ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 29, 2021

ಎಷ್ಟು ಸುಖಿ ನೀನು ಕವಿತೆಯೇ

ಎಷ್ಟು ಸುಖಿ ನೀನು ಕವಿತೆಯೇ

ನೋಡಲ್ಲಿ ಮರ 
ನೋಡಲ್ಲಿ ಹಕ್ಕಿ
ನೋಡಲ್ಲಿ ನೆಲ
ನೋಡಲ್ಲಿ ಬಾನು
ನೋಡಿಲ್ಲಿ ನಾನು
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಮನೆ
ನೋಡೀ ಬಿಸಿಲು
ನೋಡೀ ಮಳೆ
ನೋಡೀ ಮಾಳಿಗೆ
ನೋಡೀ ಗಾಳಿ
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಹೃದಯ
ನೋಡೀ  ಮೆದುಳು 
ನೋಡೀ ರಕುತ
ನೋಡೀ ಬೆವರು
ನೋಡೀ ಕಣ್ಣು
ಎಷ್ಟು ಸುಖಿ ನೀನು ಕವಿತೆಯೇ

ನೋಡು ಈ ಜನನ
ನೋಡು ಈ ಮರಣ
ಹುಟ್ಟದ ಸಾಯದ
ಕಾಣದ ಕೇಳದ
ಇರುವ ಬರೀ ಇರುವ 
ಎಷ್ಟು ಸುಖಿ ನೀನು ಕವಿತೆಯೇ
*


ಕಾಜೂರು ಸತೀಶ್ 

ಯುದ್ಧ


ಗಡಿಯಲ್ಲಿ ಯುದ್ಧ ನಡೆಯುತ್ತಿತ್ತು.

ಬಂಕರ್ ನಲ್ಲಿ ಬಿದ್ದಿದ್ದ ಆಹಾರದ ತುಣುಕೊಂದನ್ನು ಎತ್ತಿಕೊಳ್ಳಲು ಇರುವೆಗಳು ಗಡಿದಾಟಿ ಸಾಲುಸಾಲಾಗಿ ಬರತೊಡಗಿದವು.
*

ಕಾಜೂರು ಸತೀಶ್ 

Wednesday, July 28, 2021

ಸಾವು

ಆ ದಿನ ಸಾಯಬೇಕೆಂದು ನಿರ್ಧರಿಸಿದ್ದ.

ಒಂದು ಉಪನ್ಯಾಸಕ್ಕೆ ಆಹ್ವಾನ ಬಂದಿತ್ತು. ಹಾಡಿಯ ಯುವಕರಿಗೆ 'ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ?' ಎಂಬ ವಿಷಯದ ಕುರಿತು ಉಪನ್ಯಾಸ ಕೊಡಬೇಕಿತ್ತು.

ರೋಮಗಳು ನಿಮಿರಿ ನಿಲ್ಲುವ ಹಾಗೆ ಮಾತನಾಡಿದ. ಯುವಕರು ರೋಮಾಂಚನಗೊಂಡರು. ಅವರೊಳಗೆ ಬದುಕುವ ಛಲ ಹುಟ್ಟಿತು.ಅವರ ಕನಸುಗಳು ಗರಿಗೆದರಿದವು.

ಮಾತಿನ ವೀಡಿಯೊ ವೈರಲ್ ಆಯಿತು. ಅವನಿಗೆ ಅದನ್ನು ನೋಡುವ ಮನಸ್ಸಾಗಲಿಲ್ಲ.

ಮನೆಗೆ ಬಂದು ಕೊರಳಿಗೆ ಹಗ್ಗ ಕಟ್ಟಿ ಸತ್ತ. ಸಾಯುವ ಮುನ್ನ ಬರೆದ: ' ಬದುಕುವುದಕ್ಕಿಂತಲೂ ಸಾಯುವಾಗ ಹೆಚ್ಚಿನ ಆತ್ಮವಿಶ್ವಾಸ ಬೇಕು'.

*


ಕಾಜೂರು ಸತೀಶ್

Tuesday, July 27, 2021

ನೀವೂ ದೇಶಭಕ್ತರೇ?!

ನಿಜವಾದ ದೇಶಭಕ್ತಿಯುಳ್ಳವರು:

- ಲಂಚ ತೆಗೆದುಕೊಳ್ಳುವುದಿಲ್ಲ; ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ.

- ಸರ್ಕಾರಿ/ಸಮುದಾಯದ ಹಣ/ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ.

- ತಮ್ಮ ಊರು, ಜಿಲ್ಲೆ, ರಾಜ್ಯ, ದೇಶವನ್ನು ಪ್ರೀತಿಸುತ್ತಾರೆ. ಪ್ರಗತಿಯನ್ನು ಮೆಚ್ಚುತ್ತಾರೆ. ದೇಶಕ್ಕೆ ಸಂಭವಿಸುವ ಆಪತ್ತು/ನಷ್ಟಗಳಿಗೆ ಮರುಗುತ್ತಾರೆ. ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ.

- ತಮ್ಮ ಭಾಷೆಯ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ಇತರ ಭಾಷೆಗಳನ್ನೂ ಸಹಿಸಿಕೊಳ್ಳುತ್ತಾರೆ.

- ಈ ನೆಲದಲ್ಲಿರುವ ಎಲ್ಲರನ್ನೂ ತರತಮಗಳಿಲ್ಲದೆ ಪ್ರೀತಿಸುತ್ತಾರೆ.

- ಸಾರ್ವಜನಿಕ (ಸಂವಿಧಾನ)ನಿಯಮಗಳನ್ನು ಪಾಲಿಸುತ್ತಾರೆ.

- ಯಾವುದೇ ಪಕ್ಷದ ಪ್ರಚಾರಕರಾಗಿರುವುದಿಲ್ಲ

- ಒಳ್ಳೆಯದನ್ನು ಮೆಚ್ಚುವ, ಅನ್ಯಾಯವನ್ನು ಪ್ರಶ್ನಿಸುವ ಗುಣವುಳ್ಳವರಾಗಿರುತ್ತಾರೆ.

- ಪರಿಸರವನ್ನು ಪ್ರೀತಿಸುತ್ತಾರೆ. ಮಾಲಿನ್ಯ ಉಂಟುಮಾಡುವುದಿಲ್ಲ.

- ಅಸಮಾನತೆಯನ್ನು ವಿರೋಧಿಸುತ್ತಾರೆ

- ಒಳ್ಳೆಯ ವ್ಯಕ್ತಿಗೆ /ಕಡಿಮೆ ಭ್ರಷ್ಟರಾದವರಿಗೆ ಮತ ನೀಡುತ್ತಾರೆ. ಹಣ/ಹೆಂಡ ಪಡೆಯುವುದಿಲ್ಲ/ಹಂಚುವುದಿಲ್ಲ

- ಸಮಯಪ್ರಜ್ಞೆ ಹೊಂದಿರುತ್ತಾರೆ.

- ಸೋಮಾರಿಗಳಾಗಿರುವುದಿಲ್ಲ.

- ಜನಸಾಮಾನ್ಯರನ್ನು ಹಿಂಸಿಸುವುದಿಲ್ಲ.

- ಕನಿಷ್ಟ ಒಬ್ಬ ಪ್ರಾಮಾಣಿಕನಿಂದ ಒಳ್ಳೆಯ ಮಾತನ್ನು ಆಡಿಸಿಕೊಂಡಿರುತ್ತಾರೆ.

- ಕೇಳಿ, ಬೇಡಿ, ಬೆದರಿಸಿ ಸನ್ಮಾನ ಪಡೆದುಕೊಳ್ಳುವುದಿಲ್ಲ.

- ಸುಳ್ಳನ್ನು ಸತ್ಯ ಎಂದು ಹಬ್ಬಿಸುವುದಿಲ್ಲ.


ಹೇಳಿ, ನಾನೂ ನೀವೂ ದೇಶಭಕ್ತರೇ?
*


ಕಾಜೂರು ಸತೀಶ್ 


Sunday, July 11, 2021

ಲೆಕ್ಕ

ಮೀನುಗಾರರಿಗೆ ಹೊಳೆಯಲ್ಲಿರುವ ಮೀನುಗಳನ್ನು ಎಣಿಸಲು ತಿಳಿಸಲಾಯಿತು.

'ನಾವು ಮೀನು ಹಿಡಿಯುವವರು, ಎಣಿಸುವವರಲ್ಲ' ಎಂದಾಗ 'ಶಿಕ್ಷೆ ನೀಡಲಾಗುವುದು' ಎಂದು ಭಯ ಹುಟ್ಟಿಸಲಾಯಿತು.

ಎಚ್ಚರದಿಂದ ಎಣಿಸಿದ ಒಬ್ಬ ಮೀನುಗಾರ ತನ್ನ ಲೆಕ್ಕವನ್ನು ಸ್ವಲ್ಪ ತಡವಾಗಿ ಒಪ್ಪಿಸಿದನು.

ಏನೂ ಎಣಿಸದ ಮೀನುಗಾರನೊಬ್ಬ 'ಇಷ್ಟು ಮೀನುಗಳಿವೆ' ಎಂದು ಲೆಕ್ಕ ಒಪ್ಪಿಸಿದನು.

ಹೀಗೆ ಹಲವರು ಸುಳ್ಳು ಲೆಕ್ಕ ಕೊಟ್ಟರು.
*
ಹೆಚ್ಚು ಲೆಕ್ಕ ನೀಡಿದ ಮೀನುಗಾರರಿಂದಾಗಿ ಯಜಮಾನನಿಗೆ ಪ್ರಶಂಸೆಗಳ ಸುರಿಮಳೆಯಾಯಿತು.

ಸನ್ಮಾನ ಸಮಾರಂಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆ ನೀಡಿದ ಮೀನುಗಾರರನ್ನು ಯಜಮಾನನು ಬಾಯ್ತುಂಬ ಹೊಗಳಿದನು.
*

ಕಾಜೂರು ಸತೀಶ್ 

ಎಲೆ, ಹಕ್ಕಿ ಮತ್ತು ನಾನು


ನಾನು ಎಲೆಯ ಮಗು

ಅದು ನನ್ನ ಮಗು

ಪರಸ್ಪರ ಉಸಿರು ಉಸಿರು ಬೆರೆತು ಹುಟ್ಟಿದ್ದು


ಹಕ್ಕಿಯೊಂದು ದಿನ ಹಾರಿಬಂದು

ಎಲೆಯ ಮೈಗೆ ಮೈತಾಕಿಸಿತು

ಪುಳಕಗೊಂಡ ಎಲೆಗೆ ಸತ್ತು ಹಾರುವ ತವಕ


ಸಾವು ಹುಟ್ಟಿದ ದಿನ

ಎಂದೋ ಹಕ್ಕಿ ಹಾರಿದ ದಾರಿಯಲ್ಲಿ

ಹಾರಿತು ಎಲೆ ಸಂಭ್ರಮದಿಂದ

ತನ್ನುಸಿರು ನನ್ನುಸಿರು ಹಕ್ಕಿಯುಸಿರು ಬೆರೆತ

ಗೆರೆಯಿರದ ದಾರಿಯಲ್ಲಿ.
*



ಕಾಜೂರು ಸತೀಶ್ 

ಚುನಾವಣೆ

ರಂಗನು ಚುನಾವಣೆಗೆ ನಿಂತನು. ಹೆಚ್ಚಿನ ಜನರಿಗೆ ಅವನ ಪರಿಚಯ ಇರಲಿಲ್ಲ. ಆದರೆ, ಅವನು 'ಅಕ್ಷಯ ಪಾತ್ರೆ' ಗುರುತಿನ ಪಕ್ಷವನ್ನು ಪ್ರತಿನಿಧಿಸಿದ ಕಾರಣದಿಂದಾಗಿ ಚುನಾವಣೆಯಲ್ಲಿ ಜಯಿಸಿದನು.

ಮಾತು ಕೊಟ್ಟಂತೆ ತನ್ನ ಕಾರ್ಯಕರ್ತರಿಗೆ ಸರ್ಕಾರದ ಎಲ್ಲಾ  ಸೌಲಭ್ಯಗಳನ್ನು ಕೊಡಿಸಿದನು. ಕಾರ್ಯಕರ್ತರ ಜೀವನಮಟ್ಟ ಸುಧಾರಿಸಿತು. ಐದು ವರ್ಷಗಳಲ್ಲಿ ರಂಗನ ಸಾಧನೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. 

ರಂಗನು ಶ್ರೀಮಂತನಾದನು. ಅವನ ಗೌರವ ಹೆಚ್ಚಿತು.

ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತನಾಗಿದ್ದ ಒಬ್ಬನಿಗೆ ಸೀಟು ಸಿಕ್ಕಿತು. ಅವನು ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಿದನು. ಅವನ ಮನೆಯವರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು!
*



ಕಾಜೂರು ಸತೀಶ್ 

Thursday, July 1, 2021

ಮಚ್ಚಾಡೋ ಸರ್

ಅಕ್ಟೋಬರ್ 10,2003. ಮೊದಲ ದಿನದ ತರಗತಿ. ಭಾಗ್ಯಲಕ್ಷ್ಮಿ ಮೇಡಂ ನಮ್ಮನ್ನು ಸ್ವಾಗತಿಸಿ ಹಿರಿಯ ಉಪನ್ಯಾಸಕರೊಬ್ಬರಿಗೆ ಮಾತನಾಡಲು ತಿಳಿಸಿದರು. ಎದ್ದು ನಿಂತು ಮಾತನಾಡತೊಡಗಿದ ಅವರು- " ವಿದ್ಯಾರ್ಥಿಗಳಾದವರು ಶಿಕ್ಷಕರ ಒಳಗಿರುವ ಜ್ಞಾನದ ಖಜಾನೆಯನ್ನು ತೆರೆಸಬೇಕು. ಅವರ ಜ್ಞಾನ ಹೊರಬರಬೇಕೆಂದರೆ ನಿಮ್ಮ ತೊಡಗಿಸಿಕೊಳ್ಳುವಿಕೆ ಅಷ್ಟು ಮುಖ್ಯವಾಗುತ್ತದೆ" ಎಂದರು. ಆ ದಿನ ಸ್ವಾಗತ ಮಾಡಿದ ಸೌಮ್ಯ ಶೆಟ್ಟಿ, ವಂದನೆಗಳನ್ನು ಅರ್ಪಿಸಿದ ಜಾನ್ ಪಾವ್ಲ್ ಡಿಸೋಜ ಅವರಿಂದ ಕೇಳಿಸಿಕೊಂಡ ಆ ಹೆಸರು- ಪೆರಿಗ್ರಿನ್ ಎಸ್ ಮಚ್ಚಾಡೋ.
*
ಕೂಡಿಗೆಯಲ್ಲಿದ್ದರು. ನಿತ್ಯ ಬ್ಯಾಗು ನೇತುಹಾಕಿಕೊಂಡು ನಡೆದುಬರುತ್ತಿದ್ದಾಗ ನಾನು ಸಿಗುತ್ತಿದ್ದೆ. 'ನಮಸ್ತೆ ಸರ್'- ಅಷ್ಟೆ. (ಎಷ್ಟೋ ಸಲ ಅವರ ct100 ಬೈಕಿನಲ್ಲಿ)


ಒಮ್ಮೆ 'ಯೌವನ' ಪದದ ಮೊದಲ ಅಕ್ಷರದ ಔತ್ವವನ್ನು ಕೆಳಗೆ ಇಳಿಸಿದ್ದೆ. 'ಏನಿದು' ಎಂದು ಗದರಿಸಿದರು. 'ಯೌವನ' ಎಂದೆ. 'ಅದು ಯೌವನ ಅಲ್ಲ ಯಾವನ' ಎಂದರು. ಔತ್ವವನ್ನು ಕೆಳಗಿನವರೆಗೆ ಇಳಿಸಬಾರದೆಂದು ಅಂದು ಕಲಿತುಕೊಂಡೆ.
*
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿ(ಪ್ರಭಾರ) ಹುದ್ದೆಯಲ್ಲಿದ್ದರು. ಘಟನೆಯೊಂದು ಅವರನ್ನು ಜಿಲ್ಲೆಯ ಗಡಿದಾಟಿಸಿತು. ಮಂಗಳೂರಿನ ಸಿಟಿಇನಲ್ಲಿದ್ದಾಗ ಮತ್ತೆ ಮೇಷ್ಟ್ರಾಗುವ ಭಾಗ್ಯ ಒದಗಿತು.

ಆಗ ಕೊಂಕಣಿಯಲ್ಲಿ MA ಮಾಡೋಣ ಎಂದು ಗೆಳೆಯನಿಗೆ ಹೇಳಿದರು. ಒಂದು ದೀರ್ಘಾವಧಿಯಲ್ಲಿ ತಪ್ಪಿಹೋಗಿದ್ದ ಅಧ್ಯಯನದಲ್ಲಿ ಜೀವಂತಿಕೆಯನ್ನು ಕಾಯ್ದುಕೊಂಡರು. ಅಲ್ಲಿದ್ದಾಗಲೇ ಶಿವಮೊಗ್ಗದ ಡಿಡಿಪಿಐ ಆಗುವ ಭಾಗ್ಯ ಒದಗಿತು. ಅಲ್ಲಿ , ಅವರ ಕಚೇರಿಗೆ ಹೊಸರೂಪವನ್ನು ನೀಡಿದರು(ನಮ್ಮ ಕಚೇರಿಗೆ ಬಂದಾಗ ಆ ವೀಡಿಯೊ ತೋರಿಸಿದ್ದರು). ಕೊಡಗಿಗೆ ಬಂದಾಗಲೂ ಮಡಿಕೇರಿಯ ಡಿಡಿಪಿಐ ಕಚೇರಿಗೆ ಕಲೆಯ ಚೆಲುವನ್ನು ಮೂಡಿಸಲು ಕಾರಣಕರ್ತರಾದರು.


ಯೋಜನೆಗಳನ್ನು ರೂಪಿಸಿ ವಿಶ್ಲೇಷಿಸುವುದರಲ್ಲಿ ಅವರು ಪ್ರವೀಣರು. ಶಿಸ್ತು , ಕೆಲಸವನ್ನು ತೆಗೆದುಕೊಳ್ಳುವ ಜಾಣ್ಮೆ, ಖಡಕ್ ಗುಣ, ಕೆಲಸ ಆಗದಿದ್ದಲ್ಲಿ ಸಿಡಿದೇಳುವ ಪ್ರವೃತ್ತಿ ,ಮರುಕ್ಷಣದಲ್ಲೇ ಶಾಂತರಾಗುವ ಗುಣ.. ಮಚ್ಚಾಡೋ ಸರ್ ಅವರದು. ಅವರ ಅಧೀನದಲ್ಲಿ ಬರುವ ಎಂತಹ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಷ್ಟು ನಿಪುಣರು.

*
ನಿಮಿಷಕ್ಕೊಂದು ಮೊಬೈಲ್ ಕರೆ, whatsappನಲ್ಲಿ ನಿಮಿಷಕ್ಕೊಂದು ಬರುವ ಕೆಲಸಗಳ ಪಟ್ಟಿ- ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಚ್ಚಾಡೋ ಸರ್ ಜೂನ್ 30ಕ್ಕೆ ನಿವೃತ್ತರಾಗಿದ್ದಾರೆ.

ಅವರಿದ್ದಾಗ ಏನೋ ಒಂದು ಅವ್ಯಕ್ತ ಧೈರ್ಯ ನಮಗೆ. ಅವರ ಹಾಗೆ ಕೆಲಸವನ್ನು ನಿಭಾಯಿಸುವ ವ್ಯಕ್ತಿ ಆ ಸ್ಥಾನಕ್ಕೆ ಬರುವುದು ಸಂದೇಹ. ಅನೇಕ ಕಹಿ ಅನುಭವಗಳ ನಡುವೆಯೂ ಈ ಜಿಲ್ಲೆಯನ್ನು ಪ್ರೀತಿಸಿದವರು ಅವರು.
*
ಬ್ಯಾಡ್ಮಿಂಟನ್ ,ವಾಲಿಬಾಲ್ ಕ್ರೀಡೆಗಳನ್ನು ಚೆನ್ನಾಗಿ ಆಡುತ್ತಿದ್ದರು. ಅವರೊಡನೆ ಆಟವಾಡುತ್ತಿದ್ದೆವು. ನಿವೃತ್ತಿಯ ಜೀವನದಲ್ಲಿ ಅವರ ಪ್ರವೃತ್ತಿಗಳನ್ನು ಮತ್ತೆ ರೂಢಿಸಿಕೊಂಡರೆ ಬದುಕು ಸುಖಕರವಾಗುತ್ತದೆ.

ಶುಭಾಶಯಗಳು ಸರ್.
*
ಕಾಜೂರು ಸತೀಶ್