ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 29, 2019

ಶಿಕ್ಷಣ ಮತ್ತು ವೃತ್ತಿ


ನಾವು ಏನೋ ಕಲಿತಿರುತ್ತೇವೆ. ಯಾವುದೋ ಕ್ಷೇತ್ರದಲ್ಲಿ ವಿಶೇಷತೆಯನ್ನು ಗಳಿಸಿಕೊಂಡಿರುತ್ತೇವೆ. ನಮಗೆ ಯಾವುದೋ ಒಂದು ಕ್ಷೇತ್ರದಲ್ಲಿ ದುಡಿಯುವ ಇಚ್ಛೆಯಿರುತ್ತದೆ.

ತಮಾಷೆಯೆಂದರೆ, ನಾವು ಓದಿರುವುದಕ್ಕೂ ಮಾಡುತ್ತಿರುವ ಕೆಲಸಕ್ಕೂ ಪರಸ್ಪರ ಸಂಬಂಧವೇ ಇರುವುದಿಲ್ಲ. PhD ಮಾಡಿದಾತ ಕನಿಷ್ಟ ಒಂದು ಡಿ ಗ್ರೂಪ್ ಕೆಲಸ ಸಿಕ್ಕಿದರೂ ಸಾಕು ಎಂದು ಕನಸು ಕಾಣುತ್ತಾನೆ. ಇಂಜಿನಿಯರಿಂಗ್ ಓದಿದಾತ ಬ್ಯಾಂಕಿನಲ್ಲಿ ಕಂಪ್ಯೂಟರ್ ಕುಟ್ಟುತ್ತಾ ಕುಳಿತಿರುತ್ತಾನೆ. ರಸವತ್ತಾಗಿ ಸಾಹಿತ್ಯ ಹೇಳಿಕೊಡಬಲ್ಲವನಿಗೆ ಗುಮಾಸ್ತನ ಕೆಲಸ. ಕಾಗುಣಿತ ಬರದ ವ್ಯಕ್ತಿ ಭಾಷಾ ಶಾಸ್ತ್ರದ ಪ್ರೊಫೆಸರ್!

ನಮ್ಮ ನಮ್ಮ ಆಸಕ್ತಿಯ ಕ್ಷೇತ್ರಗಳಿಗೆ ನಮ್ಮನ್ನು ನಿಯೋಜಿಸಿಬಿಟ್ಟರೆ ಬದುಕು ಮತ್ತು ಈ ಜಗತ್ತು ಎಷ್ಟು ಚೆನ್ನಾಗಿರುತ್ತಿತ್ತು!

ಕಬಡ್ಡಿ ಆಟಗಾರನ ಮೇಲೆ ಚೆಸ್ ಹೇರುವ ಲೋಕದ ಕಪಾಳಕ್ಕೆ ಬಾರಿಸಲು ಯಾವ ಕೆರ ಹೊಂದುತ್ತದೆ ಎಂದು ಯೋಚಿಸುತ್ತಾ ಕುಳಿತಿದ್ದೇನೆ...
*

ಕಾಜೂರು ಸತೀಶ್

Saturday, July 27, 2019

ಸರ್ಕಾರಿ ಕೆಲಸ ಮತ್ತು ರಾಜಕಾರಣ

ಒಬ್ಬಾತ ಸರ್ಕಾರಿ ನೌಕರನಾಗಿದ್ದು ಪ್ರಭಾವಿ ರಾಜಕಾರಣಿಗಳ ನಂಟಿದೆಯೆಂದರೆ(ಬಕೇಟ್ ಹಿಡಿಯಲು ತಿಳಿದಿದ್ದರೆ) ಆತ ಕೆಲಸ ಮಾಡಬೇಕೆಂದೇನೂ ಇಲ್ಲ!

ಒಬ್ಬಾತ ಪ್ರಾಮಾಣಿಕ ಕೆಲಸಗಾರನಾಗಿದ್ದರೆ ಮೇಲೆ ಹೇಳಿದ ಪುಣ್ಯಾತ್ಮನ ಕೆಲಸಗಳೆಲ್ಲ ಇವನ ಹೆಗಲಿಗೇರುತ್ತದೆ.

ರಾಜಕಾರಣದ ಈ ಬಗೆಯ ಹೊಲಸು ಪ್ರವೇಶ ನಮ್ಮ ನಾಡನ್ನು ಮಂಕಾಗಿಸುತ್ತದೆ.

ಡೆಮಾಕ್ರಸಿಯ ಆತ್ಮದಲ್ಲಿ ಸರ್ವಾಧಿಕಾರವು ಕುಳಿತು ಆಳುತ್ತಿರುತ್ತದೆಯೇ?
*

ಕಾಜೂರು ಸತೀಶ್ 

Friday, July 26, 2019

ತಂತ್ರಜ್ಞಾನ ಮತ್ತು ನೆಮ್ಮದಿ

ನನಗೆ ಯಾವಾಗಲೂ ಅನಿಸುತ್ತಿರುತ್ತದೆ- ಇರುವಷ್ಟು ಕಾಲ ನಾವು ಏನನ್ನಾದರೂ ಸಾಧಿಸಿ ಪಡೆಯಬೇಕಿರುವುದಿದ್ದರೆ, ಅದು 'ನೆಮ್ಮದಿ'.

ನೆಮ್ಮದಿಯ ಗಳಿಕೆಗಿರುವ ಅತ್ಯಂತ ದೊಡ್ಡ ತೊಡಕೆಂದರೆ 'ತಂತ್ರಜ್ಞಾನ'. ಅದು ಮೆದುಳನ್ನು ದಾಸನನ್ನಾಗಿ ಮಾಡುತ್ತದೆ. ನಾವು ಒಡೆಯರಾಗಿದ್ದುಕೊಂಡೇ ಅದರ ಗುಲಾಮರಾಗಿಬಿಡುತ್ತೇವೆ. ಸುಲಭೀಕರಣದ ಬಲೆಗೆ ಸಿಲುಕಿ ಒದ್ದಾಡುತ್ತೇವೆ. ಅದರೆದುರು ನಮ್ಮ ದೇಹ ಮತ್ತು ಮನಸ್ಸು ಜಡವಾಗಿಬಿಡುತ್ತವೆ. ಆದರೂ ನಾವು ಬೆವರು ಹರಿಸಿ ದುಡಿಯುವವರಂತೆ ಪೋಷಾಕು ತೊಡುತ್ತೇವೆ. ಒತ್ತಡದಲ್ಲಿ ಸಾಯುತ್ತೇವೆ.

ಎಲ್ಲ ಕೆಲಸಗಳಲ್ಲೂ ತಂತ್ರಜ್ಞಾನವು ಎಷ್ಟು ಸಹಕರಿಸುತ್ತದೋ ಅದರ ದುಪ್ಪಟ್ಟು ಒತ್ತಡವನ್ನು ಬಿಟ್ಟಿಯಾಗಿ ವಿತರಿಸುತ್ತದೆ. ಹಾಗೆ ಒತ್ತಡ ಹೇರಿ ಮಾಡಿಸುವ ಕಾರ್ಯದ ಫಲಿತಾಂಶ ಮಾತ್ರ ಶೂನ್ಯ ಅಥವಾ ನಿರರ್ಥಕ.

*


ಕಾಜೂರು ಸತೀಶ್ 

Tuesday, July 23, 2019

ಹುಟ್ಟು, ಜನ್ಮದಿನ ಮತ್ತು ಸಾವಿನ ನಡುವೆ

ಫೇಸ್ಬುಕ್ಕಿಗೆ ಬರುವವರೆಗೆ ನನ್ನ ಜನ್ಮದಿನಾಂಕವನ್ನು ಗುಟ್ಟಾಗಿ ಇಟ್ಟುಕೊಂಡಿದ್ದೆ. ಫೇಸ್ಬುಕ್ಕಿನಿಂದ ಹೈಡ್ ಮಾಡುವಷ್ಟರಲ್ಲಿ ಸುಮಾರು ಜನರ ನೆನಪಿನೊಳಗೆ ಅದು ಸಿಕ್ಕಿಹಾಕಿಕೊಂಡಿತ್ತು.

ನನ್ನ ಜನ್ಮದಿನ ಉಳಿದೆಲ್ಲ ದಿನಗಳಂತೆ ಒಂದು ಸಾಮಾನ್ಯ ದಿನ. ಅದನ್ನು ಹಬ್ಬದಂತೆ ಆಚರಿಸುವುದು ನನ್ನಿಂದ ಅಸಾಧ್ಯ. ಮರಣದ ಕಡೆಗಿನ ಪಯಣ ಒಂದು ಕಡೆ, ಏನನ್ನಾದರೂ ಮಾಡಬೇಕೆಂಬ ತುಡಿತ ಮತ್ತೊಂದು ಕಡೆ. ಅದಕ್ಕಾಗಿ ನಿಸರ್ಗ ಸಹಜ ವಾಂಛೆಗಳನ್ನೆಲ್ಲ ಹತ್ತಿಕ್ಕಿ ಈ ಕ್ಷಣಗಳನ್ನಷ್ಟೇ ಬಾಳುತ್ತಾ ಬದುಕು ಕಟ್ಟಿಕೊಳ್ಳುತ್ತಿರುವವನು ನಾನು.

ನೋವು-ನಲಿವುಗಳನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಬೇಕೆನ್ನುವುದು ನನ್ನ ತರ್ಕ(ಅದು ಸಾಧ್ಯವಿಲ್ಲದಿದ್ದರೂ). ನೋವನ್ನು ಸಹಿಸುವ ವಿಧಾನವೆಂದರೆ ನಲಿವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಿರುವುದು. ಹುಟ್ಟನ್ನು, ಹುಟ್ಟುಹಬ್ಬವನ್ನು ಸಂಭ್ರಮಿಸುವಾಗ ಸಾವನ್ನು ಸಹಜವಾಗಿ (ಸಂಭ್ರಮಿಸುವುದು ಬೇಡ!) ಸ್ವೀಕರಿಸುವ ಸವಾಲನ್ನು ಎದುರಿಸಬೇಕು.

ಇದರ ನಡುವೆ, ಈ ಹುಟ್ಟುಹಬ್ಬದ ಹಾರೈಕೆಗಳಲ್ಲಿ ಕೆಲವಾದರೂ ನಿಜದ ಪ್ರೀತಿಯನ್ನು ಮೈದುಂಬಿಕೊಂಡಿರುತ್ತದೆ; ಆಚರಿಸದಿದ್ದರೂ ಆ ದಿನವನ್ನು ಲವಲವಿಕೆಯಿಂದಿಟ್ಟಿರುತ್ತದೆ.
*


ಕಾಜೂರು ಸತೀಶ್ 

Monday, July 22, 2019

ಕಾಯಿಲೆ, ಒಳ್ಳೆಯತನ ಮತ್ತು...

ಒಂದು ತರಬೇತಿಯಲ್ಲಿ ನಾನವರನ್ನು ಮೊದಲ ಬಾರಿಗೆ ನೋಡಿದ್ದು. ಅವರು ಬೇರೆ ಜಿಲ್ಲೆಯಿಂದ ವರ್ಗಾವಣೆಯಾಗಿ ಬಂದಿದ್ದರು.

ಅವರು ನನ್ನ ಗುಂಪಿನಲ್ಲಿದ್ದರು. ನಮಗೆ ಸೂಚನೆ ಸಿಕ್ಕಿತ್ತು: "ಇಷ್ಟು ನಿಮಿಷದ ಒಳಗೆ ಯಾರು ಹೆಚ್ಚು ಪದರಚನೆ ಮಾಡುತ್ತಾರೋ ಆ ತಂಡವು ಗೆಲುವನ್ನು ತನ್ನದಾಗಿಸುತ್ತದೆ".

ಸಮಯ ಮೀರಿದರೂ ಉಳಿದ ತಂಡಗಳು ತಮ್ಮ ಅಂಕವನ್ನು ಹೆಚ್ಚಿಸಿಕೊಳ್ಳುವ ಅನ್ಯಮಾರ್ಗವನ್ನು ಹಿಡಿದಿದ್ದವು. ಇವರು ಮಾತ್ರ- 'ಸಮಯ ಮುಗಿದಿದೆ, ಇನ್ನು ನಾನು ಮಾಡುವುದಿಲ್ಲ, ತಂಡ ಸೋತರೂ ಪರವಾಗಿಲ್ಲ' ಎಂದು ಸುಮ್ಮನೆ ಕುಳಿತುಬಿಟ್ಟರು.

ಆ ಕ್ಷಣ ನಾನವರಿಗೆ ಏನೂ ಹೇಳಲಿಲ್ಲ. ಬದಲಾಗಿ, ಆ ಕ್ಷಣವನ್ನು ನನ್ನೊಳಗೆ ತುಂಬಿಕೊಳ್ಳತೊಡಗಿದೆ. ಅವರ ಬಗ್ಗೆ ಗೌರವ ಭಾವವೊಂದು ನನ್ನೊಳಗೆ ಟಿಸಿಲೊಡೆದಿತ್ತು.

ಅಂತಹ ಒಳ್ಳೆಯ ವ್ಯಕ್ತಿಯನ್ನು ಒಂದು ಭೀಕರ ಕಾಯಿಲೆ ಬಂದು ಅಪ್ಪಿಕೊಂಡಿದೆ ಎಂಬ ಸುದ್ದಿ ಕೇಳಿ ಕುಸಿದುಹೋದೆ. ಒಂದು ಕ್ಷಣ ಜನರು ಹಳಿಯುವ 'ವಿಧಿ'ಯ ನೆನಪಾಯಿತು.
ಆದರೆ ವಾಸ್ತವವಾಗಿ ಆ ಕಾಯಿಲೆಗೂ, ಅವರ ಒಳ್ಳೆಯತನಕ್ಕೂ ಯಾವ ಬಗೆಯ ಸಂಬಂಧವೂ ಇಲ್ಲ ಎಂದುಕೊಂಡು ಮತ್ತದೇ ಶೂನ್ಯದೊಳಗೆ ಸೇರಿಕೊಂಡೆ.

*

ನನಗೆ ಆಗಾಗ ಒಂದು ಕರೆ ಬರುತ್ತದೆ. ನಾನು ನನ್ನ ಕೈಯಿಂದ ಇಷ್ಟು ಸಾವಿರ ಹಣವನ್ನು ಶಾಲೆಗಾಗಿ ಖರ್ಚುಮಾಡುತ್ತೇನೆ ಎಂದು ಬೊಗಳೆಬಿಡುತ್ತದೆ ಆ ದನಿ. ಇರೋಬರೋದನ್ನೆಲ್ಲಾ ಕೊಳ್ಳೆಹೊಡೆಯುವ ಪ್ರವೃತ್ತಿಯ ಆ ದನಿಗೆ ಮತ್ತು ಅದನ್ನು ಆವರಿಸಿಕೊಂಡಿರುವ ಆ ದೇಹಕ್ಕೆ, ಅದಕ್ಕಿರುವ ಹೆಸರಿಗೆ ಹೀಗೆ ಹೇಳಿಕೊಳ್ಳಲು ನಾಚಿಕೆ-ಮಾನ-ಮರ್ಯಾದೆಯಾದರೂ ಬೇಡವೇ? ಎಂದು ನನ್ನನ್ನು ನಾನು ಕೇಳಿಕೊಂಡು ಈ ಜಗತ್ತಿಗೆ ಒಗ್ಗಿಕೊಳ್ಳಲು ಹವಣಿಸುತ್ತೇನೆ!
*


ಕಾಜೂರು ಸತೀಶ್

Saturday, July 13, 2019

ಸರ್ಕಾರಿ ವ್ಯವಸ್ಥೆ ಮತ್ತು ಶಿಕ್ಷೆಯಿಲ್ಲದ ಕಗ್ಗೊಲೆ!

'ಅವನು ಕೆಲಸ ಮಾಡುತ್ತಾನೆ, ಅವನಿಗೆ ಇನ್ನಷ್ಟೂ ಕೆಲಸವನ್ನು ವಹಿಸಿಬಿಡಿ'

'ಇವನು ಏನೂ ಮಾಡುವುದಿಲ್ಲ, ಇವನಿಗೆ ಯಾವ ಕೆಲಸವನ್ನೂ ವಹಿಸದಿರಿ'

ಹೀಗೆ ದುಡಿಯುವವರ ಮೇಲೆ ಕೆಲಸಗಳನ್ನು ಹೇರಿ, ಒತ್ತಡಕ್ಕೆ ಸಿಲುಕಿಸಿ ಕೊಲೆಗೈಯ್ಯುವ,

ದುಡಿಯದವರನ್ನು ಕೊಬ್ಬಿಸಿ ಪೋಷಿಸುವ bureaucracyಗೆ ಯಾವ ಶಿಕ್ಷೆಯೂ ಇಲ್ಲ. ಶಿಕ್ಷೆಯ ಮಾತಿರಲಿ- ಉಳಿಯುವ ಆ 'ಜಾಣ ಸೋಮಾರಿವರ್ಗ'ದಿಂದ ನಮ್ಮ ಸಮಾಜಕ್ಕೆ ಎಂತಹ ಸೇವೆಯಾದರೂ ಸಲ್ಲುತ್ತದೆ?

ನಾವು ಯಾಕೆ ಹಿಂದುಳಿಯುತ್ತೇವೆ ಎಂದರೆ....
*

ಕಾಜೂರು ಸತೀಶ್