ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, August 29, 2016

ಅಪ್ಪ



ಅಪ್ಪತೀರಿಕೊಂಡರು.
ನನ್ನೆದೆಯೊಳಗೆ
ಅಪ್ಪನೆಂಬೊ ಮಗು ಬೆಳೆಯುತಿದೆ
ನಾನೀಗ ಅಪ್ಪನ ಅಪ್ಪ.
*

ಸಂತೆಯಲ್ಲಿ ನಾವಿಬ್ಬರು ನಡೆದುಹೋಗುತ್ತಿದ್ದೆವು
ನನ್ನ ಕಿರುಬೆರಳ ಹಿಡಿದುಕೊಂಡ ಅಪ್ಪನ ಕೈ ಜಾರಿತು
ಎಲ್ಲೂ ಹೋಗಿಲ್ಲ ಬಿಡಿ
ಹುಡುಕಿ ತರುವೆ ಈ ಜನಜಂಗುಳಿಯಿಂದ ಅಪ್ಪನನ್ನು
*

ನನ್ನ ಕಣ್ಣೊಳಗೊಂದು ಸಮುದ್ರವಿದೆಯೆಂದುಕೊಂಡಿದ್ದೆ
ಅಪ್ಪ ಹೋದ ಮರುದಿನವೇ
ಹನಿ ನೀರಿಗೂ ಬರ ಬಂದಿದೆ
ದೋಣಿ ನಿಂತುಹೋಗಿದೆ
ಅಮ್ಮ ಬಾಯಾರಿದ್ದಾಳೆ.
*
ಒಂದು ಕ್ಷಣ
ಒಂದೇ ಒಂದು ಕ್ಷಣ
ಅಪ್ಪನಿಗೆ ಜೀವ ಬಂದಿದ್ದರೆ
ನಾನು ಅಳುತ್ತಿರಲಿಲ್ಲ
ಅಪ್ಪ ನನ್ನ ನೆನೆದು ಅಳುವುದನ್ನೇ ನೋಡುತ್ತಿದ್ದೆ.
*

ಅಪ್ಪ ಎಷ್ಟು ಶ್ರಮಜೀವಿ
ಇನ್ನೀಗ ಕಡಲೂ ಕೂಡ ಅನಾಥ
*

ಮಧ್ಯರಾತ್ರಿಯಲ್ಲಿ ಮನೆಗೆ ಬಂದೆ
ಅಪ್ಪ ಮಲಗಿದ್ದರು
ನಿದ್ರಿಸುತ್ತಿದ್ದರು
ಎಚ್ಚರಿಸಲು ಮನಸು ಬರಲಿಲ್ಲ.
*
ಹೊರಟುಹೋಗಿ ವಾರವಾಯಿತು
ಅಪ್ಪನಿಗೆ ನನ್ನ ಮೊಬೈಲ್ ಸಂಖ್ಯೆ ಮರೆತುಹೋಗಿದೆ
*

Sunday, August 21, 2016

ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು



'ಯಾವುದೇ ವ್ಯವಸ್ಥೆಯಾದರೂ ಪರಾಕಾಷ್ಠೆಯ ಹಂತವನ್ನು ತಲುಪಿ ನಿಂತಾಗ ತನ್ನೊಳಗೆ ಕುದಿಯುತ್ತಿರುವ ಮನಸ್ಥಿತಿಯಿಂದಲೇ ಸಾಮಗ್ರಿಗಳನ್ನು ಆಯ್ದುಕೊಂಡು ಪರ್ಯಾಯವನ್ನು ರೂಪಿಸುತ್ತದೆ. ಜಗತ್ತು ಅದನ್ನು ಸದಾ ಸಾಧಿಸುತ್ತಲೇ ಬಂದಿದೆ. ನಾನು ಇಲ್ಲಿ ಅಂತಹದೇ ದಾಳಿಯನ್ನು ಕಾಣಬಯಸುತ್ತೇನೆ..'

ತಮ್ಮ ಕಾವ್ಯದ ದಾರಿ ಮತ್ತು ಚಹರೆಗಳ ಕುರಿತು ಹೀಗೆ ಬರೆದುಕೊಳ್ಳುವ ‪ಸೈಫ್ ಜಾನ್ಸೆ ಕೊಟ್ಟೂರು‬ ಅವರ ಮೊದಲ ಕವನ ಸಂಕಲನ ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು


ಕಾಲದ ಹಿಂಸೆ, ಬದುಕಿನ ಅಸಹಾಯಕತೆಗಳು ಮತ್ತು ಅವುಗಳನ್ನೇ ಅಪ್ಪಿ ಬದುಕಬೇಕಾದ ಅನಿವಾರ್ಯತೆಯನ್ನು ವಿಶಿಷ್ಟ ನುಡಿಚಿತ್ರಗಳಲ್ಲಿ ಕೊಟ್ಟೂರರು ಕಟ್ಟಿಕೊಡುತ್ತಾರೆ. ಕವಿತೆಗಳು ಇಂತಹ ಅಸಹಾಯಕತೆಗಳನ್ನು, ಅಮಾನುಷ ಸಂಗತಿಗಳನ್ನು ಬೆನ್ನುಹತ್ತಿವೆಯೆಂದರೆ- ಮಾನವೀಯತೆಯ ತುಡಿತವೇ ಅವುಗಳ ಕೇಂದ್ರಪ್ರಜ್ಞೆ ಎಂದರ್ಥ.
‪ಡಾ. ಅರುಣ್ ಜೋಳದಕೂಡ್ಲಿಗಿ‬ ಅವರು 'ಬೆನ್ನುಡಿ'ಯಲ್ಲಿ ಹೇಳುವಂತೆ 'ಸೈಫ್ ಪದ್ಯಗಳನ್ನು ಓದಿದಾಗ, ನಮ್ಮ ಕಾಲದಲ್ಲಿ ಉಸಿರುಗಟ್ಟಿದ ಧ್ವನಿ ಇಲ್ಲಿನ ಒಳತೋಟಿಯಾಗಿ ಉಸಿರಾಡಿದ' ಅನುಭವವನ್ನು ನೀಡುತ್ತದೆ:

~ಅವನು ದೊಡ್ಡ ದನಿಯಲಿ ಪಾಠ ಹೇಳುತ್ತಿರುವಾಗ
ತೂಕಡಿಸುತ್ತಿದ್ದ ಹುಡುಗ
ಬೆಚ್ಚಿಬಿದ್ದು ಮೈ ಕೊಡವಿದ್ದಾನೆ
ನಾನು ಹೇಳಿಯೇ ಇಲ್ಲವೆಂದು
ದೇವರು ಆರೋಪಿಸುತ್ತಿದ್ದಾನೆ.
[ರಕ್ತಬಾನಿ/೭]

~ಹಿಟ್ಟಾದ ಮಾಂಸದ ಚೂರೊಂದು
ಜೀವ ಪಡೆದು
ಗಂಟಲಲ್ಲಿ ಕೂತು ಕೂಗಿದ ಹಾಗೆ.
[ಕುಸಿತ/೫]

~ಕುರ್ಚಿಗಳಾಗಿರುವುದರಿಂದಲೋ ಏನೋ
ಕುಳಿತುಕೊಳ್ಳುವ ಹಂಬಲ
ಹೊರಟುಹೋಗಿದೆ.
[ಗೋರಿಗಳಿವೆ/೩೩]

~ಬಿಸಿಯ ಉಮ್ಮಳಿಕೆ ತಾಳಲಾರದೆ
ಸೂರ್ಯ ತನ್ನ ನೆರಳನ್ನೇ ವಾಂತಿಮಾಡಿಕೊಂಡ.
[ಅನಾಥ ಬೀಜ ಮತ್ತು ಅವರು/೪೧]

~ನಿನ್ನೆಯೇ ಸತ್ತ ಜೀನ್ಸ್ ಪ್ಯಾಂಟಿಗೆ
ಕಾಲುಗಳ ತೂರಿ ಜೀವ ತುಂಬುತ್ತಾರೆ.
[ಅಮಲೇರಿದ ಹುಡುಗಿಯರು/೪೩]

~ನಾಳೆ ಬೀಳುವ ಮಳೆಯನ್ನೇ
ಲೆಕ್ಕಕ್ಕಿಟ್ಟು ಹೇಳುವುದೆಂದರೆ
ಕನಿಷ್ಟ ಚೆಂಬುಗಳಷ್ಟಾದರೂ ನೀರು
ಇಂದು ಕುಡಿಯಲೇಬೇಕು.
[ಪಥ ಮತ್ತು ದೃಷ್ಟಿ/೭೧]

'ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು' ಎಂಬ ಸಂಕಲನದ ಪ್ರಧಾನ ಕವಿತೆಯು ಹಸಿವಿನ ರೂಪಾಂತರಗಳನ್ನು ಭೂತ-ವರ್ತಮಾನ-ಭವಿಷ್ಯತ್ತಿನ ಅಸ್ಥಿಪಂಜರದಲ್ಲಿ ಸಿಕ್ಕಿಸಿ ಮಾತನಾಡುತ್ತದೆ. ಭೂತದ ಬವಣೆಗಳನ್ನು ಎಷ್ಟು ಮರೆತರೂ ವಾಸ್ತವ ಅದನ್ನು ಮತ್ತೆ-ಮತ್ತೆ ನೆನಪಿಸುತ್ತದೆ. ಆ ಕಾಲದ ಹತ್ತುಪೈಸೆಯ ಬ್ರೆಡ್ಡು ಸಮಕಾಲೀನ 'ಫೈವ್ ಸ್ಟಾರ್'ಗಳಾಗಿ ಇಂಗದ ಹಸಿವಿನ ರೂಪಾಂತರವು-
~ಕಾಲದ ಸಿಕ್ಕುಗಳಲ್ಲಿ
ಸೀರಿನಿಂದ ಹೇನಾಗಿ ಬಡ್ತಿ ಹೊಂದುತ್ತಾ[೪೭]
ಸಾಗುತ್ತದೆ.

ಕಾಲದ ಆರ್ತ ಸ್ವರಗಳನ್ನು ತುಂಬಿಕೊಂಡ ಇಂತಹ ಕವಿತೆಗಳೇ ಕವಿಯನ್ನು ಬರೆಸಿಕೊಳ್ಳುವ ತುರ್ತಿನಲ್ಲಿ /ಭಾವತೀವ್ರತೆಯಲ್ಲಿ 'ಇಡಿ'ಯಾದ ಸ್ಪರ್ಶ(ಮಾಂತ್ರಿಕ ಸ್ಪರ್ಶ)ವನ್ನು ಸಾಧಿಸುವುದಿಲ್ಲ ಎನ್ನುವ ಅಂಶವನ್ನೂ ಇಲ್ಲಿ ಗಮನಿಸಬೇಕು:

~ಜಗದ ಮೊದಲ ತಂದೆ ತಾಯಿಗಳು
ಪಕ್ಕದ ತೊರೆಯಲ್ಲಿ ಊದಿಕೊಂಡು
ಪ್ರಶ್ನೆಗಳಾಗಿ ತೇಲುತ್ತಿರುವಾಗ
ಕಾಗೆಯೊಂದು ಗುಬ್ಬಿಗೆ
ಮೈಥುನದ ವೀಳ್ಯವಿಟ್ಟರೆ
ಪ್ರಾಣಿ-ಪಕ್ಷಿ ಸಂಕುಲದ ಊರಿನಲಿ
ಅಪನಂಬಿಕೆಯ ಮೊಳೆ ನೆಟ್ಟಿದೆ.
[ಸಲಿಂಗ/೧೩]

ಹೊಸ ಹಾದಿಯ, ಹೊಸ ನಡಿಗೆಯ ರೂಪಕಗಳನ್ನೂ, ಕವಿತೆಗಳನ್ನೂ ಕರುಣಿಸಿದ ಸೈಫ್ ಜಾನ್ಸೆ ಕೊಟ್ಟೂರರು ಹೊಸ ತಲೆಮಾರಿನ ಗಮನಾರ್ಹ ಕವಿ.
೨೦೧೧ರಲ್ಲಿ ಮುದ್ರಣವಾದ ಸಂಕಲನವಿದು. ಇದರ ಉತ್ತರಕಾಲದಲ್ಲಿ ಕಾಣುತ್ತಿರುವ ಕೊಟ್ಟೂರರ ಕವಿತೆಗಳು ನಿಖರವಾಗಿ ಹೇಳುವ, ಗಮ್ಯವನ್ನು ಮುಟ್ಟುವ ಕಸುವನ್ನು ಪಡೆದುಕೊಳ್ಳುತ್ತಿವೆ. ಅವರ ಕವಿತೆಯೇ ಹೇಳುವಂತೆ-

~ಸುಳ್ಳು ಹೊರಟುಹೋಗಿದೆ
ಸತ್ಯ ತೆರೆದುಕೊಂಡಿದೆ
ಕಳೆದದ್ದು ಸಿಕ್ಕಿದೆ
[ಕಳೆದದ್ದು ಸಿಕ್ಕಾಗ/೫೯]
*

ಕಾಜೂರು ಸತೀಶ್‬

ಸೂಜಿಗಣ್ಣಿಗೆ ಒಳಹೊರಗಿಲ್ಲ

ಡಾ. ಕೃಷ್ಣ ಗಿಳಿಯಾರ್ ಅವರ ಸೂಜಿಗಣ್ಣಿಗೆಒಳಹೊರಗಿಲ್ಲ ಕವನ ಸಂಕಲನದ ಕೆಲವು ಪಂಚಿಂಗ್ 'ಹನಿ'ಗಳು:

ನಿಂತ ಗಡಿಯಾರ ಕೂಡ
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!

*
ನೀ ಬಂದಾಗ ಬಾಗಿಲಿಕ್ಕಿದರೆ
ತೆರೆಯುವವರೆಗೆ
ಕಾಯಬೇಡ
ಒಳಗೆ
ಬಂದುಬಿಡು.
*
ನಾಕೇ ಗೆರೆ ಏನನ್ನೋ ಹೇಳಹೊರಡುತ್ತದಾದರೆ
ಖಾಲಿ ಹಾಳೆಯದೂ ಎರಡು ಮಾತಿರಬಹುದು.
*
ನೆರಳಿಗೆ ಹೆದರಿ
ಆರಿಸಲು ಹೋದವನ
ತಲೆ ಮೇಲೆ
ದೀಪ ಇಟ್ಟು
ಬುದ್ಧ
ನಕ್ಕ.
*
ಈ ಕಗ್ಗಾಡಿನಲ್ಲಿ
ಕೊಡಲಿ ಗರಗಸ ಶಬ್ದ
ಕೇಳದ ದಿನಗಳು
ಇಲ್ಲವೇ ಇಲ್ಲ.
*
ಅದೇ ಜಾಗ, ನದಿ
ಎಂಬ
ನನ್ನ
ಬೇಸರಕ್ಕೆ
ನೀರು
ನಕ್ಕಿತು.
*

ಕಾಜೂರು ಸತೀಶ್

Saturday, August 6, 2016

ആരുടേത്?

പോള്ളുന്ന പാതകളിൽ
പാദങ്ങൾ പതിയുന്നു.
അമർന്ന ഒരു പാദത്തിന്നടിയിലായ
ഇടം ആരുടേത്?
ഇനിയൊരു പാദം  കാറ്റിൽ...
എങ്കിലും എനിക്കതിനെക്കുറിച്ച്
വേവലാതിയില്ല
കാറ്റിനു
വേലി കെട്ടാനാരും പഠിച്ചിട്ടില്ല.
*

കന്നട കവിത - കാജൂരു സതീശ്


പരിഭാഷ- സുനീതാ കുശാലനഗര


ಬಂತಾ?



ಮಳೆ ಬಂತಾ?
ಇಲ್ಲ
ಮಳೆ ಬಂತಾ?
ಇಲ್ಲ
ಬಂತಾ?
ಇಲ್ಲ.

ಅಳು ಬಂತಾ?
ಬಂತು
ಅಳು ಬಂತಾ?
ಬಂತು
ಬಂತಾ?
ಬಂತು.

ಕೊಳ ತುಂಬ್ತಾ?
ತುಂಬ್ತಿದೆ
ಮಳೆ ಬಂತಾ?
ಇಲ್ಲ.

ಮಳೆ ಬಂತಾ?
ಬರ್ತಿದೆ
ಅಳು ಬಂತಾ?
ಬಂತು.

ಮಳೆ ಬಂತಾ?
ಬಂತು
ಅಳು ಬಂತಾ?
ಬಂತು.

ಬಂತಾ?
ಬಂತು.

ತುಂಬ್ತಾ?
ತುಂಬ್ತು!
*

ಕಾಜೂರು ಸತೀಶ್

Tuesday, August 2, 2016

ಗಾಳ

ಅಲೆಗಳ ಮೇಲಿನ ಹಳಿಗಳ ಮೇಲೆ
ಕೊನೆ ಮೊದಲಿಲ್ಲದ ರೈಲೊಂದು ಚಲಿಸುತ್ತಿದೆ
ಬೋಗಿಗಳ ತುಂಬೆಲ್ಲ ಜನವೋ ಜನ.

ಗಾಳ ಹಾಕುತ್ತಿದ್ದಾರೆ ಕೆಲವರು
ಕಿಟಕಿಗಳ ಮೂಲಕ.

ಶಾರ್ಕುಗಳು
ತಿಮಿಂಗಿಲಗಳು
ಸಣ್ಣಪುಟ್ಟ ಮೀನುಗಳು
ಸಿಲುಕಿಕೊಳ್ಳುತ್ತಿವೆ ಗಾಳಕ್ಕೆ.

ಸಿಲುಕಿಕೊಂಡ ಮೀನುಗಳ ಮೇಲೆತ್ತದೆ
ನೀರಲ್ಲೇ ಎಳೆದಾಡುತ್ತಾ ಸುಖಿಸುತ್ತಿದ್ದಾರೆ ಕೆಲವರು
ದೈತ್ಯ ಮೀನುಗಳ ಎಳೆಯಲಾರದೆ
ದುಃಖಿಸುತ್ತಿದ್ದಾರೆ ಕೆಲವರು.

ಕೆಲವು ಗಾಳಕ್ಕೆ ಮಾತ್ರ ಏನೂ ಸಿಕ್ಕಿಹಾಕಿಕೊಳ್ಳುತ್ತಿಲ್ಲ.

ಸಾಗುತ್ತಿದೆ ಕಡಲ ರೈಲು...
ನನ್ನ ಬಳಿ ಒಂದೂ ಗಾಳವಿಲ್ಲ
ಎಸೆಯುತ್ತಿದ್ದೇನೆ ನನ್ನನ್ನೇ
ಕಿಟಕಿಯಿಂದಾಚೆಗೆ!
*

ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

ಭಾರ ಇಳಿಸುವ ಕವಿತೆಗಳು


ಇವರು


ಇವನು ಬುದ್ಧಿವಂತ
ಮಿದುಳು ನೆನಪಿಟ್ಟುಕೊಳ್ಳುತ್ತದೆ ಇವನ.

ಇವನು ನೀತಿವಂತ
ಹೃದಯ ನೆನಪಿಟ್ಟುಕೊಳ್ಳುತ್ತದೆ ಇವನ.

ಇವನು ಕ್ರೂರಿ
ಗುಪ್ತಾಂಗ ನೆನಪಿಟ್ಟುಕೊಳ್ಳುತ್ತದೆ ಇವನ.
*

Teaching Aid


ಇವತ್ತಿನ ಪಾಠ 'ಹಿಟ್ಲರ್'

'ಮಿಂಚಿನ ಸಂಚಾರ'ಕ್ಕೆ ಬಂದ ಅಧಿಕಾರಿ
Teaching Aid ಇಲ್ಲವೆಂದು
ತಾರಾಮಾರಾ ಬೈಯ್ದರು ತರಗತಿಯಲ್ಲೇ..

ಹೊರಹೋದ ತಕ್ಷಣ
ಮಕ್ಕಳು ಕೇಳಿದರು
' ಏನ್ Teaching Aid ಸಾರ್?'

'ಬಹುಶಃ ಹಿಟ್ಲರ್ನ ಚಿತ್ರ ಇರ್ಬೇಕು' ಅಂದೆ.

ಕಿಟಕಿಯಿಂದ ಹೊರನೋಡುತ್ತಾ
ಮಕ್ಕಳು ಕೂಗತೊಡಗಿದರು
'ಹಿಟ್ಲರ್ನ ನೋಡಿದ್ವಿ, ಹಿಟ್ಲರ್ನ ನೋಡಿದ್ವಿ...'

ಅಂದ ಹಾಗೆ
ನೆನ್ನೆಯ ಪಾಠ 'ಭಯೋತ್ಪಾದನೆ'

ಎರಡಕ್ಕೂ
Teaching Aid ಸಿಕ್ಕವು!
*

ರಸ್ತೆ


ರಸ್ತೆ
ಗಾಢ ನಿದ್ದೆಯಲ್ಲೂ
ಜನರ ಹೊತ್ತೊಯ್ಯುತ್ತದೆ.

ರಸ್ತೆ 'Politics'
ಗಿಡ ನೆಡಬಹುದು ಗುಂಡಿಗಳಲ್ಲಿ
ಬೇಕಿದ್ದರೆ ಈಜಬಹುದು
ಕಾಲು ಮುರಿಯಬಹುದು
ಡಿಕ್ಕಿಯೊಡೆಸಿ ಕೊಲ್ಲಬಹುದು...

ನೋಡುತ್ತಿರಿ
Footpathಗಳನ್ನೂ ನುಂಗುವ
ದಿನಗಳು ಬರಲಿವೆ.

ಕಪ್ಪೆಗಳಿಗೆ ಅಭ್ಯಾಸವಾಗಿದೆ
ನಾವೇನು ಮಾಡುವುದು?
*

ಕೊಲೆ


'ಯಾರೋ ಒಬ್ಬ
ನನ್ನ ಎದೆ ಸೀಳಲು ಬಂದ ಹೊತ್ತು
ಏನು ಮಾಡುತ್ತೀಯ?'
ಕೇಳಿಕೊಂಡೆ ನನ್ನನ್ನೇ.

'ಹೂ ಕೊಡುತ್ತೇನೆ'
ನಡುವೆ ಬಾಯಿ ಹಾಕಿತು ಕವಿತೆ.

ಅದರ ಬಾಯಿ ಮುಚ್ಚಿ ಯೋಚಿಸಿದೆ
ಏನು ಮಾಡಲಿ
ಹೂಗಳು ಕೊಲೆಯಾದ ಕಾಲದಲ್ಲಿ ?
*

ಹಸಿವು

ಹಸಿವಿಗೆ ಹೊಟ್ಟೆಹಸಿವು
ಅದೂ ಕೂಡ ಅಂದುಕೊಂಡಿದೆ-
ಹೊಟ್ಟೆಯೊಳಗೊಂದು ರೈಲು ಇದೆ
ಅದು ಕರುಳಿನ ಹಳಿಗಳಲ್ಲಿ ಓಡುತ್ತದೆ
*

ಬೇಕಾ?

ಜೇನು ಬೇಕಾ ಜೇನು?
ಕೇಳಿದ.

ಬೇಡ
ಎಂದೆ.

ಲಡ್ಡು ಬೇಕಾ ಲಡ್ಡು?
ಕೇಳಿದ.

ಬೇಡ
ಎಂದೆ.

ಸಕ್ಕರೆ ಬೇಕಾ ಸಕ್ಕರೆ?
ಕೇಳಿದ.

ಬೇಡ
ಎಂದೆ.

ಬೆಣ್ಣೆ ಬೇಕಾ ಬೆಣ್ಣೆ?
ಕೇಳಿದ.

ಬೇಕು
ಎಂದೆ.

ಹೊರಟುಹೋದ.
ಮತ್ತೆ ಕೇಳಲಿಲ್ಲ.
*

ಕಾಜೂರು ಸತೀಶ್