ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 17, 2024

ರಾತ್ರಿ ಬಸ್ಸಿನ ಚಾಲಕ


ಕಗ್ಗತ್ತಲನ್ನು ಎಷ್ಟು ಸೀಳಬಹುದು ಚಾಲಕ ತನ್ನ ಕಣ್ಣುಗಳಲ್ಲಿ
 ಹೆಡ್ ಲೈಟ್ ಗಳು ನೆಪವಷ್ಟೇ, ಹಾರನ್ನುಗಳು ನೆಪವಷ್ಟೇ ಕಗ್ಗತ್ತಲನ್ನು ಹೇಗೆಲ್ಲಾ ಸೀಳಬಹುದು ಚಾಲಕ ರಾತ್ರಿಯಲ್ಲಿ

 ಹೀಗೆ ಕುಳಿತು ತೂಕಡಿಸುವ ಜನರ ಕಣ್ಣುಗಳ ಒಳಗೆ ಅವನ ಮುಖವಿಲ್ಲ, ಕಣ್ಣುಗಳಿಲ್ಲ ;ಕಪ್ಪೆಂದರೆ ಕಪ್ಪು
 ಎಷ್ಟು ಹಾಯಾಗಿ ತೂಕಡಿಸಬಹುದು ಜನ ಅವನ ಅಭಯದ ಉಯ್ಯಾಲೆಯೊಳಗೆ?

 ಅವನ ಕಣ್ಣಲ್ಲಿ ಹುದುಗಿದ ಆ ದಿನ ಒಂದು ಬಿಂದುವಿನೊಳಗೆ ಬಂಧಿಯಾಗಿ
 ಹಾಸಿಗೆ, ಚಾಪೆ ಅಥವಾ ನೆಲವನ್ನೇ ವಿರಹಿಯಂತೆ ಕಾಯುತ್ತಿದೆ
 ಅವನ ಧ್ಯಾನದ ನಿಶ್ವಾಸಕ್ಕೆ ಜನ ಮೂರ್ಛೆಹೋದಂತೆ ಮಲಗಿದ್ದಾರೆ ಕುಳಿತಲ್ಲೇ

 ಈ ಚಂದ್ರ ಯಾಕೆ ಹಿಂಬಾಲಿಸುತ್ತದೆ ಅವನ- ಹೋದ ಹೋದಲ್ಲೆಲ್ಲ
 ಈ ನಕ್ಷತ್ರಗಳೇಕೆ ಕಣ್ಣು ಮಿಟುಕಿಸುತ್ತವೆ ಅವನ ಕಣ್ಣ ಒಳಗೆ
 ಭೂಮಿ ನಿದ್ದೆಗಿಳಿದ ಹೊತ್ತು ತೆರದೇ ಇರುತ್ತದೆ ಭೂಮ್ಯಾಕಾರದ ಅವನ ಕಣ್ಣ ಗೋಳ

 ಯಾರೋ ಕದ್ದೊಯ್ದಿದ್ದಾರೆ ಸೌಧದೊಳಕ್ಕೆ ಅವನ ನಿದ್ದೆಯನ್ನು
 ಕಗ್ಗತ್ತಲ ಸೀಳುವ ಕಣ್ಣಬೆಳಕು ಜಗಮಗಿಸುತಿದೆ ಸೌಧದೊಳಗೆ
 ತುಳಿವ ಎಳೆವ ತಿರುಗಿಸುವ ತಾಳಕ್ಕೆ ಎಷ್ಟು ಮಂದಿಯ ನಿದ್ದೆ ಇದೆ ಮಣ್ಣ ಹಾಸಿಗೆಯಲ್ಲಿ.
*
ಕಾಜೂರು ಸತೀಶ್ 

No comments:

Post a Comment