ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, September 16, 2020

ಪ್ರಜಾಪ್ರಭುತ್ವ



ನಾಲ್ವರು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆಸರಿಗೆ ನಾಲ್ಕು ಜನರಿದ್ದರೂ ಅದರಲ್ಲೊಬ್ಬರು ರಾಜಕಾರಣಿಗಳ, ಅಧಿಕಾರಿಗಳ ಹಿಂದೆ ಹೋಗುತ್ತಿದ್ದರಿಂದ ಅವರಿಗೆ ಕೆಲಸದಿಂದ ವಿನಾಯಿತಿ ಸಿಕ್ಕಿತ್ತು.

ಮೊನ್ನೆ ಆ ಮೂವರಲ್ಲೊಬ್ಬರಿಗೆ ಲಘು ಹೃದಯಾಘಾತವಾದಾಗ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ.

ಇವರೂ ಬಂದಿದ್ದರು. 'ಹೇಗಿದ್ದೀರಿ' ಎಂದು ಕೇಳಿದೆ. ಕಟಕಟ ನಗುತ್ತಾ 'ಓ ಸೂಪರ್' ಎಂದರು!
*


ಕಾಜೂರು ಸತೀಶ್ 

Monday, September 14, 2020

ಕುರುಡು

ಮಧ್ಯರಾತ್ರಿಯಲ್ಲಿ ಮಂಗಗಳೆಲ್ಲಾ ನಿದ್ರಿಸುತ್ತಿದ್ದಾಗ ದೊಡ್ಡ ಮಂಗ ಕರೆಮಾಡಿ ನಿಮ್ಮ ಮರದ ಕೆಳಗೆ ವಾಸಿಸುವ ನಾಯಿಗಳಿಗೆ ಎಷ್ಟು ಕಾಲು ಎಂಬುದನ್ನು ಬರೆದು ಮೊಹರು ಸಹಿಯೊಂದಿಗೆ ಕಳಿಸಲು ಹೇಳಿತು. ಇಲ್ಲದಿದ್ದರೆ ಬಾಲವನ್ನು ಕತ್ತರಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿತು.

ನಿದ್ದೆಗಣ್ಣಲ್ಲಿ ಮಂಗಗಳು ನಾಯಿಗೆ ತಲಾ 10, 15, 20 ಬಾಲಗಳಿವೆ ಎಂದು ಬರೆದು whatsapp ಮಾಡಿದವು. ಒಂದು ಮಂಗವಂತೂ 50 ಕಾಲುಗಳು ಎಂದು ಬರೆದು ತನ್ನ ಸೆಲ್ಫಿಯ ಸಮೇತ ಕಳುಹಿಸಿತು.

'ಸದ್ಯ ಕಡಿಮೆ ಯಾರೂ ತೋರಿಸಿಲ್ಲವಲ್ಲ , ಹೆಚ್ಚಾದರೆ ಪರವಾಗಿಲ್ಲ 'ಎಂದು ದೊಽಽಽಡ್ಡ ಮಂಗವು whatsapp ನೋಡುತ್ತಾ ಹೇಳಿತು.


*
ಕಾಜೂರು ಸತೀಶ್ 

ಸುಳಿ

ಮೂರು ಕೆಲಸಗಾರರಿದ್ದರು.ಮೂವರೂ ಒಂದೊಂದು ಹಳ್ಳಿಯಲ್ಲಿ ವಾಸಿಸುತ್ತಿದ್ದರು.

ಅವರಿಗೆ ಒಂದೇ ರೀತಿಯ(ಜಾತಿಯ!) ಒಂದೊಂದು ಮರವನ್ನು ನೋಡಿಕೊಳ್ಳುವ ಕೆಲಸ ಕೊಡಲಾಗಿತ್ತು.

ಒಬ್ಬೊಬ್ಬರಿಗೂ ಒಬ್ಬೊಬ್ಬ ಯಜಮಾನ. ಆ ಮೂವರು ಯಜಮಾನರಿಗೆ ಒಬ್ಬ ದೊಡ್ಡ ಯಜಮಾನ.

ಒಂದು ದಿನ ದೊಡ್ಡ ಯಜಮಾನನು ಮೂವರು ಚಿಕ್ಕ ಯಜಮಾನರಿಗೆ ಕರೆಮಾಡಿ ಆ ಮೂವರು ಕೆಲಸಗಾರರಿಗೆ ನೀಡಿರುವ ಮರದಲ್ಲಿರುವ ಎಲೆಗಳನ್ನು ಎಣಿಸಿ ಹೇಳುವಂತೆ ಸೂಚಿಸಿದರು.

ತಕ್ಷಣ ಒಬ್ಬ ಯಜಮಾನ ತನ್ನ ಕೆಲಸಗಾರನಿಗೆ ಎಣಿಸಲು ತಿಳಿಸಿ ಒಂದು ವಾರದ ಒಳಗೆ ಕೆಲಸ ಪೂರ್ಣಗೊಳಿಸಬೇಕೆಂದು ಹೇಳಿದನು.

ಎರಡನೇ ಯಜಮಾನನು ಮರದ ಕೆಳಗಿರುವ ಕಳೆಗಳನ್ನು ಕಿತ್ತು ಅನಂತರ ಎಲೆಗಳನ್ನು ಎಣಿಸುವಂತೆ ತಿಳಿಸಿದನು.

ಮೂರನೆಯ ಯಜಮಾನನು ಮರಕ್ಕೆ ಬಣ್ಣ ಬಳಿಯಿರಿ. ನೋಡಲು ಚಂದ ಕಾಣಿಸುತ್ತದೆ. ಅದರ ಬುಡದಲ್ಲಿ ಒಂದು ಎಲೆಯೂ ಬಿದ್ದಿರಬಾರದು. ನೋಡಿದವರು ನಮ್ಮನ್ನು ಹೊಗಳಬೇಕು ಎಂದು ಹೇಳಿದನು. ಅವನಿಗೆ ಎಲೆಗಳನ್ನು ಎಣಿಸಲು ಹೇಳಬೇಕೆನ್ನುವುದು ನೆನಪಿದ್ದರೂ ಅದನ್ನು ಹೇಳಲಿಲ್ಲ.

ವಾರ ಕಳೆಯಿತು. ಮೊದಲ ಕೆಲಸಗಾರನು ಎಲೆಗಳನ್ನೆಲ್ಲ ಎಣಿಸಿ ಲೆಕ್ಕ ಕೊಟ್ಟನು.

ಎರಡನೆಯ ಕೆಲಸಗಾರನು ಕಳೆಗಳನ್ನು ಕಿತ್ತು ಗಡಿಬಿಡಿಯಿಂದ ಲೆಕ್ಕ ಕೊಟ್ಟನು.

ಮೂರನೆಯ ಕೆಲಸಗಾರನಿಂದ ಉತ್ತರ ಸಿಗದಿದ್ದಾಗ ದೊಡ್ಡ ಯಜಮಾನನು ಚಿಕ್ಕ ಯಜಮಾನನಿಗೆ ಬೇಗ ಎಣಿಸಿ ಹೇಳು ಎಂದನು.

ಆಗ ಕತ್ತಲಾಗಿತ್ತು. ಚಿಕ್ಕ ಯಜಮಾನನು ' ಹೋಗು ಬೇಗ, ಟಾರ್ಚ್ ಬಳಸಿ ಎಣಿಸು' ಎಂದನು ಕೆಲಸಗಾರನಿಗೆ.

ಎಣಿಸುವವನಂತೆ ನಾಟಕವಾಡಿ ಇಷ್ಟು ಇವೆ ಎಂದು ಲೆಕ್ಕ ಕೊಟ್ಟನು ಮೂರನೆಯವನು.
*
 
ಪರಿಶೀಲಿಸಿದ ನಂತರ ಮೂರನೆಯ ಕೆಲಸಗಾರನನ್ನು ಕೆಲಸದಿಂದ ತೆಗೆಯಲಾಯಿತು.

*


ಕಾಜೂರು ಸತೀಶ್

Monday, September 7, 2020

ರೋಸ್ಲಿನ್ ಟೀಚರ್

ಹೊಸ ಶಾಲೆ. ನಾಲ್ಕನೇ ತರಗತಿಯ ಮೊದಲ ಕಿರುಪರೀಕ್ಷೆ ಮುಗಿದು ಉತ್ತರ ಪತ್ರಿಕೆ ಹಿಡಿದುಕೊಂಡು ಬಂದಿದ್ದ ಟೀಚರ್ ' ಇಲ್ಲಿ ಸತೀಶ್ ಯಾರು?' ಎಂದು ಕೇಳಿ ಎದ್ದು ನಿಲ್ಲಿಸಿ 'ಭೇಷ್' ಎಂದಿದ್ದರು.

ರೋಸ್ಲಿನ್ ಟೀಚರ್ ನೆನ್ನೆ ತೀರಿಕೊಂಡ ಸುದ್ದಿ ಕೇಳಿದಾಗ ಈ ನೆನಪು ಬಂದು ಒಂದು ಕ್ಷಣ ತಲ್ಲಣಿಸಿದ್ದೆ. ಅವರಲ್ಲಿ ತಾಯ್ತನವಿತ್ತು. ಆ ಮುಗ್ಧ ನಗುವೊಂದೇ ಅವರ ವ್ಯಕ್ತಿತ್ವವನ್ನು ಹೇಳುತ್ತಿತ್ತು.


ನಾನು ಪ್ರೌಢಶಾಲೆಯಲ್ಲಿದ್ದಾಗ ಅವರಿಗೆ ಬೇರೆ ಕಡೆಗೆ ವರ್ಗಾವಣೆ ದಕ್ಕಿತ್ತು. ಆಮೇಲೆ ನಾನವರನ್ನು ಭೇಟಿಯಾಗಲೇ ಇಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಕುಶಾಲನಗರದಲ್ಲಿ ದೂರದಿಂದ ನೋಡಿದ್ದೆ. 'ಆಗ ಇದ್ದ ಹಾಗೇ ಇದ್ದಾರೆ' ಎಂದುಕೊಂಡೆ.

ಅವರು ಸಿಗಬೇಕಿತ್ತು- 'ನನ್ನ ನೆನಪಿದೆಯಾ ಟೀಚರ್?' ಎಂದು ಒಮ್ಮೆಯಾದರೂ ಕೇಳಬೇಕಿತ್ತು ಎಂದು ಈಗ ಅನಿಸುತ್ತಿದೆ.

ಆಗಿನ ಗುರು-ಶಿಷ್ಯ ಪರಂಪರೆಯೇ ಅಂತಹದ್ದು. ಬುದ್ಧಿ ಮತ್ತು ಭಾವನೆಗಳ ಜೊತೆಗಿನ ಸಂಬಂಧವದು. ಕಲಿಸಿದ ಗುರುವನ್ನು ಕಳೆದುಕೊಳ್ಳುವುದು ಊಹಿಸಿಕೊಳ್ಳಲಾರದಷ್ಟು ದುಃಖವನ್ನು ಕೊಡುತ್ತದೆ.
*
ಕಾಜೂರು ಸತೀಶ್

Wednesday, September 2, 2020

ಹಸಿದ ಹುಲಿಯ ನೆತ್ತಿಗೆ ಕಾವ್ಯದ ನೆರಳು

ಹೊಸತಲೆಮಾರಿನ ತರುಣರ ಕವಿತೆಗಳನ್ನು ಓದುವಾಗ- ಅವು ಹೊಸತನ್ನು ಹೇಳುವ ಆವೇಶದಲ್ಲಿ ದೊಡ್ಡ ದನಿಯನ್ನು ಪಡೆದುಕೊಂಡೋ; ಅಥವಾ ಅಸ್ಪಷ್ಟ ನುಡಿಚಿತ್ರಗಳನ್ನು ಕಟ್ಟಿಕೊಂಡೋ ಹೊರಬರುತ್ತಿರುವುದು ಸಾಮಾನ್ಯವಾಗಿ ವೇದ್ಯವಾಗುತ್ತದೆ. ಅಥವಾ , ಮತ್ತದೇ ಸವಕಲು ಪ್ರೀತಿ-ಪ್ರೇಮ ,ಮಧುಬಟ್ಟಲು, ತುಟಿ ಮತ್ತಿತರ ಅಂಗಾಂಗಗಳ ಸುತ್ತ ಸುತ್ತುಹಾಕುತ್ತಿರುತ್ತದೆ.

ಕವಿತೆಯನ್ನು ಸರಳವಾಗಿ ಹೇಳುವುದೆಂದರೆ ಇಂದಿನ ದೊಡ್ಡ ದೊಡ್ಡ ವಿಮರ್ಶಕರು ಅಂದುಕೊಳ್ಳುವಂತೆ ಭಾಷಿಕ ದಾರಿದ್ರ್ಯವೇನೂ ಅಲ್ಲ. ಅದೊಂದು ಕಲೆ. ಸರಳಾಭಿವ್ಯಕ್ತಿಯಲ್ಲೇ ಅಪಾರಾರ್ಥವನ್ನು ಹೊಳೆಯಿಸಿಬಿಡುವ ಕ್ರಮ ಹೆಚ್ಚು ಆಪ್ಯಾಯಮಾನ. ಆದರೆ ಕವಿತೆಯ ಸರಳತೆಯು ಮಾತಾಗಿಬಿಡುವ ಅಪಾಯವನ್ನು ನೀಗಿಸಿದ್ದೇ ಆದಲ್ಲಿ ಕವಿಗೂ ಮತ್ತು ಕವಿತೆಗೂ ಯಶಸ್ಸು ಲಭಿಸುತ್ತದೆ.


ನದೀಮ ಸನದಿಯವರ ಹುಲಿಯ ನೆತ್ತಿಗೆ ನೆರಳು ಸಂಕಲನವನ್ನು ಎದುರುಗೊಳ್ಳುವ ಮೊದಲು ಮತ್ತು ನಂತರ ಮೇಲಿನ ಮಾತುಗಳು ಬಂದುಹೋಗಿದ್ದವು; ಬಂದುಹೋದವು. ನದೀಮ ಸನದಿ ಅವರ ಚೊಚ್ಚಲ ಸಂಕಲನವಿದು. ಅವರದು 'ಕಾವ್ಯ ಕುಟುಂಬ'. ಅವರ ಕುಟುಂಬದ ಬಿ.ಎ. ಸನದಿ ಅವರು ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತರು. ಇಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನದೀಮ ಅವರು ಬೆಳಗಾವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾವ್ಯಸ್ಫೂರ್ತಿ ಅವರಿಗೆ ಸ್ವಾಭಾವಿಕವಾಗಿ ಒಲಿದಿದೆ.


ನದೀಮ ಅವರ ಕಾವ್ಯವು ಸಮಕಾಲೀನ ಜಗತ್ತನ್ನು ಅದರ ಅಮಾನವೀಯ ನಡೆಯಿಂದ ಕುಗ್ಗಿಸುವ ಶಕ್ತಿಗಳ ವಿರುದ್ಧ ಹರಿಹಾಯುತ್ತವದೆ.ಅದು ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ, ಜಗತ್ತನ್ನೇ ದಹಿಸುವ ಕಾಡ್ಗಿಚ್ಚು ಕೂಡ

'ಜನರ
ಮನಗಳಲ್ಲಿ ಮನೆಗಳಲ್ಲಿ
ಹೊತ್ತಿ ಉರಿಯುತ್ತಿರುವ
ಕ್ರೋಧಾಗ್ನಿಯ ಕಂಡು
ತಣ್ಣಗಾಗಿದೆ'.
(ಕಾಡ್ಗಿಚ್ಚು)

ಈ ಬಂಡಾಯ ಅನೇಕ ಕಡೆಗಳಲ್ಲಿ ತೆಳುವಾಗಿ ಕಂಡರೂ, ಸರಳವಾಗಿ ಮತ್ತು ಆಪ್ತವಾಗಿ ಕಾಣಿಸಿಕೊಳ್ಳುತ್ತದೆ.

ಹಿಂಸೆಯ ಮುಖ ಮತ್ತು ಅದೇ ಸಂದರ್ಭದಲ್ಲಿನ ಮಾನವೀಯ ಮುಖಗಳನ್ನು 'ಗಲಭೆ' ಕವಿತೆ ಕಟ್ಟಿಕೊಡುತ್ತದೆ.

ಗಲಭೆಕೋರನೊಬ್ಬ
ಓಣಿಯೊಂದರಲಿ ನುಗ್ಗಿ
ಪೇದೆಯೊಬ್ಬನ ಮನೆಗೆ
ಬೆಂಕಿಹಚ್ಚುತ್ತಿದ್ದ

ಬೆಂಕಿ ಬಿದ್ದ ಮನೆಯ ಪೇದೆ
ಜೀವ ಭಯದ ಹಂಗು ತೊರೆದು
ಗಲಭೆಕೋರನ ಮನೆಯ
ಬೆಂಕಿ ನಂದಿಸುತ್ತಿದ್ದ.
(ಗಲಭೆ)


ಸಂಕಲನದ ಶೀರ್ಷಿಕೆ ಕೂಡ ಇದೇ ಮಾದರಿಯದ್ದು- 'ಹುಲಿಯ ನೆತ್ತಿಗೆ ನೆರಳು'. ಹಿಂಸೆಯನ್ನು ಪ್ರೀತಿಯಿಂದ ನಂದಿಸುವ ಬಯಕೆ ಕವಿಯದು. ಸಂಕಲನದ ಉದ್ದಕ್ಕೂ ಈ ಶೋಧ ಕಾಣಿಸುತ್ತದೆ. ಮಧ್ಯೆ ಮಧ್ಯೆ ಮಾತಾಗಿ ಸಿಡಿದು ಕವಿತೆಯ ಆವರಣದಿಂದ ಹೊರಬಂದುಬಿಡುತ್ತವೆ! ಈ ಕೊರತೆಯ ಹೊರತಾಗಿಯೂ ಹದವಾದ ಭಾವ ನಮ್ಮನ್ನು ತಟ್ಟುತ್ತದೆ.

ಹೃದಯ ಗಾಜಿನ ಆಟಿಕೆ
ಒಡೆದೇ ಹೋಯಿತು
ವೇದನೆಗೀಗ ಸಾವಿರ ಮುಖಗಳು
(ಪ್ರೇಮದಹನ)

ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಜ್ಞೆಯುಳ್ಳ ಕವಿತೆಗಳಿವೆ. 'ನೆರೆಮನೆಯ ಮುದುಕಿ' ಕವಿತೆಯ ವಿಡಂಬನೆ ತೀಕ್ಷ್ಣವಾಗಿದೆ. ತೀರಿಕೊಂಡ ಮುದುಕಿಯು

ಮುಚ್ಚಿದ ಕಂಗಳಿಂದ ದಿಟ್ಟಿಸಿ
ನನ್ನನ್ನೇ ನೋಡುತ್ತ
ಒಳಗೊಳಗೇ ನಗುತ್ತಿದ್ದಾಳೆ.

ಒಂದನ್ನು ತುಳಿದು ಮತ್ತೊಂದು ಮೇಲ್ಮೆಗೆ ಬರುವ, ಆ ಮೂಲಕ ಸುಖವನ್ನು ಕಾಣುವ ಸಂಗತಿಯು 'ಆ ಹೂವು'
ಕವಿತೆಯಲ್ಲಿದೆ.

ಹೂವಾಡಗಿತ್ತಿ
ಆ ಮೊಗ್ಗು
ಹೂವಾಗಿ
ಕಣ್ಬಿಡುವ ಮೊದಲೇ
ಕಿತ್ತುತಂದು
ಮಾಲೆಗಳ ಕಟ್ಟಿದಳು

ಭಕ್ತರು
ಅವುಗಳ
ಮಂದಿರ ಮಜಾರಗಳ
ದೇವರುಗಳಿಗೆ
ಮುಡಿಸಿ ಮೆರೆದರು


ವರ್ತಮಾನದ ತಲ್ಲಣಗಳಿಗೆ ದನಿಯಾಗುವಾಗ, ಅದನ್ನು ಅಡಗಿಸುವ ಹುನ್ನಾರಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ನಾಲಿಗೆ ಸೀಳಬಹುದು, ಕೈ ಕಡಿಯಬಹುದು, ಕಾಲು ಮುರಿಯಬಹುದು, ನೀರಿಗೆ ಎಸೆಯಬಹುದು, ಬೆಂಕಿಹಚ್ಚಬಹುದು, ಗುಂಡುಹೊಡೆಯಬಹುದು.. ಇಷ್ಟಾದರೂ ಕವಿತೆ ಸಾಯುವುದಿಲ್ಲ. ಏಕೆಂದರೆ ಕಲೆ/ಕಾವ್ಯಕ್ಕೆ ಕೊಲೆಗಡುಕರಿಲ್ಲ.

ಕವಿತೆ
ಉಸಿರಾಡುತ್ತಲೇ ಇದೆ
(ಆದರೂ)

ಇಡೀ ಸಂಕಲನದ ಹುಡುಕಾಟವೂ ಇದೇ-

ಇದ್ದಾರೆ ಇದ್ದಾರೆ
ಇಲ್ಲಿ ಎಲ್ಲರೂ ಇದ್ದಾರೆ
ಮನುಷ್ಯತ್ವರ ಹೊರತು
ಇಲ್ಲಿ ಎಲ್ಲರೂ ಇದ್ದಾರೆ.

ಇದೇ ಬಗೆಯ ಸರಳತೆಯಲ್ಲಿ ಸಂಕೀರ್ಣತೆಯನ್ನು ಮುಟ್ಟುವ ಕವಿತೆಗಳು ನದೀಮ ಅವರಿಂದ ಹೊರಬರಲಿ.
*


ಕಾಜೂರು ಸತೀಶ್