Saturday, June 2, 2018

ಮಣಿಯಾಣಿ ಮೇಷ್ಟ್ರು


'ನಿಮಗೆ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ಗೊತ್ತಾ?' ಎಂದು ಅಧಿಕಾರಿಗಳೆದುರು ಪ್ರಶ್ನೆಯನ್ನು ಎಸೆದರೆ, 'ಇಲ್ಲ' ಎಂಬ ಉತ್ತರವೇ ಬರುತ್ತದೆ.

ಯಾಕೆಂದರೆ ಅವರೊಬ್ಬರು ನಿಷ್ಠಾವಂತ ಮೇಷ್ಟ್ರಾಗಿದ್ದರು!
*
ಕಾಜೂರು ಶಾಲೆಯಲ್ಲಿ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಅವರ ಜೊತೆಗೆ ಕೆಲಕಾಲ ಕೆಲಸಮಾಡುವ ಭಾಗ್ಯ ನನ್ನದಾಗಿತ್ತು. ಒಂದಿಷ್ಟೂ ಅಹಂಕಾರವಿರದ, ಸದಾ ನಗುಮೊಗದ ಮೇಷ್ಟ್ರಿಗೆ ಶಾಲೆಯ ಮಕ್ಕಳೆಲ್ಲರೂ ಗೆಳೆಯ ಗೆಳತಿಯರು! ಅವರು ಬರುತ್ತಿದ್ದಂತೆಯೇ  ಓಡಿಹೋಗಿ ಶೇಕ್ ಹ್ಯಾಂಡ್ ಮಾಡುವುದು ಮಕ್ಕಳ ನಿತ್ಯದ ಅಭ್ಯಾಸ. ಸಹೋದ್ಯೋಗಿಗಳಿಗೆ ಮೊದಲೇ ನಮಸ್ಕರಿಸುತ್ತಾ ಎಂತಹ ಒತ್ತಡದ ಕ್ಷಣದಲ್ಲೂ ಸಮಚಿತ್ತದಿಂದ ಸ್ಫೂರ್ತಿಯನ್ನು ತುಂಬುವ ಮಣಿಯಾಣಿ ಮೇಷ್ಟ್ರು ಎಂದೂ ಪ್ರಶಸ್ತಿಗಾಗಿ ಅರ್ಜಿಹಾಕಿದವರಲ್ಲ; ಬಕೇಟು ಹಿಡಿದವರಲ್ಲ. ಅವರ ಪ್ರಾಮಾಣಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವು ಅಧಿಕಾರಿಗಳು ಅಧಿಕಾರ ಚಲಾಯಿಸುವಾಗಲೂ 'ಸರಿ ಸರ್ ಮಾಡುತ್ತೇನೆ' 'ಆಯ್ತು ಸರ್' ಎಂದು ಪುಟ್ಟ ಮಗು ಹೇಳುವ ಹಾಗೆ ಹೇಳುತ್ತಿದ್ದರು!
*
ಹುಣ್ಣಿಮೆ ಅಮಾವಾಸ್ಯೆಗಳಿಗೊಮ್ಮೆ ಬಂದು ಮುಖತೋರಿಸಿ ಹೋಗುವ ಪ್ರಶಸ್ತಿ ವಿಜೇತ ಮೇಷ್ಟ್ರುಗಳ ನಡುವೆ ಇರುವಾಗ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ನೆನಪಿಸಿಕೊಳ್ಳದಿದ್ದರೆ ನನ್ನಂಥವರು ಮಾಡುವ ಬಹುದೊಡ್ಡ ಪಾಪಗಳಲ್ಲೊಂದೆನಿಸುತ್ತದೆ!
*

ಕಾಜೂರು ಸತೀಶ್

Saturday, April 21, 2018

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np on #SoundCloud
https://soundcloud.com/kajooru-sathish/dr-hs-anupama-speaking-on

ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು.

ಸಂಕಲನದಲ್ಲಿರುವ ಆರು ಕಥೆಗಳೂ ಓದುಗರನ್ನು ತೀವ್ರವಾಗಿ ಕಾಡಿಸುವಂಥವುಗಳು. ನಮ್ಮ ಸಜ್ಜನಿಕೆಯ ಮುಖವಾಡಗಳನ್ನು ಕಳಚಿಡುವ ಕಥನಗಳವು. ನಮ್ಮೊಳಗಿನ ಪ್ರಜ್ಞೆಯನ್ನು ಎಬ್ಬಿಸುವ 'ಮನಸ್ಸಿನ ಮಾತು'ಗಳವು.

ಅಭೂತಪೂರ್ವ ಕಥೆ ಹೇಳುವ ಶೈಲಿ, ಕೆಂಡದುಂಡೆಗಳಂಥ ಭಾಷೆ ಮತ್ತು ಸಂಭಾಷಣೆಗಳಿಂದಾಗಿ ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ. ಅವರ 'ಕಾತ್ಯಾಯಿನಿ'ಯು ಕನ್ನಡ ಕಥಾಪರಂಪರೆಯ ಪ್ರಮುಖ ಕಥೆಗಳ ಸಾಲಿಗೆ ಸೇರಬಲ್ಲ ಕಥೆ.

ಹೆಣ್ಣಿನ ಆತ್ಮವನ್ನು ಧರಿಸಿ ಮಾತನಾಡುವ ಸೇತುರಾಮ್ ಅವರ ಕಥೆಗಳು ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು ಅತಿಸೂಕ್ಷ್ಮವಾಗಿ,  ಸಶಕ್ತವಾಗಿ ವಿವರಿಸುತ್ತವೆ. ಕೌಟುಂಬಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿರುವ ಕ್ರೌರ್ಯ ಮತ್ತು ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ.

ಸ್ವಯಂ ಭ್ರಷ್ಟರಾಗಿದ್ದುಕೊಂಡು 'ನಾವಲ್ಲ' ಎನ್ನುತ್ತಾ ಮತ್ತೊಬ್ಬರ ಭ್ರಷ್ಟತೆಯನ್ನು ಬಯಲಿಗೆಳೆಯಲು ಹೊರಡುವ ನಮ್ಮಂಥವರ ಮುಖವಾಡಗಳು ಇಲ್ಲಿ ಬಟಾಬಯಲಾಗುತ್ತವೆ.

ತಾಯ್ತನವನ್ನು ತುಂಬಿಕೊಂಡ , ಮಾನವೀಯತೆಗಾಗಿ ಹಪಹಪಿಸುವ ಕಥೆಗಳಿವು.
*

ಕಾಜೂರು ಸತೀಶ್

Friday, April 20, 2018

ಡೆಮಾಕ್ರಸಿ ಅಳಿಯುತ್ತಿರುವ ಲಕ್ಷಣಗಳು

* ಕೋಟಿಕುಳಗಳಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ; ಅಂಥವರಿಗೇ ಗೆಲುವಿನ ಪ್ರಾಪ್ತಿ.

* ಜಾತಿ ಮತ್ತು ಧರ್ಮಾಧಾರಿತ ಮತ ಚಲಾವಣೆ.

* ಒಂದೇ ಪಕ್ಷಕ್ಕೆ ಮತ ಚಲಾಯಿಸುವುದು. ಎಂಥಾ ಭ್ರಷ್ಟನೇ ಸ್ಪರ್ಧಿಸಲಿ, ಮತ ಅವನಿಗೇ ಮೀಸಲು.

* ಹಣ, ಹೆಂಡ ಮತ್ತಿತರ ಆಮಿಷಗಳಿಗೆ ಬಲಿಯಾಗುವ ಮತದಾರ.

* ಗೆದ್ದ ತಕ್ಷಣವೇ ಸರ್ವಾಧಿಕಾರಿಯಾಗುವ ರಾಜಕಾರಣಿ.

* ಬಹುತೇಕ ಸೌಲಭ್ಯಗಳೆಲ್ಲ ಗೆದ್ದವರ ಸಂಬಂಧಿಕರಿಗೆ, ಆಪ್ತ ಕಾರ್ಯಕರ್ತರುಗಳಿಗೆ ಹಂಚಿಕೆ.

* ವಂಶಪಾರಂಪರ್ಯಾಧಾರಿತ ರಾಜಕಾರಣ.

* ಇವರಲ್ಲಿ ಯಾರೂ ಅರ್ಹರಲ್ಲ ಎಂದು 'NOTA'ವನ್ನು ಬೆಂಬಲಿಸುವ ಮತದಾರ.

* ಚುನಾವಣಾ ಸಂದರ್ಭವಷ್ಟೇ ಬಿರುಸಿನಿಂದ ನಡೆಯುವ ಕಾಮಗಾರಿಗಳು.

*

ಕಾಜೂರು ಸತೀಶ್

ಮದುವೆ ಊಟ

ಸುಡುವ ಈ ಬೇಸಿಗೆಯಲ್ಲಿ ಎಷ್ಟೋ ಮದುವೆಗಳಲ್ಲಿ ಭಾಗಿಯಾಗಿದ್ದೇನೆ. ಮತ್ತಷ್ಟೂ ಸುಡುವ ಅಲ್ಲಿನ ಅಡುಗೆ ಕೋಣೆಗಳಲ್ಲಿ ಬೆವರಿನ ಮಳೆ ಸುರಿಸುವ ಕೆಲಸಗಾರರನ್ನು ನೋಡಿದ್ದೇನೆ.

ನೀವು ನಂಬಲಾರಿರಿ: ನಾವು ಉಣ್ಣುವ ಮದುವೆ ಊಟದಲ್ಲಿ ಅವರ ಬೆವರಿನ ಒಂದು ಹನಿಯಾದರೂ ಜಾಗ ಪಡೆದುಕೊಂಡಿರುತ್ತದೆ! ಅಷ್ಟೆಲ್ಲ ಜನಗಳಿಗೆ ಬೇಯಿಸಿ ಹಾಕುವುದೆಂದರೇನು ಸಾಮಾನ್ಯ ಕೆಲಸವೇ?

ಲಿಪ್ಸ್ಟಿಕ್ ಬಳಿದು ಬಂದು ಎರಡೇ ಎರಡು ಬೆರಳುಗಳಲ್ಲಿ ಸ್ವಲ್ಪ ತಿಂದು ಮುಕ್ಕಾಲು ಭಾಗವನ್ನು ತಟ್ಟೆಯಲ್ಲೇ ಉಳಿಸಿಬರುವ ಈ ಕಾಲದ ಹುಡುಗಿಯರ ಮೇಲೆ ಇನ್ನಿಲ್ಲದ ಸಿಟ್ಟು ಬರುತ್ತದೆ.

ಸಾವು ಮತ್ತು ಮದುವೆಸಾವು ಮತ್ತು ಮದುವೆ ನನ್ನನ್ನು ದಾರುಣವಾಗಿ ಕಾಡುವ ಕೌಟುಂಬಿಕ ಸಂದರ್ಭಗಳು. ಈ ಎರಡೂ ಕೂಡ ಶೋಷಣೆಯ ದಾರಿಗಳು. ಸಮಾಜವು ಈ ಸನ್ನಿವೇಶಗಳಿಗೆ ಒಳಗಾಗುವ ಕುಟುಂಬವನ್ನು ಗರಿಷ್ಟ ಮಟ್ಟದಲ್ಲಿ ಶೋಷಿಸುತ್ತದೆ.

Saturday, April 7, 2018

ಮರ ಮತ್ತು ಜನ

ಮರ ಹೂವಾಗಿ ನಕ್ಕಿತು
ಮುಡಿದು ತೆಪ್ಪಗಾದರು ಜನ

ಮರ ಹಣ್ಣಾಗಿ ಉಲಿಯಿತು
ತಿಂದು ತೇಗಿ ನಿದ್ದೆಹೋದರು ಜನ

ಮರ ನೊಂದು ಎಲೆಯುದುರಿಸಿತು
'ಉದುರಿತಂತೆ ಹೆಹ್ಹೆಹ್ಹೇ'
ಎದ್ದೆದ್ದು ಕೇಕೆ ಹಾಕಿದರು ಜನ 
*

- ಕಾಜೂರು ಸತೀಶ್

ಆಟ

ಅವಳತ್ತ ಚೆಂಡನ್ನೆಸೆದೆ
ಅವಳು ನನ್ನತ್ತಲೂ.

ಸುಮಾರು ಹೊತ್ತಾದ ಮೇಲೆ
ಚೆಂಡನ್ನೇ ಬಳಸದೆ
ಎಸೆಯುವ ಹಿಡಿಯುವ ಆಟ ಆಡಿದೆವು.

ಇನ್ನೂ ಸ್ವಲ್ಪ ಹೊತ್ತಾದ ಮೇಲೆ
ನಾವು
ನಾವಿಬ್ಬರೂ ಇಲ್ಲದೆ
ಚೆಂಡನ್ನಷ್ಟೇ ಎಸೆದುಕೊಂಡೆವು
ಚೆಂಡನ್ನಷ್ಟೇ ಹಿಡಿದುಕೊಂಡೆವು.
*

ಮಲಯಾಳಂ ಮೂಲ - ಎಂ. ಆರ್. ವಿಷ್ಣು ಪ್ರಸಾದ್

ಕನ್ನಡಕ್ಕೆ - ಕಾಜೂರು ಸತೀಶ್

Sunday, March 25, 2018

ಸೂರ್ಯಪದ್ಯಗಳು

ನೆಕ್ಕಿ ನೋಡಿದ ಸೂರ್ಯ
'ಸಪ್ಪೆ' ಎನುತ ಇವಳೊಡನೆ ಕೆಂಡಾಮಂಡಲನಾದ.
ಈಗ 'ಉಪ್ಪು' ಎನ್ನುತ್ತಾ ಮೋಡಗಳ ಹುಡುಕುತ್ತಿದ್ದಾನೆ.
*
ಹೊಲದ ಬಿರುಕು ಪಾದಗಳ ನೆಕ್ಕಿದ ಸೂರ್ಯ
'ಇನ್ನೆಷ್ಟು ಒಡೆದು ಆಳಬಹುದು' ಯೋಚಿಸುತ್ತಿದ್ದಾನೆ.
*
ನಿಂತಲ್ಲೇ ಮೂರ್ಛೆಹೋಗಿದೆ ಮರ
ಉಪಚರಿಸುವ ನೆಪದಲ್ಲಿ ಬೆತ್ತಲಾಗಿಸಿದ್ದಾನೆ ಸೂರ್ಯ.
*
ಅವನಿಗೆ 'ಕಪ್ಪು' ಎಂದರೆ ತುಂಬುಪ್ರೀತಿ
ಒಣ ಕುಂಚದ ಬಿಳಿರೋಮದ ತುದಿಯಲ್ಲಿನ್ನೂ
ಕಡುಗಪ್ಪು ಹಾಗೇ ಉಳಿದಿದೆ.
*
'ಬಿಸಿಲಲ್ಲಿ ನೆನೆವವರು ಬೇಕಾಗಿದ್ದಾರೆ'
ಬಂಗಲೆಗಳ ಹೊರಗೆ ಬೋರ್ಡು ನೇತುಹಾಕಿದ್ದಾನೆ ಕವಿ.
ಕಾದೂ ಕಾದ ಅವನೀಗ ಥೇಟ್ ಕಪ್ಪು ಡಾಂಬರು ರಸ್ತೆ.
ಅವರೆಲ್ಲ ಕಾರು ಓಡಿಸಿಕೊಂಡು ಹೋಗುತ್ತಿದ್ದಾರೆ.
*
ಮುಟ್ಟಿದ್ದನ್ನೆಲ್ಲ ಅಳುವಂತೆ ಮಾಡಿಯಾದ ಮೇಲೆ
ಕಾಡಿನ ಮೌನವನ್ನೂ ಸಹಿಸದ ಸೂರ್ಯ
ಹೊಟ್ಟೆಕಿಚ್ಚಿನ ಕಿಡಿಹಚ್ಚಿ ಬಂದಿದ್ದಾನೆ.
*
ಕೆಲಸವಿಲ್ಲದ ನದಿಯೀಗ ಪ್ರಜೆಗಳಾಗಿ 'ಗುಸುಗುಸು ಪಿಸಪಿಸ'.
ಲೋಕದ ಸದನದಲ್ಲಿ ಸೂರ್ಯನದ್ದೇ 'ಚುರ್ರ್ಚುರ್ರ್' ಸಂಗೀತ.
*

ಕಾಜೂರು ಸತೀಶ್

Wednesday, March 21, 2018

ಪ್ರೇಮ ಪತ್ರ!

ಚುನ್ನು

    ಮಧ್ಯಾಹ್ನದ ಊಟ ಆಗಿ ಇನ್ನೂ ಕೈಯೇ ಸರಿ ಒಣಗ್ಲಿಲ್ಲ, ನಿಂಗೆ ಪತ್ರ ಬರೀತಿದ್ದೀನಿ (ಈಗ ಒಂದ್ಗಂಟೆ ಇಪ್ಪತ್ತೆರಡ್ನಿಮಿಷ).ಇವತ್ತೇನಾಯ್ತು ಗೊತ್ತಾ? ಕಾಫಿ ಕುಯ್ದು ಒಣಗಿಸ್ತಿದ್ನಾ_ ಉಗುರಿನ ಮೇಲಿರೋ ಸಿಪ್ಪೆಯೆಲ್ಲಾ ಎದ್ದ್ಹೋಗ್ತಿದೆ! ನೀನ್ನೋಡಿದ್ರೆ ವಾರ್ದಿಂದಾನೂ ಅದೇ ಕೆಲ್ಸ ಮಾಡ್ತಿದ್ದೀಯ , ನಿನ್ಕತೆ ಏನಾಗ್ಬೇಕು ಹೇಳು! ಆಮೇಲೆ ನಾನೇನಾದ್ರೂ ನೋಡ್ಬಿಡ್ತೀನಿ ಅಂತ ಕೈತುಂಬ ಮದರಂಗೀಲಿ ಚಿತ್ರ ಕೆತ್ಬುಡ್ತೀಯ ನೋಡು. ಎಷ್ಟು ಹುಷಾರು ನೀನು!

‘ನಿನ್ನ ನಂಗಿಷ್ಟ ಕಣೋ’ ಅಂತ ಒಂಚೂರೂ ಭಯ, ಗಾಬ್ರಿ ಇಲ್ದೆ ಹೇಳ್ದಾಗ ನನ್ನ ಹೃದಯದಲ್ಲಿ ಬುಲೆಟ್  ಓಡ್ತಿತ್ತು ಕಣೇ. (ಗಟ್ಟಿಗಿತ್ತಿ ನೀನು!) ಅದ್ಕೇ ಏನೂ ಹೇಳಿರ್ಲಿಲ್ಲ ನಿಂಗೆ. ಅವತ್ತು ಮನೆಗೆ ಬಂದು ನಿನ್ಹೆಸ್ರಲ್ಲಿ ಒಂದು ‘ಕಾಚಂಪುಳಿ’ ಗಿಡ ನೆಟ್ಟಿದ್ದೆ. ಎಷ್ಟೆತ್ರ ಬೆಳ್ದಿದೆ ಗೊತ್ತಾ ಈಗ ಅದು!

ನೀನ್ಬೇಜಾರ್ಮಾಡ್ಕೋತೀಯ ಅಂತ ಹೇಳಿರ್ಲಿಲ್ಲ: ನಿನ್ಗೆ ಅಂತ ಬರ್ದಿಟ್ಟಿದ್ದ ಪತ್ರಗಳ್ನೆಲ್ಲ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಇಟ್ಟಿದ್ನಾ. ಮೊನ್ನೆ ಗುಜರಿ ಮಾಮ ಬಂದಾಗ ಅಮ್ಮ ಎಲ್ಲಾ ಬಾಚ್ಕೊಟ್ಬಿಟ್ಟಿದ್ದಾಳೆ. ಅದ್ರಲ್ಲೊಂದು ಗುಲಾಬಿ ಬಿಡ್ಸಿದ್ದೆ ಕಣೇ, ನಿಂಗಿಷ್ಟ ಅಲ್ವಾ ಅಂತ ಹಸಿರು ಬಣ್ಣಾನೇ ಹಚ್ಚಿದ್ದೆ ಅದಕ್ಕೆ. ಇರ್ಲಿಬಿಡು ಅದೆಲ್ಲಿದ್ರೂ, ಯಾರ್ಕೈಲಿದ್ರೂ ಹಸ್ರೇ ಆಗಿರ್ಲಿ.

ನಮ್ಮೂರಲ್ಲಿ ಟವರ್ ಹಾಕ್ತಾರಂತೆ. ಆದ್ರೂ ಇಲ್ಲಿಗೆ ಸಿಗ್ನಲ್ ಬರೋದು ಡೌಟು ಅಂತಿದ್ರು. ಒಳ್ಳೇದೇ ಆಯ್ತು ಬಿಡು. ಇಲ್ದಿದ್ರೆ ನೀನು ‘ಪಟಪಟಪಟ’ ಅಂತಾ ಮಾತಾಡೊದು ನಾನು ‘ಊಂ ಊಂ’ ಅಂತ ಹೂಂಗುಟ್ಟೋದೇ ಆಗ್ಬಿಡುತ್ತೆ. 

ಮುಂದಿನ್ವಾರ ಈ ಪಿಳ್ಳೆ ಐಕ್ಳನ್ನೆಲ್ಲಾ ಕರ್ಕೊಂಡು ಬೆಟ್ಟಕ್ಕ್ಹೋಗ್ತಿದ್ದೀನಿ. ಎಲ್ಲಾರ್ನೂ ಕೇಳ್ದೆ, ಯಾರ್ಗೂ ಗೊತ್ತಿಲ್ಲ ನೋಡು ಅದ್ರ ಹೆಸ್ರು. ಅದ್ಕೇ, ನಿನ್ಹೆಸ್ರೇ ಇಟ್ಬಿಡೋಣಾ ಅಂತ. ಎಷ್ಟ್ಚಂದ ಅಲ್ಲಾ! ದಿನಾ ಬೆಳಿಗ್ಗೆ ಕಣ್ಬಿಟ್ರೆ ಅದೇ ಕಾಣ್ಸೋದು ನಂಗೆ. ನಿನ್ಥರಾನೇ ನೋಡುತ್ತೆ ನನ್ನ! ಆದ್ರೆ ಮಾತಿನ ವಿಚಾರ್ದಲ್ಲಿ ಥೇಟ್ ನನ್ಥರಾನೇ!

ನೀನಿದನ್ನ ಓದಿ ಆಗ್ಲೇ ಇಷ್ಟಗ್ಲಾ ಬಾಯ್ತೆರ್ದು ‘ಕಟಕಟಕಟಾ’ ಅಂತ ನಗ್ತಿರ್ತೀಯ ಅಂತ ಗೊತ್ತು. ಹಿಂಗಾ ಲವ್ಲೆಟರ್ ಬರಿಯೋದು ಅಂತ.  ನೀನ್ಹುಡ್ಗ ಆಗಿ ನಾನ್ಹುಡ್ಗಿ ಆಗ್ಬೇಕಿತ್ತೇನೋ! ಹೋಗ್ಲಿಬಿಡು.

ಏೀ! ನೆನ್ಪಾಯ್ತು: ಇವತ್ಬೆಳಿಗ್ಗೆ ತೋಟ್ದಲ್ಲಿ ಎರಡ್ಗಿಳಿಗಳು ಅತ್ತಿ ಮರ್ದಲ್ಲ್ಕೂತು ಇದು ಅದಕ್ಕೆ ಅದು ಇದಕ್ಕೆ ಅಂತ ಹಣ್ನ ಕಿತ್ಕಿತ್ತು ಕೊಡ್ತಿದ್ವು. ಅದ್ರಲ್ಲಿ ನೀನ್ಯಾವ್ದು ನಾನ್ಯಾವ್ದು ಅಂತ ಹುಡುಕ್ತಿದ್ದೆ. ಗೊತ್ತೇ ಆಗ್ಲಿಲ್ಲ ಕಣೇ, ಯಾಕಂದ್ರೆ ನೀನಿದ್ದಿದ್ರೆ ಎಲ್ಲಾ ನಂಗೇ ತಿನ್ಸ್ಬಿಡ್ತಿದ್ದೆ!

ಇನ್ನೂ ಏನೇನೋ ಬರೀಲಿಕ್ಕಿತ್ತು. ಆ ಎರಡು ಗಿಳಿಗಳ ಚಿತ್ರಾನೂ ಬಿಡ್ಸ್ಬೇಕು ಅಂದ್ಕೊಂಡಿದ್ದೆ, ಆಗ್ತಿಲ್ಲ. ಅಮ್ಮ ಕರೀತಿದ್ದಾರೆ, ಸ್ವಲ್ಪ ಸೌದೆ ಒಡಿಯೋ ಕೆಲ್ಸಾ ಬಾಕಿ ಇದೆ, ಹೋಗ್ತೇನೆ.

ಇದನ್ನ ಓದ್ಬಿಟ್ಟು ಏನಾದ್ರೂ ಬರಿ. ಸುಮ್ನೆ ನಗ್ತಾ ಕೂರ್ಬೇಡ. 

ಇತಿ ನಿನ್ನ,
ಪೆದ್ದು

ಕಾಜೂರು ಸತೀಶ್

Saturday, February 24, 2018

ಎರಡು ಸಾಲಿನ ಗಪದ್ಯ

ಮನೆಗೆ ಬೀಗ ಹಾಕುವಾಗ
ಜೇಬು ಮುಟ್ಟಿ ನೋಡಿಕೊಳ್ಳುತ್ತೇನೆ
ಪರ್ಸು, ಪೆನ್ನು, ಮೊಬೈಲು...
'ಹ್ಞಾಂ... ಇವೆ!'

'ಏನೋ ಮರೆತೆ' ಎಂಬ ವಸ್ತು
ಮಿದುಳ ತುದಿಯಲ್ಲೆಲ್ಲೋ
ಕೋಣೆಯ ಕಪಾಟಿನಲ್ಲೆಲ್ಲೋ
ಉಳಿಯದ ಹಾಗೆ
ಚೀಟಿಯಲ್ಲಿ ಎರಡು ಸಾಲುಗಳಾಗಿ ಹಡೆದು
ಮಡಿಸಿ ಜೇಬಲ್ಲಿಟ್ಟುಕೊಳ್ಳುತ್ತೇನೆ.

'ಈ ದೇಹ ಇಂದೇ ಮಣ್ಣಿಗೆ ಬಿದ್ದರೆ
ಹುಟ್ಟಲು ಬಿಡಿ'
ಎಂದರೆ ಪದ್ಯವಷ್ಟೇ ಆಗುತ್ತದೆ.
'ನಂಗೆ ಗದ್ದಲ ಅಂದ್ರೆ ಆಗಲ್ಲ
ಪದ್ಯದ್ಹಾಗೆ ಇದ್ದುಬಿಡಿ'
ಎಂದರೂ.

ಅದಕ್ಕೋಸ್ಕರವೇ ಎರಡು ಸಾಲು:
'ಈ ದೇಹವನ್ನು ಮೆಡಿಕಲ್ ಕಾಲೇಜಿಗೆ ಕೊಟ್ಟುಬಿಡಿ
ದಯವಿಟ್ಟು ಮನೆಗೆ ಒಯ್ಯದಿರಿ'.

(ನನ್ನ ಎಟಿಎಂ ಪಿನ್ - )

*

ಕಾಜೂರು ಸತೀಶ್

ಗೋಡೆಚಿತ್ರ

ಗೋಡೆಚಿತ್ರ
------------
ಕೂದಲ ಹರಡಿದ್ದಾಳೆ ಹುಡುಗಿ.
ಅವಳ ಕಣ್ಣಲ್ಲಿ ಬಿರಿದ ಹೂಬಿಸಿಲು.
ಒಂದೇ ಒಂದು ನೋಟ ಸಾಕು
ಗೋಡೆ ದಾಟಿ ಒಳಗಿಳಿದೇಬಿಡುವಳು.

ನುಗ್ಗಿ ಬರುತ್ತದೆ ಸಲಗಗಳ ಗುಂಪು
ಗೋಡೆಯ ಕೆಡವಿ.
ಉಕ್ಕೇರಿ ಬರುತ್ತದೆ
ಅಲೆಗಳ ಹೊತ್ತು ಸರೋವರ.
ಮೀನು ಸಿಗದ ಮಿಂಚುಳ್ಳಿ
ಅಡಗುತ್ತದೆ ಎಲೆಮರೆಯಲ್ಲಿ.
ಕಾಡಿಗೆ ಇನ್ನಿಲ್ಲದ ತುಡಿತ.

ಕೋಣೆಗೆ ಹಾರುತ್ತದೊಂದು ಚಿಟ್ಟೆ.
ತೇವಗೊಂಡ ಕಲ್ಲಿನಲ್ಲಿ
ಹಬ್ಬಿದ ಬಳ್ಳಿಯಲ್ಲಿ
ಬಿಸಿಲುಪರ್ವತದ ನೆತ್ತಿಯಲ್ಲಿ
ಕೊಕ್ಕು ಅಲುಗಾಡುವ ಸದ್ದಿನಲ್ಲಿ
ಮಳೆಹನಿಗಳ ತುಂಬಿಕೊಳ್ಳುವ ಎಲೆಯಲ್ಲಿ
'ಮುಟ್ಟಿದರೆ ಮುನಿ'ಯ ನೆನಪಿನಲ್ಲಿ
ಹಾರಿಕೊಂಡಿರುತ್ತದೆ ಚಿಟ್ಟೆ.

ಕತ್ತಲು ಬೀಳುವ ಮುನ್ನವೇ
ಗೋಡೆಗಂಟಿಕೊಳ್ಳುತ್ತದೆ.
ಚಿಟ್ಟೆಯ ರೆಕ್ಕೆಯ ಒಳಗಿಳಿದರೆ
ಕಣ್ಣೊಂದು ಹೂವು
ಅದರೊಳಗೆ ಜೇನು
ಹಾರುವ ಪರಾಗ.

ಕೋಣೆಯ ಒಳಗೆ
ಅರಳುತ್ತದೊಂದು ಲೋಕ
*

ಮಲಯಾಳಂ ಮೂಲ- ಚಿತ್ರಾ ಕೆ.ಪಿ

ಕನ್ನಡಕ್ಕೆ - ಕಾಜೂರು ಸತೀಶ್

ಮರುನೋಟ

ಬಿರುಬೇಸಿಗೆಯ ಬರ.
ಬಿರಿದ ಹೂವೊಂದು
ಕಿಟಕಿಯೆಡೆಗೆ ನೋಡುತಿದೆ.

ಮೊಟ್ಟಮೊದಲ ಸಲ
ಹೂವಿನ ಕಣ್ಣಿಗೆ ಸಿಕ್ಕ
ಕಿಟಕಿಯೊಳಗಿನ ಚಿತ್ರವಾಗುತ್ತೇನೆ.

ಗಾಳಿಗೆ ಹೊಯ್ದಾಡುವ ಹೂವಿಗೆ
ಇನ್ನಿಲ್ಲದ ಕನಿಕರ ನನ್ನ ಮೇಲೆ.

ಕಣ್ಣುಗಳಲ್ಲಿ ಅದು
ನನ್ನ ನಗ್ನತೆಯ ಗೀಚುತ್ತದೆ
ಈ ಒಡಲ ಕಳಚಿಡುತ್ತೇನೆ ನಾನು.
ಒಡಲು ನನ್ನ ಕಳಚಿಟ್ಟುಬಿಡುತ್ತದೆ.

ನಿದ್ದೆಯಲ್ಲಿ
ನಾನು
ವಸಂತದ ಪೈರುಗಳ
ಕೊಯ್ದು ರಾಶಿಹಾಕುತ್ತೇನೆ.
*

ಮಲಯಾಳಂ ಮೂಲ : ಚಿತ್ರಾ ಕೆ.ಪಿ.

ಕನ್ನಡಕ್ಕೆ : ಕಾಜೂರು ಸತೀಶ್

ಮಾತ್ರೆ

ಜ್ವರ ಒಲೆ ಉರಿಸುತ್ತಿದೆಯೇ?
ಹೃದಯ ಶವಾಸನದಲ್ಲಿದೆಯೇ?
ಶ್ವಾಸಕೋಶ ಬಲೂನು ಊದುತ್ತಿದೆಯೇ?
ಮೂತ್ರಪಿಂಡ ವಿಚ್ಛೇದನೆ ಕೊಟ್ಟಿತೇ?
ಸಿಹಿ ಹೆಚ್ಚಿ ಹೆಜ್ಜೇನುಗಳು ದಾಳಿಯಿಟ್ಟವೇ?
ಕೀಲು ನೂಲು ಪೋಣಿಸಿ ಮೂಳೆಗಳ ಹೊಲಿಯುತ್ತಿದೆಯೇ?

ಮುಟ್ಟಿ ನೋಡಿದೆ-
ಪುಟ್ಟ ಮಾತ್ರೆ.
ತೆರೆದೇ ಇರುವ
ಪುಟ್ಟ ಬಾಯಿ.
ತಿನ್ನಬೇಕು ನೋವು
ಅಹೋರಾತ್ರಿ.
ಪಾಪ!

ಹೊಟ್ಟೆ ತುಂಬಿದ ಮೇಲೆ
ಅದರ ಗಡಿಯಾರದಾಕಾರದ
'ಟಿಕ್ ಟಿಕ್' ಮಾತಿನ ಮೂತಿಗೆ
ಲಕ್ವಾ ಹೊಡೆದು
ಉದರದೊಳಗಿಟ್ಟುಕೊಂಡು
ಅದರ ತಾಯಿಯಾದವರಿಗೆ
ದೀರ್ಘ ಕುಂಭಕ!

ಅಂದ ಹಾಗೆ
ನನ್ನ ಟೋಕನ್ ಸಂಖ್ಯೆಯನ್ನು ಮರೆತೇಬಿಟ್ಟೆ!
*


ಕಾಜೂರು ಸತೀಶ್

ಮಣಿಯಾಣಿ ಮೇಷ್ಟ್ರು

'ನಿಮಗೆ ಕೃಷ್ಣ ಮಣಿಯಾಣಿ ಮೇಷ್ಟ್ರನ್ನು ಗೊತ್ತಾ?' ಎಂದು ಅಧಿಕಾರಿಗಳೆದುರು ಪ್ರಶ್ನೆಯನ್ನು ಎಸೆದರೆ, 'ಇಲ್ಲ' ಎಂಬ ಉತ್ತರವೇ ಬರುತ್ತದೆ. ಯಾಕೆಂದರೆ ...