ತಾನೇ ತಾನಾಗಿ ಶಿಲ್ಪಕಲೆಯನ್ನು ಕಲಿತಿದ್ದರಿಂದ 'ಏಕಲವ್ಯ' ಎಂದು ಹೆಸರಾಗಿದ್ದ. ಅವನ ಕೈಚಳಕಕ್ಕೆ ಮಣ್ಣು, ಶಿಲೆಗಳೆಲ್ಲಾ ಜೀವಪಡೆಯುತ್ತಿದ್ದವು.
ಹಲವು ಸಮಾರಂಭಗಳಿಗೆ ಕರೆಬಂದರೂ ಒಂದೆರಡು ಕಡೆಗಳಿಗೆ ಮಾತ್ರ ಬಿಡುವು ಮಾಡಿಕೊಂಡು ಹೋಗಿಬರುತ್ತಿದ್ದ.
'ದಿನದಿಂದ ದಿನಕ್ಕೆ ಕರೆಗಳು ಹೆಚ್ಚು ಬರಲಾರಂಭಿಸಿದವು. ನಾನೊಂದು ಶಿಲ್ಪ ಮಾಡಿದ್ದೇನೆ. ನಿಮ್ಮ ಕೈಯ ಸ್ಪರ್ಶವಾದರೆ ಅದು ಇನ್ನೂ ಚಂದವಾಗ್ತಿತ್ತು..'
'ಒಂದು ಹೆಲ್ಪ್. ಒಂದು ಶಿಲ್ಪವನ್ನು ಕಳಿಸ್ತೇನೆ. ಸರಿಮಾಡಿಕೊಡುವಿರಾ? ಆದರೆ ನಾಳೆಯೇ ಬೇಕಿತ್ತು, ಇಲ್ಲ ಅನ್ಬೇಡಿ'
ಕೊನೆಕೊನೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ. ಅನೇಕ ಸಂಖ್ಯೆಗಳನ್ನು ಬ್ಲಾಕ್ ಮಾಡಿಟ್ಟ. ಜನಗಳಿಂದ ತಪ್ಪಿಸಿಕೊಂಡು ಓಡುತ್ತಿದ್ದ.
ಈ ಹಾವಳಿ ಹೆಚ್ಚಾಗಿ ಬದುಕು ಕಷ್ಟವೆನಿಸಿದಾಗ ತನ್ನ ಕಲೆಯನ್ನು ನಿಲ್ಲಿಸಿದ.
ಈಗ ಬೀದಿಯಲ್ಲಿ ರಾಜಾರೋಷವಾಗಿ ನಡೆಯುವಾಗ ಒಬ್ಬನೇ ಒಬ್ಬ ಮಾತನಾಡಿಸದಿರುವಾಗ ಸ್ವಾತಂತ್ರ್ಯದಲ್ಲಿ ಇಷ್ಟು ಸುಖವಿರುತ್ತದಾ ಎಂದು ಸುಖಿಸತೊಡಗಿದ.
*
ಕಾಜೂರು ಸತೀಶ್
No comments:
Post a Comment