ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 17, 2019

ಕುಡಿಗಾಣದ ಅಬ್ಬಿಯ ನೆಪದಲ್ಲಿ ಕಂಡ ಅಪರೂಪದ ಮುಖಗಳು

ಕಳೆದ ಭಾನುವಾರ ಆತ್ಮಕ್ಕೆ ಸ್ವಲ್ಪ ಸುಖ ಸಿಗಲೆಂದು ಪ್ರಕೃತಿಯ ಚೆಲುವು ಅರಸಿ ಕುಡಿಗಾಣ ಅಬ್ಬಿಯ ಕಡೆಗೆ ಹೊರಟಿದ್ದೆವು. ಸೋಮವಾರಪೇಟೆಯಿಂದ 22ಕಿ.ಮೀ. ಅಂತರದಲ್ಲಿ ನಗರದ,ಆಧುನೀಕರಣದ ನರಕದಿಂದ ತಪ್ಪಿಸಿಕೊಂಡು ಬದುಕುತ್ತಿರುವ ಕೊತ್ತನಳ್ಳಿಯ ಸಮೀಪವಿರುವ ಸ್ಥಳವದು.


ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲಿಂದ ಅದಾಗಲೇ ಜಾರಿಹೋಗಿತ್ತು. ಹೊಟ್ಟೆಯು ಯಾವುದೋ ಸ್ವರದಲ್ಲಿ ಜಠರದ ಚರಮಗೀತೆಯನ್ನು ಗುನುಗುನಿಸುತ್ತಿತ್ತು. ಊಟಕ್ಕೆ ಶೇಖರ್ ಸರ್ ಖಾತ್ರಿ. ರಾಧಾಕೃಷ್ಣ ಸರ್ ಮತ್ತು ಲೋಕೇಶ್ ಸರ್ ಅವರಿಗೆ 'ನಮಗಿವತ್ತು ಊಟ ಸಿಗುತ್ತೋ ಏನೋ' ಎಂಬ ಅನುಮಾನ.


ಕೊತ್ತನಳ್ಳಿಯ ಆ ಮನೆಯನ್ನು ತಲುಪಿದಾಗ ಬಾಗಿಲಿಗೆ ಚಿಲಕ! ಚಿಲಕ ತೆರೆದು ಶೇಖರ್ ಸರ್ ಸರಾಗವಾಗಿ ಒಳಹೊಕ್ಕಾಗ ನನಗೆ ಗಾಬರಿ! ಯಾರದೋ ಮನೆ, ಜನರಿಲ್ಲದ ವೇಳೆಯಲ್ಲಿ ಹೀಗೆ ಮನೆ ನುಗ್ಗುವುದು ಎಂದರೆ!


ಹಾಗೆ ಒಳನುಗ್ಗಿದವರು ನಾಲ್ಕು ತಟ್ಟೆಗೆ ಕಣಿಲೆ ಸಾರು ಮತ್ತು ಕಡುಬು ಹಾಕಿ ಒಂದನ್ನು ಬಾಯೊಳಗಿಳಿಸಿಕೊಳ್ಳುತ್ತಾ 'ಬನ್ನಿ' ಎಂದು ನಮ್ಮನ್ನು ಆಮಂತ್ರಿಸಿದರು! ಆತ್ಮದ ಆರೋಗ್ಯಕ್ಕಾಗಿ ಬಂದ ನಮಗೆ ದೇಹದ ಅಸ್ತಿತ್ವ ದೊಡ್ಡದೆನಿಸಿ 'ಮುಕ್ಕಲು' ಶು(ಸು)ರುಮಾಡಿದೆವು. 

ಶೇಖರ್ ಸರ್ ಮೇಷ್ಟ್ರಾಗಿದ್ದಾಗ ಇದೇ ಮನೆಯಲ್ಲಿ 'ಮನೆಮಗ'ನಂತೆ ಉಳಿದುಕೊಂಡಿದ್ದರು. ಈಗಿನ Paying Guestನಂತಲ್ಲ ಅದು. 

ಸ್ವಲ್ಪ ಹೊತ್ತಲ್ಲಿ ತೋಟದೊಳಗಿಂದ ಒಂದು ಕುಳ್ಳಗಿನ ದೇಹ ಏನನ್ನೋ ತಲೆಯ ಮೇಲಿರಿಸಿಕೊಂಡು ನುಸುಳಿ ಬರುತ್ತಿತ್ತು. ನಮ್ಮನ್ನು ನೋಡಿದ್ದೇ ನಗುವಿನ 'ಸ್ವಾಗತ'.

'ಬೊಂಬಾಯಣ್ಣ' ಪರಿಚಯಿಸಿದರು ಶೇಖರ್ ಸರ್. ನನಗದು 'ಬೊಮ್ಮಾಯಣ್ಣ' ಎಂದು ಕೇಳಿಸಿದ್ದರಿಂದ ಹೆಸರಿನ ಬಗ್ಗೆ ಚಕಾರವೆತ್ತಲಿಲ್ಲ.

ಅಷ್ಟರಲ್ಲಿ ಪಾರ್ವತಕ್ಕ ಬಂದು 'ಬನ್ನಿ ಮಾಷ್ಟ್ರೇ' ಎಂಬ ಸ್ವಾಗತಕ್ಕೆ ಅವರ ಮನೆಯ ಕಡೆ ನಡೆದೆವು. ಪಾರ್ವತಕ್ಕನ ಮಾತಿನಲ್ಲಿ ಇಡೀ ಹಳ್ಳಿಯ ಭಾಷೆ ಮತ್ತು ಸಂಸ್ಕೃತಿಗಳ ದರ್ಶನವಾಯಿತು. ಅಲ್ಲಿ ನಮ್ಮ ಪಾಲಿಗೆ 'ಕಟ್ಟಂಚಾಯ', 'ಮೀನಿನ ಪೀಸು' ,ಸೀಬೇಕಾಯಿ.


'ಬೊಂಬಾಯಣ್ಣ'ನ ಕೋಳಿಸಾರಿಗೆ ಅದೆಂಥದ್ದೋ ಚುಂಬಕ ಶಕ್ತಿಯಿದೆ ಎಂದು ಆಮೇಲೆ ತಿಳಿದದ್ದು. ಬೊಂಬಾಯಿಯ ಹೋಟೆಲೊಂದರಲ್ಲಿ ಕೆಲಸ ಮಾಡಿದ್ದರಿಂದ ಪೂವಯ್ಯ ಎಂಬ ನಿಜನಾಮವಳಿದು ಅನ್ವರ್ಥನಾಮವೇ ಉಳಿದುಬಿಟ್ಟಿತ್ತು.


*

ಅಲ್ಲಿಗೆ ಬೆಳಿಗ್ಗೆ ಮತ್ತು ಸಂಜೆ ಬಸ್ಸು  ಬಂದು ಮುಖ ತೋರಿಸಿ ಹೋಗುತ್ತದೆ. ಮೊಬೈಲ್ ಸಿಗ್ನಲ್ ಎಲ್ಲಾದರೂ ಒಂದು 'ಕಡ್ಡಿ' ಸಿಕ್ಕಿದರೆ ಅವರ ಅದೃಷ್ಟ. ಅಷ್ಟಿಷ್ಟು ಓದಿಕೊಂಡ ಮಕ್ಕಳು ಪಟ್ಟಣ ಸೇರಿದ್ದಾರೆ. ಇರುವ ಕಾಫಿ ತೋಟ, ಭತ್ತದ ಗದ್ದೆಯಲ್ಲಿ ತಂದೆ-ತಾಯಿಯರ ಅಹೋರಾತ್ರಿ ಕೆಲಸ. ನಮ್ಮಂಥವರು ಹೋದರೆ ಸ್ವಲ್ಪವೂ ಬೇಸರಿಸದೆ ಮನೆಮಕ್ಕಳ ಹಾಗೆ ಆತಿಥ್ಯ.

ಪಕ್ಕಾ ಕಾಡುಮನುಷ್ಯನ ಹಾಗೆ ಬೆಳೆದ ನನಗೆ ಇದನ್ನೆಲ್ಲ ನೋಡಿದ ಮೇಲೆ ಈ ತಂತ್ರಜ್ಞಾನ ನಮ್ಮ ಅಸ್ತಿತ್ವವನ್ನು ಬುಡಮೇಲು ಮಾಡುತ್ತಿರುವ ಕುರಿತು ಸಿಟ್ಟು, ಸಂಕಟ ಒಟ್ಟಿಗೆ ಆಗತೊಡಗಿದೆ

*
ಕಾಜೂರು ಸತೀಶ್ 

No comments:

Post a Comment