ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 5, 2025

ಮಿಲ್ಲಿ ಮೇಡಂ

ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು OLV ಶಾಲೆಗೆ ತೆರಳಿದ್ದಾಗ, ಅಲ್ಲಿ ಪರೀಕ್ಷಾ ಅಧೀಕ್ಷಕರಾಗಿದ್ದವರು ಮಿಲ್ಲಿ ಮೇಡಂ. ಅಲ್ಲಿಯೇ ನಾನವರನ್ನು ಮೊದಲ ಬಾರಿಗೆ ನೋಡಿದ್ದು.  ಮತ್ತೆ ಅವರನ್ನು ಭೇಟಿಯಾಗಿದ್ದು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ. ಈ ನಡುವೆ ಹಲವು ವರ್ಷಗಳೇ ಸಂದುಹೋಗಿದ್ದವು.




ಮಿಲ್ಲಿ ಮೇಡಂ ಎಂದೇ ಜನಪ್ರಿಯರಾಗಿರುವ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಮೇಡಂ ಅವರಿಗೆ ಅರ್ಧಶತಮಾನದಷ್ಟು  ಸೇವಾನುಭವವಿದೆ. ಅದರಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವಧಿಯೇ ಹೆಚ್ಚು. ಯಶಸ್ವಿ ಆಡಳಿತಗಾರರ ಲಕ್ಷಣವನ್ನು ಅವರಿಂದ ನೋಡಿ ಕಲಿಯುವಷ್ಟು ಮಾಗಿದ ಜೀವನಾನುಭವ ಅವರಲ್ಲಿದೆ. ವಿವಿಧ ಬಗೆಯ ಸಿಬ್ಬಂದಿಯನ್ನು, ಅಧಿಕಾರಿಗಳನ್ನು, ಪೋಷಕರನ್ನು ನಿಭಾಯಿಸುವ ಚಾಕಚಕ್ಯತೆಯಿದೆ.  ಸಮರ್ಥ ನಾಯಕರಿಗಿರಬೇಕಾದ- ನಿರ್ಧಾರ ಕೈಗೊಳ್ಳುವಿಕೆ, ಸ್ಮರಣಶಕ್ತಿ, ನಿಷ್ಠೆ, ಹದವಾದ ಮಾತುಗಾರಿಕೆ... ಎಲ್ಲವೂ ಅವರೊಳಗಿದೆ. ಅದು ಅವರನ್ನು ಈಗ ವಿಶ್ವಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಂಶುಪಾಲರ ಹುದ್ದೆಗೇರಿಸಿದೆ.

ಅರ್ಧ ಶತಮಾನದ ತಮ್ಮ ಶಿಕ್ಷಕ ವೃತ್ತಿಯ ಅನುಭವದಲ್ಲಿ ವರ್ಷದಿಂದ ವರ್ಷಕ್ಕೆ ತಮ್ಮ ಉತ್ಸಾಹವನ್ನು ಊರ್ಧ್ವಮುಖಿಯಾಗಿಸುತ್ತಲೇ ಸಾಗಿದ್ದಾರೆ. ಇದು ನಮ್ಮೆಲ್ಲರಿಗೂ ಮಾದರಿ. ಅಸಂಖ್ಯ ಶಿಷ್ಯಬಲ ಅವರ ಬೆನ್ನ ಹಿಂದಿದೆ. ಕನ್ನಡವನ್ನೂ, ಇಂಗ್ಲಿಷ್ ಭಾಷೆಯನ್ನೂ ಸ್ಪಷ್ಟವಾಗಿ ಮಾತನಾಡುವ, ಬರೆಯುವ, ಬೋಧಿಸುವ ಅವರ ಜಾಣ್ಮೆಗೆ ನಾನಂತೂ ಬೆರಗಾಗಿ ಹೀಗೆ ಬರೆಯುತ್ತಿದ್ದೇನೆ.

ಪ್ರಿಯ ಮಿಲ್ಲಿ ಮೇಡಂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐

*
✍️ಕಾಜೂರು ಸತೀಶ್

1 comment:

  1. ಹೌದು ನಾನು ಇವತ್ತಿಗೂ ಮಿಲ್ಲಿ ಮ್ಯಾಮ್ ಅಂತಾನೆ ಕರಿಯೋದು
    ತುಂಬಾ ಸ್ಪೂರ್ತಿದಾಯಕ ವ್ಯಕ್ತಿತ್ವ ಹೊಂದಿರುವವರು..
    ಚಂದ ಚಂದ ಹೂವಿನ ಗಿಡಗಳ ಸಂಗ್ರಹಣೆಯೂ ಇದೆ ಅವರ ಶಾಲೆಯಲ್ಲಿ.

    ReplyDelete