ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 26, 2017

ಸಾಹಿತ್ಯ ಸಮ್ಮೇಳನ ಮತ್ತು...

ಮೈಸೂರಿಗೆ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ತಿಂಗಳ ಮುಂಚೆಯೇ ನಿರ್ಧರಿಸಿದ್ದೆ. ಹೋಗಲು ಸಾಧ್ಯವಾಗಲಿಲ್ಲ. ಆ ಕುರಿತ ಕೊರಗೇನೂ ನನ್ನೊಳಗೆ ಅಂಟಿಕೊಂಡಿಲ್ಲ.
*

ಅದು ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ನನ್ನನ್ನು ನಮ್ಮ ಜಿಲ್ಲೆಯಿಂದ ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು.

ಹೊರಡಬೇಕಾದ ದಿನದಂದು ಇಲಾಖೆಯ ತುರ್ತು ಕೆಲಸವೊಂದಿತ್ತು. ಮುಗಿಸಿ, ಹೊರಟು, ರಾಜಧಾನಿಗೆ ತಲುಪಿ, ವಸತಿಗೃಹ ಸೇರುವಷ್ಟರಲ್ಲಿ ರಾತ್ರಿಯೂಟದ ಸಮಯ ಮೀರಿತ್ತು.

ಆ ರಾತ್ರಿಯ ಉಪವಾಸ, ತಲೆತುಂಬಿಕೊಂಡಿದ್ದ ಕವಿತೆ, ದಿಗಿಲು ಹುಟ್ಟಿಸುತ್ತಿದ್ದ ಟ್ರಾಫಿಕ್ಕು, ಅಪರಿಚಿತ ಸ್ಥಳ... ಇವೆಲ್ಲ ಒಟ್ಟಿಗೆ ಸೇರಿ ಸುಖನಿದ್ದೆ ಕಣ್ಣ ತುಂಬಿಕೊಂಡಿತ್ತು.

ಮರುದಿನ ಗೆಳೆಯ ಜಗದೀಶ್ ಜೋಡುಬೀಟಿ ಸಿಕ್ಕರು. ಕವಿಗೋಷ್ಠಿಯ ಸಂದರ್ಭ ಕಿಕ್ಕಿರಿದು ತುಂಬಿದ ಸಭಾಂಗಣ. ಒಂದು ಗಂಭೀರವಾದ ಪದ್ಯವನ್ನು ಓದಿದೆ.

ಅಲ್ಲಿದ್ದ ಮಂದಿಗೆ ಫೊಟೊ ಹುಚ್ಚು ಇರಲಿಲ್ಲ.ಎಂದಿನಂತೆ ಭಾವೋದ್ರೇಕದ, ಏರುಸ್ವರದ ಸಾಲುಗಳಿಗೆ ಹೆಚ್ಚು ಚಪ್ಪಾಳೆ ಬಂದರೂ, ಒಳ್ಳೆಯ ಕೇಳುಗರವರು. ಮುಗಿಯುವವರೆಗೆ ಕುಳಿತು ಕವಿತೆಗಳಲ್ಲಿ ಮಿಂದರು. ಅದರ ಪಟವನ್ನು ಕವಿತೆ ಓದಿದ ನಾವ್ಯಾರೂ ಇಟ್ಟುಕೊಳ್ಳಲಿಲ್ಲ. (ಗೆಳೆಯ ದೂರದಿಂದ ಕ್ಲಿಕ್ಕಿಸಿದ ಮಬ್ಬುಚಿತ್ರವೊಂದು ಸಾಕ್ಷಿಗಿದೆ, ಅಷ್ಟೆ !)

*

ಈಗ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸ್ನೇಹವಲಯದ ಸಮ್ಮಿಲನ ಸಾಧ್ಯವಾದರೂ, ಸಾಹಿತ್ಯ ಪ್ರಜ್ಞೆ ದೂರವಾಗುತ್ತಿದೆ. ಯುವಸಮೂಹ ಫೊಟೊಗಳಿಗಾಗಿ ವಿವಿಧ ಭಂಗಿಗಳಲ್ಲಿ ಪೋಸು ಕೊಡುತ್ತಾ ಸೀಮಿತ ನಿಲುವಿನ ಗುಂಪುಗಳಲ್ಲಿ ಕಳೆದುಹೋಗುತ್ತಿರುವುದು ದಿಗಿಲು ಹುಟ್ಟಿಸುತ್ತಿದೆ.
*

ಕಾಜೂರು ಸತೀಶ್

Saturday, November 25, 2017

ತಟ್ಟೆ ಮತ್ತು ನಾನು

ನವೆಂಬರ್ ೬. ಮೈಸೂರಿನ ಕ್ಯಾಂಟೀನೊಂದರಲ್ಲಿ ಮಧ್ಯಾಹ್ನ ಊಟ ಮಾಡಿಯಾದ ಮೇಲೆ "ತಟ್ಟೆ ಎಲ್ಲಿಡಲಿ?" ಎಂದೆ.
"ಆ ಕಟ್ಟೆ ಮೇಲೆ ಇಡಿ ಸಾ", ಎಂದರು.
"ತೊಳೆದು ತರ್ಬೇಕಾ?" ಕೇಳಿದೆ.
"ಯೇ,ಏ.. ಬೇಡಬೇಡ, ಅಲ್ಲಿಡಿ ಸಾಕು" ಎಂದರು.

ಅದೀಗ ನೆನಪಾಗ್ತಾ ಇದೆ. ನಾನು ತಿಂದ ತಟ್ಟೆಯನ್ನು ಮತ್ತೊಬ್ಬರ ಹತ್ತಿರ ತೊಳೆಸೋದಾ?! ಹಣ ಕೊಡುತ್ತೇನೇನೋ ಹೌದು. ಹಾಗಂತ ಅವ್ರಿಂದ ತೊಳೆಸಿಬಿಡೋದಾ?

ಆದರೆ, ಒಮ್ಮೆಯೂ ನಾನು ಹಾಗೆ ತೊಳೆಯಲಿಲ್ಲ.ಮುಂದೆಯೂ ತೊಳೆಯಲಾರೆನೇನೋ!

ನನ್ನ ಪಾಪಪ್ರಜ್ಞೆಯ ಪಟ್ಟಿ ಬೆಳೆಯುತ್ತಲೇ ಇದೆ!
*

ಕಾಜೂರು ಸತೀಶ್

Saturday, November 18, 2017

ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ

'ಕಕ್ಕಸು' ಪದ ಬಳಸಲು ಜನ ಹಿಂಜರಿದಾಗ
ಪದಕ್ಕೆ ಪದ ಬೆಳೆದು ಬೀದಿಯಲ್ಲದು ಕಟ್ಟಿನಿಂತಾಗ
ಮತ್ತ್ಯಾರೂ ಸಲೀಸಾಗಿ ಒಳಗಿಳಿಯದಿರುವಾಗ
ಕವಿತೆಯೊಂದಿಳಿಯಿತು ಬಳುಕದೆ ಮ್ಯಾನ್ಹೋಲಿನ ಒಳಗೆ

ನುಗ್ಗಿ ಕೈಯಾಡಿಸಲು ಒಳಗೆ
ಎಷ್ಟೆಷ್ಟೋ ಪದಗಳು ಮೈಲಿಗೆಗೊಂಡು
ಸಾಲು-ಸಾಲು ಕಟ್ಟಿನಿಂತಿವೆ, ಕೆಟ್ಟುನಿಂತಿವೆ

ಎಲ್ಲ ಸ್ವಚ್ಛಗೊಂಡು ಹೊರಬರಬೇಕೆನ್ನುವಾಗ
ಮೂಗುಮುಚ್ಚಿದ, ಬೆಚ್ಚಿದ ಕವಿತೆಗಳೆಲ್ಲ ಬಂದು ಮುಚ್ಚಳ ಮುಚ್ಚಿದವು

ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ,ಟಿವಿಗೂ ಸಿಗಲಿಲ್ಲ.
*


ಕಾಜೂರು ಸತೀಶ್

Sunday, November 12, 2017

ಗುಡಿಸಲು

ಗುಡಿಸಲಿನ ಕಣ್ಣು ಚಾಪೆಯ ಮೇಲೆರಗಿ
ಒಂದು ಎರಡು ಮೂರು... ನಕ್ಷತ್ರಗಳೆಣಿಕೆ

ಗುಡಿಸಲಿನ ಕಿವಿ ಮಿಡತೆಗಳ ಒಳಬಿಟ್ಟುಕೊಂಡು
ಚಿರ್ ಚಿರ್ರ್ ಸಂಗೀತ ಕಚೇರಿ

ಗುಡಿಸಲಿನ ಕಾಲು ಸುಯ್ಯೋ ಗಾಳಿಗೆ
ತಕ್ಕ ತಕ ತಕ್ಕ ತಕ

ಗುಡಿಸಲಿನ ಅಂಗೈಗೆ ಸಲಾಕೆಯ ಚುಂಬಿಸಿದ
ಗುಂಡುಗುಂಡು ಕೆಂಪುಕೆಂಪು ನೆನಪು

ಗುಡಿಸಲಿನ ಎದೆಗೆ ಗಿಡಬೆಳೆಸಿದ ಖುಷಿಯಲ್ಲಿ
ನೆರೆಮನೆಯ ಡಿಜೆಯ ಡುಬ್ಬುಡುಬ್ಬು ಡುಬ್ಬುಡುಬ್ಬು

ಗುಡಿಸಲಿನ ಹೊಟ್ಟೆಗೆ ಒಂದು ಮಗು
ಗೇರುಬೀಜದ ಹಾಗೆ ಅಂಟಿಕೊಂಡು
*


ಕಾಜೂರು ಸತೀಶ್

Thursday, November 9, 2017

ಪ್ರತಿಭೆ

ಎಲ್ಲಿ ಫಲವತ್ತಾದ ನೆಲವಿರುತ್ತೋ ಮತ್ತು ಹಚ್ಚಹಸಿರಿನಿಂದ ಸಮೃದ್ಧವಾಗಿರುತ್ತೋ, ಅಲ್ಲಿ ಪ್ರತಿಭಾನ್ವಿತ ಕಲಾಕಾರನೊಬ್ಬ ಹುಟ್ಟಿಬರಲು ಸಾಧ್ಯವಿಲ್ಲ. ಎಲ್ಲಿ ನೆಲ ಬರಡಾಗಿರುತ್ತೋ, ಹಸಿವು, ಬಡತನ, ನೋವಿರುತ್ತೋ, ಅಲ್ಲಿ ಓರ್ವ ಶುದ್ಧ ಪ್ರತಿಭೆಯ ಕಲಾಕಾರ ಹುಟ್ಟಿಕೊಳ್ಳುತ್ತಾನೆ. ಸೌಂದರ್ಯಾನುಭವದಲ್ಲಿ ಜಾಗೃತಗೊಳ್ಳುವ ಪ್ರತಿಭೆಗಿಂತ, ಅವಮಾನವು ಎಬ್ಬಿಸುವ ಪ್ರತಿಭೆಯ ತರಂಗಗಳು ಹೆಚ್ಚು.

ಆದರೆ, ಜಗತ್ತು ಅಂಥವನನ್ನು ತುಳಿಯುತ್ತದೆ!
*

ಕಾಜೂರು ಸತೀಶ್

Tuesday, November 7, 2017

ಹಲ್ಲು ಕೀಳದ ಹಾವು

ಎಷ್ಟೋ ಸಲ ನಾನು ಟೈಪಿಸಿದ ಅಕ್ಷರಗಳನ್ನು ಅಳಿಸುವಾಗ ನಾನೊಬ್ಬ ಹಲ್ಲು ಕೀಳದ ಹಾವಾದರೂ ಆಗಬೇಕಿತ್ತು ಎನಿಸಿದ್ದಿದೆ.
*

ಕಾಜೂರು ಸತೀಶ್

ಹಿಂಸೆ

ಈ ವ್ಯವಸ್ಥೆ ಹೇಗಿದೆ ಅಂದ್ರೆ ಯಾರಾದ್ರೂ ಚೆನ್ನಾಗಿ ದುಡೀತಾರೆ ಅಂತ ಕಂಡುಬಂದ್ರೆ ಸಿಕ್ಕಾಪಟ್ಟೆ ದುಡಿಸಿಕೊಳ್ತಾರೆ; ದುಡಿಸಿಯೇ ಕೊಲ್ತಾರೆ!

ಯಾರ ಮೇಲೆಯೂ ಕೊಲೆಯ ಆರೋಪ ಬರೋದಿಲ್ಲ.

ಸತ್ತ ದಿನ ನಾಲ್ಕು ಹೊನ್ನಶೂಲಕ್ಕೇರಿಸುವ ಮಾತುಗಳು!

ಆಮೇಲೆ ಉಳಿಯುವವ್ರು ಕಳ್ಳರು, ಖದೀಮರು, ಭ್ರಷ್ಟರು, ಸೋಮಾರಿಗಳು... ಇವರೆಲ್ಲಾ ಗಣ್ಯಾತಿ ಗಣ್ಯ ವ್ಯಕ್ತಿಗಳಾಗಿ ಬಾಳ್ತಾರೆ. ಸತ್ತ ಮೇಲೆಯೂ ಬದುಕುವಷ್ಟು ಚಾಣಾಕ್ಷರಾಗಿಬಿಡ್ತಾರೆ!
*

ಕಾಜೂರು ಸತೀಶ್

ಬಯಲ ನುಂಗಿದ ಕಥೆ

ನಾನು ಸಣ್ಣವನಿದ್ದಾಗ ಎಷ್ಟೊಂದು ಬಯಲು(ಬಾಣೆ)ಗಳಿದ್ದವು! ನಾವಲ್ಲಿ ದನ ಕಟ್ಟುತ್ತಿದ್ದೆವು, ಕಬಡ್ಡಿ, ಜೂಟಾಟ, ಬುಗುರಿಯಾಟ ಹೀಗೆ ಏನೇನೆಲ್ಲ ಆಟವಾಡಿಕೊಳ್ಳುತ್ತಿದ್ದೆವು.

ಇವತ್ತು ಅವೇ ಬಯಲುಗಳ ಎದೆಯ ಮೇಲೆ ಸಿರಿವಂತರ ಹೆಸರುಗಳು ಹಾರೆ ಗುದ್ದಲಿಗಳಲ್ಲಿ ಕೆತ್ತಲ್ಪಟ್ಟಿವೆ. ಅಮಾಯಕ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಅಲ್ಲಿ ಸತ್ತ ನಮ್ಮ ಬಾಲ್ಯದ ಕಳೇಬರದ ಸಾರಹೀರಿ ಬೆಳೆಯುತ್ತಿವೆ.

ಮುಂದಿನ ಸರದಿ ನದಿಗಳು, ಅರಣ್ಯಗಳು ಇತ್ಯಾದಿ!
*

ಕಾಜೂರು ಸತೀಶ್