ಯಮ ಎದುರಿಗೆ ಬಂದು ನಿಂತಾಗ
ಅವಳು ಸೀರೆ ಉಡುತ್ತಿದ್ದಳು
ಪೂರ್ಣ ಉಟ್ಟೇ ಇರಲಿಲ್ಲ
ಸಾಕು ಸಾಕು
ಬಾ ಜೊತೆಗೆ
ಎಂದನು ಯಮ
ಅವಳು ಯಮನನ್ನೇ ನೋಡಿದಳು
ಚಿತ್ರದಲ್ಲಿ ಕಂಡಂತೆ ಇರಲಿಲ್ಲ
ಎಷ್ಟು ಚಂದ ಗೊತ್ತಾ
ಒಳ್ಳೆಯ ಎತ್ತರ
ಅದಕ್ಕೆ ಸರಿಯಾದ ತೂಕ
ಯಮ ಒಮ್ಮೆ ನಕ್ಕ
ಸಾಕು ಸಾಕು
ಬಾ ಜೊತೆಗೆ
ಸ್ವಲ್ಪ ಇರಿಯಪ್ಪ
ಸ್ವಲ್ಪ ಜಡೆ ಕಟ್ಕೋತೇನೆ..
ನಿಮ್ದು ಮದ್ವೆ ಆಗಿದ್ಯಾ?
ಯಾಕೆ?
ಸುಮ್ನೆ ಕೇಳ್ದೆ
ಆಗಿದೆ
ಹೆಂಡ್ತಿ ಅಂದ್ರೆ ಇಷ್ಟನಾ?
ಹೌದು
ಸಾಕು ಸಾಕು
ಬಾ ಜೊತೆಗೆ
ಈ ಬೊಟ್ಟು ಹಾಕೋತೇನೆ
ಕನ್ನಡಿಯಲ್ಲಿ ಅಂಟಿಸಿಟ್ಟ ಬೊಟ್ಟನ್ನು
ಹಣೆಗಿಟ್ಟಳು
ಇಷ್ಟು ಸಾಕು
ಬಾ ಜೊತೆಗೆ
ಯಮ ಅವಳ ಮುಖವನ್ನೊಮ್ಮೆ ನೋಡಿದ
ಅವಳ ಕಣ್ಣುಗಳು ತುಂಬಿದ್ದವು
ಯಮ ಅವಳ ಕಣ್ಣೀರು ಒರೆಸಿದ
ಅವಳನ್ನಾಲಂಗಿಸಿ
ಹಣೆಗೆ ಮುತ್ತನ್ನಿಟ್ಟ
ಇಷ್ಟು ಪ್ರೀತಿಯಿಂದ
ಯಾರೂ ನೋಡಿಕೊಂಡಿರಲಿಲ್ಲ ನನ್ನನ್ನು
ಮುದ್ದಿಸಿರಲಿಲ್ಲ
ಯಮ ನಕ್ಕು ನುಡಿದ
ಅದಕ್ಕೇ ಎಲ್ಲರೂ ನನ್ನ ಹಿಂದೆ ಬರುವುದು
ಜಗದ ಎಲ್ಲವನ್ನೂ
ಎಲ್ಲರನ್ನೂ ತೊರೆದು
ಅವಳು ಆ ಕೈಹಿಡಿದು ನಡೆದಳು
ದೂರ ಬಹುದೂರ
*
ಮಲಯಾಳಂ ಮೂಲ -ನಯನಾ ವೈದೇಹಿ
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment