ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, April 27, 2023
ಮೌನದೊಡಲಿನ ಗಜ಼ಲ್
Sunday, April 23, 2023
ಬದುಕನ್ನೇ ಬಸಿದು ಬರೆದ ಕಾವ್ಯ
Sunday, April 16, 2023
ಅಪ್ಪಟ ಭೂಮಿಗೀತ
ಹದಿಮೂರು ವರ್ಷಗಳ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೊಡಗಿನಿಂದ ಅಲ್ಲಿಗೆ ಯಾರೂ ಬರುವುದಿಲ್ಲ ಎಂದುಕೊಂಡಿದ್ದೆ. ಅದು ಸುಮಾರು ಹೊತ್ತು ನಿಜವೂ ಆಗಿತ್ತು. ಆಮೇಲೆ ನನ್ನ ಮುಂದೆ ಒಬ್ಬರು ನಡೆದುಹೋಗುತ್ತಿದ್ದರು. 'ಮೇಡಂ ,ಗೊತ್ತಾಯ್ತಾ? ಕೇಳಿದೆ. 'ಇಲ್ಲ , ನನಗೆ ಅಷ್ಟು ಬೇಗ ಗುರ್ತಾ ಸಿಗುವುದಿಲ್ಲ ಆಯ್ತಾ' ಎಂದರು.
ಕಳೆದ ಮಾರ್ಚ್ 26ಕ್ಕೆ ಅವರು ಸಿಕ್ಕರು.
ಈ ನಡುವೆ ಹಲವಾರು ಬಾರಿ ಅವರನ್ನು ನೋಡಿದ್ದೇನೆ, ಭಾಷಣ ಆಲಿಸಿದ್ದೇನೆ , ಕವಿತೆ ಕೇಳಿದ್ದೇನೆ, ಲೇಖನಗಳನ್ನು ಓದಿದ್ದೇನೆ. ಮುಂದುವರಿದು 'ಸಹನಾ ಕಾಂತಬೈಲು ಅವರ ಪುಸ್ತಕಗಳನ್ನು ಕಳಿಸಿ' ಎಂದು ಪ್ರಕಾಶಕರಿಗೆ ಸಂದೇಶ ಕಳಿಸಿದ್ದೇನೆ.
ಈಚೆಗೆ , ಆಯಿರಸುಳಿ ಜಂಗಲ್ ಹಾಡಿಯಲ್ಲಿ ಕವಿತೆ ಓದುತ್ತಿದ್ದೆವು. ಹಿನ್ನೆಲೆಯಲ್ಲಿ ಆನೆ ಘೀಳಿಡುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸಹನಾ ಕಾಂತಬೈಲು ಅವರು ನನ್ನ ಕೈಗೆ 'ಆನೆ ಸಾಕಲು ಹೊರಟವಳು' ಕೃತಿಯನ್ನು ನೀಡಿ ಇದು ಈಗ ನಾಲ್ಕನೆಯ ಮುದ್ರಣ ಎಂದರು (ಶ್ರೀರಾಮ ಬುಕ್ ಸೆಂಟರ್ ,ಮಂಡ್ಯ). ಡಾ. ಹಾ.ಮಾ.ನಾಯಕ ಅಂಕಣ ಬರಹ ಪುರಸ್ಕಾರ ಪಡೆದಿದೆ ಈ ಕೃತಿ.
*
ಸಹನಾ ಕಾಂತಬೈಲು ಅವರು ತುಂಬಾ progressive thoughtಗಳಿಂದ ಆಗಿರುವವರು. ಈ ಅಂಕಣಮಾಲೆ 'ಅಂಕಣ' ಆಗಬೇಕಾದ ತುರ್ತಿನಲ್ಲಿ ಹುಟ್ಟಿರುವವು. ಆದರೆ, ಅಂಕಣದ ಹಿಂದಿನ ಸಿದ್ಧತೆಗಳೆಂದರೆ ಮಂಗಳೂರಿಗೆ ತೆರಳಿ laptop ರಿಪೇರಿ ಮಾಡಿಸುವುದು, ಅದಕ್ಕಾಗಿ ಪಟ್ಟುಬಿಡದೆ ಕತ್ತಲಾಗುವವರೆಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು!. ದೈನಿಕದ ಕ್ಷಣಗಳು ಹುಟ್ಟಿಸಿದ ಸೃಷ್ಟಿ ಅವು. ಆದರೂ ಬರೆದು ಮುಗಿಸಿದ ಮೇಲೆ / ಪ್ರಕಟವಾದ ಮೇಲೆ outdated ಆಗದ ಹಾಗೆ ತಾಜಾ ಆಗಿ ಉಳಿದುಕೊಂಡಿದೆ. ಅದೇ ನಾಲ್ಕನೆಯ ಮುದ್ರಣದವರೆಗೆ ಈ ಕೃತಿ ಕ್ರಮಿಸಿದ ಹಿನ್ನೆಲೆ.
'ನಾನು ಕೃಷಿಕ ಮಹಿಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಹನಾ ಕಾಂತಬೈಲು ಅವರ ಪ್ರತೀ ವಾಕ್ಯದಲ್ಲೂ ಉತ್ಸಾಹ ಪುಟಿಯುತ್ತದೆ. ತಮಗೆ ತಿಳಿಯದ್ದನ್ನು ಕಲಿಯುವ ಅಪಾರ ಹಂಬಲವಿದೆ ಅಲ್ಲಿ. ಕೊಟ್ಟಿಗೆಯಿಂದ ಕಟ್ಟುಬಿಚ್ಚಿದ ಕರುವಿನ ಕುಣಿದಾಟದ ಹಾಗಿರುವ ಉತ್ಸಾಹ ಅದು. ಮುಂಬೈ ವಿವಿಯಲ್ಲಿ ಆಹ್ವಾನಿತರಾಗಿ ಹೋಗುವಾಗ, ಅಮೇರಿಕದ ಗ್ರಂಥಾಲಯವನ್ನು ಭೇಟಿಮಾಡುವಾಗ ಅವರ ಕುತೂಹಲ, ಮುಜುಗರ, ಆತ್ಮವಿಶ್ವಾಸ, ಕೊರಗು- ಒಟ್ಟೊಟ್ಟಿಗೆ ವ್ಯಕ್ತವಾಗುತ್ತದೆ. ಜೋಪಡಿ ಮನೆಯ ಹೆಣ್ಣಿನ ಬದುಕನ್ನೂ ಅಪಾರ್ಟ್ಮೆಂಟಿನಿಂದ ಇಣುಕಿನೋಡಿ ನೋಯುವ ಹೃದಯವಿರುವ ಬರೆಹವಿದು.
ಚೆಂಬುವಿನಿಂದ ಮುಂಬಯಿಗೆ ತಲುಪುವಾಗ ಅಮೇರಿಕಾಕ್ಕೆ ಹಾರುವಾಗ ಅಂಕಣದ ವಸ್ತುವನ್ನಷ್ಟೇ ಅರಸಲು ತಮ್ಮನ್ನು limit ಮಾಡಿಕೊಂಡಿದ್ದರೆ ಬರೆಹ ಸೋಲುತ್ತಿತ್ತು. ಜಗತ್ತು ಮರೆತೇಬಿಟ್ಟಿರುವ ordinarinessಗಳನ್ನು ನೆನಪಿಸಿ celebrate ಮಾಡುವ(ಬಾಳೆ ಎಲೆ, ಅಡಿಕೆ ಹಾಳೆ, ಸ್ನಾನದ ಹಂಡೆ) , ಅವು ಉಳಿಯಬೇಕಾದ ಅನಿವಾರ್ಯತೆಯನ್ನು ತಿಳಿಸುವ ಮಾದರಿಯವು. ಹಲಸಿನ ಹಣ್ಣಿನ ಮೂಲಕ ಕೌಟುಂಬಿಕ ಸಂಬಂಧಗಳನ್ನು ಗ್ರಹಿಸುವ , ಆನೆಗೆ ಕಾಡಲ್ಲಿ ಆಹಾರ ಬೆಳೆಯಲು ಹೊರಡುವ(ಕಲ್ಲುಬಾಳೆ), ತನ್ನ ಹೆಂಡತಿಗೆ ಏನೂ ಕೆಲಸವಿಲ್ಲ ಎನ್ನುವ ರೇಡಿಯೋ ಜಾಹೀರಾತನ್ನೂ ಉಲ್ಲೇಖಿಸುವ (ಒಂದು ಪದವನ್ನೂ ಬಿಡದ ಹಾಗೆ- ಧ್ಯಾನಸ್ಥ ಬದುಕಿದ್ದರೆ ಮಾತ್ರ ಇವೆಲ್ಲಾ ಹೊಳೆಯುವುದು), ತಮ್ಮ ಹೋರಿಯನ್ನು ಮಾರಾಟ ಮಾಡದೆ ಕಾಡಿಗೆ ಅಟ್ಟುವ ಸಂದಿಗ್ಧತೆಯನ್ನೂ ವಿವರಿಸುವ - ಕ್ರಮ ಅನನ್ಯ.
ದೇಸೀ ಸಂಸ್ಕೃತಿಯ, ಹಸಿರುಮೂಲ ಸ್ತ್ರೀಪರ ಆಲೋಚನೆಗಳ, ಕೃಷಿ ಸಂಸ್ಕೃತಿಯ, ಹಳ್ಳಿ-ನಗರಗಳ, ಹಳತು- ಹೊಸತರ ಮುಖಾಮುಖಿಯ , ವೈಜ್ಞಾನಿಕ ತಳಹದಿಯ ಬರೆಹಮಾಲೆಗಳಿವು. ಇದಕ್ಕಿಂತ ಸರಳಗೊಳಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಭಾಷಾ ಸರಳತೆ ಇಲ್ಲಿದೆ. ಅಲ್ಲಲ್ಲಿ ವಾಸ್ತವ ಹಾಸ್ಯ ಬರೆಹದ ಶಕ್ತಿಯನ್ನು ಹೆಚ್ಚಿಸುತ್ತದೆ.
*
ಕಾಜೂರು ಸತೀಶ್
Tuesday, April 11, 2023
ರಂಧ್ರ
Sunday, April 9, 2023
ಕೊಲೆ
ಕತ್ತಲು
ಮೂವರು ಗೆಳೆಯರು ಪುಣ್ಯಕ್ಷೇತ್ರ ಭೇಟಿಗೆಂದು ಹೊರಟರು. 'ಮದುವೆಯಾಗಿ ಎಷ್ಟೋ ವರ್ಷಗಳಾಗಿವೆ, ಜೀವನ ಸಾಕಾಗಿದೆ ಒಮ್ಮೆ ಹೋಗಿಬರೋಣ' ಅವಳೆಂದಳು. ಹಳೆಯ ಗೆಳೆಯ ಒಪ್ಪಿಕೊಂಡ. ಮೊನ್ನೆ ಮೊನ್ನೆ ಪರಿಚಯಕ್ಕೆ ಸಿಕ್ಕ ಹೊಸಗೆಳೆಯನನ್ನೂ ಅವಳು ಹೊರಡಿಸಿದಳು.
ಉರಿಬಿಸಿಲು. ಮೂವರೂ ಆಧಾರಕ್ಕೆಂದು ಕೋಲು ಊರುತ್ತಾ ಕಲ್ಲುಬಂಡೆಯ ಮೇಲೆ ಕಾಲು ಎತ್ತಿಡುತ್ತಾ ನಡೆಯತೊಡಗಿದರು.
"ಹೇಗಿದ್ದೇವೆ ನೋಡಿ ನಾವು ಮೂವರು..." ಅವಳೆಂದಳು. "...ಮೂರು ಯುಗಕ್ಕೆ ಸೇರಿದವರ ಹಾಗೆ. ನಾನು ಮದುವೆಯಾಗಿ ದಶಕಗಳು ಸಂದವು. ಇವನು ಮದುವೆಯ ಸಿದ್ಧತೆಯಲ್ಲಿರುವವನು. ಇನ್ನು ಇವನೋ, ಮದುವೆ ಸಂಸಾರ ಯಾವುದೂ ಬೇಡ ಎಂದುಕೊಂಡಿರುವವನು.."
''ಬದುಕು ನಶ್ವರ ಕಣ್ರೋ'' ಅವಳೆಂದಳು. ''ಎಂತ ಮಣ್ಣೂ ಅಲ್ಲ ವರ್ತಮಾನವನ್ನು ಎಂಜಾಯ್ ಮಾಡ್ಬೇಕು'' ಹೊಸ ಗೆಳೆಯ ಅಂದ. ''ನಿಜ, ಸ್ವಾತಂತ್ರ್ಯವೇ ಬದುಕು''
ಹಳೆಯ ಗೆಳೆಯ ನಕ್ಕು ಪ್ರತಿಕ್ರಿಯಿಸಿದ.
ಹೊಸ ಗೆಳೆಯ ಹಾಗೆ ಹೇಳುವಾಗ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ. ಕಿರುಬೆರಳುಗಳನ್ನು ಮೆಲ್ಲನೆ ತೀಡುತ್ತಿದ್ದ. ಆ ಉರಿ ಬಿಸಿಲಿನಲ್ಲೂ ಅವಳು ಗೆಲುವಾಗಿ ಕಾಣತೊಡಗಿದಳು.
ಹಳೆಗೆಳೆಯ ಅವಳ ಗೆಲುವನ್ನು ಸಂಭ್ರಮಿಸಿದ.
ಆ ಕಾದ ದಾರಿಯಲ್ಲಿ ಇರುವೆಗಳು ಸಾಲುಸಾಲಾಗಿ ನಡೆದು ಬಿಸಿಲಿನ ಕಾವಿಗೆ ಸುಟ್ಟುಹೋಗಿದ್ದವು. ಹಳೆಗೆಳೆಯ ತೋರಿಸಿದ. ''ಒಂದು ಮಳೆ ಬಂದಿದ್ದಿದ್ದರೆ..'' ಅವನೆಂದ. ಅವರಿಬ್ಬರೂ ಅದನ್ನು ಕೇಳಿಸಿಕೊಳ್ಳದವರಂತೆ ಮುಂದೆ ನಡೆದರು.
ಒಂದು ಸುಂಟರಗಾಳಿ ಬಂದು ಹಳೆಗೆಳೆಯನ ಕಣ್ಣುಗಳನ್ನು ಕೆಂಪುಮಾಡಿ ಹೋಯಿತು. ಅವರಿಬ್ಬರೂ ಪರಸ್ಪರ ಮುಖಕ್ಕೆ ಮುಖಕೊಟ್ಟು ಅದರಿಂದ ತಪ್ಪಿಸಿಕೊಂಡರು.
ನವಿಲೊಂದು ಹಾರಿತು. ಹಳೆಗೆಳೆಯ ತೋರಿಸಿದ. ಅವರಿಗದು ಕಾಣಿಸಲಿಲ್ಲ. ''ಪಾಂಡವರು ತುಳಿದ ಗುಡ್ಡ'' ಎನ್ನುತ್ತಾ ಹೊಸಗೆಳೆಯ ಕಲ್ಲಿನಲ್ಲಿ ಮೂಡಿದ್ದ ಪಾದದ ಗುರುತಿನ ಮೇಲೆ ತನ್ನ ಕಾಲನ್ನು ಇರಿಸಿದ. ಪಾದ ಮುಕ್ಕಾಲು ಭಾಗ ಆವರಿಸಿತು. ಅವಳು ಅವನ ಪಾದದ ಮೇಲೇ ತನ್ನ ಕಾಲನ್ನು ಇರಿಸಿದಳು. ಅರ್ಧಭಾಗವಷ್ಟೇ ಆವರಿಸಿತು.
''ಯಾರೋ ಕೆತ್ತಿರ್ಬಹುದು'' ಹಳೆಯ ಗೆಳೆಯ ಅಂದ. ಅವರಿಬ್ಬರ ಮೌನ. ಇವನು ಮತ್ತೆ ಅದನ್ನು ಬೆಳೆಸಲು ಹೋಗಲಿಲ್ಲ.
ಮಧ್ಯಾಹ್ನ ಗುಡ್ಡದ ತುದಿ ತಲುಪಿದರು. ''ನಿಜ್ವಾಗ್ಲೂ ಲೈಫ್ ಏನೂ ಇಲ್ಲ ಅಂದ್ಕೊಂಡಿದ್ದೆ. ಇದು ಗೋಲ್ಡನ್ ಟೈಮ್. ಮನೆಯಲ್ಲಿದ್ದಿದ್ರೆ ಅಂಗಡಿ, ತೋಟ, ಮಕ್ಳು, ನೆಂಟ್ರು ಅಂತ ಸಾಯ್ಬೇಕಿತ್ತು'' ಅವಳೆಂದಳು. 'ಗುಡ್' ಹೊಸಗೆಳೆಯ ಅವಳ ತೋಳುಬಳಸಿ ಅಂದ.
ದೂರದಲ್ಲಿ ಗಂಟೆಯ ಸದ್ದು. ಜನಜಂಗುಳಿ. ಕೊಳದಲ್ಲಿ ಸ್ನಾನಮಾಡುತ್ತಿದ್ದ ಶ್ವೇತವಸ್ತ್ರಧಾರಿಗಳು. ಇನ್ನೂ ಒಂದು ಗಂಟೆ ನಡೆಯುವಷ್ಟು ದೂರ. ''ಸಾಕು ಬಿಡ್ರೋ, ಅಲ್ಲಿ ಹೋಗೋದು ಬೇಡ'' ಅವಳೆಂದಳು. ಹೊಸಗೆಳೆಯ ಒಪ್ಪಿಕೊಂಡ.
ಹಳೆಗೆಳೆಯ ''ಬದುಕು ನಶ್ವರ, ಅನೂಹ್ಯ'' ಹೇಳಿಕೊಂಡ ತನಗಷ್ಟೇ ಕೇಳಿಸುವಂತೆ.
ಅವನು ಒಂದು ಹಾಡು ಹಾಡಿದ. 'ಸ್ಥಿರವಲ್ಲ ಕಾಯ ಸ್ಥಿರವಲ್ಲ..' ಅವರಿಬ್ಬರು ನರ್ತಿಸಿದರು.' ನಿನ್ನ ಗರ್ಲ್ಫ್ರೆಂಡ್ ಕರ್ಕೊಂಡು ಬರ್ಬೇಕಿತ್ತು' ಹೊಸಗೆಳೆಯನ ಸೊಂಟವನ್ನು ಹಿಡಿಯುವ ಮೊದಲು ಅವಳೆಂದಳು. ನರ್ತಿಸಿದ ಮೇಲೆ ಮೂವರೂ ಅಲ್ಲೇ ಕುಳಿತು ತಂದಿದ್ದ ಹಣ್ಣುಗಳನ್ನು ತಿಂದರು. ಅವಳು ಹಳೆಗೆಳೆಯನ ಬಾಯಿಗೆ ಸೇಬಿನ ತುಂಡೊಂದನ್ನು ಪ್ರೀತಿಯಿಂದ ನೀಡಿದಳು. ಇವನೂ.
''ಇಲ್ಲಿಂದ ಹಾರಿದ್ರೆ ಹೇಗಿರುತ್ತೆ'' ಹಳೆಗೆಳೆಯ ಕೇಳಿದ. ''ಎಂಥಾ ಮಾತು ಆಡ್ತಿಯ, ಸುಮ್ನಿರು'' ಮುಖವನ್ನು ಸಪ್ಪೆಮಾಡಿಕೊಂಡು ಅವಳೆಂದಳು.
ಹಳೆಗೆಳೆಯ ಎದ್ದು ದೂರದ ಗುಡ್ಡಗಳ ಬಣ್ಣ ಬದಲಾವಣೆಯನ್ನು ಗಮನಿಸತೊಡಗಿದ. ಹಾರುವ ಬೆಳ್ಳಕ್ಕಿಯೂ ಕಪ್ಪಗೆ ಕಾಣತೊಡಗಿತು.
ಅವರಿಬ್ಬರು ಮಾತಿನಲ್ಲಿ ಮೈಮರೆತರು. ಕೂದಲು ಬೆಳ್ಳಗಾಗುತ್ತಿರುವ ಬಗ್ಗೆ, ಹೊಟ್ಟೆ ಮುಂಚಾಚುತ್ತಿರುವ ಬಗ್ಗೆ, ಮಂಡಿಯಿಂದ ಟಕಟಕ ಸದ್ದುಬರುತ್ತಿರುವ ಬಗ್ಗೆ, ಗೂನುಬೆನ್ನಾಗುತ್ತಿರುವ ಬಗ್ಗೆ,ಬುದ್ಧನ ಬಗ್ಗೆ...
ಸೂರ್ಯ ಬಾಡತೊಡಗಿದ. ಅವರು ನಿಧಾನಕ್ಕೆ ಇಳಿಯತೊಡಗಿದರು . ಹಳೆಗೆಳೆಯ ಮುಂದೆ ಮುಂದೆ ಸಾಗಿ ದಾರಿತೋರಿದ. ಅವರಿಬ್ಬರು ಅದೇ ಹಾದಿಯಲ್ಲಿ ಸಾಗಿದರು. ಅವರಿಗಿಂತಲೂ ಮುಂದೆ ಬರುತ್ತಿದ್ದ ನೆರಳು ಕ್ರಮೇಣ ಒಂದೇ ಆಗಿ ನಡೆಯತೊಡಗಿತು. ಇದ್ದಕ್ಕಿದ್ದಂತೆ ಸಂಶಯದ ಹುಳು ಹಳೆಗೆಳೆಯನನ್ನು ಹೊಕ್ಕಿತು. ಬಂಡೆಯ ಮರೆಯಲ್ಲಿ ನಿಂತು ಗಮನಿಸಿದ. ಅವರಿಬ್ಬರ ಕೈಗಳು ಪರಸ್ಪರ ಕೈಗಳನ್ನು ಹಿಡಿದುಕೊಂಡು ಮುಂದೆ ಸಾಗುತ್ತಿದ್ದಂತೆ ಅನಿಸಿತು. ' ಅನಿಸಿದ್ದು ನಿಜವೇ ಆದರೆ ಎಷ್ಟು ಪ್ರೀತಿ! ತನಗೂ ಒಮ್ಮೆ ಇದೇ ಪ್ರೀತಿ ಲಭಿಸಿತ್ತು, ಈಗ ಅದು ಇಲ್ಲವೇ?' ಹೇಳಿಕೊಂಡ. ಅವಳ ಮುದ್ದುಮುಖದ ಕಾಂತಿ ಮತ್ತಷ್ಟೂ ಏರಿತ್ತು. ಹಳೆಗೆಳೆಯ ಸಂಭ್ರಮಿಸಿದ. ಮುಂದೆ ಮುಂದೆ ಕ್ರಮಿಸಿದ.
ಸೂರ್ಯ ಕಣ್ಮರೆಯಾದ ಮೇಲೆ ಹಳೆಯ ಗೆಳೆಯ ಅವರಿಬ್ಬರಿಗಾಗಿ ಕಾದು ಕುಳಿತ. ಕೈಚಾಚಿದ.ಕತ್ತಲು ಕೈಗೆ ಅಂಟಿಕೊಂಡಿತು. ಕಣ್ಣಿಗೂ. ತನ್ನನ್ನು ಈ ಕ್ಷಣದಲ್ಲಿ ಮರೆತರೇ? ಅಥವಾ ತನಗಾಗಿ ಹುಡುಕುತ್ತಿರುವರೇ? ಕರೆಯುವ ದನಿಯಾದರೂ ಯಾಕೆ ಕೇಳುತ್ತಿಲ್ಲ.ಉಸಿರ ಸಪ್ಪಳ ಹೋಗಲಿ, ಕನಿಷ್ಟ ಹೆಜ್ಜೆಯ ಸಪ್ಪಳವಾದರೂ?
ಹಗಲಿನ ಬಿಸಿಲನ್ನು ಮರೆಸುವಂತಿದ್ದ ಆ ರಾತ್ರಿಯ ಚಳಿ ಅವನನ್ನು ಮರಗಟ್ಟುವಂತೆ ಮಾಡಿತು. ''ಬದುಕು ಸತ್ಯದಂತಿರುವ ಸುಳ್ಳು ಅಥವಾ ಸುಳ್ಳಿನಂತಿರುವ ಸತ್ಯ'' ಅವನೆಂದ. ಕಣ್ಣುಗಳು ಮುಚ್ಚಿದರೂ ತೆರೆದರೂ ವ್ಯತ್ಯಾಸವಿಲ್ಲದ ಕತ್ತಲದು.
ಮರುದಿನದ ಸೂರ್ಯ ಕಣ್ಣುಬಿಟ್ಟಾಗ ಅವನಿಗೆ ಅದು ಕಾಣಲಿಲ್ಲ.
ಅವಳು ಅವಳ ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಕಣ್ಣೀರು ಸುರಿಸುತ್ತಿದ್ದಳು. 'ನಿನ್ನ ಸ್ಥಾನವನ್ನು ತುಂಬುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಹೀಗೆ ಮಾಡಬಾರದಿತ್ತು ನೀನು' ಸಾವಿರ ಬಾರಿ ಅವಳೆಂದಳು. ಅಮ್ಮಾ 'ಕಕ್ಕ' ಮಗ ಐದಾರು ಬಾರಿ ಹೇಳಿದ್ದು ಅವಳಿಗೆ ಕೇಳಿಸಲೇ ಇಲ್ಲ.
*
-ಕಾಜೂರು ಸತೀಶ್
-
ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.) ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ...
-
ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣ ಗಳಿವು. ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ...