ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 31, 2015

ಕಿಗ್ಗಾಲು ಗಿರೀಶ್ ಅವರ 'ಮಿತ್ರಲೋಕ'ದ ಕುರಿತು..

ನಿವೃತ್ತ ವಾಯುಪಡೆಯ ಅಧಿಕಾರಿ ಕಿಗ್ಗಾಲು ಎಸ್ ಗಿರೀಶ್ ಅವರು ಕೃಷಿಯಲ್ಲಿ ಸಕ್ರಿಯರಾಗಿದ್ದುಕೊಂಡು,ಅದನ್ನು ಸಾಹಿತ್ಯಕ್ಕೂ ವಿಸ್ತರಿಸಿಕೊಂಡವರು.'ನಗೆಹೋಳಿಗೆ' ,'ಹವಾಲ್ದಾರ್ ಮಂಜಪ್ಪ ಮತ್ತಿತರ ಕಥೆಗಳು ' ಕೃತಿಗಳ ಮೂಲಕ ಕೊಡಗು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಹೆಸರು ಗಳಿಸಿದವರು.

ಪ್ರಸ್ತುತ 'ಮಿತ್ರಲೋಕ'ದಲ್ಲಿರುವ
೬೫ ಚತುಷ್ಪದಿಗಳನ್ನು ಛಂದೋಬದ್ಧವಾಗಿ ರಚಿಸಿದ್ದಾರೆ.ಈ ಉಸಿರುಗಟ್ಟಿಸುವ ಕಾಲದಲ್ಲೂ ಮತ್ತೆ
ನವೋದಯದ ಭಾಷೆಯನ್ನೂ ,ಅಭಿವ್ಯಕ್ತಿಯ ಕ್ರಮವನ್ನೂ ರೂಢಿಸಿಕೊಂಡು , ಸಹಜ-ಸರಳ ಮಾದರಿಯಲ್ಲಿ
ಲೋಕದ ವೈರುಧ್ಯಗಳನ್ನು ಕಟ್ಟಿಕೊಟ್ಟು ಚಿಂತನೆಗೆ ಹಚ್ಚಿದ್ದಾರೆ .ಜೊತೆಜೊತೆಗೆ ಜಗತ್ತು
ನಿರ್ವಹಿಸಬೇಕಾದ ತುರ್ತನ್ನೂ,ಪಾಲಿಸಬೇಕಾದ ಮಾರ್ಗವನ್ನೂ
ಹಾಕಿಕೊಟ್ಟಿದ್ದಾರೆ.ಹಳೆ-ನಡು-ಹೊಸಗನ್ನಡದ ಬಳಕೆಯಿದ್ದರೂ,ಒಟ್ಟು ಓದಿನ ನಂತರ 'ಸಮನ್ವಯ'ದ
ಅನುಭವವೊಂದು ಓದುಗನಲ್ಲಿ ಮೂಡುತ್ತದೆ . ೬೫ ಚತುಷ್ಪದಿಗಳಲ್ಲೂ ಹಚ್ಚಿಟ್ಟ ದೀಪದ ಬೆಳಕಿದೆ.


ಹರಿವ ನೀರಿಗೆ ಉಂಟೆ ಜಾತಿಮತಪಂಥ?
ಉರಿವ ಅಗ್ನಿಗೆ ಉಂಟೆ ಕುಲಗೋತ್ರ ಧರ್ಮ?
ಇರಲೇಕೆ ಮನುಜಂಗೆ ಮತ್ತೆ ವರ್ಣ ಸಂಘರ್ಷ?
ತೊರೆದುಬಿಡು ಮರುಳುತನ ಕೇಳುಮಿತ್ರ

ಇಂತಹ ಮಾದರಿಯ ಚತುಷ್ಪದಿಗಳ ಜೊತೆಗೆ ಅವುಗಳ ವ್ಯಾಖ್ಯಾನವನ್ನೂ ಕೃತಿ ಒಳಗೊಂಡಿದೆ.

ಕಿಗ್ಗಾಲು ಗಿರೀಶ್ ಅವರ ಬರೆಹಗಳು ಸಹೃದಯರನ್ನು ತಲುಪಲಿ;ಮತ್ತಷ್ಟೂ ಗಂಭೀರತೆಯನ್ನು ಸಾಧಿಸಲಿ.
**
-ಕಾಜೂರು ಸತೀಶ್

Sunday, March 29, 2015

ಕತೆಯೆಂಬ ಮುಗಿಲ ಮಾಯೆಯ ಕರುಣೆಯ ಒಳಗೆ..

'ಶುದ್ಧ ಚಿಂತನೆಗೆ ವಾಸ್ತವವನ್ನು ಇಡಿಯಾಗಿ ಗ್ರಹಿಸುವ ಶಕ್ತಿ ಇರುವುದಿಲ್ಲ. 'ಕಥನ ಕಲೆ' ಮಾತ್ರವೇ ವಾಸ್ತವವನ್ನು ಅಖಂಡವಾಗಿ ಹಿಡಿದಿಡಬಲ್ಲದು.'

-ಜಾರ್ಜ್ ಲುಕಾಚ್ಸ್



ಈ ಹೊತ್ತಿನಲ್ಲಿ ಕಾವ್ಯವು ಅಸ್ಪಷ್ಟತೆಯಿಂದ,ಸಂದಿಗ್ಧತೆಗಳಿಂದ ಓದುಗನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವಾಗ,ಸಣ್ಣಕತೆ ಹಾಗೂ ಕಾದಂಬರಿಯ ಪ್ರಕಾರಗಳು ಅಭಿವ್ಯಕ್ತಿಯ ಉತ್ತಮ ಮಾರ್ಗಗಳೆನಿಸುತ್ತಿವೆ.ಕಾವ್ಯವಷ್ಟೇ ಬದುಕಿನ ಎಲ್ಲ ಅನುಭವಗಳಿಗೂ ರೂಪು ಕೊಡಲಾರವು.ಹೇಳಿಕೊಳ್ಳುವ,ದಾಟಿಸುವ,ಕಟ್ಟುವ ,ಮುರಿಯುವ,ಸಂವಾದಿಸುವ..ಎಲ್ಲ ಕ್ರಿಯೆಗಳ ಸಾರ್ಥಕತೆಯು ಸದ್ಯದಲ್ಲಿ ಸಾಧ್ಯವಾಗುತ್ತಿರುವುದು ಇವೆರಡು ಪ್ರಕಾರಗಳಿಂದಲೇ.

*

ಕವಿ,ಕತೆಗಾರ ಪಿ. ಮಂಜುನಾಥ ಅವರು ಕತೆ ಮತ್ತು ಕವಿತೆ- ಎರಡೂ ಮಾರ್ಗಗಳಲ್ಲಿ ನಡೆದು ಯಶಸ್ಸನ್ನು ಗಳಿಸಿಕೊಂಡವರು.ನೆಲದ ಹಿಡಿಮಣ್ಣನ್ನೇ ಎತ್ತಿಕೊಂಡು ಅದರ ಚಹರೆಗಳನ್ನು ಪ್ರಾಮಾಣಿಕವಾಗಿ ಉಲಿಯುವ ಅವರ ಬರೆಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದರೂ,ಇದೀಗ ಕಥಾ ಸಂಕಲನದ ರೂಪದಲ್ಲಿ ಹೊರಬಂದಿರುವುದು ಸಂತಸದ ಸಂಗತಿ .


'ಕಥನಗಾರಿಕೆ'ಯನ್ನಷ್ಟೇ ಮೇಲ್ಮೆಗೆ ತಂದು -ಅದನ್ನು ವೈಚಾರಿಕ ಆಕೃತಿಗಳಿಗೆ ಒಗ್ಗಿಸದೆ- ನಿರ್ಭಾವುಕವಾಗಿ ಹೇಳುವ ವೈಶಿಷ್ಟ್ಯತೆ 'ಮುಗಿಲ ಮಾಯೆಯ ಕರುಣೆ'ಯದ್ದು.ಕೃತಿಯ ಕಥಾನುಭವದಲ್ಲಿ ಕತೆಗಾರನ ತಾತ್ವಿಕ ಹಾವಳಿಯಿಲ್ಲ;ಕಟುವಾಸ್ತವ ಮತ್ತು ಕತೆಗಳ ನಡುವಿನ ಅರ್ಥಪೂರ್ಣವಾದ ಸಂವಾದವಿದೆ.


ಕರುಳ ಕತ್ತರಿಸಿ ಕಿತ್ತು ತಿನ್ನುವ ಹಸಿವು,ಬದುಕಿನ ಬವಣೆಗಳನ್ನು ಅವರು ತಣ್ಣಗೆ ಕಥಿಸುವ ಕ್ರಮವನ್ನು 'ಆಲಿಸಿದರೆ' ಇಂತಹ ದಾರುಣ ಬದುಕಿಗೆ ಒಳಗಿನವರಾಗಿದ್ದುಕೊಂಡೇ ಕಲೆ(ಕತೆ)ಯಾಗಿ ಮಾರ್ಪಡಿಸಿದ ಕುರುಹುಗಳು ಸಿಗುತ್ತವೆ.ಹೀಗೆ ಒಳಗಿನವರಾಗಿರುವುದು ಬೌದ್ಧಿಕವಾಗಿಯಷ್ಟೇ ಅಲ್ಲ,ಮಾನಸಿಕವಾಗಿಯೂ ಕೂಡ.ಬೆಳಗಾವಿ ಸೀಮೆಯ ಉಜ್ವಲ ಭಾಷೆ ,ದೇಸೀತನ ಅದಕ್ಕೊಂದು ಸಾಂದ್ರವಾದ 'ಧ್ವನಿ'ಯನ್ನು ಕರುಣಿಸಿದೆ.


ಬೆರಗು ಹುಟ್ಟಿಸುವ ಇಂತಹ ಸೂಕ್ಷ್ಮ ಕಥನಗಾರಿಕೆಯು ಬಿಕ್ಕಟ್ಟಿನ ಕಾಲದಲ್ಲಿ ,ಭಾವೋದ್ವೇಗದ ಸನ್ನಿವೇಶದಲ್ಲಿ ಮನುಷ್ಯನ ವರ್ತನೆಯಲ್ಲಾಗುವ ಏರುಪೇರುಗಳನ್ನು(psychological factors ) ಮೈಕ್ರೋಸ್ಕೋಪಿಕ್ ಕಣ್ಣುಗಳಲ್ಲಿ ಗ್ರಹಿಸಿ ದಾಖಲಿಸುತ್ತದೆ.


ಇಲ್ಲಿ ನೆನಪಿನಲ್ಲುಳಿಯುವ ಕಥಾಪಾತ್ರಗಳು ಸಾಮಾನ್ಯರಲ್ಲಿ ಸಾಮಾನ್ಯರು;ಶ್ರೇಣೀಕರಣದ ಕೆಳಗಿರುವ,ಬವಣೆಗಳಿಂದ ಬೆಂದುಹೋದವರು.ದಮನಿತರ ಕಾಯುವಿಕೆಯನ್ನೇ ಇಲ್ಲಿ ಕತೆಗಾರರು ಕತೆಯಾಗಿಸಬಲ್ಲರು.ಹಸಿವು ನೀಗಿಸಿಕೊಳ್ಳಲು ನುಡಿದ 'ಒಂದು ಸುಳ್ಳಿನ' ಪರಿಣಾಮಗಳನ್ನೇ ವಿಸ್ತರಿಸುತ್ತಾ ಮನೋಜ್ಞವಾಗಿ ಕತೆಯನ್ನು ಕಟ್ಟಬಲ್ಲರು.ಅವರ ಎಲ್ಲ ಕಥಾನಕಗಳ ಬೇರು ಹಳ್ಳಿಯದ್ದು.ಅಜ್ಞಾನ,ಅವಿವೇಕ,ಮುಗ್ಧತೆ,ಶೋಷಣೆ,ವೃದ್ಧಾಪ್ಯದ ಬವಣೆ,ಜಾಗತೀಕರಣ-ರಾಜಕಾರಣ-ಮೀಡಿಯಾಗಳ ಅವಕಾಶವಾದ,ದೇವದಾಸಿಪದ್ಧತಿ,ಜೀತಪದ್ಧತಿ,ಜಾತಿ ತಾರತಮ್ಯ ,ಮಲಹೊರುವ ಪದ್ಧತಿ ,ಬದಲಾಗುತ್ತಿರುವ ಹಳ್ಳಿಯ ಚಹರೆಗಳು - ಇವೆಲ್ಲ ಕತೆಗಳಿಂದ ಪ್ರತ್ಯೇಕಿಸಲಾರದ ಹಾಗೆ ಬೆಸೆದುಕೊಂಡಿವೆ.


ಅಲ್ಲಲ್ಲಿ ಇಣುಕುವ ಸೂರ್ಯ,ಬೆಳಕು,ಮಳೆ,ಮೋಡ,ಗ್ರಾಮದೇವರು ಮುಂತಾದ 'ಸಂಗತಿ'ಗಳು ಕಥಾಪ್ರಜ್ಞೆಯನ್ನು ಕಾವ್ಯಾತ್ಮಕವಾಗಿ ಭರವಸೆಯ ದಿಕ್ಕಿಗೆ ಹೊರಳಿಸುತ್ತವೆ.

*

ಹೊಸ ತಲೆಮಾರಿನ ಕನ್ನಡದ ಮಹತ್ವದ ಕತೆಗಾರರ ಸಾಲಿನಲ್ಲಿ ನಿಲ್ಲಬಲ್ಲ ಪಿ.ಮಂಜುನಾಥರ ಮುಂದಿನ ಎಲ್ಲ ಬರೆಹಗಳನ್ನೂ ಕುತೂಹಲದಿಂದ ಎದುರುಗೊಳ್ಳುತ್ತೇನೆ.ಅವರ ಸೂಕ್ಷ್ಮ ಅಭಿವ್ಯಕ್ತಿಗೆ ಸಾಹಿತ್ಯ ವಲಯದಲ್ಲಿ ನ್ಯಾಯಯುತ ಸ್ಥಾನ ಸಿಗಬೇಕು ಎಂಬುದು ಕಿರಿಯವನಾದ ನನ್ನ ಆಗ್ರಹ!

**

- ಕಾಜೂರು ಸತೀಶ್

Saturday, March 28, 2015

ಚಂದ್ರನನ್ನು ಹೋಲಿಸುವ ಬಗೆ



ಸಾಬ್ಲು ಥಾಮಸ್ ವಿ.


ಕೂಡಿಗೆ ಮೀನು ಮಾರ್ಕೆಟ್ ಬಳಿಯ
ಸೇತುವೆಯ ಕೆಳಗೆ
ಕತ್ತಲು ಬಿದ್ದೆದ್ದು ಹಾರಾಡಿದ ರಾತ್ರಿಯ ಹೊತ್ತು.


' ನೀರೊಳಗೆ ಬಿದ್ದು ಹೊಯ್ದಾಡುತ್ತಿರುವ ಚಂದ್ರ
ಥೇಟ್ ಮೀನಿನಂತಿದೆ'
ಎಂದೆ.


ನನ್ನ ಗೆಳೆಯ
ಸಸ್ಯಾಹಾರಿ .


ಅವನ ಪ್ರಕಾರ,
'ನಾನ್ವೆಜ್ ಉಪಮೆಯಲ್ಲಿ ಚಂದ್ರನಿರುವುದಿಲ್ಲ.
ನೀರೊಳಗೆ ಹೊಯ್ದಾಡುತ್ತಿರುವುದು ಬಿಂಬ ಮಾತ್ರ
ಒಂದು ಬೂದುಗುಂಬಳದಂತೆ.


ಇಬ್ಬರೂ
ತರ್ಕ-ಸಿದ್ಧಾಂತಗಳನ್ನೆಲ್ಲ ಕಲಿತದ್ದು
ಪಾರ್ಟಿ ಕ್ಲಾಸಿನಲ್ಲಿ,
ಕಾಲೇಜಿನಲ್ಲಿ.


'ಚಂದ್ರ ಪೂರ್ಣಬಿಂಬವಲ್ಲ,
ಅಮವಾಸ್ಯೆಯ ನಂತರದ
ತೆಳುವಾದ ಒಂದು ಗೆರೆ.
ಬಾಳೆಮೀನಿನ ಹಾಗೆ ಚಡಪಡಿಸುತ್ತದೆ ಅದು
ಕವಿತೆ,ಕಲ್ಪನೆಯೊಳಗೆಲ್ಲ'
ಎಂದೆ.


ಹೀಗೆಲ್ಲ ತರ್ಕಿಸಿದರೂ,
ಸೇತುವೆ ದಾಟುವಷ್ಟರಲ್ಲಿ
ನಮ್ಮಿಬ್ಬರಿಗೆ ಸುಸ್ತೋ ಸುಸ್ತು.


ದೂರದ ಮನೆಯಲ್ಲಿ
ಮತ್ತೊಬ್ಬಳು ಕಾಯುತ್ತಿದ್ದಾಳೆ-
ಚಂದ್ರನ ಮೈಪಡೆದವಳು.
ನನ್ನ ಹಸಿವು
ಸಾಂಬಾರಾಗಿ ಬೇಯುತ್ತಿದೆ ಅಲ್ಲಿ.


ಅವಳನ್ನು ಮಾತ್ರ
ಚಂದ್ರನೊಂದಿಗೆ ಹೋಲಿಸುವುದಿಲ್ಲ.
**

ಮಲಯಾಳಂ ಮೂಲ- ಸಾಬ್ಲು ಥಾಮಸ್ ವಿ.

ಕನ್ನಡಕ್ಕೆ -ಕಾಜೂರು ಸತೀಶ್

Saturday, March 7, 2015

ನನ್ನೊಳಗೆ ಉರಿಯುತ್ತಿರುವ ಸಾಲುಗಳು

ಹೋಳಿ ಮುಗಿಯಿತು ;
ಕಣ್ಣೊಳಗೆ ಉಳಿದದ್ದು ಮತ್ತದೇ ಹಳದಿ!


ಒಂದು ಇಲಿ ಓಡಿಹೋಯಿತು;
ಊರ ತುಂಬೆಲ್ಲ ಕೋಲಾಹಲವೆದ್ದಿದೆ !


ಕಿಚ್ಚು ಹಚ್ಚುವುದಾದರೆ ಹಚ್ಚಿಬಿಡಿ;
ಎಷ್ಟೆಷ್ಟೋ ಒಲೆಗಳು ಉರಿಯದೆ ದಿನಗಳಾಗಿವೆ!


ಹುಚ್ಚು ನಾಯಿಯೊಂದು ನನ್ನ ನೋಡಿ ಬಾಲ ಅಲ್ಲಾಡಿಸಿತು;
ಈಗ ಊರ ತುಂಬೆಲ್ಲ ನನ್ನದೇ ಸುದ್ದಿ !


ರಸ್ತೆಯಂಚಲ್ಲಿ ಕಣ್ಣುಗಳಿಗೆ ಬೆಂಕಿ ತುಂಬಿಕೊಂಡು ನನ್ನ ನೋಡುತ್ತಿದ್ದಾರೆ;
ತರಗುಗಳುರಿದರೂ ನಾನು ನಡೆಯುತ್ತಿರುವ ರಸ್ತೆ ಸುಟ್ಟುಹೋಗುತ್ತಿಲ್ಲ!






ಹುಚ್ಚುನಾಯಿ ಅಂತ ಇಷ್ಟು ದಿನ ಸುಮ್ಮನಿದ್ದೆ;
ಈಗ ತಿಳಿಯಿತು -ನನ್ನಂಥೋರು ಅದರಿಂದಲೂ ಕಲಿಯಬೇಕಾದದ್ದು ಬೇಕಾದಷ್ಟಿದೆ!


ನನಗೆ ಕಾಣದಂತೆ ಬೆಂಕಿ ಹಚ್ಚಿದ್ದಾರೆ;
ನನ್ನ ಕಾಲ ಕೆಳಗಿನ ನದಿ ಅವರಿಗಿನ್ನೂ ಕಾಣಿಸುತ್ತಿಲ್ಲ!


ಬಂದರೆ ಬನ್ನಿ ಎದುರಿಗೆ -ಇರಿಯುವುದಾದರೆ ಇರಿಯಿರಿ ಎದೆಗೆ;
ಹಿಂದೆ ನಿಂತೇನು ಮಾಡುತ್ತೀರಿ- ಬೆನ್ನ ಹಿಂದಿರುವುದನ್ನೂ ನಿಮಗೆ ಹೇಳಿಕೊಡಬೇಕಾಗಿಲ್ಲ!


ಏನನ್ನಿಸುತ್ತಿದೆ ಕೆಲಸವಿಲ್ಲದವರೆ?
ಕನ್ನಡಿಯಲ್ಲಿ ನಿಮ್ಮ ಮೂತಿ ಮುಟ್ಟಿಕೊಳ್ಳಲಾದೀತೆ ನೋಡಿಕೊಳ್ಳಿ !


'ಸತ್ಯ ಹೇಳುತ್ತೇನೆ ಬನ್ನಿ ' ಎಂದಿದ್ದೇ ತಡ-
ಬೀದಿಯಲ್ಲಿ ,ನಿಲ್ದಾಣದಲ್ಲಿ ಈಗ ಒಬ್ಬರೂ ಕಾಣಿಸುತ್ತಿಲ್ಲ!


-ಕಾಜೂರು ಸತೀಶ್

Friday, March 6, 2015

ದಾರಿ ತಪ್ಪಿ ಬಂದ ಇಬ್ಬರು

ಗುಡಿಸಲಿಗೆ
ಮಳೆಯು ನಡೆದುಬರಬಹುದಾದ
ದಾರಿಗಳ ಕುರಿತು
ಚೆಲುವ 'ಬಿಸಿಲು' ನನ್ನೊಂದಿಗೆ ಹೇಳಿದ.


ಗುಡಿಸಲಿಗೆ
ಬಿಸಿಲು ಹತ್ತಿಳಿದು ಬರಬಹುದಾದ
ದಾರಿಗಳ ಕುರಿತು
ಚೆಲುವೆ 'ಮಳೆ' ನನ್ನೊಂದಿಗೆ ಹೇಳಿದಳು.


ಒಂದು ದಿನ
ಮಳೆ ಮತ್ತು ಬಿಸಿಲುಗಳಿಬ್ಬರು
ಒಟ್ಟೊಟ್ಟಿಗೆ ಕೈಕೈಹಿಡಿದು ಬಂದ ಹೊತ್ತು
ಅವರಿಬ್ಬರಿಗೂ ಬೆಳದಿಂಗಳ ಕುರಿತು ಹೇಳಿದೆ.






ಬಂದ ದಾರಿಯಲ್ಲೇ ಇಬ್ಬರೂ ಹಿಂತಿರುಗಿ ಹೋದರು .


ಅವತ್ತು ರಾತ್ರಿ
ಬೆಳದಿಂಗಳನ್ನಪ್ಪಿ ಮಲಗಿದ್ದಾಗ
ದಾರಿ ತಪ್ಪಿ ಬಂದ ಇಬ್ಬರ ಬಗ್ಗೆ ಹೇಳಿದೆ.


ಬೆಳದಿಂಗಳು ಅಪ್ಸರೆಯಂತೆ ನಕ್ಕಳು .

**

ಮಲಯಾಳಂ ಮೂಲ- ಪ್ರದುಲ್ ಶಾದ್ ಸಿ.

ಕನ್ನಡಕ್ಕೆ -ಕಾಜೂರು ಸತೀಶ್