ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, June 21, 2024

ಮದುವೆ

ಅವನ ಮದುವೆಯ ದಿನ ಇವನು ಜ್ವರದಿಂದ ಮಲಗಿದ್ದ.
ಅಂದಿನಿಂದ ಅವನು ಮಾತುಬಿಟ್ಟ
*
ಗುಂಡು, ತುಂಡು ಇಲ್ಲವೆಂಬ ಸಿಟ್ಟಿನಲ್ಲಿ ಕವರಿಗೆ ಹಾಕಿದ್ದ ಒಂದು ನೋಟನ್ನು ಕಿಸೆಗೆ ಇಳಿಸಿದ
ಅದು ಬಾರಿನ ಡ್ರಾಯರ್ ಸೇರಿತು
*
ಕಾರಿನಲ್ಲಿ ಬಂದು ಹೋದರು
ಸಾವಿರ ಸಾವಿರ ಮೌಲ್ಯದ ಬಟ್ಟೆ
ಕೆಜಿಗಟ್ಟಲೆ ಬಣ್ಣ - ಆಭರಣ
ಸ್ವಲ್ಪ ಉಂಡರು ಬಿಟ್ಟುಹೋದರು

ಇದೇನು ಇಷ್ಟೊಂದು ಕಾಗೆಗಳು ಇಲ್ಲಿ
ಇಂದು ಯಾವ ಕಾಗೆಯ ಮದುವೆ?
*
ಮನೆಯನ್ನು ಮಾರಿ ಮದುವೆ ಮಾಡಿದ್ದರು
ಈ ಕುಣಿಕೆ ಕೂಡ ಬಾಡಿಗೆಯದ್ದೇ!
*
ಸೂರ್ಯ ಹೇಳುತ್ತಿತ್ತು
ಇವತ್ತು ಮುಖಗಳೇ ಕಾಣಿಸುತ್ತಿಲ್ಲ
ಯಾರ ಗುರುತೇ ಸಿಗುತ್ತಿಲ್ಲ!
*
ಇರುವ ಒಂದು ಚೈನನ್ನೂ ಅಡವಿಟ್ಟಾಗ
ನೆರೆಮನೆಯವರ ಚೈನು ರಿಂಗುಗಳಿಗ ಸರಳ ವಿವಾಹದ ಕನಸು ಕಮರಿತು
*
ಅವನು ಐನೂರು ಹಾಕಿದ್ದ
ಇವನು ಐನೂರಾ ಒಂದು

ಕೊಳೆ ತೊಳೆಯಲೂ ಅದು ಒಳ್ಳೆಯದಂತೆ!
*
ಅವರಿಬ್ಬರದು ರಿಜಿಸ್ಟರ್ ಮದುವೆ
ಅವರೂರ ಮನದಲ್ಲಿ ಅಮರ ಕೈದಿಗಳು
*


- ಕಾಜೂರು ಸತೀಶ್ 

Monday, June 10, 2024

ಮನೆ

ತಿಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ. ಈ ಬಾರಿ ಅವನ ಪಕ್ಷ ಗೆದ್ದು ಅಧಿಕಾರಕ್ಕೇರಿತ್ತು. ಇದೇ ಖುಷಿಯಲ್ಲಿ ಅವನಿಗೆ ಐಷಾರಾಮಿ ಮನೆಯೊಂದನ್ನು ಕಟ್ಟಿಕೊಡಲಾಯಿತು.

ಮನೆಯಿಲ್ಲದವರು, ಗುಡಿಸಲಿನಲ್ಲಿರುವವರು, ಬಂಗಲೆಯಲ್ಲಿರುವವರು ಎಲ್ಲರೂ ಬಂದು ಉಡುಗೊರೆಗಳನ್ನು ಕೊಟ್ಟುಹೋದರು.
ಕಾಜೂರು ಸತೀಶ್ 

Sunday, June 9, 2024

ಯಮ

ಯಮ ಎದುರಿಗೆ ಬಂದು ನಿಂತಾಗ
ಅವಳು ಸೀರೆ ಉಡುತ್ತಿದ್ದಳು

ಪೂರ್ಣ ಉಟ್ಟೇ ಇರಲಿಲ್ಲ
ಸಾಕು ಸಾಕು
ಬಾ ಜೊತೆಗೆ
ಎಂದನು ಯಮ


ಅವಳು ಯಮನನ್ನೇ ನೋಡಿದಳು
ಚಿತ್ರದಲ್ಲಿ ಕಂಡಂತೆ ಇರಲಿಲ್ಲ
ಎಷ್ಟು ಚಂದ ಗೊತ್ತಾ
ಒಳ್ಳೆಯ ಎತ್ತರ
ಅದಕ್ಕೆ ಸರಿಯಾದ ತೂಕ


ಯಮ ಒಮ್ಮೆ ನಕ್ಕ
ಸಾಕು ಸಾಕು
ಬಾ ಜೊತೆಗೆ


ಸ್ವಲ್ಪ ಇರಿಯಪ್ಪ
ಸ್ವಲ್ಪ ಜಡೆ ಕಟ್ಕೋತೇನೆ..

ನಿಮ್ದು ಮದ್ವೆ ಆಗಿದ್ಯಾ?
ಯಾಕೆ?
ಸುಮ್ನೆ ಕೇಳ್ದೆ
ಆಗಿದೆ
ಹೆಂಡ್ತಿ ಅಂದ್ರೆ ಇಷ್ಟನಾ?
ಹೌದು

ಸಾಕು ಸಾಕು
ಬಾ ಜೊತೆಗೆ

ಈ ಬೊಟ್ಟು ಹಾಕೋತೇನೆ
ಕನ್ನಡಿಯಲ್ಲಿ ಅಂಟಿಸಿಟ್ಟ ಬೊಟ್ಟನ್ನು
ಹಣೆಗಿಟ್ಟಳು

ಇಷ್ಟು ಸಾಕು
ಬಾ ಜೊತೆಗೆ

ಯಮ ಅವಳ ಮುಖವನ್ನೊಮ್ಮೆ ನೋಡಿದ
ಅವಳ ಕಣ್ಣುಗಳು ತುಂಬಿದ್ದವು

ಯಮ ಅವಳ ಕಣ್ಣೀರು ಒರೆಸಿದ
ಅವಳನ್ನಾಲಂಗಿಸಿ
 ಹಣೆಗೆ ಮುತ್ತನ್ನಿಟ್ಟ


ಇಷ್ಟು ಪ್ರೀತಿಯಿಂದ
ಯಾರೂ ನೋಡಿಕೊಂಡಿರಲಿಲ್ಲ ನನ್ನನ್ನು 
ಮುದ್ದಿಸಿರಲಿಲ್ಲ 


ಯಮ ನಕ್ಕು ನುಡಿದ
ಅದಕ್ಕೇ ಎಲ್ಲರೂ ನನ್ನ ಹಿಂದೆ ಬರುವುದು
ಜಗದ ಎಲ್ಲವನ್ನೂ 
ಎಲ್ಲರನ್ನೂ ತೊರೆದು


ಅವಳು ಆ ಕೈಹಿಡಿದು ನಡೆದಳು
 ದೂರ ಬಹುದೂರ
*
ಮಲಯಾಳಂ ಮೂಲ -ನಯನಾ ವೈದೇಹಿ



ಕನ್ನಡಕ್ಕೆ- ಕಾಜೂರು ಸತೀಶ್