ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 27, 2014

ಬೆಂಕಿಯ ಬೀಜ

ರಣಹದ್ದಿನ ಶವವನ್ನು
ರಣಹದ್ದು ತಿನ್ನುವುದಿಲ್ಲ.
ಕೊಳೆತು ನಾರುವ ಮುನ್ನ
ಅದೊಂದು ವಿಮಾನವಾಗುತ್ತದೆ.ಯುದ್ಧಭೂಮಿಯೆಂದುಕೊಂಡು ಬಟಾಬಯಲಿನಲ್ಲಿ
ಹಾರಾಡಿ ಇಳಿಯುತ್ತದೆ .




ಚೆಂಡಿಲ್ಲದಿದ್ದರೂ ಫೂಟ್ಬಾಲ್ ಆಡುವ ಮಕ್ಕಳು
ಅದರ ಬಳಿ ಬಂದು
ಮುಟ್ಟಿ ,ಸವರಿ ಬೆರಗುಗೊಂಡು
ಕೆಲವರು ಅದರ ಒಳಗಿಳಿಯುತ್ತಾರೆ.
ಕೆಲವರು ಚಂಗನೆ ಜಿಗಿದು ಹತ್ತುತ್ತಾರೆ.
ಇನ್ನೂ ಕೆಲವರು ರೆಕ್ಕೆಗಳಲ್ಲಿ ತೂಗಾಡುತ್ತಾರೆ.







ಇದ್ದಕ್ಕಿದ್ದಂತೆ
ಯಾರೋ, ಹೇಗೋ ಕೀ ಕೊಟ್ಟ ಹಾಗೆ
ಮೈಕೊಡವುತ್ತಾ ವಿಮಾನ ಮೇಲೇರುತ್ತದೆ.
ಒಳಗೂ, ಹೊರಗೂ
ರೆಕ್ಕೆಗಳಲ್ಲೂ,ಕೊಕ್ಕಿನಲ್ಲೂ
ಬೆರಗಿನಿಂದ ಕುಳಿತ ,ನೇತಾಡುವ
ಮಕ್ಕಳ ಹೊತ್ತು ಹಾರುತ್ತದೆ.




ಮತ್ತೆ ಹಸಿವಾದಾಗ,
ಮುಗಿಲೆತ್ತರದ ಕಟ್ಟಡದಲ್ಲಿ ಕುಳಿತು
ಕೆಲವು ತುಂಟ ಮಕ್ಕಳ ಕುಕ್ಕಿ ತಿನ್ನುತ್ತದೆ.
ಹೊಟ್ಟೆ ತುಂಬಿದಾಗ ಮತ್ತೆ ಹಾರಿ
ನಗರಗಳಲ್ಲೂ, ಹಳ್ಳಿಗಳಲ್ಲೂ
ಬೆಂಕಿಯ ಬೀಜಗಳೊಂದಿಗೆ
ಆ ಮಕ್ಕಳನ್ನೂ ಚೆಂಡಿನಂತೆ ಎಸೆಯುತ್ತದೆ.
**



ಮಲಯಾಳಂ ಮೂಲ- ಮೋಹನಕೃಷ್ಣನ್ ಕಾಲಡಿ



ಕನ್ನಡಕ್ಕೆ - ಕಾಜೂರು ಸತೀಶ್

Wednesday, July 23, 2014

ದೇವರು ಕಟ್ಟಕಡೆಗೆ ಸೃಷ್ಟಿಸಿದ್ದು ನನ್ನನ್ನೇ

ಅಯ್ಯೋ ನನ್ನ ದೇವರೇ,
ನೀನು ಅತ್ತಿದ್ದು ಯಾಕೆ?
ಕಡೆಯ ಕವಿತೆ ಬರೆಯುತ್ತಿರುವ ಕವಿಯ ಹಾಗೆ
ಹೊರಳಾಡಿದ್ದು ಯಾಕೆ?
ಕಣ್ಣೆದುರಿಗೇ ಸಾವು ಕಂಡ ಹಾಗೆ
ಚಕಿತನಾಗಿದ್ದು ಯಾಕೆ?

ಇಷ್ಟಿಷ್ಟೇ ನಿನ್ನ ಬೆರಳುಗಳಲ್ಲಿ
ಆಕಾರ ಪಡೆಯುತ್ತಾ ಬಂದೆ ನಾನು .
ನನ್ನ ಕಣ್ಣುಗಳು ,ಮುಖ,ಮೊಲೆ..
ಎಲ್ಲವನ್ನೂ ಉರುಟುರುಟಾಗಿಸಿದೆ ನೀನು .
ಜೇಡಿ ಮಣ್ಣಲ್ಲಿ ಕನ್ನಡಿ ಮಾಡಿ
ಸೊಂಟವ ಬಳುಕುವ ಹಾಗೆ ಮಾಡಿದೆ.
ಎಲ್ಲ ನಕ್ಷತ್ರಗಳು
ನನ್ನ ಮೇಲೆ ಮುಗಿಬಿದ್ದು
ಮಿನುಗಲು ತೊಡಗಿದವು.


ನೀನು
ತಂದೆಯೋ ಕಾಮುಕನೋ ಎಂದು
ಒಂದು ಕ್ಷಣ ಸಂದೇಹ ಪಟ್ಟೆ ನಾನು .


ಹೀಗಿದ್ದರೂ
ಮೋಡದಿಂದ ಮಳೆ ಸುರಿಯುವ ಹಾಗೆ
ನಿನ್ನಿಂದ ಹೊರಬಂದೆ.
ನಿನ್ನ ಬೆರಳುಗಳು ನನ್ನ ಹಿಂದೆ
ತಟಸ್ಥವಾಗಿ ನಿಂತವು.


ಹಿಂತಿರುಗಿ ನೋಡಿದರೆ
ಒಮ್ಮೆಯೂ ಹೋಗಲಾಗುವುದಿಲ್ಲ ಎಂದುಕೊಂಡು
ಮುಂದಕ್ಕೇ ನಡೆದೆ.


ನನ್ನ ಮುಂದೆಯೇ ಅವರು ನಡೆದುಹೋಗುತ್ತಿದ್ದರು.
ನಿನ್ನಿಂದ ಕೇವಲ
ಆರೇ ಆರು ದಿನಗಳಲ್ಲಿ ಸೃಷ್ಟಿಯಾದವರು.
ಎರಡು ಕೊಂಬುಳ್ಳವರು.
ನಾಲ್ಕು ಕಾಲು ಮತ್ತು ಬಾಲವುಳ್ಳವರು.


ಸ್ವಲ್ಪವೇ ಮುಂದೆ ಅವನೂ..
ಅವನು
ಕಬ್ಬಿಣ ,ಪ್ಲಾಸ್ಟಿಕ್ಕುಗಳಿಂದಾದವನು.
ನೆಲವನ್ನು ಗ..ಟ್ಟಿಯಾಗಿ ತುಳಿಯುವವನು.
ಅಗತ್ಯಕ್ಕಿಂತ ಹೆಚ್ಚು ಮಾತನಾಡುವವನು.
ತುಸು ಹೆಚ್ಚಾಗಿಯೇ ಅಭಿನಯಿಸುವವನು.


ಆದರೂ ,
ಒಂದನ್ನೂ ಸರಿದೂಗಿಸದವನು.
ಆ ದೇಹವನ್ನು ಮುಗಿಸಲು
ಮುಂದೆ ಹೋಗುತ್ತಿರುವವರ ಮೈಮೇಲೆ
ಚಾಟಿಯೇಟು ಕೊಡುವವನು.
ಒದೆಯುವವನು.
ಕೊಲ್ಲುವವನು.


ದೇವರೇ,
ನಿನ್ನ ಒಮ್ಮೆಯೂ ಮುಖತಃ ಕಾಣದಿರಲೆಂದು
ನಿನ್ನ -ಅವನ ನಡುವೆಯೊಂದು ಪರದೆಯಾಗಿ
ನನ್ನ ನಿಯೋಜಿಸಿದ್ದೇಕೆ?
ನನ್ನಿಂದಾಚೆಗೆ ಕಣ್ಣುಗಳು ಸೋತುಹೋದರೂ...
ಅವನು ಈಗಲೂ ಸುಳ್ಳನ್ನೇ ಹೇಳುತ್ತಿದ್ದಾನೆ:
"ನಾನೇ ಹಿಂದಿನಿಂದ ಮೊದಲಿಗನು".


ಆ ಸುಳ್ಳನ್ನು ಬಯಲು ಮಾಡಲು
ಅವನು ಮಿಂಚನ್ನು ಸೃಷ್ಟಿಸಿದ .
ಪ್ರಳಯ ಎಬ್ಬಿಸಿದ.
ಹಣದ ಪೆಟ್ಟಿಗೆ ನಿರ್ಮಿಸಿದ .
ಭಾಷೆಗಳನ್ನು ಕಲಸಿದ.
ದೇಶಗಳ ವಿಭಜಿಸಿದ.
ಅದೆಲ್ಲವನ್ನೂ ಸೇರಿಸಿ
ಹೊಸ ಪವಿತ್ರ ಗ್ರಂಥವನ್ನು ಬರೆದ.


ವಾಸ್ತವವಾಗಿ ,
ಪವಿತ್ರ ಗ್ರಂಥ ತುಂಬಾ ಸಣ್ಣದು.
ದೇವರೇ,
ನನಗೂ ನಿನಗೂ ಗೊತ್ತೇ ಇದೆ-
ಅದರಲ್ಲಿರೋದು ಎರಡೇ ಎರಡು ವಾಕ್ಯಗಳು ..


"ದೇವರು ಕಟ್ಟಕಡೆಯದಾಗಿ
ಸ್ತ್ರೀಯನ್ನು ಸೃಷ್ಟಿಸಿದರು.
ಆಮೇಲೆಲ್ಲ
ಅವಳೇ ಲೋಕವನ್ನು ಸೃಷ್ಟಿಸಿದಳು".
**
ಮಲಯಾಳಂ ಮೂಲ - ಪಿ.ಎನ್. ಗೋಪಿಕೃಷ್ಣನ್

ಕನ್ನಡಕ್ಕೆ- ಕಾಜೂರು ಸತೀಶ್



Wednesday, July 16, 2014

ಅಲಂಕಾರ

ಸತ್ತಾಯಿತು
ಇನ್ನು ಅಲಂಕಾರವಷ್ಟೆ ಬಾಕಿ.




ಹೊರಬಿದ್ದ ಕಣ್ಣಗುಡ್ಡೆಗಳನ್ನು
ಮುಚ್ಚಿಡಲಾಗಿದೆ.
ಕಾಡಿಗೆಯಲ್ಲಿ ತಿದ್ದಿ ಕಪ್ಪಾಗಿಸಿದ
ಕಣ್ಣಿನ ಕಡೆಯ ಕನಸ್ಸನ್ನು
ಬಿಡುಗಡೆಗೊಳಿಸಲಾಗಿದೆ.





ಕನ್ನಡಕ ಬಿಚ್ಚದೆಯೇ ಇವತ್ತಿನ ಸ್ನಾನ.




ಬೇಗ ..
ಅಲಂಕಾರಕ್ಕೆ ಸಿದ್ಧಗೊಳಿಸಿ,
ಇನ್ನೂ ಎಷ್ಟೊಂದು ಕೆಲಸಗಳು ಬಾಕಿ ಇವೆ.




ಮೊದಲು ಹಣೆಗೆ ಬೊಟ್ಟು ಇಡೋಣ
ಅದು ಸಿಂಧೂರವಾಗಿರಲಿ
ವೃತ್ತಾಕಾರದಲ್ಲಿರಲಿ.
ಅಂಟುವ ಸಿಂಧೂರ ಬೇಡ
ಅದರ ಕಲೆ ಅಲ್ಲೇ ಉಳಿಯುತ್ತದೆ .
ಗಂಧದ ಬೊಟ್ಟು ಬೇಕಾ?
ವಿಭೂತಿಯಾದರೆ ಚೆನ್ನ
ಸ್ಮಶಾನಕ್ಕಲ್ಲವೇ?




ಕಣ್ರೆಪ್ಪೆಗಳಿಗೆ ಕಾಡಿಗೆ ಬೇಡ
ಕಣ್ಣೀರು ಜಿನುಗಿದರೆ
ಶುಭ್ರವಾಗಿ ಕಾಣಿಸಬಹುದು .



ಮೂಗಿನಲ್ಲಿ ಹತ್ತಿ ಇಡಲು ಮರೆಯಬಾರದು
ನಮ್ಮ ವಾಸನೆ ಹಿಡಿದು ಹಿಂದೆಯೇ ಬಂದರೆ?





ಸತ್ತು ಬಿಳುಚಿದ ತುಟಿಗಳು
ಕಳೆಗುಂದಿದ ಹಲ್ಲುಗಳು
ದಂಗೆಯೇಳದೆ ಇರುವುದಿಲ್ಲ .
ಒಂದು ಹೊಸ ಹತ್ತಿ ಬಟ್ಟೆ ಹರಿದುಕೊಡಿ
ಸೇರಿಸಿ ಕಟ್ಟಿ ಹಾಕೋಣ
ಪಾಠ ಕಲಿಸಬೇಕು .






ನಾಲಗೆಯಿಂದಿಳಿಯುತ್ತಿರುವ ವಿಷ
ಹೊರಗಿಳಿಯದಂತೆ ನೋಡಿಕೊಳ್ಳಬೇಕು
ಕೆನ್ನೆಯ ಈ ಒಂಟಿ ಕುಳಿಯನ್ನು ಮುಚ್ಚಿಡಬೇಕು
ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ.






ರಕ್ತ ಇಳಿಯುತ್ತಿರುವ ಕಿವಿಗಳಲ್ಲಿ
ಹತ್ತಿಯುಂಡೆಗಳನ್ನು ತುರುಕೋಣ
ಎಂಥ ಆಲಿಸುವ ಸಾಮರ್ಥ್ಯವಿತ್ತು-
ನಾವು ಹೇಳದಿರುವುದೇ ಕೇಳಿಸುತ್ತಿತ್ತು.
ಹೊಳೆಯುವ ಈ ವಾಲೆಗಳನ್ನು
ಬಿಚ್ಚಿಡಲು ಮರೆಯಬೇಡಿ
ಅದು ಹೊಳೆದದ್ದು ಸಾಕು.





ಕೈಗೆ ಕಟ್ಟಿದ ಕಪ್ಪು ದಾರದಲ್ಲಿರುವ
ತಾಯತವನ್ನು ಕತ್ತರಿಸಿಹಾಕಬೇಕು
ನೋಡೋಣ
ಇನ್ನ್ಯಾವ ರಕ್ಷೆಯಿದೆ ಇವಳಿಗೆ .






ಉಬ್ಬಿದ ನರಗಳಿರುವ ಕೈಗಳ
ಊದಿದ ಬೆರಳುಗಳನ್ನೆಲ್ಲ ಸೇರಿಸಿ
ಈಗಲೇ ಕಟ್ಟಿಹಾಕಬೇಕು
ಬಲೆ ಹೆಣೆಯುವ ಬೆರಳುಗಳವು
ಎಷ್ಟು ವೇಗ ಅವಕ್ಕೆ!
ಬೆರಳಿಗೆ ಅಂಟಿಕೊಂಡಿರುವ ಯಾವುದಾದರೂ
ಉಂಗುರವಿದೆಯೇ ನೋಡಿಕೊಳ್ಳಿ.



ಖಾಲಿ ಹಸ್ತಗಳನ್ನು
ಕ್ಷಮೆ ಕೇಳುವ ಹಾಗೆ ಜೋಡಿಸಿಡಿ.




ಘಲ್ಲು ಘಲ್ಲೆನ್ನುವ ಕಾಲ್ಗೆಜ್ಜೆಗಳನ್ನು
ಬಿಚ್ಚಿಟ್ಟುಬಿಡಿ
ಶ್..ಜಾಗ್ರತೆ
ಶಬ್ದ ಕೇಳಿಸಬಾರದು.
ಕಾಲುಗಳನ್ನು ಸುಮ್ಮನೆ ಬಿಡಬಾರದು -
ಕಟ್ಟಿಹಾಕಬೇಕು.
ಮತ್ತೆ ಎದ್ದು ಬರಬಾರದು
ಯಾರ ನೆನಪಿನಂಗಳಕ್ಕೂ.





ಸಾಕು
ಎಲ್ಲ ತಯಾರಿಗಳೂ ಮುಗಿದವು
ಈಗ ನೋಡುವ ಸಮಯ.



ಕಡೆಯ ಬಾರಿ ಒಮ್ಮೆ ನೋಡಿ ಹೋಗೋಣ .





ಏನನ್ನೂ ಕೊಂಡು ಹೋಗುತ್ತಿಲ್ಲವೆಂದು
ಸರಿಯಾಗಿ ನೋಡಿ ಖಾತ್ರಿಪಡಿಸಿಕೊಳ್ಳಿ.





ಸ್ವಲ್ಪ ದೂರ ನಿಂತು
ಕಣ್ಣುಗಳನ್ನು ಒರೆಸೋಣ
ಸುಡುವ ಅವಳ ಎದೆಯ ಮೇಲೊಂದು
ಹೂವನ್ನಿಡೋಣ
ಎದೆಬಿರಿಯುವಂತೆ ಜೋರಾಗಿ ಅತ್ತುಬಿಡೋಣ.





ಆದರೆ ಹೆಚ್ಚು ಹೊತ್ತು ಮಲಗಿಸುವುದು ಬೇಡ
ಗುಂಡಿ ತೋಡಿ ಮುಚ್ಚಿಹಾಕಬೇಕು ಬೇಗ.




ಹಿರಿಯರು ಇನ್ನೂ ಬದುಕಿದ್ದಾರೆ.
ಶವ ಸುಡಲು
ಮಾವಿನ ಮರವನ್ನು ಕತ್ತರಿಸುವುದು ಬೇಡ.




ಸುಡುವುದೇ ಬೇಡ ಬಿಡಿ
ಸುಟ್ಟರೆ ಬೂದಿ ಉಳಿದುಬಿಡುತ್ತದೆ.

**
ಮಲಯಾಳಂ ಮೂಲ: ಕೀರ್ತನಾ ವಿಶ್ವನಾಥ್




ಕನ್ನಡಕ್ಕೆ - ಕಾಜೂರು ಸತೀಶ್

Monday, July 7, 2014

ಜ್ವರ

ಮಳೆಯನ್ನು ನಿಂದಿಸುತ್ತಿರುವ ಅಮ್ಮಾ ..
ವೈದ್ಯರನ್ನು ಹುಡುಕುತ್ತಿರುವ ಅಪ್ಪಾ..
ಸುಡುತ್ತಿರುವ ಹಣೆಯನ್ನು
ಮುಂಗೈಯಲ್ಲಿ ಮುಟ್ಟಿ ನೋಡುತ್ತಿರುವ ಅಕ್ಕಾ...
ಇದು ಜ್ವರವಲ್ಲವೇ ಅಲ್ಲ .





ಕೂದಲುಗಳಲ್ಲಿ
ಒದ್ದೆಯಾದ, ತಣ್ಣನೆಯ ಬೆರಳಾಡಿಸಿ
ನನ್ನನ್ನು ಬಾಚಿ ತಬ್ಬಿಕೊಂಡ
ಮಳೆಯ ಹೃದಯದ ಕಾವು ಅದು.






ಗೊತ್ತಿಲ್ಲವೇ ನಿಮಗೆ ?
ಮಳೆಯ ಮನಸ್ಸೊಂದು ಮರುಭೂಮಿ
ಶರೀರ ವಿಸ್ತಾರ ಕಡಲು.
**

ಮಲಯಾಳಂ ಮೂಲ - ಸುಜೀಷ್ ಎನ್. ಎಂ.




ಕನ್ನಡಕ್ಕೆ - ಕಾಜೂರು ಸತೀಶ್

Friday, July 4, 2014

ಆ ಗಾಯ ಮತ್ತು ಆ ಹುಡುಗನ ನಿರ್ಲಿಪ್ತತೆ..

ನಿನ್ನೆ ಮಧ್ಯಾಹ್ನ ನಾವು 'ಅಕ್ಷರ ದಾಸೋಹ' ಬಿಸಿಯೂಟ ಸವಿಯುತ್ತಿದ್ದಾಗ ತರಗತಿಯಲ್ಲಿ ಹುಡುಗನೊಬ್ಬ ಜಾರಿಬಿದ್ದು ಮಣೆಯ ನೆತ್ತಿಗೆ ಹಣೆಯನ್ನು ಚಚ್ಚಿಸಿಕೊಂಡಿದ್ದ. ಈ ಗುಡ್ಡದಲ್ಲಿ ಇಂತಹ ಘಟನೆಗಳು ನಮಗೆ ಹೊಸದಲ್ಲವಾದರೂ,ರಕ್ತ ಚಿಮ್ಮಿ ಕಣ್ಣಿಗಿಳಿಯುತ್ತಿದ್ದ ಸ್ಥಿತಿಯಲ್ಲಿ -ಆಚೀಚೆ ಒಬ್ಬೊಬ್ಬ ಅವನ ಕೈಹಿಡಿದು ನಮ್ಮ ಮುಂದೆ ತಂದು ನಿಲ್ಲಿಸಿದಾಗಲೂ,ಏಳು ವಸಂತಗಳನ್ನೂ ಕಾಣದ ಆ ಪುಟ್ಟ ಹುಡುಗ ಏನೂ ಆಗಿಲ್ಲವೆಂಬಂತೆ ನಿಂತುಕೊಂಡಿದ್ದನಲ್ಲಾ- ಅದು ನನ್ನನ್ನು ತುಂಬಾ ಕಲಕಿತು! ಕಣ್ಣಿಗೆ ,ಮೂಗಿಗೆ ಇಳಿಯುತ್ತಿದ್ದ ರಕ್ತವನ್ನು
ಗಮನಿಸಿಯಾದರೂ ,ಅಥವಾ ಅವನನ್ನು ನೋಡಲು ಕಿಟಕಿ-ಬಾಗಿಲುಗಳ ಬಳಿ ಗುಡ್ಡೆಹಾಕಿಕೊಂಡು ಕಾಯುತ್ತಿದ್ದ ಮಕ್ಕಳನ್ನು ನೋಡಿಯಾದರೂ ಅವನ ಭಾವನೆಯಲ್ಲಿ ಒಂದಷ್ಟು ಬದಲಾವಣೆ ಕಾಣಬೇಕಿತ್ತು. ಉಹೂಂ.. ಆ ಗಾಯ ಅವನ ಮನಸ್ಸಿಗೆ ನಾಟಿರಲಿಲ್ಲ. ಅವನ ನಿರ್ಲಿಪ್ತತೆ ನನ್ನ ಹೃದಯದಲ್ಲೊಂದು ಗಾಯ ಮಾಡಿಬಿಟ್ಟಿತ್ತು,ಅಷ್ಟೆ ..



ಅವನ ಕೈಹಿಡಿದು ನೆರೆಯ ಕೇರಳ ರಾಜ್ಯದ ಒಂದು ಖಾಸಗಿ ಕ್ಲಿನಿಕ್ಕಿಗೆ ಕರೆದುಕೊಂಡು ಹೋದೆ. ಪದೇಪದೇ 'ನೋವಿದ್ಯಾ?' ಎಂದು ಕೇಳುತ್ತಿದ್ದೆ. 'ಇಲ್ಲ' ಎನ್ನುತ್ತಿದ್ದ. ಸಣ್ಣಗೆ ಮಳೆಯಾಗುತ್ತಿದ್ದರೂ ಅವನ ಮೈಯ ಬಿಸಿ ಏರುತ್ತಿತ್ತು.



ಪುಟ್ಟ ಹುಡುಗ .
'ಸಾರ್..ಇಲ್ಲಿ ನೋಡು..ಸಾರ್.. ಇಲ್ಲಿ ಬಾ..'
ಎಂಬ ಸಣ್ಣಪುಟ್ಟ ವ್ಯಾಕರಣ ದೋಷ ಬಿಟ್ಟರೆ ಕನ್ನಡವನ್ನು ಮಾತನಾಡಲು ಕಲಿತುಕೊಂಡಿದ್ದ. ಮಲಯಾಳಂ ಮಾತೃಭಾಷೆ . ಮರಾಠಿಗರೇ ಬಹುತೇಕ ಇರುವ ಕಾರಣ ಅದನ್ನೂ ಅಲ್ಪಸ್ವಲ್ಪ ತಲೆಗೆ ತುಂಬಿಸಿಕೊಂಡಿದ್ದ.



ವೈದ್ಯರು ಬಂದು ಅನಸ್ತೇಷಿಯಾ ಕೊಡುವಾಗಲೂ , ಹೊಲಿಯುವಾಗಲೂ ಸುಮ್ಮನೆ ಮಲಗಿದ್ದ . ಅಷ್ಟರಲ್ಲಿ ಅವನ ಮಾವನಿಗೆ ಈ ಸುದ್ದಿ ತಲುಪಿ ,ಅಲ್ಲಿಗೆ ಬಂದಾಗಲೂ ಅದೇ ನಿರ್ಲಿಪ್ತತೆ!




ಅಪ್ಪನ ಸಂಪರ್ಕವಿರದ ಆ ಮಗುವಿನ ಭಾವನಾತ್ಮಕ ಒಳ ಸಂಘರ್ಷಗಳು ಅವನನ್ನು ಇಡಿಯಾಗಿ ಹೇಗೆ ಕದಡಿಹಾಕಿದೆ ಎಂಬುದನ್ನು ಊಹಿಸುತ್ತಿದ್ದೇನೆ. ಇತ್ತ ಕೆಲಸದ ನಿಮಿತ್ತ ದೂರದಲ್ಲಿರುವ ಅಮ್ಮನ ಮುಖವೂ ನಿತ್ಯ ಕಾಣುವುದಿಲ್ಲ . ಒಂದು ನಿಮಿಷವೂ ಕೂತಲ್ಲಿ ಕೂರದ ಅವನ ಅಷ್ಟು Hyper-activeness ಗೆ ಸೂಕ್ತ ಮಾರ್ಗ ತೋರಿಸುವುದಕ್ಕೆ ಸದ್ಯದ ವ್ಯವಸ್ಥೆಯಲ್ಲಿ ನಮಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಮತ್ತೊಂದು ಗಾಯ ನನ್ನಾಳಕ್ಕೆ ಇಳಿಯುತ್ತಲೇ ಇದೆ..



**
-ಕಾಜೂರು ಸತೀಶ್

Wednesday, July 2, 2014

ಬಿಕ್ಕಟ್ಟಿನ ಕಾಲದಲ್ಲಿ ಅವಿಸ್ಮರಣೀಯ ಸಾಹಿತ್ಯ ಮೇಳಗಳು..

ಕವಿ,ಹೋರಾಟಗಾರ ಮೃದುಮನಸ್ಸಿನ ಬಸವರಾಜ ಸೂಳಿಭಾವಿಯವರ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ . ಆಮೇಲೆ , ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚಿಸಲು ಮಡಿಕೇರಿಗೆ ಬಂದಿಳಿದಿದ್ದೇ ತಡ,ತುಂಬಾ ಆಪ್ತವಾಗಿ,ಗಂಭೀರವಾಗಿ ಮಾತನಾಡಿದ್ದರು.

ಮತ್ತೆ ,ಮೊನ್ನೆ ಹಾವೇರಿಯಲ್ಲಿ ನಡೆದ 'ಮೇ ಸಾಹಿತ್ಯ ಮೇಳ'ದ ಕವಿಗೋಷ್ಠಿಗೆ ಆಹ್ವಾನಿಸಿದ್ದರು.ತಮ್ಮ 'ಲಡಾಯಿ' ಪ್ರಕಾಶನದ ವತಿಯಿಂದ ಕೆಲವು ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಿದ ಮೇ ಸಾಹಿತ್ಯ ಮೇಳವು ಸದ್ಯದ ನಮ್ಮ ಸವಾಲುಗಳ ಕುರಿತು ಸೂಕ್ಷ್ಮವಾಗಿ ಬೆಳಕು ಚೆಲ್ಲಿತು. ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಪರಮ ಹಂಬಲವನ್ನಿಟ್ಟುಕೊಂಡ ಮೇಳವು- ಕೋಮುವಾದ, ಭಯೋತ್ಪಾದಕತೆ,ಬಂಡವಾಳಶಾಹಿ ಧೋರಣೆ ಮುಂತಾದ ಆತಂಕಕಾರಿ ಅಂಶಗಳನ್ನು ಪ್ರಬಲವಾಗಿ ಖಂಡಿಸಿತು.

ಮೇ ಸಾಹಿತ್ಯ ಮೇಳ-೨೦೧೪, ಈ ನಾಡಿನ ಅಪೂರ್ವ ಚಿಂತಕರ ಸಮಾಗಮ.ಅಲ್ಲಿ ವಿದ್ವತ್ ಪೂರ್ಣ ಗೋಷ್ಠಿಗಳು, ಹೋರಾಟದ ಗೀತೆಗಳು ,ನಾಟಕ, ಪುಸ್ತಕ ಪ್ರದರ್ಶನ-ಮಾರಾಟ, ಊಟೋಪಚಾರಗಳಿದ್ದವು.

'ನನ್ನ ಕಾವ್ಯ -ನನ್ನ ಬದುಕು ' ಕಾರ್ಯಕ್ರಮದಲ್ಲಿ ದು.ಸರಸ್ವತಿ , ಎಚ್.ಎನ್.ಆರತಿ, ಸತೀಶ ಕುಲಕರ್ಣಿಯವರು ತೆರೆದಿಟ್ಟ ಬದುಕು ಮತ್ತು ಅದರಂತೆಯೇ ಇದ್ದ ಕವಿತೆ ವಿಶಿಷ್ಟವಾಗಿತ್ತು. ದು. ಸರಸ್ವತಿಯವರ ಕವಿತೆಯಂತೂ ಎಂಥವರನ್ನೂ ಬೆಚ್ಚಿಬೀಳಿಸುವ ಪ್ರತಿಮೆಗಳಿಂದ ಕೂಡಿದ್ದವು.

ಎ.ರೇವತಿಯವರು ಬರೆದ ತಮ್ಮ ಹಿಜ್ರಾ ಜೀವನದ ನೋವು -ನಲಿವುಗಳನ್ನು ನಾಟಕದಲ್ಲಿ ತಾವೇ ಅಭಿನಯಿಸುವ ಮೂಲಕ ಪಾತ್ರಗಳಿಗೆ ಜೀವ ತುಂಬಿದರು.ಭಾರತೀಯ ನಾಟಕ ರಂಗದಲ್ಲಿ ಇದೊಂದು ವಿಶಿಷ್ಟ ಪ್ರಯೋಗ .

ತೆಲುಗಿನ ಖ್ಯಾತ ಕವಿಗಳಾದ ಕೆ. ಶಿವಾರೆಡ್ಡಿ ಹಾಗೂ ನಗ್ನಮುನಿಯವರ ಉಪಸ್ಥಿತಿ ಮತ್ತು ಅವರೊಂದಿಗಿನ ಸಂವಾದವು ಮೇಳದ ಗಂಭೀರತೆಯನ್ನು ಹೆಚ್ಚಿಸಿದವು. ಡಾ.ಟಿ.ಆರ್.ಚಂದ್ರಶೇಖರ, ಡಾ.ಚಂದ್ರ ಪೂಜಾರಿ, ಪ್ರೊ. ವಿ.ಎಸ್.ಶ್ರೀಧರ, ದಿನೇಶ್ ಅಮೀನ್ ಮಟ್ಟು, ಡಾ. ಭಂಜಗೆರೆ ಜಯಪ್ರಕಾಶ್, ಡಾ.ಬಿ.ಎನ್. ಸುಮಿತ್ರಾಬಾಯಿ,ಡಾ.ಲಕ್ಷ್ಮೀನಾರಾಯಣ, ಡಾ.ಮುಜಾಫ್ಘರ್ ಅಸಾದಿ,ಪ್ರೊ.ಬಿ. ಗಂಗಾಧರಮೂರ್ತಿ ಮೊದಲಾದ ಚಿಂತಕರು ಅಸಮಾನ ಕರ್ನಾಟಕದ ಪ್ರತಿರೋಧದ ನೆಲೆಗಳನ್ನು , ಸವಾಲುಗಳನ್ನು ವರ್ತಮಾನ ಹಾಗೂ ಭವಿಷ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.


ಕಿರಿಯರೆಂಬ ಭೇದವಿಲ್ಲದೆ ಬರೆದ ಬರೆಹಗಳಿಗೆ ಅನಿಸಿಕೆ ಹೇಳುತ್ತಿದ್ದ , ಬೆನ್ನು ತಟ್ಟುತ್ತಿದ್ದ ಶೂದ್ರ ಶ್ರೀನಿವಾಸ್, ಎಂ.ಎಸ್.ರುದ್ರೇಶ್ವರಸ್ವಾಮಿ ,ಡಾ. ಎಚ್.ಎಸ್.ಅನುಪಮಾ, ಡಾ.ಕೃಷ್ಣ ಗಿಳಿಯಾರ್ ,ಗಣೇಶ್ ಹೊಸ್ಮನೆ, ಚಿನ್ಮಯ್ ಹೆಗ್ಡೆ, ನಾಗರಾಜ ಹರಪನಹಳ್ಳಿ, ಮಮತಾ ಅರಸೀಕೆರೆ ಮೊದಲಾದವರನ್ನು ಮೊದಲ ಬಾರಿಗೆ ಮುಖತಃ ನೋಡುವ ಅವಕಾಶವನ್ನು ಮೇಳವು ಒದಗಿಸಿತ್ತು. ಜಿಲ್ಲೆಯಿಂದ ಜಾನ್ ಸುಂಟಿಕೊಪ್ಪ
ನನ್ನೊಂದಿಗಿದ್ದರು.

*

ಲಕ್ಷಾಂತರ ಜನ ಮಡಿಕೇರಿಯ ಬೀದಿ-ಬೀದಿಗಳಲ್ಲಿ ನಡೆದುಹೋಗುವುದೆಂದರೆ? ಮತ್ತೆ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಾಗುತ್ತಿದೆ. ಆ ಕ್ಷಣಗಳನ್ನು ನೆನೆದರೆ ರೋಮಾಂಚನವಾಗುತ್ತದೆ. ಅದರಲ್ಲಿ ಹಗಲು -ರಾತ್ರಿಯೆನ್ನದೆ ದುಡಿದ ಮಂದಿಗೆ 'ಆತ್ಮ ತೃಪ್ತಿ'ಯ ಬಹುದೊಡ್ಡ ಕಾಣಿಕೆ ಇದ್ದೇ ಇರುತ್ತದೆ . ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮತ್ತು ಬಳಗಕ್ಕೆ ಅದರ ಶ್ರೇಯಸ್ಸು ಸಲ್ಲಬೇಕು.

ಕೊಡಗಿನಲ್ಲಿ ಈ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಹಿರಿಯ ಪತ್ರಕರ್ತರಾದ ಟಿ.ಕೆ. ತ್ಯಾಗರಾಜ್ ತಮ್ಮ ಜಾಲತಾಣದ ಗೋಡೆಯಲ್ಲಿ ಬರೆಯುತ್ತಿದ್ದರು. ಕೊಡಗನ್ನು ಇನ್ನೂ ಹೃದಯದಲ್ಲಿಟ್ಟುಕೊಂಡೇ ಬದುಕುತ್ತಿರುವ ಅವರ ಇಲ್ಲಿನ ನೆನಪುಗಳು ಆರ್ದ್ರವಾಗಿ ತಟ್ಟುತ್ತವೆ. ಪ್ರತೀ ಸಮ್ಮೇಳನಗಳೂ ಪ್ರತಿಯೊಬ್ಬರ ಎದೆಯಲ್ಲಿ ಉಳಿಯುತ್ತವೆ ಎನ್ನುವುದಕ್ಕೆ ಅವರ ಮಾತುಗಳು ಸಾಕ್ಷಿಯಾಗುತ್ತವೆ.

ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಅತ್ಯುತ್ತಮವಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದ ಪುಸ್ತಕ ಮಳಿಗೆಗೆ ಹೋಗಿದ್ದೆ.ಲಡಾಯಿ ಬಸೂ ಅಲ್ಲೇ ಆ ಸಂಜೆ ಸಮಾನ ಮನಸ್ಕರ ಕವಿಗೋಷ್ಠಿಯೊಂದನ್ನು ಏರ್ಪಡಿಸುವ ಸಿದ್ದತೆಯಲ್ಲಿದ್ದರು. ಸಮಾನತೆಯ ಬೀಜ ಬಿತ್ತುವ ಅವರ ಕನಸು ಎಷ್ಪರ ಮಟ್ಟಿಗೆ ಜಾಗೃತಗೊಂಡಿದೆ ಎಂಬುದನ್ನು ಊಹಿಸಿಕೊಂಡೆ.

ಈಗಲೂ ,ಸಾಹಿತ್ಯ ಸಮ್ಮೇಳನದ ಕೆಲವು ಕ್ಷಣಗಳನ್ನು ಯೂಟೂಬಿನಲ್ಲಿ ನೋಡಿ ಸಂಭ್ರಮಿಸುತ್ತೇನೆ.

*

ಎಲ್ಲ ಸಾಹಿತ್ಯ ಕಾರ್ಯಕ್ರಮಗಳ ಆಶಯ ಒಂದೇ - ಅದು ಈ ನೆಲದ ನಾಡಿಮಿಡಿತವನ್ನು ಅರಿಯುವುದು.ಕೆಲವು ಸಾಹಿತಿಗಳೆನಿಸಿದವರು ಅದನ್ನು 'ಶೋಕಿ' ಮಾಡುವ ಸ್ಥಳಗಳೆಂದುಕೊಂಡಿದ್ದರೂ , ಸಾಮಾಜಿಕ -ಸಾಂಸ್ಕೃತಿಕ ಕಳಕಳಿಯಿಲ್ಲದ ಯಾವೊಬ್ಬ ಬರೆಹಗಾರನೂ 'ಸಾಹಿತಿ' ಎನಿಸಿಕೊಳ್ಳಲಾರ. ಯಾವುದೋ ಕೆಲವು ಸಿದ್ಧಾಂತಕ್ಕೆ ಕಟ್ಟುಬಿದ್ದ ಸಾಹಿತಿಗಳೆನಿಸಿದ ಕೆಲವು ಮಂದಿ ಬೌದ್ಧಿಕ ದೀವಾಳಿಗಳಾಗುತ್ತಿದ್ದಾರೆ.ಈ ಹೊತ್ತು ,ಸಿದ್ಧಮಾದರಿಯ ಸಮಾನತೆಯ ಕಲ್ಪನೆಗಳನ್ನು ಮರುರೂಪಿಸಿ ,ಸಾಂಸ್ಥಿಕ ನ್ಯಾಯವನ್ನು ದೊರಕಿಸಿಕೊಡಲು ಹೋರಾಡುತ್ತಿರುವ ಕೆಲವು ಮಂದಿಗಾದರೂ ಅಂಥ ಪ್ರಜ್ಞೆಯಿದೆಯಲ್ಲಾ ಎಂಬುದನ್ನು ನೆನೆದಾಗ ಖುಷಿಯಾಗುತ್ತದೆ.

*

-ಕಾಜೂರು ಸತೀಶ್



ಶಿವ

ಶಿವ
ಪ್ರತಿದಿನ
ಹಣೆಗೆ ಟಾರ್ಚ್ ಕಟ್ಟಿ
ರಬ್ಬರ್ ಟ್ಯಾಪಿಂಗಿಗೆ ಹೊರಡುತ್ತಾನೆ.
ತಮಾಷೆಗೆ ನಾನವನನ್ನು
'ಮುಕ್ಕಣ್ಣ' ಎನ್ನುತ್ತೇನೆ.





ಅಪ್ಪಿತಪ್ಪಿ ಬಿದ್ದು
ಅವನ 'ಹಣೆಗಣ್ಣು' ಒಡೆದರೆ
ದಾರಿ ಕಾಣೋದಿಲ್ಲ-
ವಿಷಜಂತುಗಳಿರುವ ರಬ್ಬರ್ ತೋಟದಲ್ಲಿ .





ಮುಂಜಾನೆ ಮೂರರ ಸಮಯ.
ನನ್ನ ಕವಿತೆಗಳು ಹಡೆಯುವ ಹೊತ್ತು .
ಆ ಏಕಾಂತದಲ್ಲಿ ಶಿವನೂ ಒಬ್ಬ ಕವಿಯೇ,
ಬರೆದಿಡುತ್ತಾ ಕೂತರೆ
ಹೊಟ್ಟೆಗೆ ಹಿಟ್ಟು ಸಿಗೋದಿಲ್ಲ,ಅಷ್ಟೆ .





ಅವನ ಹಣೆಗಣ್ಣಿಗೆ ಚಾರ್ಜ್ ಆಗುವ ಸೂರ್ಯ
ಅವನು ದಣಿವಾರಿಸಿಕೊಳ್ಳುವ ಹೊತ್ತು
ಉರಿಯಲು ತೊಡಗುತ್ತದೆ.
ಹಗಲಿಡೀ ಅವನ ಕಣ್ಣು ಆಕಾಶದಲ್ಲಿ .





ಒಬ್ಬ ಕಲಾವಿದ ಕಂಡರೆ
'ಶಿವ'ನ ನಿಜರೂಪ ಬಿಡಿಸಲು ಹೇಳಬೇಕು
ಮುಂಜಾವ ರಬ್ಬರ್ ಟ್ಯಾಪಿಂಗ್ ಮಾಡಲು ಹೊರಡುವ ಹೊತ್ತು .
**

-ಕಾಜೂರು ಸತೀಶ್