ಇವರು
ಇವನು ಬುದ್ಧಿವಂತ
ಮಿದುಳು ನೆನಪಿಟ್ಟುಕೊಳ್ಳುತ್ತದೆ ಇವನ.
ಇವನು ನೀತಿವಂತ
ಹೃದಯ ನೆನಪಿಟ್ಟುಕೊಳ್ಳುತ್ತದೆ ಇವನ.
ಇವನು ಕ್ರೂರಿ
ಗುಪ್ತಾಂಗ ನೆನಪಿಟ್ಟುಕೊಳ್ಳುತ್ತದೆ ಇವನ.
*
Teaching Aid
ಇವತ್ತಿನ ಪಾಠ 'ಹಿಟ್ಲರ್'
'ಮಿಂಚಿನ ಸಂಚಾರ'ಕ್ಕೆ ಬಂದ ಅಧಿಕಾರಿ
Teaching Aid ಇಲ್ಲವೆಂದು
ತಾರಾಮಾರಾ ಬೈಯ್ದರು ತರಗತಿಯಲ್ಲೇ..
ಹೊರಹೋದ ತಕ್ಷಣ
ಮಕ್ಕಳು ಕೇಳಿದರು
' ಏನ್ Teaching Aid ಸಾರ್?'
'ಬಹುಶಃ ಹಿಟ್ಲರ್ನ ಚಿತ್ರ ಇರ್ಬೇಕು' ಅಂದೆ.
ಕಿಟಕಿಯಿಂದ ಹೊರನೋಡುತ್ತಾ
ಮಕ್ಕಳು ಕೂಗತೊಡಗಿದರು
'ಹಿಟ್ಲರ್ನ ನೋಡಿದ್ವಿ, ಹಿಟ್ಲರ್ನ ನೋಡಿದ್ವಿ...'
ಅಂದ ಹಾಗೆ
ನೆನ್ನೆಯ ಪಾಠ 'ಭಯೋತ್ಪಾದನೆ'
ಎರಡಕ್ಕೂ
Teaching Aid ಸಿಕ್ಕವು!
*
ರಸ್ತೆ
ರಸ್ತೆ
ಗಾಢ ನಿದ್ದೆಯಲ್ಲೂ
ಜನರ ಹೊತ್ತೊಯ್ಯುತ್ತದೆ.
ರಸ್ತೆ 'Politics'
ಗಿಡ ನೆಡಬಹುದು ಗುಂಡಿಗಳಲ್ಲಿ
ಬೇಕಿದ್ದರೆ ಈಜಬಹುದು
ಕಾಲು ಮುರಿಯಬಹುದು
ಡಿಕ್ಕಿಯೊಡೆಸಿ ಕೊಲ್ಲಬಹುದು...
ನೋಡುತ್ತಿರಿ
Footpathಗಳನ್ನೂ ನುಂಗುವ
ದಿನಗಳು ಬರಲಿವೆ.
ಕಪ್ಪೆಗಳಿಗೆ ಅಭ್ಯಾಸವಾಗಿದೆ
ನಾವೇನು ಮಾಡುವುದು?
*
ಕೊಲೆ
'ಯಾರೋ ಒಬ್ಬ
ನನ್ನ ಎದೆ ಸೀಳಲು ಬಂದ ಹೊತ್ತು
ಏನು ಮಾಡುತ್ತೀಯ?'
ಕೇಳಿಕೊಂಡೆ ನನ್ನನ್ನೇ.
'ಹೂ ಕೊಡುತ್ತೇನೆ'
ನಡುವೆ ಬಾಯಿ ಹಾಕಿತು ಕವಿತೆ.
ಅದರ ಬಾಯಿ ಮುಚ್ಚಿ ಯೋಚಿಸಿದೆ
ಏನು ಮಾಡಲಿ
ಹೂಗಳು ಕೊಲೆಯಾದ ಕಾಲದಲ್ಲಿ ?
*
ಹಸಿವು
ಹಸಿವಿಗೆ ಹೊಟ್ಟೆಹಸಿವು
ಅದೂ ಕೂಡ ಅಂದುಕೊಂಡಿದೆ-
ಹೊಟ್ಟೆಯೊಳಗೊಂದು ರೈಲು ಇದೆ
ಅದು ಕರುಳಿನ ಹಳಿಗಳಲ್ಲಿ ಓಡುತ್ತದೆ
*
ಬೇಕಾ?
ಜೇನು ಬೇಕಾ ಜೇನು?
ಕೇಳಿದ.
ಬೇಡ
ಎಂದೆ.
ಲಡ್ಡು ಬೇಕಾ ಲಡ್ಡು?
ಕೇಳಿದ.
ಬೇಡ
ಎಂದೆ.
ಸಕ್ಕರೆ ಬೇಕಾ ಸಕ್ಕರೆ?
ಕೇಳಿದ.
ಬೇಡ
ಎಂದೆ.
ಬೆಣ್ಣೆ ಬೇಕಾ ಬೆಣ್ಣೆ?
ಕೇಳಿದ.
ಬೇಕು
ಎಂದೆ.
ಹೊರಟುಹೋದ.
ಮತ್ತೆ ಕೇಳಲಿಲ್ಲ.
*
ಕಾಜೂರು ಸತೀಶ್
No comments:
Post a Comment