ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 24, 2016

ಭೇಟಿ

ಕಳೆದ ಸಲ
ಅವರಿಬ್ಬರ ಮೊದಲ ಭೇಟಿ.
ಪರಸ್ಪರ ಪರಿಚಯಿಸಿಕೊಂಡರು.
ಏನೂ ಮಾತನಾಡದೆ
ಗಂಟೆಗಟ್ಟಲೆ ಕಳೆದರು.


ಈ ಬಾರಿ
ಅವರಿಬ್ಬರು ಭೇಟಿಯಾದಾಗ
'ಉಂ', 'ಉಹೂಂ'ಗಳಲ್ಲೇ
ದಿನಗಳನ್ನು ಕಳೆದರು.


ಅವರಿಬ್ಬರೂ ಕಾಯುತ್ತಿದ್ದಾರೆ
ಮುಂದಿನ ಭೇಟಿಗಾಗಿ!
*
ಮಲಯಾಳಂ ಮೂಲ- ಸಂತೋಷ್ ಅಲೆಕ್ಸ್

ಕನ್ನಡಕ್ಕೆ- ಕಾಜೂರು ಸತೀಶ್

ಮಾತು, ಮೌನ ಮತ್ತು ಕವಿತೆ

ಹೊಸ ತಲೆಮಾರು ತುಂಬು ಉತ್ಸಾಹದಲ್ಲಿ ಪುಸ್ತಕಗಳನ್ನ ಪ್ರಕಟಿಸುತ್ತಿದೆ. ಪ್ರತಿ ವಾರ ಹತ್ತಾರು ಪುಸ್ತಕಗಳು ಬಿಡುಗಡೆಯಾಗುತ್ತವೆ. ಈ ಎಲ್ಲ ಪುಸ್ತಕಗಳನ್ನು ಓದಿ ವಿಮರ್ಶಿಸುವುದು ದುಸ್ಸಾಧ್ಯದ ಮಾತು. ಇವುಗಳಲ್ಲಿ ಆದಷ್ಟು ಪುಸ್ತಕಗಳನ್ನು ಈ ಅಂಕಣದಲ್ಲಿ ಪರಿಚಯಿಸುವುದರ ಜೊತೆಗೆ ತುಲನಾತ್ಮಕವಾಗು ವಿಮರ್ಶಿಸಲಾಗುವುದು. ಹೊಸ ಹುಡುಗರ ಹೊಸ ಸಂವೇದನೆಗಳಿಗೆ ಮೊದಲ ಆದ್ಯತೆ.

ಕಾಜೂರು ಸತೀಶ ಅವರು ಈಚೆಗೆ ತಮ್ಮ ಮೊದಲ ಕವನ ಸಂಕಲನ ‘ಗಾಯದ ಹೂವುಗಳು’ ಎಂಬುದನ್ನು ಪ್ರಕಟಿಸಿದ್ದಾರೆ. ಎಲ್ಲ ಕವಿತೆಗಳನ್ನು ಓದುವಾಗ ಕವಿತೆಯ ಮೇಲೆ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ. ಇಲ್ಲಿನ ಬಹುತೇಕ ಪದ್ಯಗಳು ಕವಿತೆಯ ಅಂತರಂಗದ ಜತೆಗೆ ನಡೆಸುವ ಸಂವಾದವೇ ಆಗಿದೆ. ಮಾಮೂಲಿಯಂತೆ ಸತೀಶ್ ಅವರು ಪ್ರೇಮದ ಬೆನ್ನಿಗೆ ಬಿದ್ದು ಪದಗಳನ್ನು ವ್ಯರ್ಥಮಾಡಿಲ್ಲ. ಇರುವ ಪ್ರೇಮವಾದರೂ ಪದ್ಯವನ್ನು ಕಟ್ಟುವ ಇರಾದೆಯಲ್ಲಿ; ತನಗೆ ಕಂಡ ಸಮಾಜವನ್ನು ಅನಾವರಣಗೊಳಿಸುವಲ್ಲಿ ಇದೆ ಅನಿಸುತ್ತದೆ.ಮೊದಲ ಸಂಕಲನದಲ್ಲಿ ಅವರು ದೊಡ್ಡ ಬಗೆಯ ತಾತ್ವಿಕ ಸಿದ್ದಾಂತಗಳ ಕಡೆ ತಮ್ಮನ್ನು ಒಪ್ಪಿಸಿಕೊಳ್ಳುವುದಿಲ್ಲ. ಬದಲಿಗೆ ‘ಅನುಭವ ಹೆಪ್ಪುಗಟ್ಟುವ ತನಕ ಕವಿತೆಗೆ ಕೈಹಾಕಬೇಡ’ ಎಂಬ ಕೆ.ಎಸ್.ನ ಅವರ ನುಡಿಗಳನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇದರ ಪ್ರಾಮಾಣಿಕತೆಯ ಹಿಂದೆ ಕಾವ್ಯಮೀಮಾಂಸೆಯ ಹುಡುಕಾಟವೂ ಇದೆ.

ಕಾಜೂರು ಅವರು ಅಭಿವ್ಯಕ್ತಿಸುವ ಗಾಯದ ಹೂವುಗಳು ಯಾವ ಬಗೆಯವು? ಗಾಯಗೊಂಡಿರುವುದು ಹೂವುಗಳೊ ಅಥವಾ ರೂಪಕಗಳೊ?. ಸತೀಶ್ ಗೆ ರೂಪಕಗಳನ್ನು ನಿರ್ಮಿಸಿ ಪದ್ಯ ಕಟ್ಟುವುದುಕ್ಕಿಂತ ಕವಿತೆಯಲ್ಲಿ ಚಿತ್ರಗಳನ್ನು ತರುವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಕಾಣುತ್ತದೆ. ಈ ಬಗೆಯ ಚಿತ್ರಗಳು ಹೆಚ್ಚು ‘ಹೇಳುವ’ ಧಾಟಿಯಲ್ಲಿ ಕಾಣುತ್ತವೆ. ಆದರೆ ಅವುಗಳಿಗೆ ಗಂಭೀರವಾದ ಪದಗಳನ್ನು ತುಂಬುವ ಶಕ್ತಿ ಸತೀಶ್ ಅವರಿಗೆ ಖಂಡಿತ ಇದೆ.
ಕುವೆಂಪು ಅವರು ಗೊಬ್ಬರವನ್ನು ವಸ್ತುವನ್ನಾಗಿ ಮಾಡಿಕೊಂಡು ಪದ್ಯಬರೆದದ್ದು ತಿಳಿದೇ ಇದೆ. ಸತೀಶ್ ಮಲವನ್ನು ಕೆಲವುಪದ್ಯಗಳಲ್ಲಿ ಬಳಸುತ್ತಾರೆ. ಇದು ಖಂಡಿತ ಪದ್ಯಕ್ಕಿರುವ ಮಡಿವಂತಿಕೆಯನ್ನು ಬಿಡಿಸುವುದೇ ಆಗಿದೆ. ಒಂದು ಕಡೆ ಅವರು ‘ಮಲದ ಮೇಲೆದ್ದಿದೆ ಹಲಸಿನ ಸಸಿ’ಎಂದು ಬರೆಯುತ್ತಾರೆ. ಪಂಚಭೂತಗಳಿಗೆ ಮೈಲಿಗೆ ಅಂಟಿಸಿರುವ ಮನುಷ್ಯ ತಾನೋಬ್ಬ ಕೊಳಕು ಎಂದು ಮರೆತಿದ್ದಾನೆ. ಆದರೆ ನಿಸರ್ಗಕ್ಕೆ ಆ ಬಗೆಯ ಮೈಲಿಗೆಗಳು ಇಲ್ಲ.ಮನುಷ್ಯನ ಕೊಳಕನ್ನು ಹೀರಿಕೊಂಡೇ ಹಲಸಿನ ಹಣ್ಣನ್ನು ನೀಡಬಲ್ಲದು. ಹಸಿದ ಲೋಕವನ್ನು ಇಲ್ಲಿನ ಅನೇಕ ಸಾಲುಗಳು ಮಾತನಾಡಿವೆ. ಅವು ಬೇಗ ಸಿಟ್ಟನ್ನು ತೀರಿಸಿಕೊಳ್ಳವ ಮಾತುಗಳಲ್ಲ. ಕವಿತೆಯ ಅಂತರಂಗ, ಪರಂಪರೆಯ ಅಂತರಂಗ ಹಾಗೂ ಬದುಕಿನ ಮುಖಾಮುಖಿ ಇವುಗಳ ಮೂಲಕವೇ ಬರುತ್ತವೆ.

‘ಒಲೆ ಮತ್ತು ಅವ್ವ’ ಇದರ ಒಳ್ಳಯ ಪದ್ಯಗಳಲ್ಲಿ ಒಂದು. ಪದ್ಯ ಅನುಭವವನ್ನು ಹೆಪ್ಪುಗಟ್ಟಿಸಿಕೊಂಡು ಅಚ್ಚುಕಟ್ಟಾಗಿ ನಿಂತಿದೆ. ಇಲ್ಲಿ ಒಲೆ ಮತ್ತು ಅವ್ವ ಅದ್ವೈತ.ಬದುಕು ಮತ್ತು ಪದಗಳು ಇಲ್ಲಿ ಏಕವಾಗಿವೆ. ‘ಹಾವು’ಎಂಬ ಕವಿತೆ ಮನುಷ್ಯನ ವೈರುದ್ಯಗಳನ್ನು ಅನಾವರಣ ಮಾಡುತ್ತದೆ. ಧ್ವನಿಯನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಇಲ್ಲಿನ ಹಾವು ಪಾರಂಪರಿಕ ಸಂಕೇತವಲ್ಲ. ಮುಗ್ಧತೆ ಮತ್ತು ಕ್ರೌರ್ಯಗಳ ಮುಖಾಮುಖಿ ಇದೆ. ‘ಉಣಿಸುವವರ ವಿಷದ ಹಲ್ಲು ಕಿತ್ತರೆ/ ಹಾಲೂ ಕುಡಿಯಬಲ್ಲದು / ಹಣ್ಣು ತಿನ್ನಬಲ್ಲದು.ಎಂಬ ಮಾತುಗಳು ಇವನ್ನೇ ಹೇಳುತ್ತವಲ್ಲವೇ?.ಕಾಜೂರು ಕವಿತೆಯನ್ನು ಬರೆಯುವಾಗ ಪರಂಪರೆಯ ಹೆಸರುಗಳನ್ನು ಪ್ರಸ್ತಾಪ ಮಾಡದೇ ಅದರೊಂದಿಗೆ ಸಂವಾದ ನಡೆಸುತ್ತಾರೆ. ಹಿಂದಿನದನ್ನು ಅರಿಗಿಸಿಕೊಳ್ಳದೇ, ಇಂದಿನ ಜಗತ್ತನ್ನು ನೋಡಲಾರೆವು ಎಂಬ ಅರಿವು ಅವರ ಅನೇಕ ಕವಿತೆಗಳಲ್ಲಿ ವ್ಯಕ್ತಗೊಂಡಿದೆ.

‘ಅಸ್ವಸ್ಥ ಕವಿತೆಗಳು’ ಎಂಬ ಪದ್ಯದಲ್ಲಿ ‘ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ/ ವೈದ್ಯನಿಗೆ ಕೊಡಲು ಕಾಸಿಲ್ಲದೆ/ ನರಳುತ್ತಲೇ ಇವೆ ಹಸಿನೆಲದ ಮೇಲೆ’. ಎಂದು ಬರೆಯುತ್ತಾರೆ. ಮೊದಲ ಸಂಕಲದಲ್ಲಿ ಈ ಬಗೆಯ ಅತೃಪ್ತಿ ಕಾಡುವುದು ಸಹಜವೇ. ಅವರ ಅನೇಕ ಪದ್ಯಗಳು ಸಾದಾ ಪ್ರತಿಮೆಗಳನ್ನು ಅನಾವರಣ ಗೊಳಿಸುತ್ತವೆ. ಮಾತು ಮತ್ತು ಅದನ್ನು ಬಳಸಿಕೊಂಡು ಹೇಳುವ ಧಾಟಿ ಗಟ್ಟಿ ಕವಿತೆಯಾಗುವುದು ಕಷ್ಟ. ಇದು ಕಾಜೂರು ಅವರಿಗೂ ಗೊತ್ತು. ಕವಿತೆಯನ್ನು ಗಂಭೀರವಾಗಿ ಅಭ್ಯಾಸ ಮಾಡುವ ಕಾಜೂರು ಮುಂದಿನ ಪದ್ಯಗಳಲ್ಲಿ ಮಾಗಬಲ್ಲರು. ಅವರ ಮಾತಿನಲ್ಲೇ ಹೇಳುವುದಾದರೆ,
‘ ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು.’
ಈ ವಾಹನ ಅವರ ಕವಿತೆಯ ದಾರಿಯಾಗಬಹುದೆ?.

ಬೆಲೆ:

ಎಪ್ಪತ್ತೈದು ರೂಪಾಯಿಗಳು

ಪ್ರಕಾಶಕರು:

ಫಲ್ಗುಣಿ ಪುಸ್ತಕ, ನಂಬರ್ ೧೩/೧, ಒಂದನೇ ದೇವಸ್ಥಾನ ಬೀದಿ, ೯ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-೩

ದೂರವಾಣಿ: ೯೯೦೦೦೦೦೯೨೧


ಸುರೇಶ್ ನಾಗಲಮಡಿಕೆ

ಇತ್ತೀಚಿನ ಬರಹಗಾರರಲ್ಲಿ ಸುರೇಶ್ ರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ, ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಮತ್ತು ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ

ಜಾಣರು

ನಿನ್ನ ಮಗ
ಸೈಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ.
ನನ್ನ ಮಗಳು
ವಿವೇಕಾನಂದ ವಿದ್ಯಾಭವನದಲ್ಲಿ.
ಅವನ ಮಗನೂ,ಮಗಳೂ
ಇಸ್ಲಾಮಿಕ್ ಪಬ್ಲಿಕ್ ಶಾಲೆಯಲ್ಲಿ.
ಒಂದೇ ಬೆಂಚಲ್ಲಿ ಕೂತು
ಒಂದೇ ಪುಸ್ತಕವನ್ನು ಹಂಚಿಕೊಂಡು
ಒಂದೇ ಹಸಿವನ್ನು ಓದಿ
ನಾವು ಕಲಿಯದ ಪಾಠವನ್ನು ಕಲಿತ
ಆ ಹಳೆಯ ಇಸ್ಕೂಲು ಈಗಲೂ ಇದೆ-
ಹಳೆಯ ಕಾಲದ ನಮ್ಮ ಅಪ್ಪ-ಅಮ್ಮಂದಿರಂತೆ.
ಪರಮ ದರಿದ್ರರಾದ
ಕೆಲವರ ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ
ಶಿಲುಬೆ,ಖಡ್ಗ,ಶೂಲಗಳೊಂದಿಗೆ.
ನಮ್ಮ ಮಕ್ಕಳು
ಒಮ್ಮೊಮ್ಮೆ ಕೋಪದಿಂದ ಗುಡುಗುವಾಗ
ಮಧ್ಯಬಂದು ತಡೆಯಲು
ಅವರಾದರೂ ಜಾಣರಾಗಲಿ.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್

Wednesday, July 13, 2016

ಮಳೆ ಹುಡುಗಿ

ಎಲ್ಲೆಯಿರದಷ್ಟು ಕನಸ ಕಾಣಿಸಿ
ಆಕಾಶವೆಂದಿತು
'ನಿನ್ನ ಮನೆಯಿದು; ನಿನ್ನೂರು'

ಮೊಗೆದಷ್ಟೂ ಮುಗಿಯದ ಪ್ರೀತಿಯ ತೋರಿಸಿ
ಸಮುದ್ರವೆಂದಿತು
'ನಿನ್ನ ದಾರಿಯಿದು; ನಿನ್ನದೇ ಯಾತ್ರೆ'

ತುಂಬಿಕೊಂಡ ಕಣ್ಣುಗಳ ಮುಚ್ಚಿ
ಪ್ರಾರ್ಥಿಸಿದಳವಳು
'ಕೊಂಡೊಯ್ಯದಿರಿ ನನ್ನ
ಕೊಂಡೊಯ್ಯದಿರಿ ದಯವಿಟ್ಟು'
*

ಮಲಯಾಳಂ ಮೂಲ- ಓ.ಎಂ. ರಾಮಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್

ದಿನಚರಿ - 22


ಅವರು ನಮ್ಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು. ಸಣ್ಣ ಪ್ರಾಯ.

ಆ ಮನುಷ್ಯನಿಗೆ ನನ್ನ ಮೇಲೆ ಒಂದು ಬಗೆಯ ಅವ್ಯಕ್ತ ಪ್ರೀತಿ. ' ನೀವು ಯಾವಾಗ ಹೇಳ್ತೀರೋ ಆಗ, ಒಂದಿನ ಮುಂಚೆ ಹೇಳಿ ಸಾಕು... ಮಕ್ಳನ್ನೂ ಕರ್ಕೊಂಡ್ಹೋಗೋಣ' ಎನ್ನುತ್ತಾ ದೂರದಲ್ಲಿದ್ದ ಆ ಬೆಟ್ಟವನ್ನು ಕತ್ತನ್ನೆತ್ತಿ ನೋಡುತ್ತಿದ್ದರು.

ಕಳೆದ ವರ್ಷವು 'ಈ' ಮಳೆಯ ಹಾಗೆ ಜಾರಿಹೋಯಿತು. ಈ ವರ್ಷದ ಅಕ್ಟೋಬರ್ಗೆ ಅದನ್ನು ಮುಂದೂಡಿದ್ದೆ.

ಮೊನ್ನೆ ಅವರ ಶವ ನೋಡಲು ಹೋಗಿದ್ದೆ! ಊರ ತುಂಬೆಲ್ಲಾ ಮನುಷ್ಯರ ಜೀವವನ್ನು ನೆಕ್ಕಿ ನೋಡಲು ಬಂದ 'ಡೆಂಗಿ'ಯ ನಾಲಗೆಗೆ ಅವರ ಜೀವವೂ ತಗುಲಿಬಿಟ್ಟಿತ್ತು!

ಈಗ ಪ್ರೀತಿಯಷ್ಟೇ ಉಳಿದಿದೆ. ಜೊತೆಗೆ ಕೆ.ಕೆ. ರಾಮಚಂದ್ರ ಎಂಬ ಆ ಹೆಸರೂ...

ದೂರದಲ್ಲಿರುವ ಆ ಬೆಟ್ಟ ಮತ್ತಷ್ಟೂ ದೂರದಲ್ಲಿರುವಂತೆ ಕಾಣಿಸುತ್ತಿದೆ!
*
-ಕಾಜೂರು ಸತೀಶ್