿತು:
'ಇದು ನಿಮ್ಮ ಮಗುವನ್ನೇ ಹೋಲುತ್ತದೆ, ಬಂದು ಪರೀಕ್ಷಿಸಿಕೊಳ್ಳಿ '

ರಾತ್ರಿಯಿಡೀ ಅತ್ತು ಬೆಳಿಗ್ಗೆ ಅಲ್ಲಿಗೆ ಹೋಗಿ ಮಗುವನ್ನು ನೋಡಿದ ದಂಪತಿ ' ಸದ್ಯ ಇದು ನಮ್ಮದಲ್ಲ ' ಎಂದು ನಗುತ್ತಾ ಹಿಂತಿರುಗಿದರು.
*

ಕಾಜೂರು ಸತೀಶ್