2006ರ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಕಪ್ಪು-ಬಿಳುಪು ಮಿಶ್ರಿತ ಗಡ್ಡವನ್ನು ಕೆರೆದುಕೊಳ್ಳುತ್ತಾ 'ಮಗ್ಗಿ' ಎಂಬ ಚಂದದ ಕವಿತೆಯನ್ನು ಓದಿದ ವ್ಯಕ್ತಿಯ ಹೆಸರು ಆ ದೇಹಾಕಾರವನ್ನು ಕಾಣುವ ಮೊದಲೇ ಪತ್ರಿಕೆಯ ಮುಖೇನ ಪರಿಚಯವಾಗಿತ್ತು.
ಒಮ್ಮೆ ಈ ವ್ಯಕ್ತಿಯ ಜೊತೆ ಮಾತನಾಡಬೇಕೆಂದು ಹೋದರೆ ಅವರು ಮಾತ್ರ ತಮ್ಮ ಗಂಟಿಕ್ಕಿದ ಮುಖದಲ್ಲಿ 'ಅಪರಿಚಿತನಾದ ಈ ಹುಡುಗನ ಬಳಿ ನನ್ನ ಮಾತೇನು' ಎಂದುಕೊಂಡಂತೆ 'ಹಾಂ ಹೂಂ' ಹೇಳತೊಡಗಿದಾಗ 'ಇವರ ಜೊತೆ ಇನ್ನು ಮಾತಾಡುವುದು ಬೇಡ' ಎಂದುಕೊಂಡು ಅದನ್ನು ಪಾಲಿಸಿಕೊಂಡು ಬಂದಿದ್ದೆ. ಈಗ ನನ್ನೊಳಗಿಗೆ ಕೊಟ್ಟ ಆ ಮಾತನ್ನು ಮುರಿಯಬೇಕಾದ 'ಪ್ರಸಂಗ' ಎದುರಾಗಿದೆ. ವಿಚಿತ್ರವೆಂದರೆ ನನಗೆ ಆ ಕುರಿತ ಯಾವುದೇ ಪಾಪಪ್ರಜ್ಞೆಯಿಲ್ಲ. ಈಗ ಹೇಳಬೇಕಿರುವುದು ಇದೊಂದೇ-'Love you!'
*
ಭಾರದ್ವಾಜ ಕಣಿವೆ ಎಂಬ ಈ ಲೇಖಕರ 'ಕಳೆದುಕೊಂಡವರು' ಕಾದಂಬರಿಯನ್ನು 'ಇವರು ಕೊಡಗಿನವರು' ಎಂಬ ಅಭಿಮಾನದಿಂದ ಮತ್ತು ಇಲ್ಲಿನ ಅನೇಕಾನೇಕರ ಬಾಲಿಶ ಕೃತಿಯನ್ನು ಮನದಲ್ಲಿ ತಂದುಕೊಂಡು ಓದತೊಡಗಿದೆ. ಒಂದೆರಡು ಪುಟಗಳಲ್ಲೇ ನನ್ನ ಇಡಿಯ ಪೂರ್ವಗ್ರಹವು ಕುಸಿದಿತ್ತು.
ಕನ್ನಡೇತರ ಭಾಷಿಗನ ಕನ್ನಡದ ನಿರೂಪಣೆ ಭಿನ್ನವಾಗಿ (ಗೊಂದಲವಾಗಿಯೂ )ಕಾಡುತ್ತಾ ಕಾದಂಬರಿಕಾರರ ತಾರತಮ್ಯರಹಿತ ನಿಲುವು ಇಷ್ಟವಾಗುತ್ತಾ ಬೆಳೆಯಿತು. ಒಂದು Ideaವನ್ನು 'ಇದು ನನ್ನ ನಿಲುವು ನೀನಿದನ್ನು ಒಪ್ಪಿಕೊ' ಎಂಬಂತೆ ವಕಾಲತ್ತು ವಹಿಸದೆ ಪಾತ್ರಗಳನ್ನು ವಾಸ್ತವತೆಯ ರೆಕ್ಕೆ ಕಟ್ಟಿ ಹಾರಿಸಿದ್ದು ಅವರ ಕಾದಂಬರಿಯ ಒಟ್ಟು ಶಕ್ತಿ. ಪ್ರೀತಿ, ಕಾಮ, ದ್ವೇಷ, ಹಿಂಸೆ ಯಾವುದೂ ಇಲ್ಲಿ ಸಿನಿಮೀಯವಲ್ಲ.
ಅಸ್ತಿತ್ವವಾದ ಮತ್ತು ಅಸಂಗತತೆಗಳು ಅನಿರುದ್ಧನಲ್ಲಿ ಬೆಳೆಬೆಳೆದಂತೆ ಅವನ ಒಳಗೆ ಮೂಡುವ ಕ್ರಾಂತಿಯ ಕಿಡಿಗಳು, ಪ್ರಗತಿಪರ ನಿಲುವುಗಳು, ಭ್ರಷ್ಟ ಆಲೋಚನೆಗಳು- ಹೀಗೆ ನಾಯಕ ಒಮ್ಮೊಮ್ಮೆ ಪ್ರತಿನಾಯಕನ ಮೈಪಡೆದು, ಮತ್ತೆ purgationಗೆ ಒಳಪಟ್ಟು ಬೆಳೆಯುವ ಕ್ರಮವನ್ನು ಮೆಚ್ಚಿಕೊಂಡೆ. ಹುಸಿ ಅಭಿವೃದ್ಧಿಯ ಸುತ್ತಮುತ್ತಲ ವಾಸ್ತವ ಚಿತ್ರಣ ಈ ಕಾದಂಬರಿಯ ಆತ್ಮ.
ಧರ್ಮ, ಜಾತಿ, ರಾಜಕಾರಣ, ಹಣ- ಇವು subaltern ನೆಲೆಗಳ ಮೇಲೆ ಹೇಗೆ ದಾಳಿಮಾಡುತ್ತವೆ , ಆ ಮೂಲಕ ಅದರ ಹೆಸರಲ್ಲಿ ಬೆಳೆಬೆಳೆಯುತ್ತಾ ಮತ್ತೊಂದು ಮಗ್ಗುಲಲ್ಲಿ ವಿನಾಶವನ್ನೂ ಹೊಂದುತ್ತವೆ ಎನ್ನುವ ಸೂಕ್ಷ್ಮ ಕಾದಂಬರಿಯಲ್ಲಿದೆ.
ಕೊಡಗಿನವನಾಗಿರುವ ನನಗೆ ಇಲ್ಲಿನ ಆದಿವಾಸಿಗಳು, ಅವರನ್ನು ಉದ್ಧಾರ ಮಾಡಲೆಂಬಂತೆ ಬರುವ so called NGOಗಳ ಮುಖವಾಡಗಳು ತಿಳಿದೇ ಇದೆ. ಕಾದಂಬರಿಕಾರರು ಇಲ್ಲಿ ಬಳಸಿದ ಸ್ಥಳನಾಮವು ಏನೇ ಇದ್ದರೂ ಅವನ್ನೆಲ್ಲ ನನ್ನ ಸುತ್ತಲಿನ ಊರುಗಳೆಂದೇ ಬದಲಾಯಿಸಿ ಓದಿಕೊಂಡಿದ್ದೇನೆ.
ಇಂತಹ materialistic fictionಗಳಿಗೆ ಕಲಾತ್ಮಕತೆಯ ಸ್ಪರ್ಶ ಬೇಕಿಲ್ಲ; ವರ್ಣನೆಯ ಅನಿವಾರ್ಯತೆಯೂ ಇಲ್ಲ. ಅಥವಾ ತೀರಾ ಗಾಂಭೀರ್ಯತೆಯ ಸೋಗೂ ಬೇಕಿಲ್ಲ. ಇವುಗಳ ನಡುವಣ ಸಮತೂಕದ ಅಭಿವ್ಯಕ್ತಿ ಭಾರದ್ವಾಜರದು.
ತುಂಬಾ ಹೇಳುವುದಿದೆ. ಕಾದಂಬರಿ ಇಷ್ಟವಾಯಿತೆಂದು ಹೇಳಿಕೊಳ್ಳಬೇಕೆಂಬ ಭರದಲ್ಲಿ ಇಷ್ಟನ್ನು ಹೇಳಿ ವಿರಮಿಸುತ್ತೇನೆ. ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
*
ಕಾಜೂರು ಸತೀಶ್