ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, March 29, 2015

ಕತೆಯೆಂಬ ಮುಗಿಲ ಮಾಯೆಯ ಕರುಣೆಯ ಒಳಗೆ..

'ಶುದ್ಧ ಚಿಂತನೆಗೆ ವಾಸ್ತವವನ್ನು ಇಡಿಯಾಗಿ ಗ್ರಹಿಸುವ ಶಕ್ತಿ ಇರುವುದಿಲ್ಲ. 'ಕಥನ ಕಲೆ' ಮಾತ್ರವೇ ವಾಸ್ತವವನ್ನು ಅಖಂಡವಾಗಿ ಹಿಡಿದಿಡಬಲ್ಲದು.'

-ಜಾರ್ಜ್ ಲುಕಾಚ್ಸ್



ಈ ಹೊತ್ತಿನಲ್ಲಿ ಕಾವ್ಯವು ಅಸ್ಪಷ್ಟತೆಯಿಂದ,ಸಂದಿಗ್ಧತೆಗಳಿಂದ ಓದುಗನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವಾಗ,ಸಣ್ಣಕತೆ ಹಾಗೂ ಕಾದಂಬರಿಯ ಪ್ರಕಾರಗಳು ಅಭಿವ್ಯಕ್ತಿಯ ಉತ್ತಮ ಮಾರ್ಗಗಳೆನಿಸುತ್ತಿವೆ.ಕಾವ್ಯವಷ್ಟೇ ಬದುಕಿನ ಎಲ್ಲ ಅನುಭವಗಳಿಗೂ ರೂಪು ಕೊಡಲಾರವು.ಹೇಳಿಕೊಳ್ಳುವ,ದಾಟಿಸುವ,ಕಟ್ಟುವ ,ಮುರಿಯುವ,ಸಂವಾದಿಸುವ..ಎಲ್ಲ ಕ್ರಿಯೆಗಳ ಸಾರ್ಥಕತೆಯು ಸದ್ಯದಲ್ಲಿ ಸಾಧ್ಯವಾಗುತ್ತಿರುವುದು ಇವೆರಡು ಪ್ರಕಾರಗಳಿಂದಲೇ.

*

ಕವಿ,ಕತೆಗಾರ ಪಿ. ಮಂಜುನಾಥ ಅವರು ಕತೆ ಮತ್ತು ಕವಿತೆ- ಎರಡೂ ಮಾರ್ಗಗಳಲ್ಲಿ ನಡೆದು ಯಶಸ್ಸನ್ನು ಗಳಿಸಿಕೊಂಡವರು.ನೆಲದ ಹಿಡಿಮಣ್ಣನ್ನೇ ಎತ್ತಿಕೊಂಡು ಅದರ ಚಹರೆಗಳನ್ನು ಪ್ರಾಮಾಣಿಕವಾಗಿ ಉಲಿಯುವ ಅವರ ಬರೆಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದರೂ,ಇದೀಗ ಕಥಾ ಸಂಕಲನದ ರೂಪದಲ್ಲಿ ಹೊರಬಂದಿರುವುದು ಸಂತಸದ ಸಂಗತಿ .


'ಕಥನಗಾರಿಕೆ'ಯನ್ನಷ್ಟೇ ಮೇಲ್ಮೆಗೆ ತಂದು -ಅದನ್ನು ವೈಚಾರಿಕ ಆಕೃತಿಗಳಿಗೆ ಒಗ್ಗಿಸದೆ- ನಿರ್ಭಾವುಕವಾಗಿ ಹೇಳುವ ವೈಶಿಷ್ಟ್ಯತೆ 'ಮುಗಿಲ ಮಾಯೆಯ ಕರುಣೆ'ಯದ್ದು.ಕೃತಿಯ ಕಥಾನುಭವದಲ್ಲಿ ಕತೆಗಾರನ ತಾತ್ವಿಕ ಹಾವಳಿಯಿಲ್ಲ;ಕಟುವಾಸ್ತವ ಮತ್ತು ಕತೆಗಳ ನಡುವಿನ ಅರ್ಥಪೂರ್ಣವಾದ ಸಂವಾದವಿದೆ.


ಕರುಳ ಕತ್ತರಿಸಿ ಕಿತ್ತು ತಿನ್ನುವ ಹಸಿವು,ಬದುಕಿನ ಬವಣೆಗಳನ್ನು ಅವರು ತಣ್ಣಗೆ ಕಥಿಸುವ ಕ್ರಮವನ್ನು 'ಆಲಿಸಿದರೆ' ಇಂತಹ ದಾರುಣ ಬದುಕಿಗೆ ಒಳಗಿನವರಾಗಿದ್ದುಕೊಂಡೇ ಕಲೆ(ಕತೆ)ಯಾಗಿ ಮಾರ್ಪಡಿಸಿದ ಕುರುಹುಗಳು ಸಿಗುತ್ತವೆ.ಹೀಗೆ ಒಳಗಿನವರಾಗಿರುವುದು ಬೌದ್ಧಿಕವಾಗಿಯಷ್ಟೇ ಅಲ್ಲ,ಮಾನಸಿಕವಾಗಿಯೂ ಕೂಡ.ಬೆಳಗಾವಿ ಸೀಮೆಯ ಉಜ್ವಲ ಭಾಷೆ ,ದೇಸೀತನ ಅದಕ್ಕೊಂದು ಸಾಂದ್ರವಾದ 'ಧ್ವನಿ'ಯನ್ನು ಕರುಣಿಸಿದೆ.


ಬೆರಗು ಹುಟ್ಟಿಸುವ ಇಂತಹ ಸೂಕ್ಷ್ಮ ಕಥನಗಾರಿಕೆಯು ಬಿಕ್ಕಟ್ಟಿನ ಕಾಲದಲ್ಲಿ ,ಭಾವೋದ್ವೇಗದ ಸನ್ನಿವೇಶದಲ್ಲಿ ಮನುಷ್ಯನ ವರ್ತನೆಯಲ್ಲಾಗುವ ಏರುಪೇರುಗಳನ್ನು(psychological factors ) ಮೈಕ್ರೋಸ್ಕೋಪಿಕ್ ಕಣ್ಣುಗಳಲ್ಲಿ ಗ್ರಹಿಸಿ ದಾಖಲಿಸುತ್ತದೆ.


ಇಲ್ಲಿ ನೆನಪಿನಲ್ಲುಳಿಯುವ ಕಥಾಪಾತ್ರಗಳು ಸಾಮಾನ್ಯರಲ್ಲಿ ಸಾಮಾನ್ಯರು;ಶ್ರೇಣೀಕರಣದ ಕೆಳಗಿರುವ,ಬವಣೆಗಳಿಂದ ಬೆಂದುಹೋದವರು.ದಮನಿತರ ಕಾಯುವಿಕೆಯನ್ನೇ ಇಲ್ಲಿ ಕತೆಗಾರರು ಕತೆಯಾಗಿಸಬಲ್ಲರು.ಹಸಿವು ನೀಗಿಸಿಕೊಳ್ಳಲು ನುಡಿದ 'ಒಂದು ಸುಳ್ಳಿನ' ಪರಿಣಾಮಗಳನ್ನೇ ವಿಸ್ತರಿಸುತ್ತಾ ಮನೋಜ್ಞವಾಗಿ ಕತೆಯನ್ನು ಕಟ್ಟಬಲ್ಲರು.ಅವರ ಎಲ್ಲ ಕಥಾನಕಗಳ ಬೇರು ಹಳ್ಳಿಯದ್ದು.ಅಜ್ಞಾನ,ಅವಿವೇಕ,ಮುಗ್ಧತೆ,ಶೋಷಣೆ,ವೃದ್ಧಾಪ್ಯದ ಬವಣೆ,ಜಾಗತೀಕರಣ-ರಾಜಕಾರಣ-ಮೀಡಿಯಾಗಳ ಅವಕಾಶವಾದ,ದೇವದಾಸಿಪದ್ಧತಿ,ಜೀತಪದ್ಧತಿ,ಜಾತಿ ತಾರತಮ್ಯ ,ಮಲಹೊರುವ ಪದ್ಧತಿ ,ಬದಲಾಗುತ್ತಿರುವ ಹಳ್ಳಿಯ ಚಹರೆಗಳು - ಇವೆಲ್ಲ ಕತೆಗಳಿಂದ ಪ್ರತ್ಯೇಕಿಸಲಾರದ ಹಾಗೆ ಬೆಸೆದುಕೊಂಡಿವೆ.


ಅಲ್ಲಲ್ಲಿ ಇಣುಕುವ ಸೂರ್ಯ,ಬೆಳಕು,ಮಳೆ,ಮೋಡ,ಗ್ರಾಮದೇವರು ಮುಂತಾದ 'ಸಂಗತಿ'ಗಳು ಕಥಾಪ್ರಜ್ಞೆಯನ್ನು ಕಾವ್ಯಾತ್ಮಕವಾಗಿ ಭರವಸೆಯ ದಿಕ್ಕಿಗೆ ಹೊರಳಿಸುತ್ತವೆ.

*

ಹೊಸ ತಲೆಮಾರಿನ ಕನ್ನಡದ ಮಹತ್ವದ ಕತೆಗಾರರ ಸಾಲಿನಲ್ಲಿ ನಿಲ್ಲಬಲ್ಲ ಪಿ.ಮಂಜುನಾಥರ ಮುಂದಿನ ಎಲ್ಲ ಬರೆಹಗಳನ್ನೂ ಕುತೂಹಲದಿಂದ ಎದುರುಗೊಳ್ಳುತ್ತೇನೆ.ಅವರ ಸೂಕ್ಷ್ಮ ಅಭಿವ್ಯಕ್ತಿಗೆ ಸಾಹಿತ್ಯ ವಲಯದಲ್ಲಿ ನ್ಯಾಯಯುತ ಸ್ಥಾನ ಸಿಗಬೇಕು ಎಂಬುದು ಕಿರಿಯವನಾದ ನನ್ನ ಆಗ್ರಹ!

**

- ಕಾಜೂರು ಸತೀಶ್

1 comment:

  1. ಧನ್ಯವಾದಗಳು ಸರ್, ನಿಮ್ಮ ಮಾತುಗಳು ನನ್ನ ಈ ಮುಂದಿನ ಕಥನಕ್ರಿಯೆಗೆ ಶಕ್ತಿಯಾಗಿರಲಿ...

    ReplyDelete