ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, January 31, 2015

ಎಲ್ಲ ಅಳಿದ ಮೇಲೆ

ಎಲ್ಲ ಅಳಿದ ಮೇಲೆ
ಉಳಿದ ಅಷ್ಟೋ ಇಷ್ಟೋ
ಗುಳಿಬಿದ್ದ ಕಣ್ಣ ಕನಸ್ಸುಗಳು
ಗುಳೆ ಹೊರಡುವವು ನಾಳೆಗಳ ಹುಡುಕಿ.



ನೆತ್ತಿಗೆ ಸೂರಾಗಿದ್ದ ಎಲೆಯನ್ನೂ ಬಿಡದೆ
ಉರುಳಿಸಿ ಸಪಾಟು ಮಾಡಿರುವಂಥ ಕಾಲ
ಸೂರ್ಯ ಈಜಾಡಿಕೊಂಡಿರುವ ನೆಲ
ನಡೆದಾಡುವ ಬೋಳುಪಾದಗಳ ಬೊಬ್ಬೆಗಳ ಲೆಕ್ಕ
ಪಾದದಡಿಯ ಮಣ್ಣಿಗಷ್ಟೇ ಗೊತ್ತು,




ರಾತ್ರಿ ಎದುರು ಬಂದು
ತಡೆದು ನಿಲ್ಲಿಸಿದಾಗ
ಅದರ ಕಪ್ಪು ಕಂಬಳಿಯಲ್ಲಿ
ಮುಸುಕು ಹೊದ್ದು ನಿದ್ದೆ.
ಕಣ್ಣ-ಬೆನ್ನ-ತಲೆಯ ಮೇಲಿನ ಕನಸ್ಸು
ಭೂಮಿಗೆ.




ಪ್ರತಿ ರಾತ್ರಿ ಮೂಟೆಗಟ್ಟಿದ ಕನಸ
ಮೊಗೆಮೊಗೆದು ಮುಕ್ಕಿದರೂ
ಪುಟ್ಟ ಪಾದಗಳು ಕಚಗುಳಿಯಿಟ್ಟರೂ
ನೆಲವ್ಯಾಕೆ ಇನ್ನೂ ಚಿಗುರುತ್ತಿಲ್ಲ?




ಎಲ್ಲ ಅಳಿದರೂ
ಬಟಾಬಯಲಿನಲ್ಲೊಂದು
ಮರವಾದರೂ ಇರಬೇಕಿತ್ತು
ಬಕಾಸುರ ಸೂರ್ಯನ ಆಹಾರ ಬದಲಿಸಬಹುದಿತ್ತು.

**

-ಕಾಜೂರು ಸತೀಶ್

No comments:

Post a Comment