ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, June 8, 2019

ಒಂದೇ ಒಂದು ಅಕ್ಷರ

ಒಂದು ಅಕ್ಷರವನ್ನು
ನಿನಗೆ ಉಡುಗೊರೆಯಾಗಿ ನೀಡುತ್ತೇನೆ
ಹೊಚ್ಚ ಹೊಸತು
ವರ್ಣಮಾಲೆಯಲ್ಲಿಲ್ಲದ್ದು

ಆ ಒಂದಕ್ಷರದಲ್ಲಿ
ನೀನೊಂದು ಕವಿತೆಯ ಹಡೆದುಬಿಡು
ಹುಟ್ಟಲಿಚ್ಛಿಸಿದ ಕತೆಯೊಂದನ್ನು
ಹೂವಂತೆ ಅರಳಿಸಿಬಿಡು

ಆ ಒಂದಕ್ಷರದಲ್ಲಿ
ನಿನ್ನ ಪ್ರೀತಿಯನ್ನು
ವಸಂತವಾಗಿ ಅರಳಿಸು
ಗೆಳತಿಗೊಂದು ಚೆಲುವಾದ ಪತ್ರ ಬರೆ

ಆ ಒಂದೇ ಒಂದಕ್ಷರದಲ್ಲಿ
ಅಕ್ಷರಲೋಕದ ಸಾಮ್ರಾಟನಾಗು
ಅರ್ಥಗಳ ಮಾತಿನೊಳಗೆ ತುಂಬಿ ಕಗ್ಗಾಡಾಗಿಸು

ಆಮೇಲೆ
ಆ ಒಂದಕ್ಷರವನ್ನು
ಮಹಾಸಾಗಾರದಲ್ಲಿ ತರ್ಪಣವಾಗಿ ತೇಲಿಬಿಡು
ಹಿಂತಿರುಗಿ ನೋಡದೆ
ಬದುಕಿನತ್ತ ನಡೆದುಬಿಡು.
*

 ಮಲಯಾಳಂ ಮೂಲ- ಜ್ಯೋತಿ ಮದನ್

 ಕನ್ನಡಕ್ಕೆ - ಕಾಜೂರು ಸತೀಶ್

Friday, June 7, 2019

ಸ್ತ್ರೀ

ಕೊತಕೊತ ಕುದಿದು ಬೆಂದ
ಅನ್ನ ಬಸಿಯುವಾಗಲೂ..

ಮೂಗು ಬಾಯಿ ಕಟ್ಟಿ
ಬಲೆ ಹೊಡೆಯುವಾಗಲೂ..

ಮೇಯುವ ಕೋಳಿಮರಿಗಳ ಹಿಡಿಯ ಬಂದ
ಗಿಡುಗವನ್ನೋಡಿಸುವಾಗಲೂ..

ಕೊಟ್ಟಿಗೆಯಲ್ಲಿ ಸೆಗಣಿ ಬಾಚುವಾಗಲೂ..

ಇವೆಲ್ಲಾ ಬದುಕಿರುವವರ ಪಾಲಿನ ಅನಂತ ಸಾಧ್ಯತೆಗಳೆಂದು
ಹತ್ತನೇ ತರಗತಿಯ ಫಲಿತಾಂಶ ನೋಡಿ ಬಂದ
ಮಗುವಿಗೆ ಹೇಳಿದಂತೆ ಅಮ್ಮ ನೆನಪಿಸುತ್ತಿದ್ದಳು

ಮಂಚದ ಕೆಳಗೆ
ಬಿಳಿವಸ್ತ್ರದೊಳಗೆ ಮಲಗಿರುವ
ಅಜ್ಜಿಯ ಮುಖವನ್ನು ಗೀಚುವ
ನಾನದನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ!

*

 ಮಲಯಾಳಂ ಮೂಲ- ವಿದ್ಯಾ ಪೂವಂಚೇರಿ

 ಕನ್ನಡಕ್ಕೆ- ಕಾಜೂರು ಸತೀಶ್

Thursday, June 6, 2019

A+



ಒಂದೇ ಒಂದು A+ ಕೂಡ ಸಿಗದ
ಮಗುವಿನ ಮನೆಗೆ ಹೋದೆ
ಹಾಲು ಕರೆಯುತ್ತಿತ್ತು ಕೊಟ್ಟಿಗೆಯಲ್ಲಿ.

ಒಮ್ಮೆ ನನ್ನನ್ನು ಮತ್ತೊಮ್ಮೆ ಮಗುವನ್ನು ದಿಟ್ಟಿಸಿದ ಹಸು
ಹುಲ್ಲು ಕುಯ್ಲಿಕ್ಕೆ ಬರುತ್ತಾ?
ನನ್ನ ಬಿಚ್ಚಿ ಮೇಯ್ಸಿ ಕಟ್ಲಿಕ್ಕೆ ಬರುತ್ತಾ?
ಕೇಳಿತು ನನ್ನನ್ನು
ಇಲ್ಲ ಎನ್ನುತ್ತಾ ಹಳದಿ ಕಕ್ಕೆಹೂವಿನ ಮೇಲೆ ಕಣ್ಣುನೆಟ್ಟು ತಪ್ಪಿಸಿಕೊಂಡೆ

ಇದೇ ಹಾದಿಬದಿಯಲ್ಲೊಂದು ಗೆಳೆಯನ ಮನೆ
ಈಗ ಅದಕ್ಕೆ ಬೀಗ ಜಡಿದಿದ್ದಾರೆ
ಅಲ್ಲಿ ಹುಲ್ಲು ಗೆದ್ದಲುಗಳು
ಅವನಿಗಿಂತಲೂ ಸುಖವಾಗಿ ಬದುಕುತ್ತಿವೆ

ಇನ್ನೇನ್ ಸಮಾಚಾರ? ಕೇಳಿದೆ
ಕುಡಿಯಲು ನೀರುಕೊಟ್ಟು
ಬಿಸಿಲ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಗು
ಎದುರಿಗೆ ಬಂದು ನಿಂತಿತು
ಹಸು ಅದನ್ನು ನೆಕ್ಕುತ್ತಿದೆ
ಅಮ್ಮ ಇಲ್ವಾ? ಕೇಳಿದೆ
ಒದ್ದೆ ಕಣ್ಣುಗಳು!

ಕರು ಅಂಬೇ ಎಂದು ಕರೆಯಿತು ಮಗುವ
ನಾನು ಹೊರಟುಹೋದೆ

ನನ್ನೊಳಗೆ ಈಗ A+ ಸಿಗದ ಒಂದು ಮಗು
ದೋಣಿಯಲ್ಲಿ ಸಂಚರಿಸುತಿದೆ
ಅದು ಅದರ ಅಮ್ಮನ ಅಪ್ಪುಗೆಯಲ್ಲಿದೆ
ನಡೆಯುವಾಗಲೂ ಇಬ್ಬರು ಒಟ್ಟೊಟ್ಟಿಗೆ

ನನ್ನ ಮನೆಯಲ್ಲಿ ಹಸುವಿಲ್ಲ
ಅದಕ್ಕೆ ತಿನ್ನಿಸಲು ನನಗೆ ಬರುವುದಿಲ್ಲ

ನದಿ ಮಳೆಯತ್ತ ಕೈಚಾಚುತಿದೆ
ನಾನೀಗ ಅಮ್ಮ ತೀರಿಕೊಂಡರೂ ಬದುಕುತ್ತಿರುವ
ಒಂದು ಮನೆಯತ್ತ ಹೊರಟಿದ್ದೇನೆ

ಅಲ್ಲೊಂದು ಮಾವಿನ ತೋಪು
ಒಂದು ಮಾವಿನ ಹಣ್ಣು
ನನಗಾಗಿ ಕಾಯುತ್ತಿದೆ

ಅಮ್ಮ ಹೇಳಿದಳು
ಅಲ್ನೋಡು A+
ತಗೋ ಅದನ್ನು!
*

ಮಲಯಾಳಂ ಮೂಲ- ಮುನೀರ್ ಅಗ್ರಗಾಮಿ

ಕನ್ನಡಕ್ಕೆ -ಕಾಜೂರು ಸತೀಶ್

Tuesday, June 4, 2019

ಖಾಲಿ

ಈ ಕೆಲಸಕ್ಕೆ ಸೇರಿ ಒಂದು ವರ್ಷವಷ್ಟೇ ಆಗಿದ್ದು. ನನ್ನ ಬದಲಾವಣೆಯು ಇವತ್ತು ಅರಿವಿಗೆ ಬಂತು! ನಾನು ನಿಜಕ್ಕೂ ಶೂನ್ಯವನ್ನು ಅಪ್ಪಿಕೊಳ್ಳುವುದರೆಡೆಗೆ ಚಲಿಸುತ್ತಿದ್ದೇನೋ ಏನೋ.

ನಾನು ಮಾತನಾಡಬೇಕಿತ್ತು. ತಡಕಾಡಿದೆ, ಹೆಣಗಾಡಿದೆ. ಶಬ್ದಗಳು, ವಿಚಾರಗಳು ಅಷ್ಟು ದೂರದಲ್ಲಿ ನಿಂತು ನನ್ನನ್ನು ಅಣಕಿಸುತ್ತಿದ್ದವು; ಕೇಕೆ ಹಾಕುತ್ತಿದ್ದವು. ಬಟಾಬಯಲಾಗುತ್ತಿದ್ದೆ ನಾನು.

ಇನ್ನು ಇದರೊಳಗೆ ಇರುವಷ್ಟು ಕಾಲ ನನ್ನ ಸೃಜನಶೀಲತೆ ಸತ್ತು ಮಣ್ಣಾಗಲಿದೆ. ಸೃಜನಶೀಲತೆಯೇ ಇಲ್ಲದ ಮೇಲೆ ನನ್ನ ಅಸ್ತಿತ್ವವಾದರೂ ಎಲ್ಲಿ?

ಮನುಷ್ಯರನ್ನು ಹೀಗೂ ಕೊಲ್ಲಬಹುದಲ್ಲಾ?!
*

ಕಾಜೂರು ಸತೀಶ್