ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, August 24, 2024

ಕುಳಿ

ತಿಮ್ಮ ರಸ್ತೆಯಲ್ಲಿ ನಡೆಯುವಾಗ ಯೋಚಿಸುತ್ತಿದ್ದ. ಚಂದ್ರನಲ್ಲಿ ಇದಕ್ಕಿಂತ ದೊಡ್ಡ ಕುಳಿಗಳಿರಬಹುದು.
ಕಾಜೂರು ಸತೀಶ್ 

Tuesday, August 20, 2024

ಗೋಷ್ಠಿ

ತಮ್ಮ ದೇಶ ಅಷ್ಟು ಹಿಂದುಳಿದಿರುವುದನ್ನು ಗಮನಿಸಿದ ಚಿಂತಕರೆಲ್ಲಾ ಸೇರಿ ಗೋಷ್ಠಿಯೊಂದನ್ನು ಏರ್ಪಡಿಸಿದರು.

ಹಲವು ವಾದ-ಸಿದ್ಧಾಂತಗಳನ್ನು ವಿದ್ವಾಂಸರು ಮಂಡಿಸುತ್ತಿದ್ದರು. ನೂರಾರು ಹೊಳವುಗಳನ್ನು ಬಿಚ್ಚಿಡುತ್ತಿದ್ದರು.

ಪ್ರಶ್ನೋತ್ತರ ಸಮಯದಲ್ಲಿ ತಿಮ್ಮನಿಗೆ ಮೈಕು ಸಿಕ್ಕಿತು.
"ಚುನಾವಣೆಯು ಹಣ-ಆಮಿಷಗಳಿಲ್ಲದೆ ನಡೆಯಲಿ. ಕೊಡುವುದು-ಪಡೆಯುವುದು ಎರಡೂ ನಿಲ್ಲಬೇಕು. ನಿಮ್ಮಿಂದ ಅದು ಸಾಧ್ಯವೇ?"ಕೇಳಿದ.

ಅಲ್ಲಿಗೆ ಘೋಷ್ಠಿ ನಿಂತು ಹೋಯಿತು.
*

✍️ಕಾಜೂರು ಸತೀಶ್

ಶವ

ರಸ್ತೆಯಲ್ಲಿ ಅನಾಥ ಶವವೊಂದಿತ್ತು. ಅಲ್ಲಿದ್ದವರ್ಯಾರಿಗೂ ಅದರ ಗುರುತು ಹತ್ತಲಿಲ್ಲ.

ಎಡಗೈ ಗುರುತಿನ ಪಕ್ಷದವರು ಫೋಟೋ ತೆಗೆದು ತಮ್ಮ ಪಕ್ಷದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡು 'ಇವರು ಗೊತ್ತಾ? ನಮ್ಮ ಪಕ್ಷದವರಾ?'ಎಂಬ ಪ್ರಶ್ನೆ ಎಸೆದರು.

ಬಲಗೈ ಗುರುತಿನ ಪಕ್ಷದವರೂ ಹಾಗೇ ಮಾಡಿದರು.

ಯಾರೂ ಗುರುತಿಸಲಿಲ್ಲ . ಕೊನೆಗೆ  ಜಾತಿಗೊಂದರಂತೆ ರಚಿಸಲಾಗಿದ್ದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಯಿತು- 'ನಮ್ಮವರಾ?'

 ಆಗಲೂ ಯಾರಿಗೂ ಗುರುತು ಸಿಗಲಿಲ್ಲ.

 ಅಷ್ಟೇ!
*
✍️ ಕಾಜೂರು ಸತೀಶ್ 

Sunday, August 18, 2024

ಸಮುದ್ರ



''ಅತ್ಯಂತ ದೊಡ್ಡ ಸಮುದ್ರ ಯಾವುದು?'' ಶಿಕ್ಷಕರು ವಿದ್ಯಾರ್ಥಿಯನ್ನು ಕೇಳಿದರು.

ವಿದ್ಯಾರ್ಥಿಯು ಒಂದು ಕ್ಷಣ ಯೋಚಿಸುತ್ತಾ ನಿಂತಿದ್ದನ್ನು ಕಂಡು ಶಿಕ್ಷಕರೇ ಉತ್ತರ ಹೇಳಿದರು.

''ಅಲ್ಲ ಸರ್ ... ಅಶಾಂತವಾದ ಮನಸ್ಸೇ ಅತ್ಯಂತ ದೊಡ್ಡ ಸಮುದ್ರ'' ವಿದ್ಯಾರ್ಥಿ ಹೇಳಿದ.

ಶಿಕ್ಷಕರು ಒಂದು ಕ್ಷಣ ಕಣ್ಣು ಮುಚ್ಚಿ ನಿಂತು ತನ್ನೊಳಗೆ ಮುಳುಗಿದರು.
ತನ್ನ ಆಳದಿಂದ ಸಾಲು ಸಾಲು ಅಲೆಗಳೆದ್ದು ತಲೆಗೆ ಅಪ್ಪಳಿಸಿ ಸಾಯುತ್ತಿದ್ದವು.
ಮನಸ್ಸಿನ ತುಂಬೆಲ್ಲಾ ನೊರೆಗಳು- ಗುಳ್ಳೆಗಳು.

ಮತ್ತೆ ತಡ ಮಾಡಲಿಲ್ಲ.
 ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕುವ ಬದಲು ಶಿಕ್ಷಕರೇ ತರಗತಿಯ ಹೊರಗೆ ಹೋಗಿ ನಿಂತರು.
*


ಮಲಯಾಳಂ ಮೂಲ -
 ಪಿ ಕೆ ಪಾರಕ್ಕಡವು 

ಕನ್ನಡಕ್ಕೆ - ಕಾಜೂರು ಸತೀಶ್