ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, January 29, 2022

'ಕಣ್ಣಲ್ಲಿಳಿದ ಮಳೆಹನಿ' ಕುರಿತು ಮಣಜೂರುಶಿವಕುಮಾರ್

ಪ್ರೀತಿಯ ಸತೀಶ್ ಕಾಜೂರು ಸರ್ ರವರಿಗೆ,

ನಿಮ್ಮ ಹೊಸ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಪುಸ್ತಕ ಓದಿದೆ. ನನಗನ್ನಿಸಿದ ನಾಲ್ಕು ಸಾಲುಗಳು.

ಒಕ್ಕುಂದ ಸರ್ ಬರೆದಿರುವ ಹಾಗೆ ನಿಮ್ಮ ಸಾಲುಗಳಲ್ಲಿ ಭಾವವೇಶವಿಲ್ಲ, ಆದರೆ ಅನುಕ್ರೋಶವಿದೆ. ವ್ಯಕ್ತವಾಗಿರುವ ಪ್ರಕೃತಿ ಮೇಲಿನ ಪ್ರೀತಿ, ವಿಕೃತಿ ಮೇಲಿನ ಸಿಟ್ಟು ಎರಡು ಸೊಗಸು. ಪರಿಸರದ ಮತ್ತು ಕಂಡ ಅತಿ ಸೂಕ್ಷ್ಮ ಸಂಗತಿಗಳ ದೊಡ್ಡ ಆಲೋಚನಾ ಅಭಿವ್ಯಕ್ತಿ. ಸೂಕ್ಷ್ಮ ಸಂವೇದನೆಗಳು ಮೊದಲ ಪುಟದಿಂದ ಕೊನೆಯ ಪುಟದ ತನಕವೂ ಅನುಸಂಧಾನವಾಗಿವೆ.

ನಿಮ್ಮ ಕವಿತೆಗಳ ಹೊಸ ಆಲೋಚನೆ ಒಂದು ಕಾವ್ಯಸೃಷ್ಟಿಯ ಹೊಸ ಸಾಧ್ಯತೆ. ಅದ್ಭುತ ಕವಿತೆಗಳ ಹೂರಣ. ಆಗಾಗ ಮತ್ತೆ ಮತ್ತೆ ಪುಟಗಳನ್ನು ತೆರೆದು ನಾನೊಬ್ಬನೇ, ನನ್ನವರ ಮುಂದೆ ಓದಲು ಹಾತೊರೆಯುವಂತೆ ಮಾಡುವ ಶಕ್ತಿ ನಿಮ್ಮ ಕವಿತೆಗಳಿಗಿದೆ.

ಹೊಸತು ಆಲೋಚಿಸುವ, ಹೊಸತು ಸೃಷ್ಟಿಸುವ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ನಿಮ್ಮ ಗುಣ ನಿರಂತರವಾಗಿರಲಿ.
ಶುಭಾಶಯಗಳು
*


ಶಿವಕುಮಾರ್ ಮಣಜೂರು

Monday, January 10, 2022

ಅಳು

ಪ್ರೀತಿಯ ಗೆಳೆಯ ತೀರಿಕೊಂಡಿದ್ದ .ಹಾಗಾಗಿ ರಜೆ ಹಾಕಿದ್ದ.

Online ಸಭೆಯಲ್ಲಿ ಭಾಗವಹಿಸಬೇಕಿತ್ತು. ಹೇಗೆ ಭಾಗವಹಿಸುವುದು? ಅಲ್ಲಿದ್ದುಕೊಂಡೇ Join ಆಗಿ ಮೊಬೈಲನ್ನು ಜೇಬಿನಲ್ಲಿಟ್ಟುಕೊಂಡ. ಮ್ಯೂಟ್ ಮಾಡಲು ಮರೆತ.

ಸಭೆಯ ಆಯೋಜಕರಿಗೆ ಮ್ಯೂಟ್ ಮಾಡಲು ತಿಳಿದಿರಲಿಲ್ಲ.
'ಮ್ಯೂಟ್ ಮಾಡ್ರೀ.. 'ಎಂದು ಹತ್ತಾರು ಬಾರಿ ಕೂಗಿದ್ದು ಯಾರಿಗೂ ಕೇಳಿಸಲಿಲ್ಲ!

ಸಭೆಯಲ್ಲಿದ್ದ ಕೆಲವರು ಅತ್ತರು!
*

ಕಾಜೂರು ಸತೀಶ್

Thursday, January 6, 2022

ಗಾಯದ ಹೂವುಗಳ ನೋಯದ ನಗು- ಚಾಂದ್ ಕವಿಚಂದ್ರ



ಕವಿತೆ, ಹೇಳುತ್ತಲೇ ಕೇಳಿಸಿಕೊಳ್ಳುವ ಗುಣವಿರುವುದು ಕೆಲವು ಪರಿಪೂರ್ಣತೆಯ ಮತ್ತು ಪರಿಪಕ್ವತೆಯ ಕವಿತ್ವಕ್ಕೆ ಮಾತ್ರ ಅನ್ನಿಸುತ್ತದೆ. ಕಾಜೂರು ಸತೀಶ್ ಅವರ ಗಾಯದ ಹೂವುಗಳಲ್ಲಿಯೂ ಅಂಥದೇ ಗುಣವಿದೆ. ಮನುಷ್ಯನೊಂದಿಗೆ ವಾದಕ್ಕಿಳಿಯಬಹುದಾದ ನೂರಾರು ಭಾವಗಳು ಇಲ್ಲಿನ ಕವಿತೆಗಳ ಕೇಂದ್ರವಸ್ತು. ಹಾಸಿಗೆಯಿಂದ ಎದ್ದಾಗಲೂ ಇನ್ನೂ ಉಳಿದಿರುವ ತೀರಾ ಖಾಸಗಿ ಕನಸಿನಂತೆ ಕಾಡುವ ಕವಿತೆಗಳು ಕಾಣಸಿಗುತ್ತವೆ. ಕೆಲವು ಹಗಲುಗನಸಂತೆ ಕಣ್ಣು ಮಿಟುಕಿಸಿದರೆ ಮತ್ತೆ ಕೆಲವು ಮತ್ತೇರಿಸುವಂಥವು. ನೊಂದವರ ಎದುರಿಟ್ಟ ಕನ್ನಡಿಯಂತೆ ಕಾಣುತ್ತವೆ ಮತ್ತು ಕಾಡುತ್ತವೆ. ಲೋಕ ಮೀಮಾಂಸೆಯನ್ನು ನವಿರಾಗೆ ವ್ಯಂಗ್ಯ ಮಾಡಬಲ್ಲ ಕವಿಗೆ ಹೊಸದೇನೋ ಬೇಕು ಅನ್ನಿಸುವುದು ಸುಳ್ಳಲ್ಲ, ಇದು ಅವರ ಕಾವ್ಯಮೀಮಾಂಸೆಗೂ ಅನ್ವಯವಾಗಬಹುದು. ಸಿದ್ದ ಮಾದರಿಯ ಕಾವ್ಯ ನಿರೂಪಣಾ ತಂತ್ರವನ್ನು ಮುರಿಯುವ ಮತ್ತು ಮುರಿಯುತ್ತಲೇ ಹೊಸದಾಗಿ ಕಟ್ಟುವ ಗಾರೆತನ ಸತೀಶ್ ಅವರ ಸೃಜನಶೀಲತೆಗೆ ಇದೆ ಎನ್ನಬಹುದು!

ಗಾಯದ ಹೂವುಗಳ ಕವಿತೆಗಳಲ್ಲಿ ಹೊಸ ರೂಪಕಗಳ ಘಮಲಿದೆ ಮತ್ತು ಹಳೆ ಪ್ರತಿಮೆಗಳ ಬೇರಿದೆ. ಹೂವಿನ ಸುತ್ತ ಕೆಲವು ಸಲ ಮಾತ್ರ ಕ್ಲೀಷೆ ಎನ್ನುವಂಥ ಮುಳ್ಳೂ ಇವೆ, ಆದರೆ, ಓದಗರನ್ನು ಸದಾ ಸೆಳೆಸುವ ದುಂಬಿಯಂತ ಹೊಸತನವೂ ಇದೆ.


   ಚಾಂದ್ ಕವಿಚಂದ್ರ

Wednesday, January 5, 2022

ಸಾವು



ಅವನ ಅಪ್ಪ ತೀರಿಕೊಂಡಿದ್ದರು. Whatsappನಲ್ಲಿ ರಜೆ ಅರ್ಜಿ ಕಳುಹಿಸಿ ಮನೆಯಲ್ಲೇ ಉಳಿದುಕೊಂಡಿದ್ದ.

ಕಚೇರಿಯಿಂದ ನೂರಾರು ಕರೆಗಳು ಬರಲಾರಂಭಿಸಿದವು. ಸ್ವೀಕರಿಸಲು ಸಾಧ್ಯವಾಗಲಿಲ್ಲ.

call me, call me, call me.. ಸಂದೇಶಗಳ ಸುರಿಮಳೆ. Whatsapp ತೆರೆದು ನೋಡಿದರೆ RIP RIP..

ಶವಸಂಸ್ಕಾರದ ನಂತರ ಕರೆಮಾಡಿ 'ಹಲೋ ಸರ್..' ಎಂದ.

'ಎಷ್ಟು ಸಲ ಕಾಲ್ ಮಾಡ್ಬೇಕು ರಿಸೀವ್ ಮಾಡ್ಲಿಕ್ಕೆ ಏನು? ವಿಷಯ ಗೊತ್ತಪ್ಪಾ.. ನಮಗೂ ಬೇಸರ ಇದೆ.. ಆದ್ರೆ ನೀನೇ ಬರ್ಲಿಲ್ಲ ಅಂದ್ರೆ ಇಲ್ಲಿ ಕೆಲ್ಸ ಮಾಡೋರ್ಯಾರು? ಅರ್ಥ ಮಾಡ್ಕೋ. ಇಲ್ಲಿ ಇರೋರಿಗೆ ಕೆಲ್ಸ ಗೊತ್ತಿಲ್ಲ ನಾನೇನ್ಮಾಡ್ಲಿ. ಕೆಲವರು ಟೂರ್ ಹೋಗಿದ್ದಾರೆ.
ಬಾ ಬಾ.. ಒಂದು ಹತ್ತು ನಿಮಿಷ ಬಂದು ಹೋಗು'.


*

ಅವನು ತೀರಿಕೊಂಡ.

ಇವನನ್ನು ಕರೆದು, 'ಬಿಡು, ಮೀಟಿಂಗಲ್ಲಿ ಹೇಳ್ಕೋಬಹುದು. ಫೈಲ್ ಎಲ್ಲಾ ಅವ್ನ ಹತ್ರಾನೇ ಇದೆ ಸಾರ್ ಅಂತ ಹೇಳ್ಬಹುದು. ನಾಳೆಗೆ ನೀನು ಎಲ್ಲಾ ರೆಡಿ ಮಾಡ್ಬೇಕು. ಇನ್ನು ನಿನ್ನೇ ಕೇಳ್ತೇನೆ'.

*

ಇವನು ತೀರಿಕೊಂಡ!

*

ಕಾಜೂರು ಸತೀಶ್ 


Sunday, January 2, 2022

'ಯಾವುದೂ ಏನೂ ಅಲ್ಲದ ಪ್ರೀತಿ, ಆನಂದ ಮತ್ತು ಬೆಳಕು!'



ಜ ನಾ ತೇಜಶ್ರೀ ಅವರ ಮಾಗಿಕಾಲದ ಸಾಲುಗಳು ಸಂಕಲವನ್ನು ಓದಿದೆ. ಕವಿತೆಯನ್ನೂ ಮಗುವನ್ನೂ ಉದರದಲ್ಲಿಟ್ಟುಕೊಂಡು ಒಟ್ಟೊಟ್ಟಿಗೆ ಜನ್ಮನೀಡಲು ಹಪಿಹಪಿಸುವ ತಾಯೊಬ್ಬಳ ಕವಿತೆಗಳಂತಿವೆ ಇವು.

ನೀನು ನನ್ನನ್ನು ನಿನ್ನ ಹೊರಗೆ ಸೃಷ್ಟಿಸುತ್ತೀಯ
ನಾನು ನನ್ನ ಒಳಗೆ ನಿನ್ನನ್ನು

(ನಿತ್ಯ)

ಕಾಯದ ಬಿಡುಗಡೆಗಾಗಿ ಹಂಬಲಿಸುವ ಬಗೆ ಒಂದೆಡೆಯಾದರೆ ಇರುವ ಕಾಯದ ಪೊರೆಹರಿದುಕೊಂಡು ಹೊಸಮೈಯ್ಯನ್ನು ಪಡೆಯುವ/ಧರಿಸುವುದಕ್ಕಾಗಿನ ಧ್ಯಾನ ಮತ್ತೊಂದೆಡೆ.ಇಲ್ಲಿನ ಬಿಡುಗಡೆಯ ಹಂಬಲಕ್ಕೆ ಅಲ್ಲಲ್ಲಿ ಸಾವಿನ ಪರಿಮಳವಿದೆ.

ಜಗದ ಬಂಧನಗಳಾಚೆಗೆ
ಕನಸಲ್ಲಿ ಕಂಡ ಪಂಜರದ ಗಿಳಿ
ಬಟ್ಟಬಯಲಿಗಿಳಿದು ನವಿಲಾಗಬೇಕಿದೆ
ನವಿಲ ತೊಡೆಯಿಂದ ಗಿಳಿ
ಮತ್ತೆ ಹುಟ್ಟಬೇಕಿದೆ
ದಡದ ಹಂಗು ಆಗಲೇ ಕಳಚಾಗಿದೆ

(ಗುಟುಕು)

ನಿನ್ನ ಪವಿತ್ರ ಕೈಗಳೊಳಗೆ ಆಡಲು
ಈ ದೇಹ ಮುಕ್ತವಾಗಬೇಕು

(ದೇಹ)

ಇವು 'ನಾನು ನೀನು ಆನು ತಾನು'ಗಳ ಮಾದರಿಯದ್ದು.

'ನಾನು' ಕರಗದೆ
ನೀನು ಕವಿತೆಯಾಗುವುದು
ಹೇಗೆ ಹೇಳು?

(ನೀನು ಹೇಳು)

ನಾನು ನಿನಗೆ ಸಂಬಂಧಿಸಿಕೊಳ್ಳುವುದು
ಹೀಗೆ ಈ ಕವಿತೆಯ ಹಾಗೆ

(ಕವಿತೆಯ ಹಾಗೆ)

ಮಂಡಿಯೂರಿ ನನ್ನ ಹಣೆಯ ನಿನ್ನಡಿಗಳಿಗೆ ಒತ್ತುತ್ತೇನೆ
ಕವಿತೆ ಜನ್ಮ ತಾಳುತ್ತದೆ
ಪದಗಳ ನಡುವಿನ ಖಾಲಿಯಲ್ಲಿ
ಜೀವಮಿಡಿತದ ಸದ್ದು

(ಹಿಡಿ)



'ನೀನು' ಇಹ-ಪರಗಳಿಗೂ ಸಲ್ಲುವ ಅಥವಾ ಅವೆರಡೂ ಆಗಬಲ್ಲ ಸಾವಿನ ಸ್ವರೂಪದ್ದು. ಈ ನೀನು ಕೆಲವೊಮ್ಮೆ ಮಗುವಾಗಿ, ಇನಿಯನಾಗಿ ಬೆಳಕಾಗಿ ನಿರಾಕಾರವಾಗಿಯೂ ಕಾಣುತ್ತದೆ.

ನಿನ್ನ ದೇಹವ ಹಿಡಿಯಲೆತ್ನಿಸುತ್ತೇನೆ
ನೀನು ಮನಸ್ಸಾಗಿಬಿಡುತ್ತೀಯ
ಆ ಮನಸ್ಸಿಗೆ ಆಕಾರ ಕೊಡಲು ಕೂರುತ್ತೇನೆ
ಗಂಡು ನೀನು ಹೆಣ್ಣಾಗುತ್ತೀಯ
ಹೆಣ್ಣ ಬಿಡಿಸತೊಡಗುತ್ತೇನೆ
ಪಕ್ಷಿಯೊಂದು ರೆಕ್ಕೆ ಪಟಪಟಿಸುತ್ತದೆ
ಅದರೊಂದಿಗೆ ಹಾರುತ್ತೇನೆ
ಹೂವ ಸುಗಂಧ ಬಾಚಿ ತಬ್ಬುತ್ತದೆ...

ಮಾಗಿಕಾಲದ ನಿಸರ್ಗವು ವರ್ಣನೆಯಾಗಿ ಕಾಣುವುದಿಲ್ಲ ; ಕೊರತೆಯಾಗಿಯೂ ಕಾಣುವುದಿಲ್ಲ. ಜೀವದ, ಆತ್ಮ ಪರಮಾತ್ಮಗಳ (ನೀನು-ಅವನು)ಬೆರಗುಗಳನ್ನು ಶೋಧಿಸುವ ಕ್ರಮವದು. ಪಂಚಭೂತಗಳನ್ನಾವರಿಸುವ ಅನಾವರಿಸುವ ಬಗೆಯದು. ಅದ್ವೈತವೂ ಹೌದು .

ಬೆಳಕಲ್ಲಿ ನಾನು ಮತ್ತು ಅವನು
ಬೇರೆಬೇರೆಯಲ್ಲ

(ಮಹಾ ಆರತಿ)

ಹುಟ್ಟಿಲ್ಲದ ಮಗು ನಾನು
ತೇಲುತ್ತಿದ್ದೇನೆ ನಿನ್ನ ಅನಂತ ಅಲೆಗಳ ಮೇಲೆ ಕೆಳಗೆ ಒಳಗೆ

(ಹುಟ್ಟಿಲ್ಲ)

ಒಳಗೆ ಮುಲುಕುವ ಜೀವ
ಯಾರದ್ದೆಂದು ಹೇಳಬೇಕಿಲ್ಲ

(ಹೆಸರು)
*
ದೀರ್ಘ ಮೌನದಲ್ಲಿ ತುಂಬಿಕೊಳ್ಳಬಹುದಾದ ಕವಿತೆಗಳಿವು. ಈ ಕವಿತೆಗಳಲ್ಲಿ ಸಾವಿನ ನೆರಳಿದೆ, ಹುಟ್ಟಿನ ಪುಳಕವಿದೆ,ಬೆಳಕಿನ ಸೆಳಕಿದೆ, ಬೆರಗಿನ ಬೀಜವಿದೆ, ಅಧ್ಯಾತ್ಮದ ಗಂಧವಿದೆ.
*


ಕಾಜೂರು ಸತೀಶ್ 

ಹಿಕ್ಕೆ

ಆ ದೇಶದಿಂದ ಬಂದ ಹಕ್ಕಿ ಈ ದೇಶಕ್ಕೆ ಬಂದು ಗಣ್ಯ ವ್ಯಕ್ತಿಯ ಪ್ರತಿಮೆಯ ಮೇಲೆ ಕುಳಿತು ಹಿಕ್ಕೆ ಹಾಕಿ ಹಾರಿ ಹೋಯಿತು.

ಗಣ್ಯವ್ಯಕ್ತಿಯ ಜನ್ಮದಿನ ಬರುವಷ್ಟು ದಿನ ಹಿಕ್ಕೆ ಮತ್ತು ಪ್ರತಿಮೆ ಪರಸ್ಪರ ಸ್ನೇಹಿತರಾಗಿದ್ದವು.
*

ಕಾಜೂರು ಸತೀಶ್