ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, September 9, 2025

ನಿನ್ನೊಡಲಿನಲ್ಲಿ

ಪುಸ್ತಕದ ಒಳಗೆ ಭದ್ರವಾಗಿ ಬದುಕಿಕೊಂಡಿತ್ತು ನನ್ನೀ ಕವಿತೆ. ಇಪ್ಪತ್ತು ವರ್ಷಗಳ ಹಿಂದೆ, ನಾನು ವಿದ್ಯಾರ್ಥಿಯಾಗಿದ್ದಾಗ ಹುಟ್ಟಿದ್ದು . ಪತ್ರಿಕೆಗೆ ಕಳುಹಿಸಲು ಟೈಪ್ ರೈಟರಿನಲ್ಲಿ ಟೈಪು ಮಾಡಿಸಿ ಇಟ್ಟಿದ್ದೆ. ಅದರ ಛಾಯಾ ಪ್ರತಿಯನ್ನು ಸ್ಥಳೀಯ ಪತ್ರಿಕೆಯೊಂದಕ್ಕೆ ಕಳಿಸಿದ್ದೆ.ಅದು ಪ್ರಕಟವಾಗಲಿಲ್ಲ ಅನ್ನೋದು ನನಗೀಗ ಖುಷಿಯ ಸಂಗತಿ! (ಆದರೆ ಆಗ ಬೇಸರವಾಗಿತ್ತು!)

ಈ ಕವಿತೆಯಲ್ಲಿ ಮಾತು ಹೆಚ್ಚಿದೆ.  ಹೊಸ ನುಡಿಚಿತ್ರಗಳನ್ನು ಕಟ್ಟುವ ಹಂಬಲವಿದ್ದರೂ ಪೂರ್ವಸೂರಿಗಳ ನೆರಳಿದೆ. ಈಗ ನಾನು ಮೂರ್ನಾಲ್ಕು ಸಾಲುಗಳಲ್ಲಿ ಇದೇ ಅರ್ಥವನ್ನು ಹೆಣೆಯಬಹುದಾದ/ ಹೊಳೆಯಿಸಬಹುದಾದ ಈ ಕವಿತೆ ನನಗೆ ಹೊಸ ಭರವಸೆಯನ್ನೂ, ಅಧ್ಯಯನಕ್ಕೆ ಮುನ್ನುಡಿಯನ್ನೂ ಒದಗಿಸಿದ್ದಂತೂ ಸತ್ಯ.
*


 

ನಿನ್ನೊಡಲಿನಲ್ಲಿ
-----------------------

ನಿನ್ನ ಮೌನ ಸಾಮ್ರಾಜ್ಯದ ತುಂಬ ನಿತ್ಯ ಪರ್ವ
ಗರಿಬಿಚ್ಚಿ ಚಿಗಿಯುತಿದೆ ಹಸಿರು ಸೀರೆಯ ನೀರೆ
ಎದೆಯೊಳಗವಿತು ಹರಿದರೇನು ವೈತರಣಿಯ ನೆತ್ತರ ಧಾರೆ?
ಧಾರಣದ ಹಾಲುಮೊಗದಿ ನಲಿಯುತಿದೆ ಬೆರಗಿನ ಕೋಟಿ ತಾರೆ.

ಅರಿವಿನ ಝಳಪಿನಲಿ ಇರುಳು ಕ್ಷಯಿಸುವ ಹಾಗೆ
ಬೂರುಗ, ಮುತ್ತುಗದ ಸಾಲುದೀಪದ ಹೊಳಪಿಗೆ
ಸಕಲ ಕಣ್ಣ ಇರುಳ ತೆರೆಹರಿದು ಹೃದಯಸುಮ ಬಿರಿದು ದುಂಬಿಗಳ ಕರೆದು
ನೆನಪಿನಾಳದ ಬಿರುಕುಗಳೆಲ್ಲಾ ಬಿಗಿದು
ಚಿತ್ರ-ವಿಚಿತ್ರ ಸ್ವಪ್ನಗಳಾಗುತ್ತವೆ!

ನಿನ್ನುಸಿರ ಮಂದಾನಿಲದ ಸ್ಪರ್ಶಕೆ
ಈ ಲೇಖನಿ, ಕೋಟಿ ಉದರವಿರದ ಹಸುಳೆಗಳು ನಿದ್ರಿಸುತ್ತವೆ
ಒಮ್ಮೊಮ್ಮೆ ಉಸಿರು ಮಂದ್ರವಾಗಿ ಮೈಕೊಡವಿದಾಗ
ಜೀವಜಾಲ ನಿರ್ಲಿಪ್ತಗೊಳ್ಳುತ್ತದೆ
ಎದೆಯ ಮಬ್ಬು ಕರಗಿ ವಿಮಲ ದೀಪಗಳುರಿಯುತ್ತವೆ.

ಬೇಡ ತಾಯೇ, ಬೇಡ ಗುರುವೇ
ನಿನ್ನೊಡಲಿನಲ್ಲಿ ಬೋಧಿವೃಕ್ಷವಾಗುವುದು ಬೇಡ
ಒಂದು ಕಿರು ಮಿಂಚುಹುಳುವಾದರೂ ಸರಿಯೆ
ಹೆಸರಿರದ ಬಾಂದಳದ ಚುಕ್ಕಿಯಂತೆ
ನನ್ನದೇ ಬೆಳಕಿನಲಿ ಬದುಕಲವಕಾಶ ನೀಡು.
*

✍️ಕಾಜೂರು ಸತೀಶ್

Monday, September 8, 2025

ಒಂದು ಫೋನ್ ಕರೆ ಮತ್ತು...

ಮೂರು ವರ್ಷಗಳ ಹಿಂದೆ ಒಂದು ಸಂಜೆ ನನಗೆ ಕರೆಮಾಡಿ ತಮ್ಮನ್ನು ಪರಿಚಯಿಸಿಕೊಂಡು 'ಸತೀಶ್ ನಿಮ್ಮ ಪುಸ್ತಕ ಓದಿದೆ...' ಎನ್ನುತ್ತಾ ಮಾತಿಗಿಳಿದರು. ನೋವಿನ ಆಳಬಾವಿಯಿಂದ ಪ್ರತಿಧ್ವನಿಸುತ್ತಿದೆಯೇನೋ ಎಂಬಂತಿದ್ದವು ಅವರ ಮಾತುಗಳು. ನಡುನಡುವೆ ಜೀವವನ್ನು ಹಿಸುಕುತ್ತಿವೆಯೇನೋ ಎಂಬಂಥ ಕೆಮ್ಮು.

ಕವಿತೆ ಹೇಗಿರಬೇಕು ಎಂಬುವುದರ ಕುರಿತು ಹೇಳುತ್ತಾ 'ನಾವು ಏನು ಹೇಳುತ್ತಿದ್ದೇವೆ ಎಂಬ ಖಚಿತತೆ ಬರೆಯುವವರಿಗೇ ಇಲ್ಲದಿದ್ದಾಗ ದೊಡ್ಡ ದೊಡ್ಡ ಉಪಮೆ ಪ್ರತಿಮೆಗಳೆಲ್ಲ ಸೊರಗುತ್ತವೆ' ಎಂದರು. ಅದನ್ನು ಪುಷ್ಟೀಕರಿಸಲು ತಾವು ಓದಿದ ಕವನ ಸಂಕಲನವನ್ನು ಉದಾಹರಿಸಿದ್ದರು.


ಸರ್ಕಾರಿ ಕೆಲಸ ದಕ್ಕದಿರುವುದು, ಮದುವೆಯಾಗದಿರುವುದು ಮತ್ತು ಅನಾರೋಗ್ಯ- ಈ ಮೂರೂ ಅವರನ್ನು ಹಸಿಹಸಿ ತಿಂದುಹಾಕಿದ್ದವು. ಖಾಸಗಿ ಸಂಸ್ಥೆಯಲ್ಲಿ ಇಂಗ್ಲಿಷ್ ವಿಷಯವನ್ನು ಬೋಧಿಸುತ್ತಾ ಪ್ರಾಂಶುಪಾಲರ ಹುದ್ದೆಯನ್ನು ನಿರ್ವಹಿಸಿ ಕಡೆಗೆ ಸರಿಯಾದ ಸಂಬಳ ದೊರೆಯದೆ, ಪ್ರಶ್ನಿಸಿದಕ್ಕಾಗಿ ಕೆಲಸವನ್ನೂ ಕಳೆದುಕೊಂಡು, ಒಂದಷ್ಟು ವರ್ಷ ವಕೀಲರಾಗಿ ದುಡಿದು ಕೊನೆಗೆ ಎಲ್ಲವನ್ನೂ ತೊರೆದು ಸಹೋದರಿಯೊಂದಿಗೆ ಬದುಕುತ್ತಿರುವ ಕಥೆಯನ್ನು ವಿಷಾದದಿಂದಲೇ ಹೇಳಿಕೊಂಡಿದ್ದರು.


ಅವರು ನನ್ನ ಕೃತಿಯ ಬಗ್ಗೆ ಮಾತನಾಡಿದ್ದು ನನಗೆ ಮುಖ್ಯವೆನಿಸಲೇ ಇಲ್ಲ. ಅವರ ಧ್ವನಿಯ ಕಂಪನಾಂಕದ ದುಃಖಭರಿತ ಕಂಪನಗಳಷ್ಟೇ ನನ್ನೊಳಗೆ ರಿಂಗಣಿಸತೊಡಗಿದ್ದು.

ಆ ಮಾತುಗಳು ನನ್ನ ಕಿವಿಯಿಂದ ಇನ್ನೂ ತಪ್ಪಿಸಿಕೊಂಡಿರಲಿಲ್ಲ- ತಿಂಗಳು ಕೂಡ ಕಂತಿರಲಿಲ್ಲ - ಒಂದು ಮುಂಜಾವ ಎಂದಿನಂತೆ ಪ್ರಜಾವಾಣಿ ಓದುತ್ತಿದ್ದಾಗ ಕಸ್ತೂರಿ ಬಾಯರಿ ಎಂಬ ಆ ಲೇಖಕಿಯ ನಿಧನದ ಕುರಿತು ಸುದ್ದಿ ಓದಿದೆ!
*


ನಿನ್ನೆ ಮುದೋಳದಿಂದ ಒಂದು ಕರೆ ಬಂದಿತ್ತು. ಹಿರಿಯರಾದ ಮಲ್ಲಿಕಾರ್ಜುನ ಹೆಗ್ಗಳಗಿ ಸರ್ ಕರೆ ಮಾಡಿ 'ಸಂಗಾತ'ದಲ್ಲಿ ಪ್ರಕಟಗೊಂಡ ನನ್ನ ಮಿನಿಕತೆಗಳ ಕುರಿತು ಮಾತನಾಡಿದರು. ಅವರ ಪ್ರೊಫೈಲ್ ಹುಡುಕುತ್ತಿದ್ದಾಗ ಕಸ್ತೂರಿ ಬಾಯರಿ ಅವರ ಕುರಿತು ಬರೆದ ಲೇಖನವೊಂದು ಕಾಣಿಸಿತು- ಇದೆಲ್ಲ ನೆನಪಾಯಿತು.


ಸಂಗಾತ ಪುಸ್ತಕವು ಕಸ್ತೂರಿ ಬಾಯರಿಯವರ ಸಮಗ್ರ ಕಥೆಗಳನ್ನು ಪ್ರಕಟಿಸಿದೆ. ನನ್ನ ಕೃತಿಯನ್ನು ಪ್ರಕಟಿಸಿದ್ದ ಸಂಗಾತ ಇಂತಹ ನೆನಪುಗಳಿಗೆ ಕಾರಣವಾಗಿದೆ. ಸಂಗಾತದ ಟಿ ಎಸ್ ಗೊರವರ ಇಂತಹ ನೆನಪುಗಳಿಗೆ ಸೇತುವೆಯಾಗಿದ್ದಾರೆ.
*

✍️ ಕಾಜೂರು ಸತೀಶ್

Friday, September 5, 2025

ಮಿಲ್ಲಿ ಮೇಡಂ

ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು OLV ಶಾಲೆಗೆ ತೆರಳಿದ್ದಾಗ, ಅಲ್ಲಿ ಪರೀಕ್ಷಾ ಅಧೀಕ್ಷಕರಾಗಿದ್ದವರು ಮಿಲ್ಲಿ ಮೇಡಂ. ಅಲ್ಲಿಯೇ ನಾನವರನ್ನು ಮೊದಲ ಬಾರಿಗೆ ನೋಡಿದ್ದು.  ಮತ್ತೆ ಅವರನ್ನು ಭೇಟಿಯಾಗಿದ್ದು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ. ಈ ನಡುವೆ ಹಲವು ವರ್ಷಗಳೇ ಸಂದುಹೋಗಿದ್ದವು.




ಮಿಲ್ಲಿ ಮೇಡಂ ಎಂದೇ ಜನಪ್ರಿಯರಾಗಿರುವ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಮೇಡಂ ಅವರಿಗೆ ಅರ್ಧಶತಮಾನದಷ್ಟು  ಸೇವಾನುಭವವಿದೆ. ಅದರಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವಧಿಯೇ ಹೆಚ್ಚು. ಯಶಸ್ವಿ ಆಡಳಿತಗಾರರ ಲಕ್ಷಣವನ್ನು ಅವರಿಂದ ನೋಡಿ ಕಲಿಯುವಷ್ಟು ಮಾಗಿದ ಜೀವನಾನುಭವ ಅವರಲ್ಲಿದೆ. ವಿವಿಧ ಬಗೆಯ ಸಿಬ್ಬಂದಿಯನ್ನು, ಅಧಿಕಾರಿಗಳನ್ನು, ಪೋಷಕರನ್ನು ನಿಭಾಯಿಸುವ ಚಾಕಚಕ್ಯತೆಯಿದೆ.  ಸಮರ್ಥ ನಾಯಕರಿಗಿರಬೇಕಾದ- ನಿರ್ಧಾರ ಕೈಗೊಳ್ಳುವಿಕೆ, ಸ್ಮರಣಶಕ್ತಿ, ನಿಷ್ಠೆ, ಹದವಾದ ಮಾತುಗಾರಿಕೆ... ಎಲ್ಲವೂ ಅವರೊಳಗಿದೆ. ಅದು ಅವರನ್ನು ಈಗ ವಿಶ್ವಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪ್ರಾಂಶುಪಾಲರ ಹುದ್ದೆಗೇರಿಸಿದೆ.

ಅರ್ಧ ಶತಮಾನದ ತಮ್ಮ ಶಿಕ್ಷಕ ವೃತ್ತಿಯ ಅನುಭವದಲ್ಲಿ ವರ್ಷದಿಂದ ವರ್ಷಕ್ಕೆ ತಮ್ಮ ಉತ್ಸಾಹವನ್ನು ಊರ್ಧ್ವಮುಖಿಯಾಗಿಸುತ್ತಲೇ ಸಾಗಿದ್ದಾರೆ. ಇದು ನಮ್ಮೆಲ್ಲರಿಗೂ ಮಾದರಿ. ಅಸಂಖ್ಯ ಶಿಷ್ಯಬಲ ಅವರ ಬೆನ್ನ ಹಿಂದಿದೆ. ಕನ್ನಡವನ್ನೂ, ಇಂಗ್ಲಿಷ್ ಭಾಷೆಯನ್ನೂ ಸ್ಪಷ್ಟವಾಗಿ ಮಾತನಾಡುವ, ಬರೆಯುವ, ಬೋಧಿಸುವ ಅವರ ಜಾಣ್ಮೆಗೆ ನಾನಂತೂ ಬೆರಗಾಗಿ ಹೀಗೆ ಬರೆಯುತ್ತಿದ್ದೇನೆ.

ಪ್ರಿಯ ಮಿಲ್ಲಿ ಮೇಡಂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐

*
✍️ಕಾಜೂರು ಸತೀಶ್