ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, August 9, 2022

'ನೆನಪುಗಳು ಮಾಸುವ ಮುನ್ನ' ಎಂಸಿಎನ್

ಓರ್ವ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಳ್ಳುವ ಕೃತಿಗಳು ಸಾಮಾನ್ಯವಾಗಿ ಆರಾಧನೆಯ ನೆಲೆಯದ್ದಾಗಿರುತ್ತವೆ. ಅದರಲ್ಲೂ ರಾಜಕೀಯ ರಂಗದ ವ್ಯಕ್ತಿಯ ಕುರಿತ ಚಿತ್ರಣಗಳು ಕೃತಿಯ ಪ್ರವೇಶಕ್ಕೂ ಮುನ್ನವೇ ಋಣಾತ್ಮಕ ಪೂರ್ವಗ್ರಹವನ್ನು ಓದುಗರಲ್ಲಿ ಸೃಷ್ಟಿಸಿಬಿಡುತ್ತವೆ.

 ಎಂದರೆ:

೧. ಇವರು ಈ ಪಕ್ಷಕ್ಕೆ ಸೇರಿದವರು. ನನಗೂ ಈ ಪಕ್ಷದ ಮೇಲೆ ಒಲವಿದೆ. ಹಾಗಾಗಿಯೇ ಕೃತಿಯನ್ನು ಪ್ರೀತಿಯಿಂದ ಓದಬೇಕು.

೨. ಇವರು ನಾನು ಇಷ್ಟಪಡುವ ಪಕ್ಷದವರಲ್ಲ, ಆದ್ದರಿಂದ ಇದರಲ್ಲಿ ಏನಿದೆ ಎಂಬ ಕುತೂಹಲವಿದೆ .ಅಥವಾ ಇದರಲ್ಲಿ ಏನೂ ಇರಲಿಕ್ಕಿಲ್ಲ.

೩. ನನಗೆ ಯಾವ ಪಕ್ಷದ ಸಿದ್ಧಾಂತಗಳ ಮೇಲೆ ಒಲವಿಲ್ಲ. ಇವರ ನಿಜವಾದ ಸೈದ್ಧಾಂತಿಕ ಆಯ್ಕೆಯ ಕೇಂದ್ರ ಯಾವುದಿರಬಹುದು?

ಹೀಗೆ.

****

ಸಾರ್ವಜನಿಕ ಕ್ಷೇತ್ರದ(ಅದರಲ್ಲೂ ರಾಜಕೀಯ) ವ್ಯಕ್ತಿಯ ಕುರಿತ ಮಾಹಿತಿಯನ್ನು ಕಲೆಹಾಕುವಾಗ ವಿವರಗಳು ಸುಲಭವಾಗಿ ದಕ್ಕುತ್ತವೆ. ರಾಜಕೀಯದಲ್ಲಿದ್ದುಕೊಂಡೇ ಭಿನ್ನ ದಾರಿಯಲ್ಲಿ ಸಾಗುವ ವ್ಯಕ್ತಿಗಳ ಮೇಲೆ ಸಮಾಜಕ್ಕೆ ವಿಶೇಷವಾದ ಆಸ್ಥೆ ಇರುತ್ತದೆ. ಇಂಥವರ ಮೇಲೆ ಪತ್ರಕರ್ತರಾದವರ ನೋಟಕ್ರಮವು ಮತ್ತೂ ಒಂದು ಹೆಜ್ಜೆ ಮುಂದೆ ಇರುತ್ತದೆ.
*


'ರಾಜಕೀಯ ವಿಶ್ಲೇಷಣೆ ನನ್ನ ಮೆಚ್ಚಿನ ಕ್ಷೇತ್ರ' ಎನ್ನುವ ಕಣಿವೆ ಭಾರದ್ವಾಜ ಅವರ ಸರಳವಾದ ನಿರೂಪಣೆಯಲ್ಲಿ  'ನೆನಪುಗಳು ಮಾಸುವ ಮುನ್ನ' ಕೃತಿ ಚಿತ್ರಿತವಾಗಿದೆ. ಎಂ ಸಿ ನಾಣಯ್ಯ ಅವರ ರಾಜಕೀಯ ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿಯಿದು.


Fact ಮತ್ತು fictionಗಳೆರಡರ genreಗಳಲ್ಲೂ ಭಾರದ್ವಾಜರದು ಒಂದೇ ಭಾಷಾ ಕ್ರಮ. 'ಪತ್ರಿಕಾ ಭಾಷೆ' ಅಷ್ಟು ಅವರನ್ನು ಆವರಿಸಿದೆ:

"....ಅಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ನಾಣಯ್ಯರನ್ನು ಭೇಟಿಮಾಡಲು ಬಂದ ಕಾರ್ಯಕರ್ತರು ಕೂಡ ಅಲ್ಲೇ ಊಟಮಾಡಿದರು. ಇದನ್ನು ಅಲ್ಲಿಯ ಇಂಜಿನಿಯರ್ ವ್ಯವಸ್ಥೆಗೊಳಿಸಿರುವ ವಿಷಯವನ್ನು ತಿಳಿದೊಡನೆ ಅವರು, ಅಧಿಕಾರಿಗಳು ಹಾಕಿದ ಊಟ ತಿಂದು ತಾವು ಎಷ್ಟರಮಟ್ಟಿಗೆ ಅವರ ಕಳಪೆ ಕಾಮಗಾರಿಗಳನ್ನು ನೋಡಬಹುದು ಎಂದು ತಮ್ಮೊಂದಿಗಿದ್ದ ಕಾರ್ಯಕರ್ತರಿಗೆ ಹೇಳಿ , ಸುಮಾರು 25 ಜನರ ಊಟದ ವೆಚ್ಚವನ್ನು ಇವರೇ ಸದರಿ ಅಧಿಕಾರಿಗೆ ಪಾವತಿ ಮಾಡಿ ಬಂದರು".



ಲೇಖಕರು ಎಂಸಿಎನ್ ಅವರ ನಡೆ-ನುಡಿಗಳನ್ನು ಇಷ್ಟಪಟ್ಟಿದ್ದರಿಂದಲೇ ಈ ಕೃತಿಯು ಒಡಮೂಡಲು ಕಾರಣ (ಹಾಗೆಂದು ಇದು ಅಷ್ಟಾದಶ ವರ್ಣನೆಯಲ್ಲ). ಎಂಸಿಎನ್ ಅವರ ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಡುವುದಷ್ಟೇ ಲೇಖಕರ ಕೆಲಸ. ಸುಮಾರು ೨೯ ವರ್ಷಗಳ ಕಾಲ ರಾಜಕೀಯ ರಂಗದಲ್ಲಿದ್ದ ಅವರನ್ನು ಗ್ರಹಿಸಲು ಲೇಖಕರೂ ಒಂದೆರಡು ದಶಕಗಳನ್ನು ಸವೆಸಿರಲೇಬೇಕು. ಹಾಗಾಗಿ fiction ಮಾದರಿಯಂತೆ ಧುತ್ತೆಂದು ಒಡಮೂಡಿದ ಕೃತಿ ಇದಲ್ಲ. ಅವ್ಯಕ್ತ ರೂಪದಲ್ಲಿ ಹಿಂದೆಯೇ ಮೊಳಕೆಯೊಡೆದಿರಬಹುದಾದ ಈ ಕೃತಿಗೆ ಅವರ ಹಲವು ವರ್ಷಗಳ ಮಾನಸಿಕ ಸಿದ್ಧತೆಯೂ ಕಾರಣವಾಗಿರಬಹುದು.

ಭಾರದ್ವಾಜರು ಹೇಳುವಂತೆ " ಸತತ ಮೂರು ತಿಂಗಳ ಪ್ರಯತ್ನದ ನಂತರ ಅವರ ಒಪ್ಪಿಗೆ ಪಡೆಯಲು ಯಶಸ್ವಿಯಾದೆ. ಆರಂಭದಲ್ಲಿ ತೀರಾ ಬಿಗಿಯಾದ ನಿಲುವು ಹೊಂದಿದ್ದ ಅವರು ಅಂತಿಮವಾಗಿ ಒಪ್ಪಿಗೆ ಸೂಚಿಸಿದರು."
*


ನಾಣಯ್ಯ ಅವರ ಕುಟುಂಬ, ಬಾಲ್ಯ, ಶಿಕ್ಷಣದಿಂದ ಮೊದಲ್ಗೊಂಡು; ವಿದ್ಯಾರ್ಥಿ ಸಂಘ, ವಕೀಲ ವೃತ್ತಿ(1962-78) , ಏಲಕ್ಕಿ ಸೊಸೈಟಿ, ಪುರಸಭೆ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕಾಫಿ ಬೆಳೆಗಾರರ ಸೊಸೈಟಿ, ವಿಧಾನ ಸಭೆ ಚುನಾವಣೆ, ಎಂ ಎಲ್ ಸಿ, ಮಂತ್ರಿ, ವಿರೋಧ ಪಕ್ಷದ ನಾಯಕತ್ವ, ಪಕ್ಷದ ಉಪಾಧ್ಯಕ್ಷ ಸ್ಥಾನ.. ಹೀಗೆ ಹಲವು ರಾಜಕೀಯ ಬದುಕಿನ ಘಟ್ಟಗಳನ್ನು ಚಿತ್ರಿಸಲಾಗಿದೆ. ಇಡೀ ಕೃತಿಯೇ ಸ್ವಾನುಭವದ, ಹಲವರೊಂದಿಗಿನ ಮಾತುಕತೆಯ ಫಲಿತವಾದರೂ, ಪ್ರಾತಿನಿಧಿಕವಾಗಿಯೂ 'ಮಾತುಕತೆ'ಯ ಭಾಗವೊಂದು ಇಲ್ಲಿ ಅಡಕವಾಗಿದೆ. ಎಂಸಿಎನ್ ಅವರು ಕಂಡ ಅಪರೂಪದ ಅಧಿಕಾರಿಗಳ, ರಾಜಕಾರಣಿಗಳ , ಸ್ನೇಹಿತರ ವ್ಯಕ್ತಿಚಿತ್ರಗಳಿವೆ. ಅವರನ್ನು ಹತ್ತಿರದಿಂದ ಬಲ್ಲ ಕುಟುಂಬದವರ, ಸ್ನೇಹಿತರ, ಒಡನಾಡಿಗಳ ಅಭಿಪ್ರಾಯಗಳಿವೆ. ಪತ್ರಿಕೆಗಳು ಬರೆದ ರಾಜಕೀಯ ನಡೆಗಳ ವರದಿಗಳಿವೆ(ಅವರ ಶ್ರೀಮತಿಯವರು ಕತ್ತರಿಸಿಟ್ಟಿದ್ದು). ಅವಿಸ್ಮರಣೀಯ ಭಾವಚಿತ್ರಗಳಿವೆ.


ಉತ್ತಮ ಪುರುಷ ಹಾಗೂ ಪ್ರಥಮ ಪುರುಷದಲ್ಲಿ ಕೃತಿಯ ನಿರೂಪಣೆ ಸಾಗುತ್ತದೆ.


*
ವೈಯಕ್ತಿಕ ನಿಂದನೆ, ಸುಳ್ಳನ್ನೇ ಸತ್ಯವಾಗಿಸುವುದು, ಧರ್ಮಾಧಾರಿತ/ಜಾತ್ಯಾಧಾರಿತ ರಾಜಕೀಯ, ಕುಟುಂಬ ರಾಜಕಾರಣ, ಭ್ರಷ್ಟಾಚಾರ - ಇಂತಹವುಗಳನ್ನೇ 'ರಾಜಕೀಯ' ಎಂದು ನಂಬಿ ಬದುಕಬೇಕಾದ ಕಾಲದಲ್ಲಿ ಎಂಸಿಎನ್  ಗಮನಾರ್ಹರಾಗುತ್ತಾರೆ:

* ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ, ಆ ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುವ ವ್ಯಕ್ತಿಗೆ ಚುನಾವಣೆಯ ಉಮೇದುವಾರಿಕೆ ಲಭಿಸಿ, ಗೆದ್ದು ಶಾಸಕನಾಗುವುದು, ಮಂತ್ರಿಯಾಗುವುದು ಕೌತುಕವಲ್ಲದೆ ಮತ್ತೇನು!

* ತಮಗೆ ಅಷ್ಟಾಗಿ ಪರಿಚಯವಿರದಿದ್ದ ಜಿಲ್ಲಾಧಿಕಾರಿ ವಿದ್ಯಾಶಂಕರ್ ಅವರನ್ನು ಪ್ರಾಮಾಣಿಕ ಅಧಿಕಾರಿ ಎಂಬ ಕಾರಣದಿಂದ ಇಲ್ಲಿ ನೆನಪಿಸಿಕೊಂಡಿದ್ದಾರೆ.

* ಎ.ಕೆ. ಸುಬ್ಬಯ್ಯ ಅವರ ಪಕ್ಷದ ವಿರೋಧಿಯಾಗಿದ್ದರೂ, ವ್ಯಕ್ತಿಗತ ನೆಲೆಯಲ್ಲಿ ಅವರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸುತ್ತಾರೆ.


* ಜನರಲ್ ತಿಮ್ಮಯ್ಯ ಪ್ರತಿಮೆ ನಿರ್ಮಾಣದ ರೂವಾರಿಯಾದರೂ ಶಿಲೆಯಲ್ಲಿ ತಮ್ಮ ಹೆಸರು ಬರದಂತೆ ನೋಡಿಕೊಳ್ಳುತ್ತಾರೆ.
(ಮತ್ತು ಆ ದಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಗೈರುಹಾಜರಾದ ಕುರಿತು ತಲೆಕೆಡಿಸಿಕೊಳ್ಳುತ್ತಾರೆ)

* ನಿಷ್ಠಾವಂತ IAS ಅಧಿಕಾರಿ ವಾಸುದೇವ್ ಅವರಿಗೆ ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಒಂದು ತಿಂಗಳ ಸೆರೆವಾಸವಾದ ಕುರಿತು ನೊಂದುಕೊಳ್ಳುತ್ತಾರೆ:

"ನ್ಯಾಯಾಂಗಗಳಲ್ಲಿ, ಉನ್ನತ ಸ್ಥಾನದಲ್ಲಿ ಕುಳಿತಿರುವ ಹಲವು ನ್ಯಾಯಾಧೀಶರು ಕಾನೂನಿಗಿಂತಲೂ ತಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಇವರ ವೈಯಕ್ತಿಕ ವಿಚಾರಗಳು ಕಾನೂನಿನ ಮೇಲೆ ಸವಾರಿ ಮಾಡುತ್ತವೆ.."

* ಕಾಂಗ್ರೆಸ್ ಸಿದ್ಧಾಂತಗಳಿಗೆ ವಿರೋಧಿಯಾಗಿ ಅರಸು ಕಾಂಗ್ರೆಸ್ ಅನ್ನು ಮಾತ್ರ ಬೆಂಬಲಿಸುತ್ತಾರೆ. ತಮ್ಮ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗುತ್ತಾರೆ.

* ಜಾತ್ಯತೀತ ನಿಲುವು, ಸಮಾಜವಾದಿ ಚಿಂತನೆ, ಕಮ್ಯೂನಿಸ್ಟ್ ವಿಚಾರಧಾರೆಗಳ ಮೇಲೆ ಒಲವು- ಹೀಗೆ ವಿಚಾರಗಳ ಬಲವಿರುವ ರಾಜಕಾರಣಿಯಾಗುತ್ತಾರೆ. ಜನಸಂಘದ ವಿರೋಧಿಯಾದರೂ ಉತ್ತಮಾಂಶಗಳನ್ನೂ ಗುರುತಿಸುತ್ತಾರೆ (ಬದಲಾಯಿಸಿಕೊಳ್ಳಬೇಕಾದದ್ದನ್ನೂ).

* ಅಪರಿಚಿತ ವ್ಯಕ್ತಿಯ ಪತ್ರಕ್ಕೂ ಸ್ಪಂದಿಸಿ ನ್ಯಾಯಕೊಡಿಸುತ್ತಾರೆ.

* ಅರಣ್ಯ ಹಾಗೂ ಕಾನೂನು ಮಂತ್ರಿಯಾಗಿದ್ದಾಗ ಅವರು ಮಾಡಿದ ಸುಧಾರಣಾ ಕ್ರಮಗಳು.

ಏಳು ಮುಖ್ಯಮಂತ್ರಿಗಳನ್ನು ಕಂಡಿರುವ ನಾಣಯ್ಯ ಅವರು, ಅವರೆಲ್ಲರ  ಕುರಿತು ಹೇಳುವಾಗ ಗ್ರಹೀತರಾಗುವುದಿಲ್ಲ; ಮುಚ್ಚಿಡುವುದಿಲ್ಲ. 

ಇನ್ನೂ ಹತ್ತು ಹಲವು.
*
ಎಂಸಿಎನ್ ಬಗೆಗಿನ ಈ ಕೃತಿಯ ವಿವರಗಳು ಅವರೊಬ್ಬರದೇ ಆಗಿರದೇ ಮೂರು ದಶಕಗಳ ಕರ್ನಾಟಕದ ರಾಜಕೀಯ ಇತಿಹಾಸದ ಚಿತ್ರಣವಾಗಿದೆ. ಪ್ರಸ್ತುತ ರಾಜಕೀಯ ಸ್ಥಿತಿಗತಿಗಳೆದುರು ಇಟ್ಟು ಅಳೆದು ನೋಡಲು ಈ ಕೃತಿ ನೆರವಾಗುತ್ತದೆ . ಹಾರ ತುರಾಯಿಗಳನ್ನು ಹಾಕಿಸಿಕೊಳ್ಳದೆ, ಹಿಂಬಾಲಕರೊಂದಿಗೆ ತೆರಳದೆ, ದ್ವೇಷವನ್ನು ಬಿತ್ತದೆ ಬೆಳೆದ ಎಂಸಿಎನ್,   ನಮ್ಮ ತಲೆಮಾರಿಗೆ ನಿಜದ ರಾಜಕಾರಣದ-ರಾಜಕಾರಣಿಗಳ ಅಗತ್ಯತೆಯನ್ನು ನೆನಪಿಸುತ್ತಾರೆ.


ಭಾರದ್ವಾಜರ ಕೃತಿಗಳ ಪೈಕಿ ಹೆಚ್ಚು ಶ್ರಮವಹಿಸಿ ತಂದಿರುವ ಕೃತಿಯಿದು. ಓದಿಗೆ ಮುದ್ರಣ ದೋಷದ ತೊಡಕುಗಳಿಲ್ಲ. ಎಂಸಿಎನ್ ಅವರ ಆದರ್ಶಗುಣಗಳ ಅನುಸರಣೆ ಯುವ ರಾಜಕಾರಣಿಗಳು ಮಾಡಬೇಕಿದೆ. ಪೂರ್ವಗ್ರಹಗಳಿಲ್ಲದೆ ಎಲ್ಲರೂ ಈ ಕೃತಿಯನ್ನು ಓದಬೇಕಿದೆ.
*
ಕಾಜೂರು ಸತೀಶ್

Saturday, August 6, 2022

'ಹನಿ'ಗಳ ಮುತ್ತಿನಹಾರ

ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ 'ಮುತ್ತಿನಹಾರ' ಹನಿಗವನಗಳ ಸಂಕಲನವು ಪ್ರತಿಕ್ರಿಯಾತ್ಮಕ ಮಾದರಿಯದು. 'ಆ ಕ್ಷಣದ ವರ್ತಮಾನ'ದಲ್ಲಿ ಸೃಷ್ಟಿಯಾದ ಹನಿಗವನಗಳವು.


ಎಂ ಜಿ ರೋಡಿನಲ್ಲಿ
ಟ್ರಾಫಿಕ್ ಜಾಮಿದೆ
ಗಾಂಧಿ ತೋರಿಸಿದ ಹಾದಿ
ಇಂದಿಗೂ ಖಾಲಿಯಿದೆ
*
ದೇವರು
ಸ್ವರ್ಗದಲ್ಲಿ ಆರಾಮದಲ್ಲಿದ್ದಾನೆ
ಮನುಷ್ಯ ಭೂಮಿಯನ್ನು
ನರಕ ಮಾಡುತ್ತಿದ್ದಾನೆ
*
ಹೊಸಾ ದೇವರುಗಳು
ಧರ್ಮ ಸಂದೇಶಗಳು ಇನ್ನು ಬೇಡ
ಕೊಲ್ಲಲು ಜನರೇ ಉಳಿದಿಲ್ಲ
ಪ್ರಪಂಚಕ್ಕೆ ಬೆಂಕಿ
ಹಾಕಿದ ನಂತರವೂ
ಹೃದಯದೊಳಗೆ ಬೆಳಕು ಏಕಿಲ್ಲ?!
*
ಪಾಸು ಬೇಕೆಂದು ಜನರು
ಬಹಳ ಸರ್ಕಸ್ ಮಾಡಿದ್ದಾರೆ
ಟೋಲ್ಗೇಟಿನಲ್ಲಿ ನೋಡಿದೆ
ತಿಮ್ಮಯ್ಯಜ್ಜನನ್ನೂ ಹೊರಗೆ ನಿಲ್ಲಿಸಿದ್ದಾರೆ.


ಇಂತಹ ಸಾರ್ವಕಾಲಿಕ ಸ್ವರೂಪವುಳ್ಳ ಹನಿಗಳೊಂದಿಗೆ ಒಂದು ನಿರ್ದಿಷ್ಟ ಕಾಲಮಾನದ ಕುರಿತ ಪ್ರತಿಕ್ರಿಯೆಯ ಹನಿಗಳೂ ಈ ಸಂಕಲನದಲ್ಲಿವೆ:

ಟೊಮೆಟೋ
ಜಾಸ್ತಿ ಬೀಗಬೇಡ
ಆಲೂಗಡ್ಡೆಯ ಮೇಲೆ ರೇಗಬೇಡ!
*
ಏಬಿಡಿಗೆ ಒಂದು ಬಿರಿಯಾನಿ
ಉಳಿದವರಿಗೆ ಹೇಳಿ ಕುಷ್ಕಾ
ಆರ್ಸಿಬಿ ಪಂದ್ಯ ಗೆಲ್ಲುವುದಿಲ್ಲ
ನೋಡಲು ಬಂದರೆ ಅನುಷ್ಕಾ!
*
ರಾಖಿ ಸಾವಂತ್
ರಾಖಿ ಕಟ್ಟುವುದಿಲ್ಲ
ಅವಳಿಗೆ ಹುಡುಗರ
ಶಾಪ ತಟ್ಟುವುದಿಲ್ಲ!
*

ಈ ಹನಿಗಳಲ್ಲಿ pun, funಗಳಿವೆ; Punchಗಳಿವೆ; ಒಳನೋಟಗಳಿವೆ. ವರ್ತಮಾನವನ್ನು ಪದ್ಯಕ್ಕೊಳಪಡಿಸುವ ತುರ್ತಿನಲ್ಲಿ ಇವು ಹುಟ್ಟಿವೆ.

ಹಾಗೆಯೇ, ನಿರ್ದಿಷ್ಟ ಘಟನೆ/ ಕಾಲಘಟ್ಟದ ಬಗೆಗಿನ ಪ್ರತಿಕ್ರಿಯೆಯು 'ಸದಾ ಸಮಕಾಲೀನ' ಅಥವಾ ಸಾರ್ವಕಾಲಿಕ ಲಕ್ಷಣವನ್ನು ಪಡೆದುಕೊಳ್ಳಬೇಕಿದೆ.
*
ಕಾಜೂರು ಸತೀಶ್