ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 7, 2021

ರಾಜ

ಪ್ರಾಮಾಣಿಕನಿಗೆ ಅಧಿಕಾರ ಸಿಕ್ಕಿತು. ಅವನು ವಾಹನವನ್ನೇರುವಾಗ , ಭೋಜನಾಲಯದಲ್ಲಿ ತಿಂಡಿ ತಿನ್ನುವಾಗ ಒಬ್ಬನೇ ಇರುತ್ತಿದ್ದ. ಅಲ್ಲಿ ಗೆಳೆಯರು ಸಿಕ್ಕಿದರೆ ತಾನೇ ಹಣ ಕೊಡುತ್ತಿದ್ದ. ದಾರಿಯಲ್ಲಿ ನಡೆದುಹೋಗುವಾಗ ಒಬ್ಬನೇ ಇರುತ್ತಿದ್ದ.

ಅವನಿಂದ ಏನೂ ತೊಂದರೆಯಾಗುವುದಿಲ್ಲ ಎಂದುಕೊಂಡ ಪ್ರಜೆಗಳು ಸೋಮಾರಿಗಳಾದರು. ಕಂಡರೂ ಕಾಣದಂತೆ ವರ್ತಿಸಿದರು. ಪ್ರಾಮಾಣಿಕವಾಗಿ ದುಡಿಯುವವರು ಮಾತ್ರ ಎಂದಿನಂತೆ ದುಡಿಯತೊಡಗಿದರು.

ಒಂದು ದಿನ ಅವನುಅಧಿಕಾರ ಕಳೆದುಕೊಂಡ.

ಆ ಸ್ಥಾನಕ್ಕೆ ಮತ್ತೊಬ್ಬ ಬಂದ. ಹತ್ತಾರು ಸಾಮ್ರಾಜ್ಯಗಳನ್ನು ಮುಳುಗಿಸಿ ಬಂದಿದ್ದ. ಸುದ್ದಿಯನ್ನು ಮೊದಲೇ ಅರಿತಿದ್ದ ಪ್ರಜೆಗಳು ವಾಹನದಿಂದ ಇಳಿಯುವಾಗಲೆಲ್ಲ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಸೀದಾ ಖಾನಾವಳಿಗೆ ಕರೆದುಕೊಂಡು ಹೋಗಿ ಬೇಕಾದ್ದನ್ನೆಲ್ಲ ತಿನ್ನಿಸುತ್ತಿದ್ದರು. ಅವನ ಬೆನ್ನಿಗೆ ಹತ್ತಾರು ಮಂದಿ ಇದ್ದೇ ಇರುತ್ತಿದ್ದರು. ಅವರೆಲ್ಲರೂ ಕಳ್ಳ-ಖದೀಮರೇ ಆಗಿರುತ್ತಿದ್ದರು.

ಅವನು ಜೀವಮಾನದಲ್ಲಿ ಒಮ್ಮೆಯೂ ಬಿಡಿಗಾಸು ಬಿಚ್ಚಿರಲಿಲ್ಲ.

ದಾರಿಯ ಮೇಲೆ ಅವನ ಹೆಜ್ಜೆಗಳು ಬೀಳುತ್ತಿರಲಿಲ್ಲ. ಇವನಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಇಲ್ಲದಿದ್ದರೆ ಇವನೇ ಆದೇಶ ಹೊರಡಿಸುತ್ತಿದ್ದ. ತಟ್ಟೆ ತೊಳೆಯಲು ಒಬ್ಬನನ್ನು ನೇಮಕ ಮಾಡಿಕೊಂಡಿದ್ದ. ಕಪ್ಪ ವಸೂಲಾತಿಗೆ ಅವನಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇಸ್ತ್ರಿ ಮಾಡಲು ಒಬ್ಬ, ಚಾಡಿ ಹೇಳಲು ಒಬ್ಬ, ಬಹುಪರಾಕ್ ಹೇಳಲು ಒಬ್ಬ....ಹೀಗೆ.

ತಮಗೆ ಶಿಕ್ಷೆಯಾಗುವ ಭಯದಲ್ಲಿ ಪ್ರಜೆಗಳು ಅವನನ್ನು ಹೆಗಲ ಮೇಲೆ ಹೊತ್ತು ನಡೆದರು. ಎಲ್ಲರ ಮೇಲೂ ಇಲ್ಲದ ತೆರಿಗೆ ವಿಧಿಸಿದ. ತನ್ನನ್ನು ವಿರೋಧಿಸುತ್ತಿದ್ದ ಕೆಲವೇ ಕೆಲವರ ಮೇಲೆ ಕಣ್ಣಿರಿಸಲು ಸೇವಕರನ್ನು ನಿಯೋಜಿಸಿದ; ಅವರಿಂದ ವರದಿ ಪಡೆಯುತ್ತಿದ್ದ.  ಓದಲು, ಬರೆಯಲು ತಿಳಿಯದಿದ್ದರೂ ಮಹಾಪಂಡಿತನಾದ. ಹೊಗಳುವವರಿಗೆ ಕೆಲಸದಿಂದ ವಿನಾಯಿತಿ ನೀಡಿದ. ರಾಜ್ಯವನ್ನೇ ಲೂಟಿಮಾಡಿದ. ಅದು ಕಾಣದಿರಲೆಂದು ಎಲ್ಲ ಊರುಗಳನ್ನೂ ಸಿಂಗರಿಸುವಂತೆ ಮಾಡಿದ. ಎಲ್ಲ ಸಭೆಗಳಲ್ಲಿ 'ಪುಣ್ಯ- ಪಾಪ', 'ನ್ಯಾಯ- ಅನ್ಯಾಯ'ಗಳ ಕುರಿತು ಮಾತನಾಡಿದ.

ಜೀವಭಯದಿಂದ ಪ್ರಜೆಗಳು ಅವನ ಕಾಲಿಗೆ ಬಿದ್ದರು. 
ಅವನು ಕೇಳಿದ್ದೆಲ್ಲವನ್ನೂ ಕೊಟ್ಟರು. ಅವನು ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿದರು.

ಇಷ್ಟಾದರೂ ಪ್ರಾಮಾಣಿಕ ವರ್ಗವು ಅವನ ನಿದ್ದೆಯಲ್ಲಿ ಒಮ್ಮೊಮ್ಮೆ  ಬಂದು  ಕಾಡತೊಡಗಿದರು. 
*



ಕಾಜೂರು ಸತೀಶ್ 




No comments:

Post a Comment