ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 1, 2023

ಮೊದಲ ಮಳೆಯ ಕವಿತೆಗಳ ಗಂಧ


ಅವರು 
ನಮ್ಮಿಬ್ಬರ ನಡುವೆ
ಗೆರೆ ಕೊರೆದರು

ನಮ್ಮ 
ಅಗಲಿಕೆಯನು 
ನಿರೀಕ್ಷಿಸಿದರು

ನಮ್ಮ 
ಕಂಪನದ ತೀವ್ರತೆಗೆ
ಮಾಪಕ ಹಿಡಿದು ನಿಂತರು

ನಾವು 
ಕೋನವಾಗಿ
ನೆಲೆ ನಿಂತೆವು
(ಅದೃಷ್ಟ ರೇಖೆ)
*


ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್ ಸಂಕಲನದ ಮೊದಲ ಕವಿತೆಯಿದು(ಜಾನ್ ಡನ್ ಈ ಬಗೆಯ conceitಗಳನ್ನು ಬಳಸಿ ಪ್ರೇಮದ ಅಮರತ್ವವನ್ನು ಸಾರಿದ್ದ). ಇದು  ನಾನು-ನೀನು, ಅವನು-ಅವಳುಗಳ ಪ್ರೇಮದ ಮೊದಲ ಮಳೆಯ ಮಣ್ಣ ಗಂಧ(ಪೆಟ್ರಿಕೋರ್)ವನ್ನು ಮೈದುಂಬಿಕೊಂಡ ಸಂಕಲನ.

  ಈ ನಾನು-ನೀನುಗಳ ಕೋನವು ಸಮಾಂತರ ರೇಖೆಗಳಾಗಿ ಚಲಿಸಿ ಸಂಧಿಸಿ ಕೋನವಾಗುವ ಬಯಕೆ ಕವಿಯದು. 

 ಈ ಜೋಡಿ 
ಸಮಾಂತರ ರೇಖೆಗಳು 
ಸಂಧಿಸಿ ಕೋನವಾಗುವ ಕಾಲ
(ಸಮಾಂತರ ರೇಖೆಗಳು)

ಈ ನಟ್ಟಿರುಳಲಿ
ಗೋಡೆ ತಬ್ಬಿದ ಗಡಿಯಾರದ
ಮೂರು ಬಾಹುಗಳನ್ನ ಬಿಗಿಯಾಗಿ ಕಟ್ಟಿ
ಒಂದಾಗಿ ಜೇನುಹನಿ
ಹನಿಹನಿಯಾಗಿ ಸ್ರವಿಸುವ ಸುಖಕೆ
(ನಮ್ಮಿಬ್ಬರ ನಡುವಿನ ಹೂವು)

ಈ ತುಟಿಪಕಳೆಗಳು 
ಅಹರ್ನಿಶಿ ಸೋಕಿದವು
ಆದರೂ ಅದು
ಚುಂಬನವಲ್ಲ ಮಹಾಮೈತ್ರಿ
(ಇದೊಂದು ಅದೃಷ್ಟ )
*

ಗಂಡು ಹೆಣ್ಣುಗಳ ಧ್ಯಾನ ಅಲೌಕಿಕವಾಗಿಯೂ ಇಲ್ಲಿ ಸಾಗುತ್ತದೆ:

ತಳುಕು ಬಿದ್ದ 
ನಾಗರ ಜೋಡಿ
ಅವನಿವಳ ಇವಳವನ
ಅದ್ವೈತವಾಗಿಸಿಕೊಂಡು ಬಿಡು.
( ಈ ಮರ್ತ್ಯದೊಳಗೆ)

ಹೆಣ್ಣಿನ ಒಳಹೊರಗುಗಳು ನಿಸರ್ಗದ  ಪರಿಭಾಷೆಯಲ್ಲಿ ವ್ಯಕ್ತವಾಗುತ್ತದೆ. ಚಿತ್ರಕ ಶಕ್ತಿಯಿದೆ ಕವಿಗೆ. ಇಲ್ಲಿ ಈಗಾಗಲೇ ಚೌಕಟ್ಟಿಗೆ  ಒಳಗಾಗಿರುವ ಸ್ತ್ರೀವಾದವಿಲ್ಲ. ಎಂದರೆ, ಸ್ತ್ರೀಯ ಮೇಲಿನ ಶೋಷಣೆ-ಮೆಚ್ಚುಗೆಗಳ ಮೇಲೆ  ಅವರು ಕವಿತೆ ಕಟ್ಟುವುದಿಲ್ಲ. ಇರುವ ಮಾದರಿಯನ್ನು ಮುರಿಯುವ ಕ್ರಮವದು.

ಅವಳ ಮಣ್ಣಿನ ಹುಂಡಿಯಲಿ
ಚೂರುಪಾರಾದ
ಕೂಡಿಸಿಟ್ಟ ಚಿಲ್ಲರೆ ಗೋಲಕ
ಪಳಾರನೆ ಒಡೆಯಲು
ಚೆಲ್ಲಾಪಿಲ್ಲಿಯಾಗಿ ಗಗನ ತುಂಬುವ ಬಿಲ್ಲೆಗಳು
ಒಡೆದ ಕುಡಿಕೆಯ ಪದರುಪದರು ಮೋಡಗಳು
(ಬೆಳದಿಂಗಳ ಬಯಕೆ)

 ನಿವೇದನೆಗಳ ಮಾದರಿಯಿವು. ಪ್ರೇಮ, ಭಕ್ತಿ, ವಿರಹ, ಮುಗ್ಧತೆ, ಪ್ರಾರ್ಥನೆ ಇಲ್ಲಿನ ವಸ್ತು. ಅನುಭಾವದ ಸೆಳಕಿವೆ ಇಲ್ಲಿ(ಕೆಲವೊಮ್ಮೆ ಒಂದೇ ಕೇಂದ್ರದ ಸುತ್ತ ಮತ್ತೆಮತ್ತೆ ಚಲಿಸಿದಂತೆಯೂ ಅನಿಸುತ್ತದೆ).
ಆಧುನಿಕ ಪರಿಭಾಷೆ ಅಲ್ಲಲ್ಲಿವೆ(ಜಿಪ್ ಲೈನ್, ಬ್ಲ್ಯಾಕ್ ಹೋಲ್, ಸಾಫ್ಟ್ ಸಂತೆ, ಇತ್ಯಾದಿ). ಸಾಮಾಜಿಕಗೊಳ್ಳುವ ಬಗ್ಗೆ ಕವಿಗೆ ಆಸಕ್ತಿಯಿಲ್ಲದಿದ್ದರೂ, 'ಬಣ್ಣ' ಕವಿತೆಯಲ್ಲಿ 

ಬಟ್ಟೆ ತೊಟ್ಟ
ಈ ಬೆತ್ತಲೆ
ಜನರ ನಡುವೆ

ಆಗಾಗ 
ನಾನು ಕಳಚುತ್ತೇನೆ
ಬಿಳಿ ಹಸಿರು ಕಪ್ಪು ಕೇಸರಿ
ಬಣ್ಣದ ಚಿಟ್ಟೆ

ಆದರೆ

ನನ್ನದೇ ಜನ
ನೋಡುತ್ತಾರೆ ನನ್ನ
ಅವರದೇ ಕಾಮಾಲೆ ಕಣ್ಣಿನಿಂದ

ಎಂದು ಸಾಮಾಜಿಕ ಅಮಲಿನ ಮೇಲೂ ಕಣ್ಣುಹಾಯಿಸುತ್ತಾರೆ.ಆದರೆ, ಈ ಬಗೆಯ ನೋಟಕ್ರಮದ ಅನುಪಸ್ಥಿತಿ ಉಳಿದ ಕವಿತೆಗಳಲ್ಲಿ ಕಾಣಿಸುತ್ತದೆ. 


ಚೈತ್ರಾ ಶಿವಯೋಗಿಮಠ ಅವರ ಮೊದಲ ಸಂಕಲನವಿದು. ಹೊಸತನಕ್ಕೆ ಜಿಗಿಯುವ ಗುಣಗಳಿವೆ ಈ ಕವಿತೆಗಳಿಗೆ.  ಹಲವು ಕವಿತೆ/ಕತೆಗಳನ್ನು ಆಕರ್ಷಕವಾಗಿ ಓದಿ ಕೇಳಿಸುವ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಶಿವಯೋಗಿಮಠ ಅವರು ವೃತ್ತಿಯಲ್ಲಿ ಇಂಜಿನಿಯರ್ .
 
ಈ ಪುಸ್ತಕದ ಗುಣಮಟ್ಟ ಹಾಗೂ ವಿನ್ಯಾಸ ಅತ್ಯುತ್ತಮವಾಗಿದೆ( ಆತ್ಮಿಕಾ ಪುಸ್ತಕ ಬೆಂಗಳೂರು).  ಚೈತ್ರಾ  ಅವರ ಕಾವ್ಯಯಾನ ಅವರನ್ನು ಮತ್ತಷ್ಟೂ  ಮುನ್ನಡೆಸಲಿ.
*
ಕಾಜೂರು ಸತೀಶ್ 




No comments:

Post a Comment