ಇಂದಿನ ಮಹಿಳಾ ಕನ್ನಡ ಕಾವ್ಯ ಪ್ರಪಂಚದಲ್ಲಿ ತಟ್ಟನೆ ನೆನಪಿಗೆ ಬರುವ ಕವಯಿತ್ರಿ ಡಾ. ಕವಿತಾ ರೈ. ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ, ಸ.ಉಷಾ, ಎಂ.ಆರ್. ಕಮಲ, ಡಾ.ಎಚ್.ಎಸ್. ಅನುಪಮಾ, ಲಲಿತಾ ಸಿದ್ಧಬಸವಯ್ಯ, ವೈದೇಹಿ, ಡಾ.ವಿನಯಾ ಒಕ್ಕುಂದ, ವಿಜಯಶ್ರೀ ಹಾಲಾಡಿ, ಎಚ್.ಆರ್.ಸುಜಾತ ಮುಂತಾದ ಪ್ರಮುಖ, ಸ್ತ್ರೀಸಂವೇದನೆಯ ಗಟ್ಟಿ ದನಿಗಳ ನಡುವೆ ಭಿನ್ನ ಭಾವ ಮತ್ತು ಅಭಿವ್ಯಕ್ತಿ ಕ್ರಮಗಳನ್ನು ರೂಪಿಸಿಕೊಂಡವರು ಕವಿತಾ ರೈ.
ಹಕ್ಕಿ ಹರಿವ ನೀರು, ನೀರ ತೇರು, ನೀರ ತೇಜಿಯನೇರಿ, ನೀರುಮಾಡು- ಈ ಎಲ್ಲ ಸಂಕಲನಗಳಲ್ಲೂ ನೀರು ಮತ್ತು ನೀರೆ ಕೇಂದ್ರ ಪ್ರತಿಮೆ. ಒಂದು ಚಿತ್ರ ಮತ್ತು ಚಲನೆ ಒಟ್ಟೊಟ್ಟಿಗೆ ಸಂಭವಿಸುವ ಕ್ರಮ ಇಲ್ಲಿದೆ. ಇಲ್ಲಿಯ ನೀರು ಸ್ತ್ರೀರೂಪಕ. ಸ್ಥಾವರ ಎಂದುಕೊಂಡ ಸಿದ್ಧಮಾದರಿಯನ್ನು ಮುರಿದು ಜಂಗಮವಾಗಿಸಿ ಕಟ್ಟಿ ಬೆಳೆಸುವ ಪರಿ. ನೀರಿನ ಪ್ರತಿಮೆಯ ಮೂಲಕ ಹೆಣ್ಣಿನ ಬದುಕಿನ ನೋವು ನಲಿವುಗಳನ್ನು, ಅಲೌಕಿಕತೆಯನ್ನು ಕಟ್ಟಿಕೊಡುತ್ತಾರೆ ಕವಿತಾ ರೈ.
ಅವರ ಲೋಕಾಮುದ್ರಾ ನಾಟಕದಲ್ಲೊಂದು ಮಾತಿದೆ: “ಪುರುಷ ಸಂಕಲ್ಪಕ್ಕೆ ತಿಳಿದಿದೆ ಹೆಣ್ಣು ನೀರಿನಂಶ ಎಂಬುದು. ಯಾವ ಪಾತ್ರೆಗೆ ತುಂಬಿದರೂ ಅದೇ ಆಕಾರ ಅದೇ ರೂಪ.” ನಾಟಕದಲ್ಲಿ ನೀರಹನಿಗಳು ರಂಗಕ್ಕೇರುತ್ತವೆ, ತೆರೆಗಳು ಮಾತನಾಡುತ್ತವೆ. ಹತಾಶೆಯನ್ನು, ಆಕ್ರೋಶವನ್ನು, ಹೊಗೆಯಾಡುತ್ತಲೇ ಮೀರುವ ದಾರಿಯನ್ನು ಕಂಡುಕೊಳ್ಳುತ್ತದೆ ಕವಿತಾ ರೈಯವರ ಕಾವ್ಯ ಮಾರ್ಗ.
ಕವಿತಾ ರೈಯವರ ಸ್ತ್ರೀವಾದಿ/ ಸ್ತ್ರೀನಿಷ್ಠ ನಿಲುವು ಪುರುಷಲೋಕವನ್ನು ತಿರಸ್ಕರಿಸುವಂಥದ್ದಲ್ಲ; ಪುರುಷ ಯಾಜಮಾನಿಕೆಯನ್ನು ತಿರಸ್ಕರಿಸುವಂಥದ್ದು. ಕೊಡಗಿನಲ್ಲಿ ‘ನೀರು’ ಎಂದರೆ ದೇವತೆ. ಕಾವೇರಿಯೇ ಇಲ್ಲಿನ ಕುಲದೇವತೆ. ನೀರು ಇಲ್ಲಿನ ಕವಿತೆಗಳ ಸಂಸ್ಕೃತಿಯೇ ಆಗಿದೆ. ಹಾಗಾಗಿ ಬದುಕನ್ನು ನಿರ್ವಚಿಸಿಕೊಂಡ ‘ಜೀವನ ಮೀಮಾಂಸೆ’ಯೇ ಅವರ ಒಟ್ಟು ಕವಿತೆಗಳ ಅಂತಃಸ್ರೋತ. ಅಗಸ್ತ್ಯನ ಕಮಂಡಲದೊಳಗೆ ಬಂಧಿಯಾದ ಲೋಪಾಮುದ್ರ ಸ್ತ್ರೀಗೆ ವಿಧಿಸಲಾದ ನಿರ್ಬಂಧಗಳ ಸಂಕೇತ; ಅದನ್ನು ದಾಟಿ ಲೋಕ ಕಲ್ಯಾಣಕ್ಕೆ ಹರಿವ ಕಾವೇರಿ ಬಿಡುಗಡೆಯ ಸಂಕೇತ. ಕನ್ನಡ ಸಂಸ್ಕೃತಿಯಲ್ಲಿ ಮಹಾದೇವಿ ಅಕ್ಕ ಹೇಗೋ , ಹಾಗೆ ಕೊಡಗಿನ ಅನನ್ಯ ಸಂಸ್ಕೃತಿಯಲ್ಲಿ ಹೆಣ್ಣಿನ ಆತ್ಮವಿಶ್ವಾಸದ, ಚೈತನ್ಯದ ಸಂಕೇತವಾದ ಕಾವೇರಿ. ಒಬ್ಬಳು ಅಗಸ್ತ್ಯನನ್ನು ತೊರೆದರೆ, ಮತ್ತೊಬ್ಬಳು ಕೌಶಿಕನನ್ನು ತೊರೆದವಳು. ಒಂದು ಪೌರಾಣಿಕ, ಮತ್ತೊಂದು ಚಾರಿತ್ರಿಕ. ಇಬ್ಬರಲ್ಲೂ ಹರಿವಿನ ಹರವು. ಹೀಗಾಗಿಯೇ ನೀರ ಪ್ರತಿಮೆಗಳು ಜೀವಸಂಚಲನದ, ಅನುಭವಗಳ, ಅನುಭಾವದ ಹರಿವುಗಳಾಗಿ ರೂಪುಪಡೆದಿವೆ. ಪ್ರಾದೇಶಿಕತೆ ಇವರ ಕವಿತೆಗಳು ಮುಖಾಮುಖಿಯಾಗುವ ಬಹುಮುಖ್ಯ ಸಂಗತಿ(ಅವರ ಗದ್ಯ ಬರವಣಿಗೆಯಲ್ಲಿ ಪ್ರಾದೇಶಿಕತೆಯು ಖಚಿತವಾದ ನೆಲೆಯನ್ನು ಮುಟ್ಟುತ್ತದೆ).
“ನನಗೆ ಕಾವ್ಯ ಬೇಕು ಉಪನ್ಯಾಸವಲ್ಲ” ಎಂಬ ಸಾಲು ಅವರ ಲೋಕಾಮುದ್ರಾ ನಾಟಕದಲ್ಲಿದೆ. ಗದ್ಯದ ಒಳಗೂ ಪದ್ಯದ ಧ್ಯಾನವಿದೆ . ಅವರ ಅನುಭವಗಳು ನೀರಿಗೆ ಭಾಷಾಂತರಗೊಳ್ಳುತ್ತವೆ. ಪರಿಸರದ ಅನುಭವಗಳು ಸಾಂಸ್ಥಿಕ ಸಂರಚನೆಗಳನ್ನು ಮುರಿದು ಕಟ್ಟುವಲ್ಲಿ, ಒಂದುಗೂಡಿಸುವಲ್ಲಿ ಪ್ರೇರಕ ಶಕ್ತಿಯಾಗಿವೆ.
ಪ್ರಕೃತಿಯು ಹೆಣ್ಣಿನ ನಂಬಿಕೆ-ವಿಶ್ವಾಸ ಮತ್ತು ಜೀವನಕ್ರಮಗಳ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆ. ಹೆಣ್ಣೆಂದರೆ ಪ್ರಕೃತಿಯ ಪಡಿಯಚ್ಚು. ಕವಿತಾ ರೈಯವರು ಅದನ್ನು ಶುದ್ಧವಾಗಿ ಗ್ರಹಿಸುವುದಿಲ್ಲ; ಬದಲಾಗಿ ಸ್ತ್ರೀಲೋಕವನ್ನು ಪ್ರಕೃತಿಯೊಂದಿಗೆ ತಾದಾತ್ಮ್ಯೀಕರಿಸುತ್ತಾರೆ:
ಹೆಣ್ಣ ಕನಸೆಂದರೆ ಮಣ್ಣಿನ ಶಿಶುವಿಹಾರ
ಬೇರು ಬೇರಿಗೂ ಗೊತ್ತು ಜೀವ ನಳ
ನಳಿಸುವ ಸದ್ದು.(ಹೆಣ್ಣ ಕನಸು)
ಗಿಡ ಮಣ್ಣಾಟವಾಡುತ್ತಿತ್ತು
............................
ಗಿಡ ಕೆಸರ ಕಲಸುತ್ತಿತ್ತು
.............................
ಗಿಡದ ಕರುಳ ಕೂಗು
ಬೇರಿಗೆ ಕೇಳುತ್ತಿತ್ತು (ಕವಿತೆ)
ಹಕ್ಕಿ ಹರಿವ ನೀರಲ್ಲಿ
ಮೀನು ಅದರುದ್ದಕ್ಕೂ ಬಾನು
ಲೆಕ್ಕವಿಲ್ಲದ ಛಾಯೆ (ಕಣ್ಣೀರಿದೆ ಅದರೊಳಗೆ)
ಭಾರತೀಯ ಜನಪದದಲ್ಲಿ, ಕನ್ನಡ ವಚನ ಪರಂಪರೆಯಲ್ಲಿ ನೀರು ಪ್ರಧಾನ ಸಂಗತಿಗಳಲ್ಲೊಂದು. ನೀರನೀಜುವನ ದೇಹ ಬಳಲುವುದಲ್ಲದೆ ನೀರು ಬಳಲುವುದೆ? ಎನ್ನುತ್ತಾರೆ ಅಲ್ಲಮ. ಜಾಗತಿಕವಾಗಿಯೂ ಕೂಡ:There are tides in the body ಎನ್ನುತ್ತಾರೆ ವರ್ಜೀನಿಯಾ ವೂಲ್ಫ್. ಕವಿತಾ ರೈಯವರ ‘ಪರಿಸರ ಸ್ತ್ರೀವಾದ’(Eco feminism) ಮತ್ತೂ ಖಚಿತವಾಗಿ Hydro feminismನ ನೆಲೆಗಳನ್ನು ಮುಟ್ಟುತ್ತದೆ;ಅಂಥದ್ದೊಂದು ಜ್ಞಾನಶಾಖೆಯನ್ನು ಮತ್ತಷ್ಟೂ ವಿಸ್ತಾರಗೊಳಿಸುತ್ತದೆ.
ನೀರ ತೇಜಿಯನೇರಿದ ಪಯಣ ಗೆಳೆಯ
ನಾನೆಂಬ ಹಂಗೂ ಉಳಿದಿಲ್ಲ(ಹೊರಟ ದಾರಿಯಲ್ಲಿ)
ಹರಿವ ನದಿಯೊಳಗೆ
ಅಂತರಂಗದ ಗಾಯ ಮಾಗಿ
ದಡದಲ್ಲಿ ಕಿವಿ ಹಚ್ಚಿ ಆಲಿಸಿದರೆ
ಆದಿಮ ಕಂಪನವಿನ್ನೂ ಹಾಗೇ ಉಳಿದಿತ್ತು (ಕೇಳಿ ಕೇಳದ ಸದ್ದು)
ಹರಿವಿನ ಮೂಲಕ ಅಂತರಂಗದ ಗಾಯ ಮಾಗಿಸುವ ನೀರ ದಡದಲ್ಲಿ ಇನ್ನೂ ಬೀಡುಬಿಟ್ಟಿರುವ ಆದಿಮ ಕಂಪನದ ಕುರಿತ ಮರುಕವಿದೆ ಕವಿಗೆ. ಕಾವೇರಿ, ಸೀತೆ, ದ್ರೌಪದಿ, ಅಹಲ್ಯೆ, ಕುಂತಿ... ಇವರೆಲ್ಲ ತಮ್ಮದಲ್ಲದ ತಪ್ಪಿಗಾಗಿ ನೊಂದು ಬೆಂದವರು. ಆದರೂ ಇವರೆಲ್ಲ ಪುರುಷ ಸಮಾಜ ಎಳೆದ ಲಕ್ಷ್ಮಣ ರೇಖೆಗಳಾಚೆ ಹರಿದು ತಮಗಾದ ಗಾಯಗಳನ್ನು ಮಾಯಿಸಿಕೊಂಡವರು. ಇಂದಿಗೂ ಶೋಷಣೆಯ ಕಂಪನ ಹಾಗೇ ಉಳಿದಿದೆ, ಮುಂದುವರಿಯುತ್ತಿದೆ. ಈ ಚಕ್ರಗತಿಯ ಚಲನೆ ಪರಂಪರೆಯಿಂದ ಪರಂಪರೆಗೆ ಹಬ್ಬಿಕೊಳ್ಳುತ್ತಿದೆ.
ಬೆಳಿಗ್ಗೆ
ಧೂಳೊರೆಸುವ ಅಮ್ಮನಿಗೆ
ಅಟ್ಟದಲ್ಲಿಟ್ಟ
ತೊಟ್ಟಿಲ ನೆನಪು (ಬದುಕಿನ ಬಾಗಿಲಿಗೆ)
ಅಡುಗೆ ಮನೆಯ ಕೇಂದ್ರ ಒಲೆ
ಅಜ್ಜಿ ಅಮ್ಮ ಈಗ ಸರದಿಯಲ್ಲಿ ನಾನು
.....................................................
ಒಲೆ ಬದಲಾದರೇನು ಉರಿ ಬದಲಾಗಿದೆಯೇ? (ಒಲೆ)
ಕವಿತಾ ರೈಯವರ ಕವಿತೆಗಳಿಗೆ ಧ್ಯಾನಸ್ಥ ಸ್ಥಿತಿ ಇದೆ. ಅನೇಕ ಕವಿತೆಗಳಿಗೆ ವಚನದ ಪರಿಭಾಷೆ ಇದೆ. ಗಂಡಿನೊಡಗಿನ ಸಂಘರ್ಷ ಮತ್ತು ಒಡನಾಟಗಳು ಒಗ್ಗೂಡಿ ಚಲಿಸಬೇಕೆಂಬ ಹಂಬಲ ಅವರಿಗಿದೆ. ಈ ಬಗೆಯ ಸಂಬಂಧಕ್ಕೆ metaphysical ಛಾಯೆ ಇದೆ. ಅಲ್ಲಿ ಅಹಂಕಾರವಿಲ್ಲ; ಒಮ್ಮತವಿದೆ:
ನಮ್ಮೊಳಗೆ ಸರಿವ ಹೆಜ್ಜೆಯನು
ನದಿಯ ಜಾಡನು
ದಾಟೋಣ ಅನುಗೂಡಿ
ಬೀಸುವ ಬಯಲ ಗಾಳಿಯಲಿ
ಹರಿಯಲಿ ಜೋಡಿ ನೆರಳು(ಜೋಡಿ ನೆರಳು)
ಹುಟ್ಟು ಸಾವ ಮೀರುವ ಉತ್ಕಟತೆಯಲಿ
ಪ್ರವಾದಿನಿಯೋ ಹುತಾತ್ಮಳೋ
ಆಗುವ ನೆಣ ನನ್ನಲ್ಲಿ ಇರುತ್ತಿದ್ದರೆ
ದೇವರೇ ಈ ಜಗತ್ತನ್ನು ಇರುವ ಹಾಗೆ
ಪ್ರೀತಿಸುತ್ತಿದ್ದೆ.(ಪ್ರೀತಿಸುತ್ತಿದ್ದೆ)
ಅಹಂಕಾರದ ಮೈದಾನ ಮರೆತು
ನೀರ ತೇಜಿಯನೇರಿ ಹೊರಟ
ನಮ್ಮಿಬ್ಬರ ನಡುವೆ ಗೆಳೆಯಾ
ಕ್ಯಾ ಲೇನಾದೇನಾ
ಶುದ್ಧ ಪ್ರೇಮದ ತೋಂಡಿ ಪಯಣ(ನೀರ ತೇಜಿಯನೇರಿ)
ಹಾಗಾಗಿ ಕವಿತಾ ಅವರ ಕಾವ್ಯ ಮೀಮಾಂಸೆಯು ದೇಹ ಮೀಮಾಂಸೆಗಿಂತ ಆತ್ಮ ಮೀಮಾಂಸೆಯಲ್ಲಿಯೇ ಹೆಚ್ಚು ಸ್ಥಾಯಿಯಾಗುಳಿಯುತ್ತದೆ. ಅವರು ತಮ್ಮ ಕಾವ್ಯ ಮೀಮಾಂಸೆಯನ್ನು ಹೀಗೆ ವ್ಯಾಖ್ಯಾನಿಸಿಕೊಳ್ಳುತ್ತಾರೆ:
ನನ್ನ ಆತ್ಮಕತೆ
ಹೆಂಡತಿಯಾದ
ಗೃಹಿಣಿಯಾದ
ತಾಯಿಯಾದ
ತೋರದ ಸರಿತೆ
ಆತ್ಮ ಪ್ರತ್ಯಯದ ಹುಡುಕಾಟಕ್ಕೆ
ಬಿದ್ದ ಕವಿತೆ(ಸ್ತ್ರೀಯೋ ಹಿ ಮೂಲಂ ಸಕಲಸ್ಯ ಪುಂ ಸಃ)
ಆಧುನಿಕ ಸ್ತ್ರೀವಾದ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಒಂದು: ಸ್ತ್ರೀ-ಪುರುಷ ಸಮಾನತೆಗೆ ಹೋರಾಡುವುದು. ಮತ್ತೊಂದು: ಸ್ತ್ರೀಯೇ ಪುರುಷನಿಗಿಂತ ಸ್ಪಂದನೆ ಮತ್ತು ಪ್ರಜ್ಞೆಯಲ್ಲಿ ಭಿನ್ನಳು; ಅದೇ ಅವಳ ವಿಶಿಷ್ಟ ಶಕ್ತಿ ಎಂದು ಗ್ರಹಿಸುವುದು. ಕವಿತಾ ರೈಯವರು ಇದನ್ನು ಪ್ರತಿರೋಧದ ಮತ್ತು ಬಿಡುಗಡೆಯ ಮಾದರಿಯಾಗಿ ಗ್ರಹಿಸುತ್ತಾರೆ.
ಕವಿತಾ ರೈ ಅವರ ಭಾಷಿಕ ಲಯ ತಮ್ಮ ಸರೀಕರಿಗಿಂತ ಭಿನ್ನವಾಗಿ ಹೊಸತನಕ್ಕೆ ಹಠತೊಟ್ಟಂತೆ ಕಟ್ಟಲ್ಪಟ್ಟಿದೆ. ಕವಿತೆಯಿಂದ ಕವಿತೆಗೆ, ಸಂಕಲನದಿಂದ ಸಂಕಲನಕ್ಕೆ ಬದಲಾಗುತ್ತಾ, ಮಾಗುತ್ತಾ ಹೋಗುತ್ತಾರೆ. ನವೋದಯ, ನವ್ಯ, ದಲಿತ ಬಂಡಾಯಗಳಿಂದ ಬಿಡಿಸಿಕೊಂಡ ದಾರಿ ಅವರದ್ದು. ಅವರ ಬೇರೆ ಬೇರೆ ಕಾವ್ಯಮಾದರಿಗಳ ಹುಡುಕಾಟವನ್ನು ಹೀಗೆ ಗುರುತಿಸಬಹುದು:
~ ಚಿತ್ರವೊಂದನ್ನು ನೀಡಿ ಶಬ್ದವನ್ನು ನಮ್ಮಿಂದಲೇ ಆಲಿಸುವಂತೆ ಮಾಡುವುದು. ಉದಾಹರಣೆಗೆ:
ದಫ್ ಅಂತ ಶಬ್ದ
ಕೇಳಿದಿರೇನು?
ಮೀನು ಮೇಲೆ
ಚಿಮ್ಮಿ ಜಿಗಿದು
ಬಿದ್ದ ಸಪ್ಪಳವ
ಕೆರೆಯಷ್ಟೇ ಕೇಳಿಸಿಕೊಂಡಂತೆ. (ಕೇಳಿ)
ಹೊರನೋಡು
ಮಳೆ ಬಾನನ್ನು
ಬುವಿಯನ್ನು ಸೇರಿಸಿ
ಹೊಲಿಯುತ್ತಿದೆ (ಮಾಯೆ)
ಹಕ್ಕಿ ಹರಿವ ನೀರಲ್ಲಿ
ಮೀನು ಅದರುದ್ದಕ್ಕೂ ಬಾನು
ಲೆಕ್ಕವಿಲ್ಲದ ಛಾಯೆ (ಕಣ್ಣೀರಿದೆ ಅದರೊಳಗೆ)
~ನೀರಿನ ಹಾಗೆ ಲಯದಲ್ಲಿ ಹರಿದಾಡುವ, ನುಡಿಯ ಬೆಡಗಿನ ಕವಿತೆಗಳು; ಲಾಲಿತ್ಯಪೂರ್ಣ ಕವಿತೆಗಳು:
ಗತಿಯಿರದ ಧೃತಿಯಿರದ ಶೃತಿಮತಿಗಳಿರದ
ನೀರತೇಜಿಯನೇರಿ ಬೇರೊಂದು ಏಕಾಂತಕೆ ಸಾರಿ
ಮುಂದೆ ಅರಸಿ ಹಿಂದಿಲ್ಲ ಹಿಂದೆ ಅರಸಿ ಮುಂದಿಲ್ಲ
ಆನು ನೀನೆಂದ ಬಳಿಕ ಮೂಲ ಮಂತ್ರದ ಮೂರ್ತಿ
ಒಮ್ಮೆ ನನ್ನ ಸರದಿ ಒಮ್ಮೊಮ್ಮೆ ನಿನ್ನ ಸರದಿ (ಏಕಾಂತಕೆ ಸಾರಿ)
~ಪ್ರತಿರೋಧದ ದನಿಗಳುಳ್ಳ, ಸಾಮಾಜಿಕ, ಜಾತ್ಯತೀತ, ರಾಜಕೀಯ ಆವರಣವಿರುವ ಕವಿತೆಗಳು. ಇವುಗಳಿಗೆ ನಿರ್ದಿಷ್ಟವಾದ ಭಾಷಿಕ ಸಂರಚನೆಗಳಿಲ್ಲ. ಬಹುತೇಕ ಕವಿತೆಗಳು ಕೇಂದ್ರ ಪ್ರತಿಮೆಯಿಂದ ಆಚೆ ನಿಂತು ಮಾತನಾಡುವವು:
ಗೈಯ್ಯುವ ಕೈಗಳಿಗೆ ನಡೆಯೋದ ಕಲಿಸ್ಯಾನ
ಕಾಲೆಂಬ ಕಬರನ್ನೇ ಅಳಾ ಅಳಿಸಿ ಹಾಕ್ಯಾನ
ಅದಿರೆಂಬ ಹೆಸರಲ್ಲಿ ನೆಲವನ್ನೇ ನುಂಗ್ಯಾನ
ಕೊಬ್ಬೀದ ಬಾಡೀನ ನೆಣವನ್ನೆ ಸವರ್ಯಾನ (ಝಣ ಝಣ ಜನಕ)
ಭಾಷೆಯ ವೀರ್ಯದಿಂದಲೇ
ಆತ ಪಡೆದದ್ದು ಗರ್ಭದ ಸಂಯೋಗ
ಆನಂದದ ಶೃಂಗಸುಖ
ಈಯುವ ಬೇನೆಯ ಅದೇ ಜಾಡಲ್ಲೇ
ಚರಿತ್ರೆ ಧರ್ಮ ಶಾಸ್ತ್ರ ತತ್ವ ತರ್ಕ
ರಾಜಕೀಯ ಸಾಹಿತ್ಯ ವಿಜ್ಞಾನದ ಹೆರಿಗೆ
ಹೀಗಾಗಿಯೇ ಗಂಡು
ಸಹಜ ಪ್ರಸವದ ಸೂಲಿಗ (ಸಾಲಂಕೃತ ಗುಲಾಮಿ)
ಮನೆಮಳಿಗೆ ಬಿಕ್ಕಳಿಸಿ ಹೇಳಿದ ಕಥೆಯೊಳಗೆ
ಧರ್ಮದ ಪಯಣ ಸಾಗಿಯೇ ಇತ್ತು
ಶಾಂತಿ ಅರಸಿ ಹೊರಟು ಆಕಾಶದೆತ್ತರ
ಪುಟ್ಟ ಪಾರಿವಾಳ ಬೆಪ್ಪುಗಟ್ಟಿ
ತಾನೆ ಮರೆತು ತನಗೆ ತಾನೆ
ಧಿಕ್ಕಾರ ಧಿಕ್ಕಾರ ಹಾಕಿತು (ಧರ್ಮದ ಪಯಣ)
ಹೀಗೆ ಒಂದೇ ಕೇಂದ್ರದ ಏಕತಾನತೆಯಿಂದ ಪಾರಾಗಲು ಹೇಳುವ ವಿಧಾನವನ್ನೇ ಮತ್ತೆ ಮತ್ತೆ ಪರೀಕ್ಷಣಕ್ಕೊಳಪಡಿಸುತ್ತಾರೆ. ಕವಿತೆಗಳ ಭಾಷಿಕ ವಿನ್ಯಾಸಗಳು ಒಂದಕ್ಕಿಂತ ಒಂದು ಭಿನ್ನ. ಒಂದು ಕವಿತೆ ಇನ್ನೊಂದರ ಆದಿಯಾಗುತ್ತದೆ. ಕವಿತೆಗಳ ಪ್ರವೇಶ ಸಾಹಿತ್ಯದ ಗಂಭೀರ ಅಭ್ಯಾಸಿಗಷ್ಟೇ ಸಾಧ್ಯವಾಗುವಂತಹ ಸಾಧ್ಯತೆಯೂ ಇದೆ.
ಬಾವಿ ಕಟ್ಟೆ, ಒಲೆ, ಕುಟ್ಟಾಣಿ ಮತ್ತು ಕೆಂಪು ಬೊಟ್ಟಿನ ಸೀರೆ ಮುಂತಾದ ಮಹತ್ವದ ಕವಿತೆಗಳನ್ನು ಎರಡು ದಶಕಗಳ ಹಿಂದೆ ಕನ್ನಡಕ್ಕೆ ಕೊಟ್ಟು ಕಾವ್ಯಲೋಕಕ್ಕೆ ಪ್ರವೇಶಿಸಿದ ಕವಿತಾ ರೈಯವರು ‘ಕವಿತಾ ಹಾದಿ’ಯಲ್ಲಿ ತುಂಬಾ ಕ್ರಮಿಸಿದ್ದಾರೆ. ಅವರ ಮುಂದಿನ ನಡಿಗೆ ಕುತೂಹಲಕಾರಿಯಾದುದು.
*
-ಕಾಜೂರು ಸತೀಶ್