ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 2, 2022

'ಯಾವುದೂ ಏನೂ ಅಲ್ಲದ ಪ್ರೀತಿ, ಆನಂದ ಮತ್ತು ಬೆಳಕು!'



ಜ ನಾ ತೇಜಶ್ರೀ ಅವರ ಮಾಗಿಕಾಲದ ಸಾಲುಗಳು ಸಂಕಲವನ್ನು ಓದಿದೆ. ಕವಿತೆಯನ್ನೂ ಮಗುವನ್ನೂ ಉದರದಲ್ಲಿಟ್ಟುಕೊಂಡು ಒಟ್ಟೊಟ್ಟಿಗೆ ಜನ್ಮನೀಡಲು ಹಪಿಹಪಿಸುವ ತಾಯೊಬ್ಬಳ ಕವಿತೆಗಳಂತಿವೆ ಇವು.

ನೀನು ನನ್ನನ್ನು ನಿನ್ನ ಹೊರಗೆ ಸೃಷ್ಟಿಸುತ್ತೀಯ
ನಾನು ನನ್ನ ಒಳಗೆ ನಿನ್ನನ್ನು

(ನಿತ್ಯ)

ಕಾಯದ ಬಿಡುಗಡೆಗಾಗಿ ಹಂಬಲಿಸುವ ಬಗೆ ಒಂದೆಡೆಯಾದರೆ ಇರುವ ಕಾಯದ ಪೊರೆಹರಿದುಕೊಂಡು ಹೊಸಮೈಯ್ಯನ್ನು ಪಡೆಯುವ/ಧರಿಸುವುದಕ್ಕಾಗಿನ ಧ್ಯಾನ ಮತ್ತೊಂದೆಡೆ.ಇಲ್ಲಿನ ಬಿಡುಗಡೆಯ ಹಂಬಲಕ್ಕೆ ಅಲ್ಲಲ್ಲಿ ಸಾವಿನ ಪರಿಮಳವಿದೆ.

ಜಗದ ಬಂಧನಗಳಾಚೆಗೆ
ಕನಸಲ್ಲಿ ಕಂಡ ಪಂಜರದ ಗಿಳಿ
ಬಟ್ಟಬಯಲಿಗಿಳಿದು ನವಿಲಾಗಬೇಕಿದೆ
ನವಿಲ ತೊಡೆಯಿಂದ ಗಿಳಿ
ಮತ್ತೆ ಹುಟ್ಟಬೇಕಿದೆ
ದಡದ ಹಂಗು ಆಗಲೇ ಕಳಚಾಗಿದೆ

(ಗುಟುಕು)

ನಿನ್ನ ಪವಿತ್ರ ಕೈಗಳೊಳಗೆ ಆಡಲು
ಈ ದೇಹ ಮುಕ್ತವಾಗಬೇಕು

(ದೇಹ)

ಇವು 'ನಾನು ನೀನು ಆನು ತಾನು'ಗಳ ಮಾದರಿಯದ್ದು.

'ನಾನು' ಕರಗದೆ
ನೀನು ಕವಿತೆಯಾಗುವುದು
ಹೇಗೆ ಹೇಳು?

(ನೀನು ಹೇಳು)

ನಾನು ನಿನಗೆ ಸಂಬಂಧಿಸಿಕೊಳ್ಳುವುದು
ಹೀಗೆ ಈ ಕವಿತೆಯ ಹಾಗೆ

(ಕವಿತೆಯ ಹಾಗೆ)

ಮಂಡಿಯೂರಿ ನನ್ನ ಹಣೆಯ ನಿನ್ನಡಿಗಳಿಗೆ ಒತ್ತುತ್ತೇನೆ
ಕವಿತೆ ಜನ್ಮ ತಾಳುತ್ತದೆ
ಪದಗಳ ನಡುವಿನ ಖಾಲಿಯಲ್ಲಿ
ಜೀವಮಿಡಿತದ ಸದ್ದು

(ಹಿಡಿ)



'ನೀನು' ಇಹ-ಪರಗಳಿಗೂ ಸಲ್ಲುವ ಅಥವಾ ಅವೆರಡೂ ಆಗಬಲ್ಲ ಸಾವಿನ ಸ್ವರೂಪದ್ದು. ಈ ನೀನು ಕೆಲವೊಮ್ಮೆ ಮಗುವಾಗಿ, ಇನಿಯನಾಗಿ ಬೆಳಕಾಗಿ ನಿರಾಕಾರವಾಗಿಯೂ ಕಾಣುತ್ತದೆ.

ನಿನ್ನ ದೇಹವ ಹಿಡಿಯಲೆತ್ನಿಸುತ್ತೇನೆ
ನೀನು ಮನಸ್ಸಾಗಿಬಿಡುತ್ತೀಯ
ಆ ಮನಸ್ಸಿಗೆ ಆಕಾರ ಕೊಡಲು ಕೂರುತ್ತೇನೆ
ಗಂಡು ನೀನು ಹೆಣ್ಣಾಗುತ್ತೀಯ
ಹೆಣ್ಣ ಬಿಡಿಸತೊಡಗುತ್ತೇನೆ
ಪಕ್ಷಿಯೊಂದು ರೆಕ್ಕೆ ಪಟಪಟಿಸುತ್ತದೆ
ಅದರೊಂದಿಗೆ ಹಾರುತ್ತೇನೆ
ಹೂವ ಸುಗಂಧ ಬಾಚಿ ತಬ್ಬುತ್ತದೆ...

ಮಾಗಿಕಾಲದ ನಿಸರ್ಗವು ವರ್ಣನೆಯಾಗಿ ಕಾಣುವುದಿಲ್ಲ ; ಕೊರತೆಯಾಗಿಯೂ ಕಾಣುವುದಿಲ್ಲ. ಜೀವದ, ಆತ್ಮ ಪರಮಾತ್ಮಗಳ (ನೀನು-ಅವನು)ಬೆರಗುಗಳನ್ನು ಶೋಧಿಸುವ ಕ್ರಮವದು. ಪಂಚಭೂತಗಳನ್ನಾವರಿಸುವ ಅನಾವರಿಸುವ ಬಗೆಯದು. ಅದ್ವೈತವೂ ಹೌದು .

ಬೆಳಕಲ್ಲಿ ನಾನು ಮತ್ತು ಅವನು
ಬೇರೆಬೇರೆಯಲ್ಲ

(ಮಹಾ ಆರತಿ)

ಹುಟ್ಟಿಲ್ಲದ ಮಗು ನಾನು
ತೇಲುತ್ತಿದ್ದೇನೆ ನಿನ್ನ ಅನಂತ ಅಲೆಗಳ ಮೇಲೆ ಕೆಳಗೆ ಒಳಗೆ

(ಹುಟ್ಟಿಲ್ಲ)

ಒಳಗೆ ಮುಲುಕುವ ಜೀವ
ಯಾರದ್ದೆಂದು ಹೇಳಬೇಕಿಲ್ಲ

(ಹೆಸರು)
*
ದೀರ್ಘ ಮೌನದಲ್ಲಿ ತುಂಬಿಕೊಳ್ಳಬಹುದಾದ ಕವಿತೆಗಳಿವು. ಈ ಕವಿತೆಗಳಲ್ಲಿ ಸಾವಿನ ನೆರಳಿದೆ, ಹುಟ್ಟಿನ ಪುಳಕವಿದೆ,ಬೆಳಕಿನ ಸೆಳಕಿದೆ, ಬೆರಗಿನ ಬೀಜವಿದೆ, ಅಧ್ಯಾತ್ಮದ ಗಂಧವಿದೆ.
*


ಕಾಜೂರು ಸತೀಶ್ 

No comments:

Post a Comment