ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 26, 2021

ಆಚರಣೆಗಳ ಸುತ್ತ..

ರಾಷ್ಟ್ರೀಯ ಹಬ್ಬಗಳು!

ಆಚರಣೆಯ ಹಿಂದಿನ ದಿನ ಕೆಲವು ನೌಕರರಿಗೆ ಒತ್ತಡ ಹೆಚ್ಚಿ ನಿದ್ದೆ ಹತ್ತುವುದಿಲ್ಲ. ಕೆಲವರು ನನ್ನನ್ನು ಆಹ್ವಾನಿಸಿಲ್ಲವಲ್ಲ, ಅವರಿಗೆ ಒಂದು ಪಾಠ ಕಲಿಸಬೇಕು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿರುತ್ತಾರೆ. ಕೆಲವರು ಮರುದಿನದ ಕಾರ್ಯಕ್ರಮಕ್ಕೆ ಧರಿಸಬೇಕಾದ ಗರಿಗರಿ ವಸ್ತ್ರದ ಕುರಿತು ಯೋಚಿಸತೊಡಗುತ್ತಾರೆ.

ನಿರೂಪಕ/ಕಿ ಅಲ್ಲಿ ಇಲ್ಲಿ ಬಳಸಿ ಎಸೆದ ಸಾಲುಗಳನ್ನು ಹೆಕ್ಕಿ ಅರಚಲು ತೊಡಗುತ್ತಾನೆ/ಳೆ. ಭಾಷಣಗಳು ಆರಂಭವಾಗುತ್ತವೆ. ಕುರ್ಚಿ ಎತ್ತಲು ಒಂದಷ್ಟು ಜನರಿರುತ್ತಾರೆ. ಗಣ್ಯರು ತಿಂದುಳಿಸಿದ ತಟ್ಟೆಗಳನ್ನು ಎತ್ತಲು ಮತ್ತೊಂದಿಷ್ಟು ಜನರಿರುತ್ತಾರೆ.

ಪಕ್ಕದಲ್ಲೇ ಒಂದು ಕಾಮಗಾರಿ ನಡೆಯುತ್ತಿರುತ್ತದೆ. ಬಿಹಾರಿಗಳು ಅಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರಲ್ಲೊಂದು ಪುಟ್ಟ ಮಗು ತನ್ನ ಹಾಗೇ ಇರುವ ಸಣ್ಣ ಸಣ್ಣ ಇಟ್ಟಿಗೆಗಳನ್ನು ಹೊತ್ತುಕೊಂಡು ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಿದ್ಧತೆ ನಡೆಸುತ್ತಿರುತ್ತದೆ. ಮತ್ತೊಂದು ಮಗು ಚಡ್ಡಿಯಲ್ಲಿ ಕಕ್ಕ ಮಾಡಿಕೊಂಡು ಅಮ್ಮ ದೂರದಲ್ಲಿ ಇರುವುದನ್ನೂ, ಕೆಲಸದಲ್ಲಿ ತಲ್ಲೀನರಾಗಿರುವುದನ್ನೂ ಗಮನಿಸಿ ಸುಮ್ಮನೆ ಮಲಗುತ್ತದೆ. ನೊಣಗಳು ಆ ಮಗುವನ್ನು ಮಾತನಾಡಿಸಲು ಆಗಾಗ ಬಂದುಹೋಗುತ್ತವೆ.

ಎಲ್ಲರೂ ಅಭಿವೃದ್ಧಿಯ ಕುರಿತು, ದೇಶಪ್ರೇಮದ ಕುರಿತು, ಸಮಾನತೆಯ ಕುರಿತು, ಸ್ವಾತಂತ್ರ್ಯದ ಕುರಿತು, ಪ್ರಾಮಾಣಿಕತೆಯ ಕುರಿತು, ಗಣ್ಯರ ಕುರಿತು ಮಾತನಾಡುತ್ತಿರುತ್ತಾರೆ. ಅವರು ಏದುಸಿರಿನಲ್ಲಿ ಭಾಷಣ ಮಾಡುವಾಗ ಟ್ರ್ಯಾಕ್ಟರೊಂದು ಅವರ ಶಬ್ದಗಳನ್ನು ನುಂಗಿ ಜೋರು ಸದ್ದುಮಾಡಿಕೊಂಡು ಮುನ್ನುಗ್ಗುತ್ತದೆ. ಅದರ ಟ್ರ್ಯಾಲಿಯಲ್ಲಿ ಒಬ್ಬ ಹುಡುಗ ಕಂಬಿಗೆ ನೇತುಹಾಕಿಕೊಂಡು ಮೈಕುಲುಕಿಸುತ್ತಾ ಟ್ರ್ಯಾಕ್ಟರ್ ಸಾಗಿದ ದಾರಿಯಲ್ಲಿ ಕ್ರಮಿಸುತ್ತಾನೆ. ಸಭಿಕರೆಲ್ಲರೂ ಅವನನ್ನೇ ನೋಡತೊಡಗುತ್ತಾರೆ. ಅವನಿಗೆ ಖುಷಿಯಾಗುತ್ತದೆ.

ಸ್ವಾಗತ ಹೇಳಬೇಕಾದ ಜಾಗದಲ್ಲಿ ವಂದನೆಗಳು ಎಂದವರಿಗೆ ಹಿಗ್ಗಾಮುಗ್ಗ ಬೈಗುಳಗಳು ಸಿಗುತ್ತವೆ. ಉತ್ಸವವನ್ನು ಉಸ್ತವ ಎಂದವರೂ, ದೇಶವನ್ನು ದೇಸ ಎಂದವರೂ, ಭಾಷೆಯನ್ನು ಬಾಸೆ ಎಂದವರೂ ಬೈಯ್ಯಲಿಕ್ಕೆ ಜೊತೆಗೂಡುತ್ತಾರೆ.

ಅನತಿ ದೂರದಲ್ಲಿ ಆಂಬುಲೆನ್ಸ್ ನ ಸದ್ದು ಕೇಳುತ್ತದೆ. ಕಿವಿಗೊಟ್ಟು ಕೇಳಿದವರಿಗೆ 'ಇಲ್ಲಿ ಆಗುವುದಿಲ್ಲ ....ಗೆ ಕರೆದುಕೊಂಡು ಹೋಗಿ' ಎಂಬ ದನಿ ಕೇಳಿಸುತ್ತದೆ.

ತಪ್ಪು ತಪ್ಪು ಮಾತನಾಡುವ ಗಣ್ಯರನ್ನು ನೋಡಿ ಕುರ್ಚಿ ಎತ್ತಲು ಬಂದ , ಫೈಲ್ ಹಿಡಿದುಕೊಳ್ಳಲು ಬಂದ ತರುಣನಿಗೆ ತನ್ನ ಬದುಕಿನ ಕುರಿತು ಜಿಗುಪ್ಸೆ ಹುಟ್ಟುತ್ತದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಆಶ್ರಿತರ ನೆನಪು ಅಲೆಯಲೆಯಾಗಿ ತೇಲಿಬರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಓ ನನ್ನ ದೇಶಬಾಂಧವರೇ..' ಹಾಡಿಗೆ ಮೂರ್ನಾಲ್ಕು ಪಲ್ಟಿಹೊಡೆದು ನರ್ತಿಸತೊಡಗುತ್ತಾರೆ. ಜನ ಚಪ್ಪಾಳೆ ತಟ್ಟುತ್ತಾರೆ.

ಮಿಠಾಯಿ ಹಂಚಲಾಗುತ್ತದೆ. ಅದರ ಪ್ಲಾಸ್ಟಿಕ್ ಸಿಪ್ಪೆ ನೆಲದಲ್ಲಿ ಸೂರ್ಯನ ಬೆಳಕಿಗೆ ಲಕಲಕ ಎಂದು ಹೊಳೆಯಲು ಆರಂಭಿಸುತ್ತದೆ.
*


ಕಾಜೂರು ಸತೀಶ್



Sunday, January 24, 2021

ಮನುಷ್ಯರೂ , ಅವರಂಥದ್ದೇ ಮೊಬೈಲ್ ಫೋನುಗಳೂ..

ಒಂದು ಕೆಲಸ ತಲೆಯ ಒಳಗೆ ಮರಿಹಾಕಿ ಅದನ್ನು ಜೀವಂತವಾಗಿರಿಸಲು ಅನ್ನ-ನೀರು ಹುಡುಕುತ್ತಿರುತ್ತೇನೆ. ಅಷ್ಟರಲ್ಲಿ ಮೊಬೈಲು ಅರಚಿಕೊಳ್ಳಲು ಆರಂಭಿಸುತ್ತದೆ. ಅದರ ಕತ್ತು ಹಿಸುಕಿದರೆ whatsapp ಕಂಯ್ಯೋ ಎಂದು ಕೂಗಿಕೊಳ್ಳಲು ಪ್ರಾರಂಭಿಸುತ್ತದೆ. ಅದರ ಮೂತಿ ಚಿವುಟಿದರೆ ಮೆಸೆಂಜರ್, ಎಸ್ಸೆಮ್ಮೆಸ್ಸುಗಳು : 'please call me!'

ಜನ ತಮ್ಮ ಕೆಲಸವನ್ನು ತಾವೇ ಮಾಡುವುದಿಲ್ಲ. ಅದನ್ನು ಇನ್ನೊಬ್ಬರ ತಲೆಗೆ ಕಟ್ಟಿ ತಾವು ಸುಖವಾಗಿರಲು ಬಯಸುತ್ತಾರೆ. ಈ ವಿಲಕ್ಷಣ ಪ್ರವೃತ್ತಿಗೆ ಮೊಬೈಲ್ ಫೋನ್ ಎಂಬ ರಾಕ್ಷಸ ರಕ್ತ ಹೀರುವ ಕೆಲಸವನ್ನು ಮಾಡಿ ಬೆಂಬಲ ನೀಡುತ್ತದೆ.

ಮನುಷ್ಯ ಮತ್ತಷ್ಟೂ ಕ್ರೂರಿಯಾಗುತ್ತಿದ್ದಾನೆ.
*
ಕಾಜೂರು ಸತೀಶ್



ಭತ್ತದ ರಾಶಿಯೂ ಮತ್ತು ನೆನಪಿನ ರಾಶಿಯೂ..

ಶಾಲೆಗೆ ನಡೆದುಹೋಗುತ್ತಿದ್ದಾಗ ದೂರದಲ್ಲಿ ಕಾಣಿಸುತ್ತಿದ್ದ ಅದನ್ನು ನೋಡಿ 'ಅದೇನು?' ಎಂದು ಕೇಳುತ್ತಿದ್ದೆ. 'ಭತ್ತ ರಾಶಿ' ಎನ್ನುತ್ತಿದ್ದಳು ಅಕ್ಕ.


ನಾನು ನಿಜಕ್ಕೂ ಅದು ಭತ್ತದ ರಾಶಿಯೇ ಎಂದುಕೊಂಡಿದ್ದೆ. ನೋಡಲು ಹಾಗೇ ಕಾಣಿಸುತ್ತಿತ್ತು. ಹತ್ತಿ ಉರುಳಾಡಬೇಕೆನಿಸುವಂತಿತ್ತು.
*


ಮೊನ್ನೆ ಯೂಟ್ಯೂಬಿನಲ್ಲಿ ಹುಡುಕಿದರೆ ರಾಶಿ ರಾಶಿ ಏನೇನೇನೋ ಸಂಗತಿಗಳು ಸಿಕ್ಕಿದ್ದರೂ 'ಭತ್ತದ ರಾಶಿ' ಎಂಬ ಗಿರಿಧಾಮ ಮಾತ್ರ ಕಾಣಸಿಗಲಿಲ್ಲ. ಇನ್ಸ್ಟಾಗ್ರಾಂನಲ್ಲೂ.
*


ಜನ ಅವರವರ ಲೋಕದಲ್ಲಿ ತಲ್ಲೀನರಾಗಿರುತ್ತಾರೆ. ಹಣ, ಹೆಂಡ, ಆಸ್ತಿ... ಹೀಗೆ. ಅವರನ್ನು ಕರೆದು ಅವರ ಧ್ಯಾನಕ್ಕೆ ಭಂಗ ತರಲು ನನಗೆ ಇಷ್ಟವಿಲ್ಲ. ಹಾಗಾಗಿ, ಭತ್ತದ ರಾಶಿ ಗಿರಿಧಾಮಕ್ಕೆ ಒಬ್ಬನೇ ಹೊರಡಬೇಕೆಂದು ತೀರ್ಮಾನಿಸಿದ್ದೆ.
*


ನನ್ನನ್ನು ಜೀವಂತವಾಗಿರಿಸುವುದು ಮಾನಸಿಕ ಸಿದ್ಧತೆ. ಹಲವರಿಂದ ವಿವರವನ್ನು ಸಂಗ್ರಹಿಸಿಕೊಂಡಿದ್ದೆ. ಹೊರಡುವಾಗ ಸ್ನೇಹಿತರಾದ ಮಂಜುನಾಥ್  ಮತ್ತು ಸಚಿನ್  ಜೊತೆಯಾಗಿದ್ದರು.


ಪ್ರವಾಸಿಗರಿಗೆ ತೆರೆದುಕೊಳ್ಳದ ಸ್ಥಳವಾದ್ದರಿಂದ ಎಣ್ಣೆಕುಪ್ಪಿಗಳು, ಕುರ್ಕುರೆ , ಸಿಗರೇಟು ,ಪರಾಗು, ಚೈನೀ ಕೈನೀಗಳ ಪ್ಯಾಕೆಟ್ಟುಗಳು ಅಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ಮನುಷ್ಯರನ್ನು ತಾಕಿಸಿಕೊಳ್ಳದ ಭತ್ತದ ರಾಶಿಯು ಆರೋಗ್ಯವನ್ನು ಕಾಪಾಡಿಕೊಂಡಿತ್ತು.


ಎಷ್ಟೆಲ್ಲ ಗುಡ್ಡಗಳನ್ನು ಏರಿದ್ದರೂ, ಬಾಲ್ಯದ ಅದೇನು ಎಂಬ ನನ್ನ ಪ್ರಶ್ನೆ, ಅದು ಹೇಗಿರಬಹುದು ಎಂದು ಕಲ್ಪಿಸಿಕೊಂಡಿದ್ದ ನನ್ನ ಕಲ್ಪನಾಲೋಕ, ಅದನ್ನು ತಲುಪುವ ಮಾರ್ಗದ ಕುರಿತ ನನ್ನ ಜಿಜ್ಞಾಸೆ.. ಎಲ್ಲವೂ ಈಗ ಪರಮಸುಖವೊಂದರ ಅಲೆಗಳಾಗಿ ಆವರಿಸುತ್ತಿವೆ.
*
ಕಾಜೂರು ಸತೀಶ್

Tuesday, January 12, 2021

ಪರಿಚಯ

ಇವತ್ತು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ ನನ್ನ ನೆರೆಮನೆಯವರು ಸಿಕ್ಕರು. ನಾನು ಅವರೊಂದಿಗೆ ಮಾತನಾಡುತ್ತಾ ಬಂದೆ.

'ನಿಮ್ಮ ಮುಖವನ್ನು ಇದುವರೆಗೆ ನಾನು ನೋಡಲೇ ಇಲ್ಲ' ಎಂದರು!

ನಾನು ಹೆಲ್ಮೆಟ್ ಧರಿಸಿದ್ದರಿಂದ ಇವತ್ತು ಕೂಡ ಅವರಿಗೆ ನನ್ನ ಮುಖವನ್ನು ನೋಡಲಾಗಲಿಲ್ಲ!
*


-ಕಾಜೂರು ಸತೀಶ್

Sunday, January 10, 2021

ಚರ್ಚೆ



ಪ್ರಸಿದ್ಧ ಸಾಹಿತಿ ಜ್ಞಾನಾನಂದರು ತಮ್ಮ ಗೆಳೆಯ ಗುಣಶೀಲರನ್ನು ಭೇಟಿಯಾಗಿ ಸಾಮಾಜಿಕ ಅಸಮಾನತೆಯ ಕುರಿತು ಚರ್ಚಿಸಿ ಅದನ್ನು  ಸರ್ಕಾರಕ್ಕೆ ವರದಿ ಮಾಡಲು ನಿರ್ಧರಿಸಿದರು.

ಹೇಳದೇ ಹೋಗಬೇಕೆಂದುಕೊಂಡರೂ ಗುಣಶೀಲರಿದ್ದ ತೋಟದ ಮನೆಯಲ್ಲಿ ಸಿಗಿದುಹಾಕುವ ನಾಯಿಗಳಿದ್ದುದರಿಂದ ಬರುವ ಸುದ್ದಿಯನ್ನು ಮೊದಲೇ ಮುಟ್ಟಿಸಿದರು.

ಗೇಟಿನ ಬಳಿ ಬಂದೊಡನೆ ಡ್ರೈವರ್ ಗೆ ' ಬರುವಾಗ ಕಾಲ್ ಮಾಡ್ತೇನೆ ಸ್ವಿಚ್ ಆಫ್ ಮಾಡ್ಕೋಬೇಡ' ಎಂದು ಹೇಳಿ ಒಳಗೆ ಹೋದರು. ಒಳಗೆ ಅದ್ದೂರಿಯ ಸ್ವಾಗತ ಲಭಿಸಿತು. ಒಬ್ಬರು ಕೆಲಸಗಾರರನ್ನು ಇವರ ಸತ್ಕಾರಕ್ಕೆಂದು ನಿಯೋಜಿಸಲಾಗಿತ್ತು.

ಸ್ವಲ್ಪ ಹೊತ್ತು ಕಳೆದ ಮೇಲೆ ಅವರ ಚರ್ಚೆ ಆರಂಭವಾಯಿತು. ಗೇಟಿನ ಬಳಿ ನಿಂತಿದ್ದ ಡ್ರೈವರ್ ಗೆ ಅದು ಕೇಳಿಸಿದರೂ ಏನೂ ಅರ್ಥವಾಗಲಿಲ್ಲ.

ಮಧ್ಯಾಹ್ನ ಹಸಿವು ಕಾಡತೊಡಗಿದಾಗ ಎಲ್ಲಾದರೂ ಏನಾದರೂ ತಿನ್ನಲು ಸಿಗಬಹುದೇ ಎಂದು ಹುಡುಕಿ ನಡೆದರು ಡ್ರೈವರ್ . 'ಇಲ್ಲಿಂದ ಎಂಟು ಕಿಲೋಮೀಟರ್ ಹೋಗ್ಬೇಕು' ಎಂದರು ಸ್ಥಳೀಯರೊಬ್ಬರು.

ಹಿಂತಿರುಗಿ ಬಂದ ಡ್ರೈವರ್, ಕಾರಿನೊಳಗೆ ಕುಳಿತು ನೀರು ಕುಡಿದು ಕಣ್ಣುಮುಚ್ಚಿ ಮನಸ್ಸಿಗೆ  ನಿದ್ದೆಯನ್ನು ತಂದುಕೊಂಡರು. 

ಚರ್ಚೆ ಮುಗಿದಿರಲಿಲ್ಲ.
*


ಕಾಜೂರು ಸತೀಶ್ 

Friday, January 1, 2021

ಸರ್ವಾಧಿಕಾರಿಯೂ ಮತ್ತು ನಾನೂ

'ಅವ್ರಿದ್ದಾರಲ್ಲಾ ಒಳ್ಳೆಯ ವ್ಯಕ್ತಿ'
ಹಾಗೆಂದು ಅದುವರೆಗೂ ನೋಡದ ಆ ವ್ಯಕ್ತಿಯ ಕುರಿತು ಹಿರಿಯ ಸ್ನೇಹಿತರೊಬ್ಬರು ಪರಿಚಯಿಸಿದರು.

ಅದೇ ದಿನ ಪರಿಚಯವಾಯಿತು.

ಮರುದಿನ ಅವರಿಗೆ ದಾರಿ ತಿಳಿದಿಲ್ಲವೆಂದು ಸ್ವಲ್ಪ ದೂರ ಕ್ರಮಿಸಿ ಅವರಿಗಾಗಿ ಕಾದುನಿಂತು ತಲುಪಬೇಕಾದ ಜಾಗವನ್ನು ತಲುಪಿದೆ.

ಆ ಊರಿನ ಒಬ್ಬರು ಬಂದು ಒಂದು ಸಂದೇಹವನ್ನು ಕೇಳಿದರು. ನಾನು ಪರಿಹಾರವನ್ನು ಸೂಚಿಸಿದೆ. ಕಛೇರಿಯ ಒಳಗೆ ಹೋಗಿದ್ದೇ ತಡ ' ಪಬ್ಲಿಕ್ ಮುಂದೆ ಏನೂ ಹೇಳಬಾರದು' ಎಂದರು ಆ ಸಹೋದ್ಯೋಗಿ.

ಒಂದು ಅರ್ಜಿಗಾಗಿ ಸುಮಾರು ಹೊತ್ತಿನಿಂದ ವ್ಯಕ್ತಿಯೊಬ್ಬರು ಹೊರಗೆ ಕಾಯುತ್ತಾ ಕುಳಿತಿದ್ದರು. ಅದನ್ನು ನೋಡಿಯೂ ನೋಡದ ಹಾಗೆ ಇದ್ದರು ಆ ಸಹೋದ್ಯೋಗಿ.

ಮಾಣಿಕ್ಯ ಸಿಕ್ಕ ___ ರಂತೆ ಕಾಣಿಸಿದರು. ಆದರೆ ನಾನು ತಲೆಕೆಡಿಸಿಕೊಳ್ಳಲಿಲ್ಲ.

ನಡಾವಳಿ ಬರೆಯುವಾಗಲೂ ತಗಾದೆ. ಸಹಿಸಿದೆ.

ಮಧ್ಯಾಹ್ನ ಊಟದ ಸಂದರ್ಭ ಉಂಡ ತಟ್ಟೆಯನ್ನು ಎತ್ತಿಸಲಿಲ್ಲ. ಆಗ ಒಳಗಿನ ಸರ್ವಾಧಿಕಾರಿ ನಾಪತ್ತೆಯಾಗಿದ್ದ!

ಎಲ್ಲವನ್ನೂ ಹೇಳಿ ಮಾಡಿಸುತ್ತಿದ್ದರು. ಕೆಲಸದ ಕ್ಷಣಕ್ಷಣವೂ ಸರ್ವಾಧಿಕಾರಿ!  ಸಂದೇಹ ಪರಿಹರಿಸಲು ಫೋನ್ ಕೊಡಲು ಬಂದ ಸಿಬ್ಬಂದಿಗೆ 'ನಿನಗೆ ನೋಟೀಸ್ ಕೊಡಿಸುತ್ತೇನೆ' ಎಂದು ಭಯ ಹುಟ್ಟಿಸಿದರು. ಮರುಕ್ಷಣವೇ ಉಂಡ ಊಟದ ಹಣವನ್ನು ನೀಡಿ ಒಳಗಿನ ಸರ್ವಾಧಿಕಾರಿಯನ್ನು ಕಳಚಿಕೊಂಡರು.

(ಚಿತ್ರ ಕೃಪೆ- ಗೂಗಲ್)

'ನಾನು ಕೆಲಸ ಹೇಳಬೇಕು ನೀನು ಮಾಡಬೇಕು' ಎಂಬ ಸಿದ್ಧಾಂತದ ಪ್ರತಿಪಾದಕರ ಹಾಗೆ ಇದ್ದರು. ಅದೇ ದಿನ ನನ್ನ ಗೆಳೆಯನಿಗೆ ಕರೆಮಾಡಿ ಇಂತಹ ವಿಚಿತ್ರ ವಿಲಕ್ಷಣ ವ್ಯಕ್ತಿತ್ವದ ಕುರಿತು ಹೇಳಿಕೊಂಡೆ.

ನಿತ್ಯ ಮನೆಯಿಂದ ಊಟ ತೆಗೆದುಕೊಂಡು ಹೋಗುತ್ತಿದ್ದವ ನಾನು. ಅವರೊಂದಿಗೆ ಸಾಥ್ ನೀಡಲು ಅದನ್ನು ಬಿಟ್ಟು ಏನೇನೋ ತಿಂದೆ, ಉಪವಾಸವೂ ಇದ್ದೆ.

ಹೇಳಿದ್ದೆಲ್ಲವನ್ನೂ ಮಾಡಿದೆ. ಹಸಿರು ಬಣ್ಣದಲ್ಲಿ ಸಹಿ ಹಾಕುವುದನ್ನೇ ತನ್ನ ಕಾಯಕವಾಗಿಸಿಕೊಂಡ ಅವರು ನನ್ನ ಈ ಮೃದು ಧೋರಣೆಯನ್ನು ಮತ್ತಷ್ಟೂ ನಿಕೃಷ್ಟವಾಗಿ ಬಳಸಿಕೊಂಡರು. ನಾನು ಸಹಿಸಿದೆ.

ಅಷ್ಟೂ ಸಹಿಸಲಿಲ್ಲವೆಂದರೆ ನಾನು ಓದಿಕೊಂಡ ಗಾಂಧಿ , ಕ್ರಿಸ್ತ, ಅಂಬೇಡ್ಕರ್ ,ಬುದ್ಧರೆಲ್ಲ ಸುಮ್ಮನಿರುವರೇ? ಸಹಿಸಿಕೊಂಡೆ!

ಒಂದು ದಿನ ಏನೂ ತಿಳಿಸದೆ ಕೆಲಸಕ್ಕೆ ಬರಲಿಲ್ಲ. ನನಗೇನೂ ಅನಿಸಲಿಲ್ಲ ಆಗ.

ಇನ್ನೊಮ್ಮೆ ಅಲ್ಲೇ ಕೆಲಸವಿದ್ದುದರಿಂದ ನಾನು ಜೊತೆಸೇರಿ ಮಾಡಬೇಕಾಗಿದ್ದ ಕೆಲಸವನ್ನು ಅವರೇ ಮಾಡಿದ್ದರು.

ಸಿದ್ಧಾಂತದ ಕುರಿತು ಮಾತನಾಡುತ್ತಿದ್ದರು. ಒಂದನ್ನೂ ಪಾಲಿಸದೆ ಇಂತಹ ಸಿದ್ಧಾಂತಗಳಿಗೆ ಅರ್ಥವಿಲ್ಲ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು.

ಸಾರ್ವಜನಿಕರು ಸಂದೇಹ ಕೇಳಿ ಬಂದರೆ ಅದಕ್ಕೆ ಪರಿಹಾರ ನನಗೆ ತಿಳಿದಿದ್ದರೂ ಮಾತನಾಡುವ ಹಾಗಿರಲಿಲ್ಲ. ಅಂಥವರನ್ನು ಹೊರಗೆ wait ಮಾಡಿ ಎನ್ನುತ್ತಿದ್ದರು. ಸಹಿಸಿದೆ!

ಒಬ್ಬರಂತೂ ಮೇಲಿನವರಿಗೆ ದೂರು ಕೊಟ್ಟರು. ಆದರೆ ಅಲ್ಲಿಂದ ಕರೆಯು ನನ್ನ ಮೊಬೈಲಿಗೆ ಬಂದಿತ್ತು!

ಇದುವರೆಗೆ ಒಂದೇ ಒಂದು ಕೆಲಸದ ಅನುಭವವಿರುವ ಅವರು. ಇಂತಹ ಹದಿನೈದಕ್ಕೂ ಹೆಚ್ಚು ಕೆಲಸಗಳ ಅನುಭವವಿರುವ ನಾನು!

ಬೇರೆ ಕಡೆಗೆ ಹೋಗಬೇಕಾದ ಸಂದರ್ಭದಲ್ಲಿ ' ಅಲ್ಲಿಗೆ ಹೋಗಿ ಅದು ತೆಗೆದುಕೊಂಡು ಬಾ ಎಂದು ಹದಿನೆಂಟು ಕಿಮೀ ಅಲೆಸುತ್ತಿದ್ದರು. ನಾನು ಸಹಿಸಿದೆ!

'ಪ್ರಿಂಟ್ ತೆಗೆದು ನೀನೇ ಸಹಿ ಮಾಡಿ ಕೊಟ್ಟು ಬಾ' ಎಂದರು, ಅದನ್ನೂ ಮಾಡಿದೆ.

ಒಮ್ಮೆಯೂ ಸಮಯ ತಪ್ಪಿಸಿದವನಲ್ಲ ನಾನು.

ಸಾರ್ವಜನಿಕರು ಬಂದಾಗ ಮಾತನಾಡುವ ಸಂದರ್ಭದಲ್ಲಿ ನಾನು ಅರ್ಥೈಸಲು ಹೋದರೆ ಕೈ ಅಡ್ಡ ಹಿಡಿದು ನನ್ನನ್ನು ತಡೆಯುತ್ತಿದ್ದರು.
ಸಹಿಸಿಕೊಂಡೆ!

ಇಷ್ಟೆಲ್ಲಾ ಆದರೆ ಸಹಿಸಬಹುದಿತ್ತು. ಆದರೆ ಆ ದಿನ ನಿಂತುಕೊಂಡೇ ಇದ್ದಾರೆಂದು ಕುರ್ಚಿ ತೆಗೆದು ಅಲ್ಲಿಟ್ಟು ಕುಳಿತುಕೊಳ್ಳಿ ಎಂದೆ. 'ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಇಡಿ ಅಲ್ಲಿ ' ಎಂದರು. ತಂದ ಕುರ್ಚಿಯನ್ನು ಅದರ ಮೂಲ ಸ್ಥಾನದಲ್ಲಿ ಇಟ್ಟು ಬಂದೆ.

ಅವರು ನನ್ನೊಳಗೆ 'ಅವನು' ಆದ! ಹಳ್ಳಿಯವರು 'ಇದಕ್ಕೆ' ಸಮ ಎನ್ನುತ್ತಾರಲ್ಲಾ- ಹಾಗೆ.

ಇಬ್ಬರು ಸಹೋದ್ಯೋಗಿಗಳ ಕೆಲಸದಲ್ಲಿ ಸೇರಿಕೊಳ್ಳಲು ಹೊರಟಾಗ ಅದನ್ನು ತಡೆದ. ಅವನನ್ನು ದ್ವೇಷಿಸಲಾರಂಭಿಸಿದೆ. ಒಂದೇ ಒಂದು ಕ್ಷಣ ನೋಡಿದ ಆ ಸಹೋದ್ಯೋಗಿಗಳೂ ಇವನ ವರ್ತನೆಯನ್ನು ನೋಡಿ ಸಿಡಿಮಿಡಿಗೊಂಡರು. ತಡವಾದಾಗ ಇವನೇ ಸೇರಿಕೊಂಡ.

ಯಾರು ಯಾವ ಕೆಲಸವನ್ನು ಮಾಡಬೇಕೋ ಅದನ್ನು ಮಾಡಿಸದೆ ಮತ್ತೆ ಈ ಕೆಲಸವನ್ನೂ ನೀನು ಮಾಡು ಎಂದ. ನಾನು ಮಾಡಿದೆ. ವಿರಾಮ ಬೇಕೆನಿಸಿದಾಗ 'ಸ್ವಲ್ಪ ಮಾಡಿ' ಎಂದೆ. ಆಗಲೂ 'ಮಾಡಿ ಮುಗ್ಸಿ' ಎಂದ. ಅಷ್ಟಾದರೂ ನನ್ನ ಅಗ್ನಿಪರ್ವತ ಅವನನ್ನು ಸುಡಲಿಲ್ಲ.

ಬೆಳಿಗ್ಗೆ ಬಂದು ಸ್ವಲ್ಪ ಮಲಗಿ ಮತ್ತೆ ಎಂದಿನ ಕೆಲಸಕ್ಕೆ ತೆರಳಿ ಹಿಂತಿರುಗುವಾಗ ಮತ್ತೊಂದು ಕರೆ. 'ಆ ನಮೂನೆಯನ್ನು ತಲುಪಿಸಿ'.
ನಿದ್ದೆ ನನ್ನನ್ನು ಆವರಿಸುತ್ತಿತ್ತು. ಆಗುವುದಿಲ್ಲವೆಂದೆ.

ನನ್ನ ಜ್ವಾಲಾಮುಖಿ ಸ್ಫೋಟಗೊಂಡದ್ದು - ಅವನ ಬಳಿಯೇ ಇದ್ದ ಅದನ್ನು ,ಅವನು ಇರುವ ಕಾರ್ಯಕ್ಷೇತ್ರದಲ್ಲೇ ತಲುಪಿಸಬಹುದಾದ ಒಂದು ಕೆಲಸವನ್ನು ,ಒಬ್ಬ ಪಾಪದ ನೌಕರನನ್ನು ಕಳುಹಿಸಿ ಅದನ್ನು ನನ್ನಿಂದ ಪಡೆದುಕೊಂಡು ತಲುಪಿಸಬೇಕಾದಲ್ಲಿಗೆ ತಲುಪಿಸಿ ಎಂದಾಗ. ಅವನ ಸೋಮಾರಿತನ, ಅಹಂಕಾರ, ಸರ್ವಾಧಿಕಾರ, ವಿಕೃತತೆಗಳೆಲ್ಲ ನೆನಪಿಗೆ ಬಂದು ಅವನನ್ನು ಬ್ಲಾಕ್ ಮಾಡಿದೆ. 

ಇವತ್ತು ನಾನು ಹೋಗಲಿಲ್ಲ. ಹಸಿರು ಸಹಿ ಹಾಕಿಕೊಂಡು ಅಧಿಕಾರ ಚಲಾಯಿಸುತ್ತಿದ್ದವನಿಗೆ ಇಂದು ನಾಲ್ಕಕ್ಷರ ಬರೆಯುವ ಕೆಲಸ ಸಿಕ್ಕಿದ್ದು ಸಿಟ್ಟು ಉಕ್ಕಿಸಿರಬಹುದು!  ಅವನು ಯಾರ್ಯಾರಿಗೋ ಕರೆಮಾಡಿ ನಾನು ಬರಲಿಲ್ಲವೆಂದೂ ಅವನ (ಪಾದ)ಸೇವೆಮಾಡಲಿಲ್ಲವೆಂದೂ ಹೇಳಿಕೊಂಡು ತಿರುಗುತ್ತಿದ್ದಾನೆ. 

ಸರ್ವಾಧಿಕಾರಿಗಳನ್ನು ಟೀಕಿಸುವ ಅವನೇ ಸರ್ವಾಧಿಕಾರಿಗಳನ್ನು ಮೀರಿಸುವಷ್ಟು ಇದ್ದಾನೆಂಬುದನ್ನು ನೆನೆದಾಗ ನನಗೆ ನಗು ಬರುತ್ತದೆ. ಇಂತಹವರ ತಲೆಮಾರು ಬೆಳೆಯದಿರಲಿ. 

ದೇವರೇ, ಅವನಿಗೆ ತನ್ನ ತಪ್ಪುಗಳು ಮನವರಿಕೆಯಾಗಲಿ!
*

- ಕಾಜೂರು ಸತೀಶ್