ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, August 2, 2018

ಅಂತರ್ಜಾಲ ಬಳಕೆ: ಓದು ಮತ್ತು ಬರಹದ ಸಾಧ್ಯತೆಗಳು

ಈಚೆಗೆ ನಡೆದ ಸಾಹಿತ್ಯ ಸಂವಾದವೊಂದರಲ್ಲಿ ‘ನಮಗೇಕೆ ಇಂದು ನಮ್ಮ ಪೂರ್ವಿಕರಂತೆ ಮಹಾಕಾವ್ಯಗಳನ್ನೂ, ದಟ್ಟ ಜೀವನಾನುಭವವುಳ್ಳ ಕಾದಂಬರಿಗಳನ್ನೂ ಬರೆಯಲಾಗುತ್ತಿಲ್ಲ?’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ‘ಇಂದಿನ ಒತ್ತಡದ ಸನ್ನಿವೇಶದಲ್ಲಿ ನಾವು ಬರೆಯುತ್ತಿರುವುದೇ ಮಹತ್ಕಾರ್ಯ. ನಮಗೆ ಆಗಿನ ಸಮಚಿತ್ತತೆ ಇಲ್ಲ, ಅಂತಹ ಸ್ಥಿತಿಯ ನಿರ್ಮಾಣವೂ ಇಂದು ಅಸಾಧ್ಯ’, ತಣ್ಣಗೆ ಉತ್ತರಿಸಿದ್ದರು ತರುಣ ಪೀಳಿಗೆಯ ಲೇಖಕರು.

ಇಂದು ಅಂತರ್ಜಾಲ ಸರ್ವವ್ಯಾಪಿಯಾಗಿ ಅಭಿವ್ಯಕ್ತಿಯ ಸಾಧ್ಯತೆಗಳು ವ್ಯಾಪಕವಾಗಿವೆ. ನಮ್ಮ ಅಭಿವ್ಯಕ್ತಿಗೆ ದೊಂದು ಒಳ್ಳೆಯ ಮಾಧ್ಯಮ. ಆದರೆ, ಪ್ರತಿಯೊಬ್ಬರೂ ಸ್ವಘೋಷಿತ ಕವಿಗಳಾಗುವ/ ವರದಿಗಾರರಾಗುವ ಅವಕಾಶವನ್ನು ಅದು ಕಲ್ಪಿಸಿದೆ. ಒಂದು ಕವಿತೆ/ವರದಿಯ ‘ಹೆರಿಗೆ’ ನಡೆಯುತ್ತಿರುವಾಗಲೇ ನಡುನಡುವೆ ನುಸುಳುವ ನೋಟಿಫಿಕೇಷನ್‍ಗಳು ಈ ಕಾರ್ಯವು ಸುಸೂತ್ರವಾಗಿ ನಡೆಯುವುದನ್ನು ತಡೆಯುತ್ತದೆ. ಇಂತಹ ಧಾವಂತದ, ಧ್ಯಾನ ತಪ್ಪಿದ ಅಭಿವ್ಯಕ್ತಿ ಕ್ರಮ ಮತ್ತು ಅವುಗಳ ಸ್ವೀಕರಣದ ನಡುವೆ ನಾವಿದ್ದೇವೆ.

‘ಓದು’ ಮತ್ತು ‘ಬರಹ’ ತಾಳ್ಮೆಯನ್ನು ಬೇಡುವ ಪ್ರಕ್ರಿಯೆ. ಅದೊಂದು ಧ್ಯಾನ. ಏಕೆಂದರೆ ಧ್ಯಾನಸ್ಥವಾಗಿ ಹುಟ್ಟುವ ಬರಹಕ್ಕೆ ಇಳಿಯುವುದಕ್ಕೂ ಓದುಗನಿಗೆ ಧ್ಯಾನಸ್ಥ ಮನಸ್ಥಿತಿ ಬೇಕಾಗುತ್ತದೆ. ಬರಹಗಾರರ ಮನೋವಲಯದೊಳಕ್ಕೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಅಂಥದ್ದರಲ್ಲಿ ಆನ್‍ಲೈನ್‍ನಲ್ಲಿದ್ದುಕೊಂಡೇ ಓದುತ್ತಿದ್ದೇವೆ ಮತ್ತು ಬರೆಯುತ್ತಿದ್ದೇವೆ ಎಂಬ ತರುಣ ಪೀಳಿಗೆಯ ಮಾತೇ ವಿಚಿತ್ರವೆನಿಸುತ್ತದೆ. ಈ ಹೊತ್ತಿನಲ್ಲೂ ತರುಣರು ಓದು ಮತ್ತು ಬರಹಕ್ಕೆ ಚಾಚಿಕೊಳ್ಳುತ್ತಿದ್ದಾರಲ್ಲಾ ಎಂಬುದು ಖುಷಿ ಕೊಡುವ ಸಂಗತಿಯಾದರೂ, ಸದ್ಯ ಅವು ಯಾವ ನೆಲೆಯಲ್ಲಿ ಏರ್ಪಡುತ್ತಿವೆ ಎನ್ನುವುದೂ ಇದರಿಂದ ಸ್ಪಷ್ಟವಾಗುತ್ತಿದೆ.

ಬೆಳಿಗ್ಗೆ ಎದ್ದಾಕ್ಷಣ ನಾವು ಅಂತರ್ಜಾಲ ಪತ್ರಿಕೆಗಳ ಮೊರೆಹೋಗುತ್ತೇವೆ. ಅದು ಕೇವಲ ಮುಖ್ಯಾಂಶಗಳ ಓದಿಗಷ್ಟೇ ಸೀಮಿತವಾಗಿರುತ್ತದೆ. ಗಂಭೀರವಾದ ಲೇಖನಗಳನ್ನು ಅನುಭವಿಸಲು ಒಂದೋ ಆಫ್‍ಲೈನಿನಲ್ಲಿ ಅಥವಾ ಪತ್ರಿಕೆಯನ್ನೇ ಕೊಂಡು ಓದಬೇಕಾಗುತ್ತದೆ. ಎಷ್ಟೆಷ್ಟೋ ಮಹತ್ವದ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿರುವುದು ಒಳ್ಳೆಯ ಬೆಳವಣಿಗೆಯಾದರೂ, ಪುಸ್ತಕವನ್ನು ಕೈಗೆತ್ತಿಕೊಂಡು ಓದುವಾಗಿನ ಸುಖ, ರಸಾಸ್ವಾದ ಅಲ್ಲಿ ಸಾಧ್ಯವಾಗುವುದಿಲ್ಲ.

ಸಾಹಿತ್ಯ ಕೃತಿಗಳ ಪ್ರಕಟಣೆ ಮತ್ತು ಓದು ಇವತ್ತು ವಿಚಿತ್ರ ಸ್ಥಿತಿಯನ್ನು ತಲುಪಿಬಿಟ್ಟಿದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಣೆಯತ್ತ ಹೊರಳುತ್ತಿದ್ದಾರೆ. ಅದನ್ನು ಓದುವವರಾದರೂ ಯಾರು? ‘ನಾನೂ ಬರೆಯುತ್ತೇನೆ ನೀನೂ ಬರೆಯುತ್ತೀಯ ನಾವಿಬ್ಬರೂ ಓದಿಕೊಳ್ಳೋಣ’ ಎಂದು ಪರಸ್ಪರ ಹಂಚಿಕೊಂಡು ಓದಿಕೊಳ್ಳುವಲ್ಲಿಗೇ ಇದು ನಿಂತುಬಿಡುತ್ತಿದೆಯೋ ಏನೋ. ಅದರಲ್ಲೂ ಸುಲಭಕ್ಕೆ ಸಿಗುವ ಪ್ರಕಾರ ಕಾವ್ಯ. ಹೀಗಾಗಿಯೇ ಕವಿತೆಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿರುವುದು.

ಅಂತರ್ಜಾಲವು ಅನೇಕ ಗುಂಪುಗಳಲ್ಲಿ ಜನರನ್ನು ಸಂಘಟಿಸುತ್ತಿದೆ(ಒಡೆಯತ್ತಲೂ ಇದೆ!). ಆ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅಂತರ್ಜಾಲವು ನಮ್ಮ ನಮ್ಮ ಮನೆಭಾಷೆಗಳಲ್ಲಿ ಸಾಹಿತ್ಯವನ್ನು ಬರೆಯುವ ಮತ್ತು ಓದುವ ಅವಕಾಶವನ್ನು ಹೆಚ್ಚು ಹೆಚ್ಚು ಕರುಣಿಸಿದೆ. ಮೊಬೈಲ್ ಫೋನ್ ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಡುತ್ತಿದೆ. ಪುಸ್ತಕ ಪರಾಮರ್ಶೆಗೂ ಇರುವ ದಾರಿಗಳನ್ನು ಅತ್ಯಂತ ಸುಲಭವಾಗಿಸಿದೆ. ಗ್ರಂಥಾಲಯಕ್ಕೆ ಭೇಟಿ ಕೊಡುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಗ್ರಂಥಾಲಯವೂ ‘ಡಿಜಟಲೀಕರಣ’ಕ್ಕೊಳಪಡುವ ಹಂತದಲ್ಲಿದೆ.

ಸಾಹಿತ್ಯಿಕ ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ‘ಲೈಕು’ಗಳು ಭ್ರಮೆಗಳನ್ನು ಬಿತ್ತುತ್ತಿವೆ. ಅದು ಕಳಪೆ ಸಾಹಿತ್ಯದ ಹುಟ್ಟಿಗೂ ಕಾರಣವಾಗುತ್ತಿದೆ. ‘ಬ್ಲಾಗ್’ ಬರವಣಿಗೆಯ ಕಾಲದಲ್ಲಿ ಸಾಹಿತ್ಯದ ಗಂಭೀರ ಓದು ಮತ್ತು ಬರವಣಿಗೆ ಸಾಧ್ಯವಾಗಿತ್ತು. ಕ್ರಮೇಣ ಈ ವ್ಯವಧಾನ ಕಡಿಮೆಯಾಗಿ ಫೇಸ್ಬುಕ್, ವಾಟ್ಸಾಪ್‍ಗಳಂಥ ಜಾಲತಾಣಗಳ ಕಡೆಗೆ ಆಸಕ್ತಿ ಹೊರಳಿತು. ಸದ್ಯದ ಮಟ್ಟಿಗೆ ಅದು ‘ಓದುವಿಕೆ’ಯಿಂದ ‘ನೋಡುವಿಕೆ’ಯ ಕಡೆಗೆ ಜಿಗಿಯುತ್ತಿದೆ. ಚಿತ್ರ ಮತ್ತು ವೀಡಿಯೋ ಕ್ಲಿಪ್‍ಗಳೇ ಅಕ್ಷರಗಳ ಕತ್ತು ಹಿಸುಕಿ ಮೇಲ್ಪಂಕ್ತಿಗೆ ಬರಲಾರಂಭಿಸಿವೆ.

ನಾವೆಲ್ಲಾ ಅಂತರ್ಜಾಲಕ್ಕೆ ದಾಸರಾಗಿಬಿಟ್ಟಿದ್ದೇವೆ. ದಿನಕ್ಕೆ ಒಂದೆರಡು ಗಂಟೆಗಳ ಏಕಾಂತವಾದರೂ ನಮಗೆ ಅಗತ್ಯವಾಗಿದೆ. ಅಂತಹ ಸ್ಥಿತಿಯಲ್ಲಿಯೇ ನಾವು ಓದು, ಬರಹ ಮುಂತಾದ ಸೃಜನಶೀಲ ಚಟುವಟಿಕೆಗಳಿಗೆ ಒಡ್ಡಿಕೊಳ್ಳಬೇಕಿದೆ. ಆ ಮೂಲಕ ನಮ್ಮತನವನ್ನು ಕಂಡುಕೊಳ್ಳಬೇಕಿದೆ.
*

ಕಾಜೂರು ಸತೀಶ್

1 comment:

  1. ಧನ್ಯವಾದಗಳು..ನಿಮ್ಮ ಚಿಂತನೆಯಿಂದ ನನ್ನಲ್ಲಿ ಕೆಲ ಬದ್ಲಾವಣೆಯ ಚಿಂತನೆ ತಂದಿದಕ್ಕೆ

    ReplyDelete