ಕವಿತೆ ಹೇಗಿರಬೇಕು ಎಂಬುವುದರ ಕುರಿತು ಹೇಳುತ್ತಾ 'ನಾವು ಏನು ಹೇಳುತ್ತಿದ್ದೇವೆ ಎಂಬ ಖಚಿತತೆ ಬರೆಯುವವರಿಗೇ ಇಲ್ಲದಿದ್ದಾಗ ದೊಡ್ಡ ದೊಡ್ಡ ಉಪಮೆ ಪ್ರತಿಮೆಗಳೆಲ್ಲ ಸೊರಗುತ್ತವೆ' ಎಂದರು. ಅದನ್ನು ಪುಷ್ಟೀಕರಿಸಲು ತಾವು ಓದಿದ ಕವನ ಸಂಕಲನವನ್ನು ಉದಾಹರಿಸಿದ್ದರು.
ಸರ್ಕಾರಿ ಕೆಲಸ ದಕ್ಕದಿರುವುದು, ಮದುವೆಯಾಗದಿರುವುದು ಮತ್ತು ಅನಾರೋಗ್ಯ- ಈ ಮೂರೂ ಅವರನ್ನು ಹಸಿಹಸಿ ತಿಂದುಹಾಕಿದ್ದವು. ಖಾಸಗಿ ಸಂಸ್ಥೆಯಲ್ಲಿ ಇಂಗ್ಲಿಷ್ ವಿಷಯವನ್ನು ಬೋಧಿಸುತ್ತಾ ಪ್ರಾಂಶುಪಾಲರ ಹುದ್ದೆಯನ್ನು ನಿರ್ವಹಿಸಿ ಕಡೆಗೆ ಸರಿಯಾದ ಸಂಬಳ ದೊರೆಯದೆ, ಪ್ರಶ್ನಿಸಿದಕ್ಕಾಗಿ ಕೆಲಸವನ್ನೂ ಕಳೆದುಕೊಂಡು, ಒಂದಷ್ಟು ವರ್ಷ ವಕೀಲರಾಗಿ ದುಡಿದು ಕೊನೆಗೆ ಎಲ್ಲವನ್ನೂ ತೊರೆದು ಸಹೋದರಿಯೊಂದಿಗೆ ಬದುಕುತ್ತಿರುವ ಕಥೆಯನ್ನು ವಿಷಾದದಿಂದಲೇ ಹೇಳಿಕೊಂಡಿದ್ದರು.
ಅವರು ನನ್ನ ಕೃತಿಯ ಬಗ್ಗೆ ಮಾತನಾಡಿದ್ದು ನನಗೆ ಮುಖ್ಯವೆನಿಸಲೇ ಇಲ್ಲ. ಅವರ ಧ್ವನಿಯ ಕಂಪನಾಂಕದ ದುಃಖಭರಿತ ಕಂಪನಗಳಷ್ಟೇ ನನ್ನೊಳಗೆ ರಿಂಗಣಿಸತೊಡಗಿದ್ದು.
ಆ ಮಾತುಗಳು ನನ್ನ ಕಿವಿಯಿಂದ ಇನ್ನೂ ತಪ್ಪಿಸಿಕೊಂಡಿರಲಿಲ್ಲ- ತಿಂಗಳು ಕೂಡ ಕಂತಿರಲಿಲ್ಲ - ಒಂದು ಮುಂಜಾವ ಎಂದಿನಂತೆ ಪ್ರಜಾವಾಣಿ ಓದುತ್ತಿದ್ದಾಗ ಕಸ್ತೂರಿ ಬಾಯರಿ ಎಂಬ ಆ ಲೇಖಕಿಯ ನಿಧನದ ಕುರಿತು ಸುದ್ದಿ ಓದಿದೆ!
*
ನಿನ್ನೆ ಮುದೋಳದಿಂದ ಒಂದು ಕರೆ ಬಂದಿತ್ತು. ಹಿರಿಯರಾದ ಮಲ್ಲಿಕಾರ್ಜುನ ಹೆಗ್ಗಳಗಿ ಸರ್ ಕರೆ ಮಾಡಿ 'ಸಂಗಾತ'ದಲ್ಲಿ ಪ್ರಕಟಗೊಂಡ ನನ್ನ ಮಿನಿಕತೆಗಳ ಕುರಿತು ಮಾತನಾಡಿದರು. ಅವರ ಪ್ರೊಫೈಲ್ ಹುಡುಕುತ್ತಿದ್ದಾಗ ಕಸ್ತೂರಿ ಬಾಯರಿ ಅವರ ಕುರಿತು ಬರೆದ ಲೇಖನವೊಂದು ಕಾಣಿಸಿತು- ಇದೆಲ್ಲ ನೆನಪಾಯಿತು.
ಸಂಗಾತ ಪುಸ್ತಕವು ಕಸ್ತೂರಿ ಬಾಯರಿಯವರ ಸಮಗ್ರ ಕಥೆಗಳನ್ನು ಪ್ರಕಟಿಸಿದೆ. ನನ್ನ ಕೃತಿಯನ್ನು ಪ್ರಕಟಿಸಿದ್ದ ಸಂಗಾತ ಇಂತಹ ನೆನಪುಗಳಿಗೆ ಕಾರಣವಾಗಿದೆ. ಸಂಗಾತದ ಟಿ ಎಸ್ ಗೊರವರ ಇಂತಹ ನೆನಪುಗಳಿಗೆ ಸೇತುವೆಯಾಗಿದ್ದಾರೆ.
*
✍️ ಕಾಜೂರು ಸತೀಶ್




💐💐
ReplyDelete