ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 29, 2020

ಮದುವೆ ದಿನವೇ ನೇತ್ರದಾನ/ದೇಹದಾನದ ನಿರ್ಣಯ!

ಆಡಂಬರದ ಅಮಲಲ್ಲಿ ತೇಲುತ್ತಿರುವ ಕಾಲದಲ್ಲಿ ಈ ಇಬ್ಬರು ದೇಹದಾನ/ನೇತ್ರದಾನ ಮಾಡುವ ನಿರ್ಣಯದೊಂದಿಗೆ ತಮ್ಮ ಮದುವೆಯನ್ನು 'ಆಚರಿಸಿ'ಕೊಂಡರು! ಜೊತೆಗೆ ಕವನಸಂಕಲನದ ಬಿಡುಗಡೆ, ಪರಿಸರ ಸ್ನೇಹಿ ಪದಾರ್ಥಗಳ ಬಳಕೆ.


ಕಿರಗಂದೂರಿನ ಗೌತಮ್ ಮತ್ತು ಸುಮನ ಅರಕಲಗೂಡು  ಅವರ ಕುರಿತ ಮಾತಿದು. ಈ ಇಬ್ಬರ ಜೀವಪರ ಕಾಳಜಿ ಮತ್ತು ಅದರ ಅನುಪಾಲನೆ ನನ್ನನ್ನು ಕಾಡಿತು.

                        ***
ಸುಮನ ಅರಕಲಗೂಡು  ಅವರ ಪರಿಣಯ
ಸಂಕಲನಕ್ಕೆ (ದಿನೇಶ್ ಅವರು ನೀಡಿದ್ದು) ತೆರೆದುಕೊಂಡೆ. ಪ್ರೀತಿಯಿಂದ ಗೆಲ್ಲಲಾಗದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ ಎನ್ನುವ ನಿಲುವಿನವರು ಸುಮನಾ. ಮತ್ತಷ್ಟೂ ಓದಿಕೊಂಡಲ್ಲಿ ಇವರ ಕಾವ್ಯಕ್ರಮ ಮಾಗಬಲ್ಲದು.

ಗೌತಮ್-ಸುಮನ , ಅಭಿನಂದನೆಗಳು  ಈ ಸಂಚಲನಕ್ಕಾಗಿ.
*

- ಕಾಜೂರು ಸತೀಶ್

Wednesday, December 16, 2020

ಪ್ರಾಮಾಣಿಕತೆ, ಸೋಮಾರಿತನ, ಅಸಮಾನತೆ ಇತ್ಯಾದಿ

ಮೊನ್ನೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಅವರ ಬೇಡಿಕೆಗಳು ನ್ಯಾಯಯುತವೇ ಆಗಿದ್ದವು.

ಒಬ್ಬ ಚಾಲಕ/ನಿರ್ವಾಹಕ ಸೋಮಾರಿತನವನ್ನು ಪ್ರದರ್ಶಿಸಿದರೆ ಹೇಗಿರುತ್ತದೆ?! ಪೂರ್ಣ ಪ್ರಮಾಣದ ತ್ಯಾಗವಿಲ್ಲದೆ ಆ ಕೆಲಸವನ್ನು ನಿರ್ವಹಿಸಲು ಸಾಧ್ಯವೇ ? ಅಂಥವರ ಬೇಡಿಕೆಗಳನ್ನು ಈಡೇರಿಸಲಿಲ್ಲವೆಂದರೆ..
*


ಒಂದು ಜಾಥಾ ಕಾರ್ಯಕ್ರಮ. ಆಶಾ/ ಅಂಗನವಾಡಿ ಕಾರ್ಯಕರ್ತರ ಒಂದು ಗುಂಪು, ಸರ್ಕಾರಿ ನೌಕರರ ಮತ್ತೊಂದು ಗುಂಪು . ಅವರೆಲ್ಲಾ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿತ್ತು. 

ಮೊದಲ ಗುಂಪಿನಿಂದ ಯಾವುದೇ ತಕರಾರುಗಳು ಬರಲಿಲ್ಲ. ಬಿರಬಿರನೆ ನಡೆಯುತ್ತಿದ್ದರು. ಪುಟಿದೇಳುವ ಉತ್ಸಾಹ!

ಎರಡನೇ ಗುಂಪಿನಿಂದ ತಕರಾರುಗಳ ಸುರಿಮಳೆ- 'ನಮ್ಮನ್ನು ಹೀಗೆ ನಡೆಸುವುದೇ? ನಮಗೆ ಸಮಸ್ಯೆಗಳಿಲ್ಲವೇ? ಕಾಲು ನೋಯುವುದಿಲ್ಲವೇ...'

ಆ ಜಾಥಾದಿಂದ ಯಾರಿಗೂ ಉಪಯೋಗವಾಗಿರಲಿಕ್ಕಿಲ್ಲ, ನಿಜ. ಆದರೆ ಮೊದಲ ಗುಂಪಿಗೆ ಸಾಧ್ಯವಾದ ಉತ್ಸಾಹ, ಮತ್ತೊಂದು ಗುಂಪಿಗೆ ಯಾಕೆ ಸಾಧ್ಯವಾಗಲಿಲ್ಲ?
*

ಒಂದು ವರ್ಗ ಬೆವರು ಹರಿಸಿ ದುಡಿಯುತ್ತದೆ ಮತ್ತು ಸಿಗುವ ಅಲ್ಪ ಸಂಭಾವನೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತದೆ. ಮತ್ತೊಂದಕ್ಕೆ ಕೆಲಸ ಮಾಡಬೇಕೆಂದೇನೂ ಇಲ್ಲ(ಮಾಡಿದರೂ ಅಷ್ಟೂ ಜನರ ಹೊರೆ ಕೆಲವರ ಹೆಗಲಲ್ಲಿ). ಅದಕ್ಕಾಗಿ ಸಿಗುವ ಸಾಕಷ್ಟು ಸಂಭಾವನೆಯು ಸರಳ ಜೀವನದಿಂದಾಚೆಗೆ ಕೊಂಡೊಯ್ದು ಮತ್ತಷ್ಟೂ ಸೋಮಾರಿತನವನ್ನು ಹುಟ್ಟುಹಾಕುತ್ತದೆ.
*

ಒಂದೇ ಕೆಲಸವನ್ನು ನಿರ್ವಹಿಸುವಲ್ಲಿ ಏರ್ಪಡುವ ಈ ಅಸಮಾನತೆಯು ಡೆಮಾಕ್ರಟಿಕ್ ವ್ಯವಸ್ಥೆಯಂತೂ ಅಲ್ಲವೇ ಅಲ್ಲ.

ಬದಲಾಗುವುದು ಯಾವಾಗ?
*



ಕಾಜೂರು ಸತೀಶ್

Friday, December 11, 2020

ಡೆಮಾಕ್ರಸಿ



ಇಪ್ಪತ್ತು ಮಂದಿ ಇದ್ದರು.

ಒಂದು ಆನೆ ಮತ್ತು ಹತ್ತೊಂಬತ್ತು ಇರುವೆಗಳನ್ನು ಸ್ಥಳಾಂತರಿಸಲು ಮೇಲಿನಿಂದ ತಿಳಿಸಲಾಗಿತ್ತು.

ನಾಯಕ ಆನೆಯನ್ನು ಹೊತ್ತುಕೊಂಡ. ಉಳಿದ ಹತ್ತೊಂಬತ್ತು ಮಂದಿಗೆ ಒಂದೊಂದು ಇರುವೆಯನ್ನು ಹೊತ್ತು ತರಲು ತಿಳಿಸಿದ.

'ಹೇಗೆ?' ಒಬ್ಬ ಕೇಳಿದ.

'ಎತ್ತಿಕೊಂಡೆ, ಈಗ ಅದನ್ನು ಎಲ್ಲಿ ಇಟ್ಟುಕೊಳ್ಳಲಿ' ಇನ್ನೊಬ್ಬ ಕೇಳಿದ.

ಆನೆಯನ್ನು ಹೆಗಲಿಂದ ಇಳಿಸಿ ಇರುವೆಯನ್ನು ಹೇಗೆ ಎತ್ತಿಕೊಂಡು/ಹೊತ್ತುಕೊಂಡು ಹೋಗಬೇಕೆಂದು ನಾಯಕ ತಿಳಿಸಿದ.

'ಈಗ ಗೊತ್ತಾಯ್ತು ' ಎಂದರು.

ಆನೆಯನ್ನು ಹೆಗಲಲ್ಲಿಟ್ಟುಕೊಂಡು ನಡೆಯತೊಡಗಿದ ನಾಯಕ.

ಫೋನು ರಿಂಗಣಿಸಲಾರಂಭಿಸಿದವು:

' ಇರುವೆಯನ್ನು ಎತ್ತಿಕೊಳ್ಳುವಾಗ ಒಂದು ಕಾಲು ಮುರಿಯಿತು, ಈಗ ಏನು ಮಾಡಲಿ?'

'ಇದು ಸತ್ತು ಹೋಯ್ತು, ಬದುಕಿಸಬಹುದಾ?'

'ನನಗೆ ಒಬ್ಬಳೇ ಆಗಲ್ಲ ಮತ್ತೊಬ್ರನ್ನ ಕರ್ಕೊಳ್ಲಾ?'

'ನನಗಾಗಲ್ಲ ಇದು ಎಷ್ಟ್ ಕೆಲ್ಸ ಮಾಡೋದು ..ನಾನ್ ಕೆಲ್ಸ ಬಿಡ್ತೀನಿ'

' ಮಧ್ಯಾಹ್ನ ಆಯ್ತು, ಏನ್ ನಾವು ಊಟ ಮಾಡೋದು ಬೇಡ್ವಾ?'

'ನಾನು ನಮ್ಮ ಯೂನಿಯನ್ನಿಗೆ ಕಂಪ್ಲೈಂಟ್ ಮಾಡ್ತೀನಿ'

ಆನೆಯನ್ನು ಹೊತ್ತುಕೊಂಡು ಹೋಗುವಾಗ ಮಾತನಾಡುತ್ತಿದ್ದರಿಂದ ನಾಯಕನಿಗೆ ಏದುಸಿರು ಬರುತ್ತಿತ್ತು. ಇರುವೆಗಳಲ್ಲಾ ಸತ್ತರೆ ಮೇಲಿನವರಿಗೆ ಏನು ಹೇಳುವುದು ಎಂದುಕೊಂಡು 'ಬೇಡ ಬಿಡಿ ..ನಿಮಗೆ ಸಾಧ್ಯವಾದ್ರೆ ಮಾಡಿ' ಎಂದ.

ಒಂದೆರಡು ಮಂದಿ ಇರುವೆಯನ್ನು ತಂದೊಪ್ಪಿಸಿದರು.

ಆನೆಯನ್ನು ತಲುಪಿಸಿದ ಮೇಲೆ ನಾಯಕನೇ ಉಳಿದ ಇರುವೆಗಳನ್ನು ಎತ್ತಿಕೊಂಡು/ಹೊತ್ತುಕೊಂಡು ಬಂದ.
*
'ನಾವು ಆನೆಯನ್ನೂ ಇರುವೆಯನ್ನೂ ಒಟ್ಟಿಗೆ ಹೊತ್ತುಕೊಂಡು ಹೋಗಲ್ಲೆವು, ನಮಗೆ ಅವಕಾಶ ಕೊಡಿ' ಆ ಓಣಿಯಲ್ಲಿ ನಿರುದ್ಯೋಗಿ ಯುವಕರ ಗುಂಪೊಂದು ಪ್ರತಿಭಟನೆ ಮಾಡುತ್ತಿತ್ತು.
*


ಕಾಜೂರು ಸತೀಶ್

Sunday, December 6, 2020

ಹಿಂಡುಕುಳ್ಳೆ ಕಥಾಸಂಕಲನದ ಕುರಿತು

ಅಮರೇಶ ಗಿಣಿವಾರರ 'ಹಿಂಡೆಕುಳ್ಳು' ಓದಿದೆ. ಹೊಸತಲೆಮಾರಿನ ಒಬ್ಬ ಅನನ್ಯ ಕತೆಗಾರನ ದರ್ಶನವಾಯಿತು. ನಿರ್ದಿಷ್ಟ ಕೇಂದ್ರವನ್ನಿಟ್ಟುಕೊಳ್ಳದೆ ಕಥನಕ್ರಮದ ಕುರಿತು ತಲೆಕೆಡಿಸಿಕೊಳ್ಳದೆ ಹೇಳುವ ವಿವರಗಳೆಲ್ಲವನ್ನೂ ಕತೆಯಾಗಿಸುವ ಪ್ರತಿಭಾವಂತ. ಅವು ಕೊಲಾಜುಗಳ ಹಾಗೆ ಕಾಣುತ್ತವೆ. ಆದರೆ ಅವುಗಳ ಒಟ್ಟು ನೋಟ ಮಾತ್ರ ದಟ್ಟ ಹಳ್ಳಿಯದು.


ಗಂಡೊಬ್ಬನು ಹಡೆದ ಹೆಣ್ಣಿನ ಕತೆಗಳಿವು. ಇಲ್ಲಿನ ಕತೆಗಳ ಆತ್ಮ- ಹೆಣ್ಣು. ಹೆಣ್ತನವನ್ನು ಪುರುಷ ಯಾಜಮಾನಿಕೆಯ ಜೊತೆಗೆ ಮುಖಾಮುಖಿಯಾಗಿಸಿ ನೋಡುತ್ತವೆ.



ರಾಯಚೂರಿನ ದೇಸೀ ಬದುಕು ಇಲ್ಲಿ ಕತೆಯಾಗಿದೆ.
ಪ್ರೇಮ, ಕಾಮ, ಹಸಿವು, ಬಾಯಾರಿಕೆ,ಮದುವೆ, ಕುಲಕಸುಬು, ಕೂಲಿ, ಹಿಂಸೆ, ಶೋಷಣೆ, ಬಡತನ, ಕಾಯಿಲೆ, ಸಾವು, ಮೌಢ್ಯ, ಕನಸು, ಮುಗ್ಧತೆ, ಅಸಹಾಯಕತೆ- ಈ ಕತೆಗಳ ಒಟ್ಟು ಸಾರ. ಕೇವಲ ಕತೆ ಹೇಳುವುದರ ಜೊತೆಗೆ ಎಲ್ಲಿಯೂ ನೇರವಾಗಿ ಬಡಬಡಿಸದ ವೈಚಾರಿಕ ನಿಲುವುಗಳು ಇಷ್ಟವಾಗುತ್ತವೆ. ಈ ಕಾಲದಲ್ಲೂ ಇಂತಹ ಕರುಳುಹಿಂಡುವ ಬಡತನವನ್ನು , ಮುಗ್ಧತೆಯನ್ನು ಬಾಳುತ್ತಿರುವ ನಮ್ಮ ನೆಲದ ದರ್ಶನವಾಗುತ್ತದೆ.


ಕತೆಗಳು ಮೈಪಡೆದ ಪ್ರಾದೇಶಿಕ ಭಾಷೆಯಂತೂ ಒಂದು ಸುದೀರ್ಘ ಓದನ್ನು ಬೇಡುವಂತೆ ಮಾಡುವುದರ ಜೊತೆಗೆ ಕನ್ನಡದ ವಿಶಿಷ್ಟತೆಯನ್ನು ಸಾರುತ್ತದೆ. ಕನ್ನಡ ಸಣ್ಣಕತೆಗಳ ಪರಂಪರೆಯ ಗಮನಿಸಬೇಕಾದ ಕತೆಗಳ ಸಾಲಿಗೆ ಇವು ನಿಲ್ಲುತ್ತವೆ.

ವಿಳಾಸ ಕೇಳದೆ, ಪುಸ್ತಕ ತಲುಪಿರುವ ಬಗ್ಗೆಯೂ ವಿಚಾರಿಸದೆ, ಓದಿ ಆಯಿತಾ ಎನ್ನದೆ ತಮ್ಮ ಕತೆಗಳ ಹಾಗೆ ಮುಗ್ಧತೆಯನ್ನು ತೋರಿಸಿದ ಅಮರೇಶ ಗಿಣಿವಾರರಿಗೆ ಇಂತಹ ಒಳ್ಳೆಯ ಪುಸ್ತಕವನ್ನು ಕಳುಹಿಸಿ ಓದಲು ಅವಕಾಶ ಕಲ್ಪಿಸಿದ್ದಕ್ಕೆ ಪ್ರಣಾಮಗಳು.

*


ಕಾಜೂರು ಸತೀಶ್