ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 17, 2019

ಕುಡಿಗಾಣದ ಅಬ್ಬಿಯ ನೆಪದಲ್ಲಿ ಕಂಡ ಅಪರೂಪದ ಮುಖಗಳು

ಕಳೆದ ಭಾನುವಾರ ಆತ್ಮಕ್ಕೆ ಸ್ವಲ್ಪ ಸುಖ ಸಿಗಲೆಂದು ಪ್ರಕೃತಿಯ ಚೆಲುವು ಅರಸಿ ಕುಡಿಗಾಣ ಅಬ್ಬಿಯ ಕಡೆಗೆ ಹೊರಟಿದ್ದೆವು. ಸೋಮವಾರಪೇಟೆಯಿಂದ 22ಕಿ.ಮೀ. ಅಂತರದಲ್ಲಿ ನಗರದ,ಆಧುನೀಕರಣದ ನರಕದಿಂದ ತಪ್ಪಿಸಿಕೊಂಡು ಬದುಕುತ್ತಿರುವ ಕೊತ್ತನಳ್ಳಿಯ ಸಮೀಪವಿರುವ ಸ್ಥಳವದು.


ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲಿಂದ ಅದಾಗಲೇ ಜಾರಿಹೋಗಿತ್ತು. ಹೊಟ್ಟೆಯು ಯಾವುದೋ ಸ್ವರದಲ್ಲಿ ಜಠರದ ಚರಮಗೀತೆಯನ್ನು ಗುನುಗುನಿಸುತ್ತಿತ್ತು. ಊಟಕ್ಕೆ ಶೇಖರ್ ಸರ್ ಖಾತ್ರಿ. ರಾಧಾಕೃಷ್ಣ ಸರ್ ಮತ್ತು ಲೋಕೇಶ್ ಸರ್ ಅವರಿಗೆ 'ನಮಗಿವತ್ತು ಊಟ ಸಿಗುತ್ತೋ ಏನೋ' ಎಂಬ ಅನುಮಾನ.


ಕೊತ್ತನಳ್ಳಿಯ ಆ ಮನೆಯನ್ನು ತಲುಪಿದಾಗ ಬಾಗಿಲಿಗೆ ಚಿಲಕ! ಚಿಲಕ ತೆರೆದು ಶೇಖರ್ ಸರ್ ಸರಾಗವಾಗಿ ಒಳಹೊಕ್ಕಾಗ ನನಗೆ ಗಾಬರಿ! ಯಾರದೋ ಮನೆ, ಜನರಿಲ್ಲದ ವೇಳೆಯಲ್ಲಿ ಹೀಗೆ ಮನೆ ನುಗ್ಗುವುದು ಎಂದರೆ!


ಹಾಗೆ ಒಳನುಗ್ಗಿದವರು ನಾಲ್ಕು ತಟ್ಟೆಗೆ ಕಣಿಲೆ ಸಾರು ಮತ್ತು ಕಡುಬು ಹಾಕಿ ಒಂದನ್ನು ಬಾಯೊಳಗಿಳಿಸಿಕೊಳ್ಳುತ್ತಾ 'ಬನ್ನಿ' ಎಂದು ನಮ್ಮನ್ನು ಆಮಂತ್ರಿಸಿದರು! ಆತ್ಮದ ಆರೋಗ್ಯಕ್ಕಾಗಿ ಬಂದ ನಮಗೆ ದೇಹದ ಅಸ್ತಿತ್ವ ದೊಡ್ಡದೆನಿಸಿ 'ಮುಕ್ಕಲು' ಶು(ಸು)ರುಮಾಡಿದೆವು. 

ಶೇಖರ್ ಸರ್ ಮೇಷ್ಟ್ರಾಗಿದ್ದಾಗ ಇದೇ ಮನೆಯಲ್ಲಿ 'ಮನೆಮಗ'ನಂತೆ ಉಳಿದುಕೊಂಡಿದ್ದರು. ಈಗಿನ Paying Guestನಂತಲ್ಲ ಅದು. 

ಸ್ವಲ್ಪ ಹೊತ್ತಲ್ಲಿ ತೋಟದೊಳಗಿಂದ ಒಂದು ಕುಳ್ಳಗಿನ ದೇಹ ಏನನ್ನೋ ತಲೆಯ ಮೇಲಿರಿಸಿಕೊಂಡು ನುಸುಳಿ ಬರುತ್ತಿತ್ತು. ನಮ್ಮನ್ನು ನೋಡಿದ್ದೇ ನಗುವಿನ 'ಸ್ವಾಗತ'.

'ಬೊಂಬಾಯಣ್ಣ' ಪರಿಚಯಿಸಿದರು ಶೇಖರ್ ಸರ್. ನನಗದು 'ಬೊಮ್ಮಾಯಣ್ಣ' ಎಂದು ಕೇಳಿಸಿದ್ದರಿಂದ ಹೆಸರಿನ ಬಗ್ಗೆ ಚಕಾರವೆತ್ತಲಿಲ್ಲ.

ಅಷ್ಟರಲ್ಲಿ ಪಾರ್ವತಕ್ಕ ಬಂದು 'ಬನ್ನಿ ಮಾಷ್ಟ್ರೇ' ಎಂಬ ಸ್ವಾಗತಕ್ಕೆ ಅವರ ಮನೆಯ ಕಡೆ ನಡೆದೆವು. ಪಾರ್ವತಕ್ಕನ ಮಾತಿನಲ್ಲಿ ಇಡೀ ಹಳ್ಳಿಯ ಭಾಷೆ ಮತ್ತು ಸಂಸ್ಕೃತಿಗಳ ದರ್ಶನವಾಯಿತು. ಅಲ್ಲಿ ನಮ್ಮ ಪಾಲಿಗೆ 'ಕಟ್ಟಂಚಾಯ', 'ಮೀನಿನ ಪೀಸು' ,ಸೀಬೇಕಾಯಿ.


'ಬೊಂಬಾಯಣ್ಣ'ನ ಕೋಳಿಸಾರಿಗೆ ಅದೆಂಥದ್ದೋ ಚುಂಬಕ ಶಕ್ತಿಯಿದೆ ಎಂದು ಆಮೇಲೆ ತಿಳಿದದ್ದು. ಬೊಂಬಾಯಿಯ ಹೋಟೆಲೊಂದರಲ್ಲಿ ಕೆಲಸ ಮಾಡಿದ್ದರಿಂದ ಪೂವಯ್ಯ ಎಂಬ ನಿಜನಾಮವಳಿದು ಅನ್ವರ್ಥನಾಮವೇ ಉಳಿದುಬಿಟ್ಟಿತ್ತು.


*

ಅಲ್ಲಿಗೆ ಬೆಳಿಗ್ಗೆ ಮತ್ತು ಸಂಜೆ ಬಸ್ಸು  ಬಂದು ಮುಖ ತೋರಿಸಿ ಹೋಗುತ್ತದೆ. ಮೊಬೈಲ್ ಸಿಗ್ನಲ್ ಎಲ್ಲಾದರೂ ಒಂದು 'ಕಡ್ಡಿ' ಸಿಕ್ಕಿದರೆ ಅವರ ಅದೃಷ್ಟ. ಅಷ್ಟಿಷ್ಟು ಓದಿಕೊಂಡ ಮಕ್ಕಳು ಪಟ್ಟಣ ಸೇರಿದ್ದಾರೆ. ಇರುವ ಕಾಫಿ ತೋಟ, ಭತ್ತದ ಗದ್ದೆಯಲ್ಲಿ ತಂದೆ-ತಾಯಿಯರ ಅಹೋರಾತ್ರಿ ಕೆಲಸ. ನಮ್ಮಂಥವರು ಹೋದರೆ ಸ್ವಲ್ಪವೂ ಬೇಸರಿಸದೆ ಮನೆಮಕ್ಕಳ ಹಾಗೆ ಆತಿಥ್ಯ.

ಪಕ್ಕಾ ಕಾಡುಮನುಷ್ಯನ ಹಾಗೆ ಬೆಳೆದ ನನಗೆ ಇದನ್ನೆಲ್ಲ ನೋಡಿದ ಮೇಲೆ ಈ ತಂತ್ರಜ್ಞಾನ ನಮ್ಮ ಅಸ್ತಿತ್ವವನ್ನು ಬುಡಮೇಲು ಮಾಡುತ್ತಿರುವ ಕುರಿತು ಸಿಟ್ಟು, ಸಂಕಟ ಒಟ್ಟಿಗೆ ಆಗತೊಡಗಿದೆ

*
ಕಾಜೂರು ಸತೀಶ್ 

Wednesday, October 9, 2019

ಜಿ ಕೆ ರವೀಂದ್ರಕುಮಾರ್ ಸರ್- ಅಕ್ಷರ ತರ್ಪಣ

2011ರಲ್ಲಿ ಹಳೆಯ ದೀಪಾವಳಿ ವಿಶೇಷಾಂಕಗಳನ್ನು ಗುಡ್ಡೆಹಾಕಿಕೊಂಡು ಕತೆ-ಕವಿತೆಗಳನ್ನು ಗಂಭೀರವಾಗಿ ಓದುತ್ತಾ ಕುಳಿತಿದ್ದೆ. ಕನ್ನಡ ಪ್ರಭ ವಿಶೇಷಾಂಕದ ಕಡೆಯ ಪುಟದ ಕವಿತೆ ನನ್ನನ್ನು ಹೆಚ್ಚು ಕಾಡಿದ್ದು. ಕವಿತೆ ಹೀಗೆ ಆರಂಭವಾಗಿತ್ತು:
'ಹುಟ್ಟಬಹುದಿತ್ತೇನೊ ವಿದಾಯದ ಒಂದು ಸಾಲು..'

ಕಣ್ತಪ್ಪಿನಿಂದ ಕವಿಯ ಹೆಸರು ನಮೂದಿಸಲು ಬಿಟ್ಟುಹೋಗಿತ್ತು.

ಮೊಬೈಲು ಕೈಗೆತ್ತಿಕೊಂಡು ಸಂದೇಶ ಕಳಿಸಿದೆ. 'ಆ ಕವಿತೆ ನಿಮ್ದೇ ಅಲ್ವಾ ಸರ್?  ಅತ್ತಲಿಂದ  'Yes, wonderful! Thanks'. ಆಗ ಅವರೊಂದಿಗೆ ಮಾತನಾಡಿದೆ;ಕಂಚಿನ ಕಂಠ!

ಆ 'ವಿದಾಯದ ಸಾಲು' ನಮ್ಮನ್ನು ಮತ್ತಷ್ಟೂ ಆತ್ಮೀಯರನ್ನಾಗಿಸಿತ್ತು. ಅದೇ 'ವಿದಾಯದ ಸಾಲು' ಈಗ ನನ್ನಿಂದ ಬರೆಸಿಕೊಳ್ಳುತ್ತಿದೆ! ಪ್ರಿಯ ಜಿ ಕೆ ರವೀಂದ್ರಕುಮಾರ್ ಸರ್....



ರವೀಂದ್ರಕುಮಾರ್ ಸರ್ ತೀರಿಕೊಂಡ ಸುದ್ದಿ ಕೇಳಿ ಅದನ್ನು ನಂಬುವುದಕ್ಕೆ ಗಂಟೆಗಳೇ ಹಿಡಿಸಿದವು. ಯುವತಲೆಮಾರಿನೊಂದಿಗೆ ಎಷ್ಟೊಂದು ಪ್ರೀತಿಯಿಂದ ಮಾತನಾಡುತ್ತಿದ್ದರು, ತಿದ್ದುತ್ತಿದ್ದರು,ಬೆನ್ನು ತಟ್ಟುತ್ತಿದ್ದರು, ಬೆಳೆಸುತ್ತಿದ್ದರು! ಇವತ್ತಿನ ಫೇಸ್ಬುಕ್ ಗೋಡೆಗಳ ಮೇಲೆಲ್ಲಾ ರವೀಂದ್ರಕುಮಾರ್ ಸರ್ ಅವರದ್ದೇ ಚಿತ್ರಗಳು, ಒಡನಾಟದ ನೆನಪುಗಳು.

ನಾನವರನ್ನು ಮೊದಲು ಮುಖತಃ ಭೇಟಿಯಾಗಿದ್ದು ಮಡಿಕೇರಿಯ ದಸರಾ ಕವಿಗೋಷ್ಠಿಯಲ್ಲಿ. ಕವಿ/ಸಾಹಿತಿಗಳಿಂದ ದೂರ ಉಳಿಯುವ ನನಗೆ ಅವರ ಆತ್ಮೀಯತೆ ತುಂಬಾ ಇಷ್ಟವಾಯಿತು.


ಮಡಿಕೇರಿಯಲ್ಲಿದ್ದಾಗ ಅವರ ಬರವಣಿಗೆ ಎಷ್ಟು ತೀವ್ರವಾಗಿತ್ತೆಂದರೆ ಅವರ ಲಲಿತ ಪ್ರಬಂಧ 'ಮೇಘ ಮಲ್ಹಾರ' ಹುಟ್ಟಿದ್ದೇ ಅಲ್ಲಿ. ಪ್ರಜಾವಾಣಿ ವಿಮರ್ಶೆ, silence please ,ದನಿ ಅನುದನಿಗಳ ಪ್ರಸವವೂ.

MEd ಓದಿಕೊಂಡು ಯಾವುದೋ ಶಾಲೆಯ ಮಕ್ಕಳಿಗೆ ಮೇಷ್ಟ್ರಾಗದೆ ಬಾನುಲಿಯಲ್ಲಿ ನಮ್ಮೆಲ್ಲರಿಗೂ ಮೇಷ್ಟ್ರಾಗಿದ್ದರು. ಅವರ ಸಿಡಿಲಿನಂಥ ಧ್ವನಿ, ಸ್ಪಷ್ಟ ಉಚ್ಚಾರ, ಹದವರಿತ ಏರಿಳಿತ, ಸಂದರ್ಶನದಲ್ಲಿ ಬುಲೆಟ್ಟಿನಂತೆ ಬರುತ್ತಿದ್ದ ಪ್ರಶ್ನೆಗಳು- ಇದನ್ನೆಲ್ಲ ಕೇಳಿ ಅನುಭವವಿದ್ದ ನನಗೆ ಅವರು ಆಕಾಶವಾಣಿಗೆ ಆಹ್ವಾನಿಸಿದರೂ ತಪ್ಪಿಸಿಕೊಂಡಿದ್ದೆ.

ಸಾಹಿತ್ಯ , ಸಂಗೀತ, ತತ್ವಶಾಸ್ತ್ರಗಳ ಮೇಲೆ ಅಪಾರ ಒಲವು. ಅವರ ಪ್ರಬುದ್ಧತೆಗೆ ಈ ವೀಡಿಯೊಗಳೇ ಸಾಕ್ಷಿ.


https://youtu.be/mZeKJr1xf0w
ಸಾವಿನ ಶಯ್ಯೆಯಿಂದ ಎರಡು ದಶಕಗಳ ಹಿಂದೆ ಎದ್ದು ಬಂದಿದ್ದರು. 'ಸಾವು' ಅವರನ್ನು ಅಷ್ಟು ಕಾಡಿಸಿದೆ, ಪೀಡಿಸಿದೆ. 'ಕದವಿಲ್ಲದ ಊರಿಗೆ' ಪಯಣ ಬೆಳೆಸುವ ಅನುಭವಗಳು ಅನೇಕ ಕವಿತೆಗಳಲ್ಲಿವೆ. ಮೊನ್ನೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕವಿತೆ ಕೂಡ ಅಂತಹದ್ದೇ: 'ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು...'




ನನಗೆ ಅವರ 'ಮರವನಪ್ಪಿದ ಬಳ್ಳಿ'ಯನ್ನು ಕಳುಹಿಸಿಕೊಟ್ಟಿದ್ದರು(ನನ್ನ ಇಷ್ಟದ ಸಂಕಲನವದು).ಜೊತೆಗೆ ಅವರ ಈತನಕದ ಕವಿತೆಗಳ ವಿಮರ್ಶಾ ಸಂಕಲನವನ್ನೂ . ಮತ್ತೆ ಮತ್ತೆ ಓದಿಸಿಕೊಂಡ ಕೃತಿಗಳವು. 'ನಿಮ್ಮ ಅಂಚೆ ವಿಳಾಸ ಕೊಡಿ' ಈ ಸಂದೇಶವನ್ನು ನನ್ನ ತಲೆಮಾರು ಅವರಿಂದ ಸ್ವೀಕರಿಸಿರುವುದಕ್ಕೆ ಲೆಕ್ಕವಿಲ್ಲ.

'ಸತೀಶ್ ಭಾವಗೀತೆ ಕಳುಹಿಸಿ' ಕೇಳಿದ್ದರು. ಎರಡನ್ನು ಕಳುಹಿಸಿಕೊಟ್ಟಿದ್ದೆ. 'ಹಾಡುತ್ತಾ ಹಾಡುತ್ತಾ ಹಾಡುಗಾರರು ಹಾಡುವುದನ್ನು ನಿಲ್ಲಿಸಿಯೇಬಿಟ್ಟರು. ಏನದು ಇಮೇಜ್? ವಿವರಿಸುತ್ತೀರಾ?ಕುತೂಹಲಕ್ಕೆ ಕೇಳುತ್ತಿದ್ದೇನೆ' ಕೇಳಿದ್ದರು. ಮತ್ತೊಂದನ್ನು ಕಳುಹಿಸಿದಾಗ ಮೆಚ್ಚಿ ಸಂದೇಶ ಕಳುಹಿಸಿದ್ದರು. ಅದು ಪ್ರಸಾರವಾಗುವ ಮೊದಲೇ ಹೀಗೆ ಹೊರಟುಬಿಟ್ಟರು.


ಗೊತ್ತು, ರವೀಂದ್ರಕುಮಾರ್ ಸರ್ ಮತ್ತಷ್ಟೂ ಬಾಳುತ್ತಾರೆ ನಮ್ಮೊಳಗೆ, ಮತ್ತಷ್ಟೂ ಪ್ರೀತಿಸಲ್ಪಡುತ್ತಾರೆ.

*
ಕಾಜೂರು ಸತೀಶ್ 

Monday, October 7, 2019

ಗಾಂಧಿ ಜಯಂತಿ ,ಮೀನು, ಸ್ವಾತಂತ್ರ್ಯ,ಶಿಕ್ಷಣ, ಬದುಕು, ಇತ್ಯಾದಿ

ಗಾಂಧಿ ಜಯಂತಿ. ಆ ಶಾಲೆಯಲ್ಲಿ ಎಂಟು ಮಕ್ಕಳಿದ್ದರು.


'ಮಕ್ಳೇ, ಗಾಂಧೀಜಿ ಬಗ್ಗೆ ಏನಾದ್ರೂ ಗೊತ್ತಾ?' ಕೇಳಿದೆ. ಮುಖವನ್ನೇ ನೋಡಿದರು. ಹೂ-ಹಾರ ಹಾಕಿರುವ ಗಾಂಧಿಯ ಪಟ ತೋರಿಸಿ 'ಇವ್ರು ಯಾರೂಂತ ಗೊತ್ತಾ?' ಕೇಳಿದೆ.

'ತಾತ ಸರ್' ಮಗುವೊಂದು ಮುಗ್ಧತೆಯಿಂದ ಹೇಳಿತು.

'ಸ್ವಾತಂತ್ರ್ಯ ದಿನಾಚರಣೆ ಆಚರ್ಸ್ತೀರಲ್ವಾ?' 'ನಮ್ಮ ದೇಶ ಯಾವ್ದು ಗೊತ್ತಾ?'

ಪದವೇ ಕೇಳದವರಂತೆ ನನ್ನನ್ನೇ ನೋಡತೊಡಗಿದರು.


ಆ ಮುಗ್ಧ ಮಕ್ಕಳಿಗೆ ಅವೆಲ್ಲಾ ತಿಳಿದಿರಲಿಲ್ಲ. ಬದಲಾಗಿ ಮೀನು ಹಿಡಿಯುವುದು, ಸಾರುಮಾಡಿ ತಿನ್ನುವುದು ಮುಂತಾದ ಜೀವನ ಕೌಶಲಗಳನ್ನು ಕಲಿತಿದ್ದರು.

ಹೇಮಾವತಿ ಹಿನ್ನೀರು ಇರುವವರೆಗೆ ಆ ಶಾಲೆಯಲ್ಲಿ ಶಿಕ್ಷಣ. ನೀರು ಇಳಿದಿದ್ದೇ ತಡ ಮತ್ತೊಂದು ಊರಿಗೆ; ಮತ್ತೊಂದು ರಾಜ್ಯಕ್ಕೆ. ಹೀಗಾಗಿ ಮಕ್ಕಳಿಗೆ ಕನ್ನಡದ ಜ್ಞಾನ ಅಷ್ಟಕ್ಕಷ್ಟೆ.


ಮನೆಗೆ ಹೋದಾಗ ಚಾಪೆ ಹಾಸಿ ಕೂರಿಸಿದರು. ಗೆಳೆಯ ಜಾನ್ ಸುಂಟಿಕೊಪ್ಪ , ಸುತ್ತಮುತ್ತಲಿನ ಶಿಕ್ಷಕರು ನಮ್ಮೊಂದಿಗೆ ಕೂಡಿಕೊಂಡರು.

ಮಕ್ಕಳ ಪೋಷಕರು ಹೆಚ್ಚೆಂದರೆ ಮೂರನೇ ತರಗತಿಯವರೆಗೆ ಓದಿದವರು. 'ನಮಗೆ ಬದುಕು ಮುಖ್ಯ' ಎಂದರು. 'ಮಕ್ಕಳ ಭವಿಷ್ಯ ಮುಖ್ಯ ಅಲ್ವಾ?' ಕೇಳಿದರೆ 'ಏನ್ಮಾಡೋದು ನಾವು ಹೋದ್ರೆ ಮಕ್ಳೂ ಬರ್ತಾವಲ್ಲಾ' ಸಮರ್ಥಿಸಿಕೊಂಡರು.

ಸಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಅವರು ತಮ್ಮ ಸ್ವಂತ ಹಣದಿಂದ ದೇವಾಲಯವನ್ನು ಕಟ್ಟಿಸುತ್ತಿದ್ದರು. ಮೂರು ಲಕ್ಷದ ಯೋಜನೆ!
******************************** 

ಹೊರಗೆ ಬಂದ ಮೇಲೆ 'ಅಲ್ಲಾ ಸಾರ್ ಅವ್ರೆಷ್ಟು calm ಆಗಿದ್ರು, ನಾವು ನೋಡಿ ಆಕಾಶ ಕಳಚಿ ಬಿದ್ದವ್ರ ಹಾಗೆ ಇರ್ತೇವೆ. ನಿಜವಾದ ಸ್ವಾತಂತ್ರ್ಯವನ್ನು ಅವ್ರು ಅನುಭವಿಸ್ತಿದ್ದಾರೆ. ನಮ್ಗಿಲ್ಲ ನೋಡಿ' ಗೆಳೆಯನಿಗೆ ಹೇಳಿದೆ.

'ನಿಜ ಸಾರ್ ಅವ್ರನ್ನು ನಾವು ,ಈ ವ್ಯವಸ್ಥೆ ಎಲ್ಲಾ ಸೇರಿ ಹಾಳು ಮಾಡ್ತಿದ್ದೇವೆ. ನಮ್ಮ ಯೋಜನೆಗಳಿಂದ ಅವ್ರು ಮೀನು ಹಿಡಿಯೋದನ್ನೂ ಕಲಿಯಲ್ಲ, ಬೇರೆ ಕೆಲ್ಸಾನೂ ಕಲಿಯಲ್ಲ' ಗೆಳೆಯನ ಪ್ರತಿಕ್ರಿಯೆ.

ಪ್ರಿಯ ಗಾಂಧಿ, ಕ್ಷಮಿಸಿ ನಮ್ಮನ್ನು!
*

ಕಾಜೂರು ಸತೀಶ್