ಮದುವೆ ಕಾಗದ
ಶಾಲೆಗೆ ತರೋದು ಅಂದ್ರೆ
ಅವಳಿಗೆ ಒಂಥರಾ ನಾಚಿಕೆ
ಶಿಕ್ಷಕರ್ಯಾರೂ ಬಂದಿರದ
ಒಂದು ಫ್ರೀ ಪೀರಿಯಡ್ನಲ್ಲಿ
ಪುಸ್ತಕದ ಒಳಗೆ ಜೋಪಾನವಾಗಿರಿಸಿದ್ದ
ಕಂದು ಬಣ್ಣದ ಮದುವೆ ಕಾಗದವನ್ನು
ಹೊರತೆಗೆದಳು ಅವಳು
ಕರಿಹಲಗೆಯ ಎರಡಾಗಿ ಸೀಳುವ ಜಾಗದಲ್ಲಿ ನಿಂತು
"...ಮತ್ತೆ ...ನನ್ನ ಮದ್ವೆ ಬರುವ ಇಪ್ಪತ್ತಾರಕ್ಕೆ...
ಎಲ್ಲ ಬರಬೇಕು ಆಯ್ತಾ..."
ಅವಳ ಮೌನದಂಥ ಮಾತುಗಳನ್ನು ಕೇಳಿ
ದನಿಯನ್ನು ಹೆಕ್ಕುವ ಸ್ಪರ್ಧೆಗೆ ನಿಂತಂತಿರುವ
ತರಗತಿಗೆ ಮೌನ!
"ಹುಡುಗ ಏನ್ ಕೆಲಸ ಮಾಡ್ತಾನೆ?"
ಯಾರೋ ಕೇಳಿದಾಗ
"ಸೌದಿಯಲ್ಲಿ" ಎಂದಳಾಕೆ
ನಮ್ಮ ಪಿಯುಸಿ ತರಗತಿಯ
ಮೊದಲ ಮದುವೆಯಿದು
ಕಾತರ ಎಲ್ಲರಿಗೂ
ಎಲ್ಲರೂ ಸೇರಬೇಕು
ಯಾವ ಡ್ರೆಸ್ ಹಾಕೋದು?
ಒಟ್ಟಿಗೆ ಹೋಗೋಣ
ಯಾವ ಬಸ್ ಸ್ಟಾಪಿನಲ್ಲಿ ಕಾಯುವುದು?
ಒಂದಷ್ಟು ದಿನ ಅದೇ ಚರ್ಚೆ
ಅವಳು ಮಾತ್ರ
ಇಂಥ ಮಾತುಗಳಿಂದ ಇಳಿದು
ಹೊರಟು ಹೋದಳು
ಓದುವುದು, ನೋಟ್ಸ್-ರೆಕಾರ್ಡ್ ಬರೆಯುವುದು...
ಪುಸ್ತಕದೊಳಗೇ ಬದುಕಿದಳು ಅವಳು
ಮದುವೆಯ ಹಿಂದಿನ ದಿನವೂ
ಅವಳು ಕಾಲೇಜಿಗೆ ಬಂದಿದ್ದಳು
"ಏ ಬರ್ಬೇಕು ಆಯ್ತಾ?"
ಪ್ರತೀ ಬೆಂಚಿನ ಪ್ರತಿಯೊಬ್ಬರನ್ನೂ
ಮತ್ತೆ ಮತ್ತೆ ಆಹ್ವಾನಿಸಿದಳು ಪ್ರೀತಿಯಿಂದ
ಪೇಟೆಯಿಂದ
ಎರಡು ಬಸ್ಸಿನಲ್ಲಿ ಕ್ರಮಿಸಿ
ಅವಳ ಮನೆ ತಲುಪಿದರೆ
ಅವಳು ಓಡಿಬಂದು ಕೈ ಹಿಡಿದುಕೊಂಡಳು
ಕೈಯ ಮದರಂಗಿಯ ಅಲಂಕಾರವನ್ನು ತೋರಿಸಿದಳು ಅವಳ ಬೆಚ್ಚಗಿನ ಆಲಿಂಗನದಲ್ಲಿ ಅವಳ ಮುಖ ಕೆಂಪಾಗಿ ಹೋಗಿತ್ತು
ಅವಳ ಉಮ್ಮ
ಕುಡಿಯಲು ತಂಪಾದ ಶರಬತ್ತು ಕೊಟ್ಟರು
ಅವಳ ಮದುವೆಯ ದಿನ ತಿಂದ ಬಿರಿಯಾನಿಯ
ರುಚಿ ಮತ್ತೆಂದೂ ಸಿಗಲೇ ಇಲ್ಲ
ಗಂಡ ಮರಳಿ ಸೌದಿಗೆ ಹೋಗುವವರೆಗೆ
ಅವಳು ಕಾಲೇಜಿಗೆ ಬರಲಿಲ್ಲ
ಒಮ್ಮೆ ಇಬ್ಬರೂ ಬಂದು
ಅತ್ತರಿನ ಪರಿಮಳವನ್ನೂ
ಒಂದು ಬಾಕ್ಸ್ ಮಿಠಾಯಿಯನ್ನೂ
ಹಂಚಿ ಹೋದರು
ನಾವೆಲ್ಲರೂ
ಹೊಸ ಬಟ್ಟೆಯಲ್ಲಿ ಲಕಲಕ ಹೊಳೆಯುವ ಅವಳನ್ನು
ಬೆರೆಗಿನಿಂದ ನೋಡಿದೆವು
ಅವಳು ನಮಗಿಂತಲೂ ಪ್ರಬುದ್ಧೆಯಂತೆ ಕಂಡಳು
ಅವಳ ಮಾತಲ್ಲಿ ಅವಳ ಅಜ್ಜಿಯಷ್ಟು ಅನುಭವವಿತ್ತು
"ಅವ್ಳು ಬದಲಾಗ್ಬಿಟ್ಳು ಅಲ್ವಾ..."
ಎಲ್ಲರೂ ಒಟ್ಟಿಗೆ ಅಂದೆವು
ಎಷ್ಟೋ ವರ್ಷಗಳ ಅನಂತರ
ಕಳೆದ ವಾರವಷ್ಟೇ ಅವಳನ್ನು ನೋಡಿದ್ದು
ಒಂದೇ ನೋಟಕ್ಕೆ ನನ್ನ ಗುರುತು ಸಿಕ್ಕಿ
ಹೆಸರು ಹಿಡಿದು ಕರೆದಳು
"ಪಿಯುಸಿ ಓದ್ವಾಗ ನನ್ನ ಮದುವೆಯಾಯ್ತು ನೆನ್ಪಿದೆಯಾ?" ಎಂದಾಗ ನನಗೆ ಅವಳ ನೆನಪಾಯಿತು
"ಮತ್ತೆ ಓದ್ಲಿಕ್ಕೆ ಆಗ್ಲಿಲ್ಲ ಕಣೇ...
ಮದುವೆ ಆಗ್ಲಿಕ್ಕೆ ಅವತ್ತೇನೂ ಇಷ್ಟ ಇರ್ಲಿಲ್ಲ
ನನ್ನ ಉಮ್ಮ ಮತ್ತೆ ಅಜ್ಜಿಗೂ
ಆ ಕಾಲದಲ್ಲಿ ಇಷ್ಟ ಇರ್ಲಿಲ್ವಂತೆ"
ಅವಳ ಎದೆಯೊಳಗಿದ್ದ
ಎಷ್ಟೋ ಹೆಣ್ಣು ಮಕ್ಕಳ ಮಾತುಗಳು,
ಪುಸ್ತಕದ ಹಾಳೆಗಳ ತಿರುವುವ ಸದ್ದು
ನನ್ನ ಕಿವಿಯ ಸದ್ದಡಗಿಸಿತು
ಆಮೇಲೆ ಅವಳು ಏನು ಹೇಳಿದಳೋ
ನನಗೇನೂ ಕೇಳಿಸಲಿಲ್ಲ!
*
ಮಲಯಾಳಂ ಮೂಲ- ರಗಿಲ ಸಜಿ
ಕನ್ನಡಕ್ಕೆ- ಕಾಜೂರು ಸತೀಶ್