ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, March 6, 2014

ಆ ಮನೆ


ಅಪ್ಪ ಅಲ್ಪ ಮೊತ್ತಕ್ಕೇ ಮನೆ ಮಾರಲು ಹೊರಟಿರುವ ಸುದ್ದಿ ಕೇಳಿ ನಾವೆಲ್ಲ ಬೆಚ್ಚಿಹೋಗಿದ್ದೆವು! ಆಗಷ್ಟೆ ನಾನು ಮೂರನೇ ತರಗತಿ ಉತ್ತೀರ್ಣನಾಗಿದ್ದೆ.

ಕೆಲವೇ ದಿನಗಳು ಕಳೆದ ಮೇಲೆ ಲಾರಿಯೊಂದು ಬಂದು ನಿಂತಿತ್ತು. ಮೇ ತಿಂಗಳು. ಮೋಡಗಳೆಲ್ಲ ಕಪ್ಪುಗಟ್ಟಿ ನಿಂತಿದ್ದವು.ನಮ್ಮೊಳಗಿನ ದುಃಖವೂ ತುಂಬು ಬಾಣಂತಿ! ಎಲ್ಲವನ್ನೂ ಆ ಗೂಡುಲಾರಿಯೊಳಗೆ ತುಂಬಿಸಲಾಯಿತು- ನಾಯಿ,ಕೋಳಿಗಳ ಸಮೇತ.


ನಮ್ಮ ಮನೆಯ ಹಿಂಬದಿಯಲ್ಲಿದ್ದ ಬೆಣ್ಣೆಹಣ್ಣು ಮರದ ತುಂಬ ಬಲಿತ ಕಾಯಿಗಳು ಜೋತುಬಿದ್ದಿದ್ದವು. ದಿನಾ ಬೆಳಿಗ್ಗೆದ್ದಾಗ ಅದನ್ನು ತಿನ್ನುವ ಕನಸ್ಸು ಕಾಣುತ್ತಿದ್ದ ನನಗೆ,ಎಲ್ಲವನ್ನೂ ಬಿಟ್ಟುಹೋಗುವಾಗ ದುಃಖ ಒತ್ತರಿಸಿ ಬರುತ್ತಿತ್ತು. ಅಪ್ಪನ ಪೆದ್ದುತನವನ್ನೇ ಬಂಡವಾಳವಾಗಿಸಿ ಮನೆ ಕಸಿಯುತ್ತಿರುವ ಮಂದಿಗೆ ಆ ಮರ ಸಿಗದ ಹಾಗೆ ಕಡಿದುಹಾಕಬೇಕೆಂದು ತೀರ್ಮಾನಿಸಿದೆ.ಆದರೆ, ಆ ಹೊತ್ತು ಯಾವುದಕ್ಕೂ ಅವಕಾಶ ಕೊಡಲಿಲ್ಲ. ಯಾವುದಕ್ಕೂ ಕೂಡ!



ಕಡೆಯ ಬಾರಿ ಬಲಭಾಗದಲ್ಲಿದ್ದ 'ಅಮ್ಮಡೆ' ಮರಕ್ಕೆ ಜೋತುಹಾಕಿ ಕಾಲುಗಳನ್ನು ಕೈಯ ಒಳಗೆ ತೂರಿಸಿ ಹಿಂದಕ್ಕೆ ಚಾಚಲು,ಕಿತ್ತಳೆ ಹಣ್ಣಿನ ಮರಕ್ಕೆ ದೊಣ್ಣೆ ಬೀಸಲು, ಮರಬಾಳೆಯ ಗಿಡಕ್ಕೆ ಹತ್ತಿ ಕಾಯಿಗಳನ್ನು ಮುಟ್ಟಲು, ಮರಕೋತಿ ಆಟದ ಆವಾಸ ಸ್ಥಾನವಾಗಿದ್ದ 'ಅಂಟುವಾಳ' ಮರದ ಮೇಲೆ ಹತ್ತಿ ಚಂಗನೆ ಜಿಗಿಯಲು, ಮೂರ್ನಾಲ್ಕು ಮಂದಿ ತಬ್ಬಿ ಹಿಡಿಯಬೇಕಿದ್ದ 'ಅನಲ್ತಾರಿ' ಮರದ ಕೆಳಗೆ ಕೂತು ಅದರಡಿಯಲ್ಲಿ ಉಕ್ಕುತ್ತಿದ್ದ ಜಲದಲ್ಲಿ ಕಾಗದದ ದೋಣಿ ಬಿಡಲು, ಬಾವಿಯ ಬಳಿ ಏಡಿ ಹಿಡಿಯಲು ಇತ್ಯಾದಿ,ಇತ್ಯಾದಿಗಳು ಆಸೆಗಳ ಪಟ್ಟಿಯಲ್ಲಷ್ಟೇ ಉಳಿದುಹೋದವು.


ನೆಲ ಮತ್ತು ನೆಲೆಗಳೆರಡನ್ನೂ ಕಳಕೊಂಡ ಮೇಲೆ ಮತ್ತೆ ನಾನು ಹುಟ್ಟಿ ಬೆಳೆದ, ನನ್ನ ಪುಟ್ಟ ಪಾದದ ಹೆಜ್ಜೆ ಗುರುತುಗಳು ಮಾಸದ ಆ ಮನೆಗೆ ಮತ್ತೆಂದೂ ಹೋಗಲಿಲ್ಲ. ಅದರ ಸುತ್ತ ನಾನು ಬಿಟ್ಟು ಬಂದ- ನಾನು ಸತ್ತರೂ ಸಾಯದ- ಯಾವ ನೆನಪುಗಳನ್ನೂ ಕಣ್ಣಾರೆ ಮತ್ತೆ
ಕಾಣಲಿಲ್ಲ.
*

-ಕಾಜೂರು ಸತೀಶ್ 

No comments:

Post a Comment