'ಹನಿ ಹನಿ ಇಬ್ಬನಿ' ಲೀಲಾಕುಮಾರಿ ತೊಡಿಕಾನ ಅವರ ಹನಿಗವನಗಳ ಸಂಕಲನ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಹನಿಗವನಗಳಿವು. ಹೀಗಿರುವುದರಿಂದ ಸಹಜವಾಗಿ ಅಭಿವ್ಯಕ್ತಿಯಲ್ಲಿ ಏಕರೂಪದ ಮಾದರಿಗಳಿಲ್ಲ. (ಏಕೆಂದರೆ ಪ್ರೌಢಶಾಲೆಯಲ್ಲಿದ್ದಾಗ, ಕಾಲೇಜಿನಲ್ಲಿದ್ದಾಗ ಬರೆದ ಹನಿಗಳೂ ಇಲ್ಲಿವೆ). ಒಟ್ಟು 213 ಹನಿಗವನಗಳಿರುವ ಸಂಕಲನವಿದು.
ಕೇವಲ ವರ್ಣನೆಗೆ ಸೀಮಿತಗೊಳ್ಳದ ಕವಿತೆಗಳಿವು. ಸಮಕಾಲಿನ ಸಮಾಜದ ವೈರುಧ್ಯಗಳ ಮೇಲೆ ಹನಿಗಳ ಕುಟುಕು ಇದೆ. ಯಾವುದೇ ಸೀಮಿತ ಸಿದ್ಧಾಂತಕ್ಕೆ ಕಟ್ಟು ಬೀಳದೆ ಆಯಾ ಕಾಲಘಟ್ಟದಲ್ಲಿ ಕವಿಯೋರ್ವ ಮುಖಾಮುಖಿಯಾಗುವ ಸಂಗತಿಗಳನ್ನೇ ಅವರು ಕವಿತೆಯಾಗಿಸಿದ್ದಾರೆ. ಕವಿತೆಯಾಗುವಿಕೆ/ಆಗದಿರುವಿಕೆಯ ಕುರಿತು ಅವರಿಗೆ ಸ್ಪಷ್ಟತೆ ಇದೆ.
155. ನನ್ನ ಕವಿತೆಗಳೇ
ನನ್ನ ವಿರುದ್ಧ
ದಂಗೆಯೆದ್ದಿವೆ.
ಗೀಚಿದ್ದಕ್ಕೆಲ್ಲ
ಕವಿತೆ ಎಂದು
ಹೆಸರಿಟ್ಟಿದ್ದಕ್ಕೆ..
ಕವಿ ಎಂದು ಬೀಗಿದ್ದಕ್ಕೆ.
191. ಪ್ರತಿ ಏಕಾಂತದ
ಮೌನದಲ್ಲೂ
ಹೃದಯಕ್ಕೊಂದೊಂದು
ಸುಖ ಪ್ರಸವ
ಬಿಳಿ ಹಾಳೆಯ ಮೇಲೆ.
ಮಲಗಿದ
ಕವಿತೆ ಮರಿ
ಕಣ್ಣುಮಿಟಿಕುಸುತ್ತಿದೆ.
26. ಅವರಿವರ ಮಾತುಗಳು
ಮೌನಗಳು
ಚುಚ್ಚಿದಾಗಲೆಲ್ಲ ನೋವ ಸಹಿಸಿ
ಸಹಿಸಲಾಗದೆ ನುಂಗಿ ನುಂಗಿ
ನವಮಾಸ ತಡೆದು
ತಡೆಯಲಾಗದೆ ಹಡೆದಿದ್ದೇನೆ
ಕವಿತೆಗಳ.
ಇದೀಗ ನನ್ನ ಸುತ್ತ
ಕವಿತೆಗಳದ್ದೇ ಅಳು
ಕಿಲಕಿಲ ನಗು
ಯಾರ ಮಾತು ಕೇಳದಷ್ಟು
ಚುಚ್ಚೋ ಮೌನವ ಸೀಳುವಷ್ಟು
*
ಲೀಲಾವತಿ ಅವರ ಕವಿತೆಗಳಲ್ಲಿ ಹೆಣ್ಣಿನ ಸಂಕಥನಗಳು ಹೀಗಿವೆ:
9. ಅರಿಯದೆ ದುಡುಕಿದ
ಸೀತೆಯಲ್ಲ ಇವಳು
ಅಸಮಾನತೆಯ ಉರಿಯಲ್ಲಿ
ತೆಪ್ಪಗಿರಲಾಗದೆ ಸಿಡಿದ
ಒಗ್ಗರಣೆಯ ಸಾಸಿವೆ ಇವಳು.
ಹೌದು, ಸಹನಾಮೂರ್ತಿ
ಪಟ್ಟದೊಡತಿ
ಪಟ್ಟ ತೊರೆದಿದ್ದಾಳೆ
ನಡೆವ ಹಾದಿಯಲ್ಲಿ ಗೆರೆ
ಮೂಡಿಸುವ ಛಲದಿ
ಗೆರೆ ದಾಟಿದ್ದಾಳೆ.
13. ಅವಳು
ಸುತ್ತಿಟ್ಟ ಚಾಪೆಯೊಳಗೆ
ಮಡಿಚಿಟ್ಟ ಸುಕ್ಕು ಸುಕ್ಕಾದ
ನೆನಪುಗಳನ್ನೇ
ಪದೇ ಪದೇ ಮೆಲ್ಲುತ್ತಾ
ನಾಳೆಯ ಕನಸಿಗೆ
ಬಸುರಾದವಳು.
ಮನುಷ್ಯ, ಮನುಷ್ಯತ್ವದ ಹುಡುಕಾಟ ಹಲವು ಕವಿತೆಗಳಲ್ಲಿವೆ:
22. ದಾಹ ತೀರದ
ಮನುಷ್ಯ
ಮಣ್ಣನ್ನೇ ಬಗೆದು
ಸಿಕ್ಕಿಸಿಕ್ಕಿದ್ದನ್ನು
ದೋಚಿದ
ಹಗೆ ಸಾಧಿಸಿದ ಮಣ್ಣು
ತನ್ನೊಳಗೆ
ಹೂತುಹಾಕಿತು!
129. ಎಲ್ಲರಿಗಿಂತ ಹೆಚ್ಚಾಗಿ
ಬಿಡದೆ ಹುಚ್ಚಾಗಿ
ನಮ್ಮನ್ನೇ ನಾವು
ಪ್ರೀತಿಸುತ್ತೇವೆ
ಉದಾಹರಣೆಗೆ ಗ್ರೂಪ್ ಫೋಟೋದಲ್ಲಿ
ನಮ್ಮನ್ನೇ ಹುಡುಕುತ್ತೇವೆ
158. ನಿನ್ನ ನೆನಪಿನ ಸುತ್ತ
ಬೇಕಂತಲೇ
ಮರೆವಿನ ಹುತ್ತ
ಬೆಳೆಸಿಕೊಂಡಿದ್ದೆ.
ಅಲ್ಲೂ ಅಲ್ಲಲ್ಲಿ
ಹರಿದಾಡಿದ ನೆನಪ
ಗೆದ್ದಲು ನಿನ್ನನ್ನೇ
ನೆನಪಿಸಿದವು
ಹುತ್ತ ಕೆಡವಿದ್ದೇನೆ!
190 ಹೃದಯ ಹೊಲವ
ಉಳುಮೆ ಮಾಡಿ
ನೆನಪ ಬೀಜ ಬಿತ್ತಿ ಅಲ್ಲಿ
ಮೊಳೆವ ಬಾಲ್ಯದ ಚಿಗುರಿಗಾಗಿ
ಕಾಯುತ್ತಿರುವೆನು
ಮನದ ಬನದೊಳಲ್ಲಿ
ನಿನ್ನ ಹುಡುಕುತ್ತಿರುವೆನು
ನಿಸರ್ಗದ ಬೆರಗು ಕಾವ್ಯವಾಗುವ ಬಗೆ ಹೀಗೆ:
55.
ತಂತಿ ಮೇಲಣ
ಇಬ್ಬನಿಯಲ್ಲಿ
ಎಷ್ಟೊಂದು ಕನಸುಗಳು
ಬಿದ್ದರೆ ನುಚ್ಚುನೂರು
ಇದ್ದರೆ ಭಾಷ್ಪೀಕರಣ
ಬೊಗಸೆ ಹಿಡಿದು
ಕಾಪಿಟ್ಟರಷ್ಟೆ ಕನಸರಳುವುದು.
ತತ್ವ ಸಿದ್ಧಾಂತಗಳಿಗಿಂತ ಮಾನವೀಯತೆಯೇ ಮುಖ್ಯ ಎನ್ನುವ ಕವಿತೆಗಳು ಹೆಚ್ಚು ಜೀವ ಪರವಾಗಿ ಕಾಣಿಸುತ್ತವೆ:
101 ಕೆರಳಿಸಿದ್ದು ಅವರ
ತತ್ವ ಸಿದ್ಧಾಂತಗಳು
ಬಲಿಯಾಗಿದ್ದು
ಅವರು
ಸಿದ್ಧಾಂತಗಳು ಅಜರಾಮರ!
106 ಕಾಲದ ಗಾಳಿಯ
ರಭಸವನ್ನೆದುರಿಸಿ
ನೆಲ ಹಾಗೇ ಇದೆ
ಮರ ಹಾಗೇ ಇದೆ
ಬೇಲಿಯೂ ಇದೆ
ಬೇಲಿ ಆ ಕಡೆ ಈ ಕಡೆ
ಝಳಪಿಸಿದ ಕತ್ತಿಯೂ ಇದೆ
ಸುರಿದ ರಕ್ತದ ಕುರುಹು ಇದೆ
ಝಳಪಿಸಿದವರು ಮಾತ್ರ
ಎಲ್ಲೂ ಕಾಣಲಿಲ್ಲ!
210 ಎಡಬಲ ನಿಂತವರ
ಕೂಗಾಟ ಹಾರಾಟ
ಅಬ್ಬರ ಆರ್ಭಟ
ಧಿಕ್ಕಾರ ಮುಷ್ಕರ
ಇದ್ದಕ್ಕಿದ್ದಂತೆ ಇಬ್ಬರನ್ನೂ
ಬಾಧಿಸಿದ್ದು ಮಾತ್ರ ಹಸಿವು
ಉಂಡಿದ್ದು ಅನ್ನ
ಹೊಟ್ಟೆ ತುಂಬಿದ ಮೇಲೆ
ಮತ್ತೆ ಕೆಸರೆರಚಾಟ
ಹೊಟ್ಟೆ ತುಂಬಿಸಿದವನು ಮಾತ್ರ
ಇನ್ನೂ ಕೆಸರಲ್ಲೇ ಇದ್ದ
ತನ್ನ ಎಡಬಲ ಸುತ್ತಮುತ್ತ
ಹಸಿರಾಗಿಸಲು!
'ಹನಿ ಹನಿ ಇಬ್ಬನಿ'ಯಲ್ಲಿ ಶಬ್ದದ ಅಬ್ಬರವಿಲ್ಲ. ಹನಿಗವನಗಳು ಕೇವಲ ಶಬ್ದ ಚಮತ್ಕಾರವಲ್ಲ ಎಂಬ ಅರಿವು ಲೀಲಾಕುಮಾರಿ ತೊಡಿಕಾನ ಅವರಿಗಿರುವುದು ಸಂತೋಷದ ಸಂಗತಿ. (ಆದರೆ ಭಾಷೆ ಮತ್ತು ಭಾವಗಳನ್ನು ಇನ್ನಷ್ಟೂ ಘನೀಕರಿಸಿ ಹೇಳಿದರೆ ಹೆಚ್ಚು ಅರ್ಥ ಮತ್ತು ಧ್ವನಿಯನ್ನು ಪಡೆದುಕೊಳ್ಳುತ್ತವೆ). ಕೃತಿಯ ಮುನ್ನುಡಿ ಬರೆದ ಅವರ ಅವರ ಗುರುಗಳಾದ ಎಂ ಶಿವಣ್ಣ ನೆಲಮನೆ ಅವರು ಈ ಕೃತಿ ಬಿಡುಗಡೆಯಾಗುವ ಹೊತ್ತಿನಲ್ಲಿ ಬದುಕುಳಿದಿರಲಿಲ್ಲ ಎನ್ನುವುದು ದುಃಖದ ಸಂಗತಿ.
*
ಕಾಜೂರು ಸತೀಶ್