ಜಗತ್ತು ಬಂದು ತಲುಪಿರುವ ಹತಾಶ ಹಂತವನ್ನು "ಕಣ್ಣಲ್ಲಿಳಿದ ಮಳೆಹನಿ"ಯ ಒಂದೊಂದು ಕವಿತೆಗಳೂ ಹೀಗೇ ಎದೆಗೆ ತಾಕಿಸುತ್ತವೆ. ಮನುಷ್ಯ-ಪ್ರಾಣಿ-ಪಕ್ಷಿ-ಗಿಡ-ಮರಗಳೆಲ್ಲವೂ ಕೊಲ್ಲಲ್ಪಟ್ಟವು. ಇದೀಗ ಎದೆ ದನಿಗಳ ಕವಿತೆಗಳೂ ಕೊಲೆಯಾಗುತ್ತಿರುವುದರ ನೋವು, ಸಂಕಟ, ಮನುಷ್ಯತ್ವ ಸತ್ತುಹೋದ ಹೊತ್ತಿನ ಸಂದಿಗ್ಧತೆಯನ್ನು ಕವಿ ತಣ್ಣಗೆ ಹೇಳುತ್ತಾರೆ. ಈ ನೆಲದೊಂದಿಗೆ, ಈ ಪರಿಸರದೊಂದಿಗೆ ಕವಿಯ ಅದಮ್ಯ ಒಡನಾಟವನ್ನು ಸಂಕಲನದಲ್ಲಿನ ಅನೇಕ ಕವಿತೆಗಳು ಉಸಿರಾಡುತ್ತವೆ. ಈ ಒಡನಾಟದಿಂದಲೇ ಪ್ರಕೃತಿಯ ಮೇಲಾಗುತ್ತಿರುವ ಅತ್ಯಾಚಾರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. 'ಎಲ್ಲಿ?' 'ಮರ ಯಾರದು?' 'ಕಾಡುಗವಿತೆ, 'ಕಾಡುಗಳಿದ್ದವು ಕವಿತೆಗಳಲ್ಲಿ' 'ನಡುರಾತ್ರಿ ನಾಯಿ ಬೊಗಳುತ್ತಿದೆ' ಯ ಸಾಲುಗಳು, ಕಣ್ಮರೆಯಾಗುತ್ತಿರುವ ಗಿಡ ಮರಗಳ ಹಸಿರು, ಅದನ್ನೇ ನಂಬಿಕೊಂಡಿರುವ ಅಸಂಖ್ಯಾತ ಜೀವಜಂತುಗಳು ಅನುಭವಿಸುತ್ತಿರುವ ಪಾಡನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಎಂದು ಹೇಳುವಾಗ ಕವಿ ಅನುಭವಿಸುತ್ತಿರುವ ತಲ್ಲಣ ತಿಳಿಯುತ್ತದೆ! ಕೊನೆಗೆ,
"ಯಾರು ಕೊಲ್ಲುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ ಯಾರು ಬದುಕುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ" ಎಂದು ಕೇಳುತ್ತಾ, ಕವಿತೆಗಳು ಉಳಿಯಬೇಕಾದ ತುರ್ತನ್ನು ಕಾಳಜಿ ಮಾಡುತ್ತಾರೆ.
ನೆಮ್ಮದಿಯ ಹುಡುಕಾಟಕ್ಕೆ ತೊಡಗುವ ಕವಿಯ ಎದೆಯಲ್ಲಿ ನೋವುಗಳೇ ನೇತಾಡುತ್ತಿವೆ. ಧಾರಾಳಿಯಾಗಿರುವ ಪ್ರಕೃತಿಯ ಮೇಲೆಯೇ ದಬ್ಬಾಳಿಕೆ ಮಾಡಿ, ಆಕ್ರಮಿಸಿಕೊಂಡು, ನನ್ನದೆನ್ನುವವರ ಕಡೆಗೆ ಕನಿಕರದ ನೋಟ ಬೀರುವ ಕವಿಯೊಬ್ಬ ನಿಜಮನುಷ್ಯ... ಯಾಂತ್ರಿಕತೆಗೆ ಒಡ್ಡಿಕೊಂಡಿರುವ ಈ ಸೃಷ್ಟಿಗೆ ಮರುಚೈತನ್ಯ ಬರುವುದಾದರೆ ಮರಕುಟುಕನನ್ನು ಕರೆದು, ಕುಕ್ಕಿ, ಕುಟುಕಿ ಹೊಸದಾರಿ ಮಾಡಲು ತನ್ನೆದೆಯನ್ನೇ ಒತ್ತೆಯಿಡ ಬಯಸುವ ಕವಿಯದು ಅದೆಂಥ ಜೀವಪ್ರೀತಿ! ಕೃತ್ರಿಮತೆಗೆ ನರಳಿದ ಹೃದಯ! "ಛೇ! ಎಷ್ಟೊಂದು ಹಕ್ಕಿಗಳಿವೆ ಇಲ್ಲಿ, ಒಂದಾದರೂ ಬರಬಾರದೇ?" ಹಕ್ಕಿಗಳೂ ಯಾಂತ್ರಿಕತೆಗೆ ಒಗ್ಗಿಕೊಂಡವೇ ಎಂಬ ದಿಗಿಲನ್ನೂ ಈ ಸಾಲು ಧ್ವನಿಸುತ್ತದೆ.
ಕವಿಗೆ ಯಾವುದೂ ಅಮುಖ್ಯವಲ್ಲ. ಎಲೆಯೊಂದು- ಪತಿಯ ಬೆರಳು ಬಿಡಿಸಿಕೊಂಡ ಹೆಣ್ಣಾಗಿ, ತವರ ಮಣ್ಣಾಗಿ, ಬೆಳಕಾಗಿ, ಹಕ್ಕಿಯೊಡನೆ ಏಕವಾಗಿ, ಉಸಿರು ಬೆರೆವ ಗೆರೆಯಿರದ ದಾರಿಯಾಗಿ; ಗಾಳಿ- ಸಮುದ್ರವಾಗಿ, 'ಉಳಿದ ನಮ್ಮ ನಾಳೆಗಳ' ಲೆಕ್ಕವಿಡುವ ಜ್ಞಾನಿಯಾಗಿ; ಅವ್ವನ ರೊಟ್ಟಿ- ಕವಿತೆಯಾಗಿ, ಯುದ್ಧವಿಲ್ಲದ ಭೂಪಟವಾಗಿ, ಮರುಭೂಮಿಯಾಗಿ ರೂಪಾಂತರಗೊಳ್ಳುವ ಬಗೆಯನ್ನು ಎಲೆ, ಗಾಳಿ, ಏಕ, ರೊಟ್ಟಿ ಕವಿತೆಗಳು ಬಿಚ್ಚಿಡುವ ರೀತಿಯೇ ವಿಸ್ಮಯ!
ಗುಡಿಸಲಿಗೆ ಆತುಕೊಂಡೇ ಅದರ ಭೀಕರತೆಯನ್ನು ಅನುಭವಿಸಿಕೊಂಡು ನೆನಪುಗಳನ್ನು ಒಳಗಿಳಿಸಿಕೊಂಡು ಸಹಜತೆಗಾಗಿ ಧ್ಯಾನಿಸುವ ಕವಿ,
"ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ
ಬೆಳಕಿನ ಕುರಿತೂ ಮಾತಾಡುವುದಿಲ್ಲ" ಎನ್ನುತ್ತಾರೆ.
ಸಾವು, ಮಹೋನ್ನತ ಆನಂದವನ್ನು ಅನುಭವಿಸಲು ಇರುವ ಭೂಮಿಕೆ ಎಂದು ತಿಳಿಯುತ್ತಾ, ಗಾಳಿಯಲ್ಲಿ ಅತ್ತಿಂದಿತ್ತ ತೂರಾಡಿ ಸುಖಿಸುವ ಎಲೆಯ ಆನಂದವೇ ಸಾವಿನಿಂದಲೂ ಸಿಗಬೇಕೆಂದು ಬಯಸುತ್ತಾರೆ.
"ಚಟ್ಟಕ್ಕೆ ಮೋಟುಬೀಡಿಯ ಕಿಡಿ ತಾಗಿ
ಚಟಪಟ ಉರಿದು ಹೋಗುವುದಾದರೆ
ಎಷ್ಟು ಚಂದ ಎಷ್ಟು ಚಂದ" ಎಂದು ಸಾವಿನ ದಿನದ ಒಣ ಆಚರಣೆಗಳನ್ನು ಧಿಕ್ಕರಿಸುತ್ತಾರೆ.
ಕಾವ್ಯಮೀಮಾಂಸೆ, ಹೊಟೇಲು, ಕ್ಷಮಿಸು, ಜಲವರ್ಣ ಮುಂತಾದ ಕವಿತೆಗಳೂ,
"ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ಟಿವಿಗೂ ಸಿಗಲಿಲ್ಲ" ಎಂಬ ಸಾಲುಗಳು
ಸಿದ್ಧಾಂತಗಳಾಚೆಗೂ ಉಸಿರಾಡಬೇಕಾದ ಮಾನವತೆಯನ್ನು ಪ್ರತಿನಿಧಿಸುತ್ತವೆ.
ಅಪ್ಪನ ವಿಸ್ತಾರತೆಯನ್ನೂ, ಅವ್ವನ ಸೀರೆಯ ಅಗಾಧತೆಯನೂ, ಎದೆಯ ದನಿಯನ್ನು, ಪ್ರೇಮದ ಸರಳತೆಯನ್ನು ಧೇನಿಸುವ ಇವರ ಕವಿತೆಗಳಲ್ಲಿ ಅಪರೂಪದ ರೂಪಕಗಳಿವೆ, ಪ್ರತಿಮೆಗಳಿವೆ, ಪ್ರಾಮಾಣಿಕ ಅಭಿವ್ಯಕ್ತಿಯಿದೆ. ನಿಜ! ಇವರ ಕವಿತೆಗಳಲ್ಲಿ ತೀವ್ರವಾದ ಭಾವೋದ್ವೇಗಗಳಿಲ್ಲ, ಜಿದ್ದಿಗೆ ಬೀಳುವ ಬಿರುಸುಗಳಿಲ್ಲ... ಕಡು ತಣ್ಣಗಿನ ನೀರಿನ ಇರಿತವಿದೆ! ಬದುಕಿನ ಸಂದೇಶವನ್ನು ದಾಟಿಸುವ ನೋಟವಿದೆ. ನಮ್ಮ ಬಾಧ್ಯತೆಗಳನ್ನು ನೆನಪಿಸಿ, ಎಚ್ಚರಿಸುವ ಬದ್ಧತೆಯಿದೆ...
ಪ್ರೀತಿಯ ಕಾಜೂರು ಸತೀಶ್ ಸರ್... ನಿಮ್ಮ ಮತ್ತಷ್ಟು ಪ್ರಾಮಾಣಿಕ ಮಾತುಗಳಿಗಾಗಿ ಕಾಯುತ್ತಾ...
-ರಮ್ಯ ಕೆ ಜಿ, ಮೂರ್ನಾಡು.