ರಂಜಿತ್ ಕವಲಪಾರ ಕಳೆದ ವರ್ಷ ಕೋಟೆಬೆಟ್ಟದ ಕುರಿಂಜಿಯ ಹೂಗಳನ್ನು facebookನಲ್ಲಿ ಚೆಲ್ಲಿದ್ದರು. ಕೆಲವು ದಿನಗಳ ಅನಂತರ ಗೆಳೆಯ ಸಂತೋಷನೊಂದಿಗೆ ಅಲ್ಲಿಗೆ ಹೋಗಿದ್ದೆ. ಇನ್ನು ಸದ್ಯಕ್ಕೆ ಕಾಣಸಿಗುವುದಿಲ್ಲವಲ್ಲಾ ಎಂದು ಕಣ್ಣಿನೊಳಗೆ ಸ್ವಲ್ಪವೂ ಜಾಗವಿರಬಾರದು- ಅಷ್ಟು ತುಂಬಿಕೊಂಡು ಬಂದಿದ್ದೆ.
ಇದೇ ಆಗಸ್ಟ್ ತಿಂಗಳು. ಒಂದು ದಿನ ಕ್ಯಾಮೆರಾ ತುಂಬಿಕೊಂಡು ಎಲ್ಲಿಗಾದರೂ ಹೋಗಬೇಕೆನಿಸಿ ರಸ್ತೆಗೆ ಇಳಿದಾಗ ಕಡೆಗೆ ದಾರಿ ಸೂರ್ಲಬ್ಬಿಯ ಕಡೆಗೆ ಸಾಗಿತು. ಸಿಕ್ಕಾಪಟ್ಟೆ ಮಳೆ. ಕೋಟಿನೊಳಗಿಂದ ಮೆಲ್ಲೆಮೆಲ್ಲೆ ನುಗ್ಗಿ ಬೆಚ್ಚಗಿನ ಆಕಾಶದ ಕತೆಹೇಳುವ ಹಾಗೆ ನನ್ನನ್ನಾವರಿಸುತ್ತಿತ್ತು. ಮೇದುರ ಜಲಪಾತವನ್ನು ಸೆರೆಹಿಡಿಯಬೇಕೆಂಬ ಆಸೆ. ಆದರೆ ಮಳೆಗೆ ಹೊಟ್ಟೆಕಿಚ್ಚು. ಕಡೆಗೆ ನಾನೇ ಮಳೆಯೆದುರು ಸೋತು ಸುಣ್ಣವೋ ಬಣ್ಣವೋ ಮತ್ತೊಂದೋ ಆಗಿ ಕ್ಯಾಮರಾವನ್ನು ಹೊರತೆಗೆಯದೆ ಮುಂದೆ ಸಾಗಿದ್ದೆ.
ಇಬ್ಬರು ನಿಂತಿದ್ದರು. ಮಂಡಿಯವರೆಗೆ ಪ್ಯಾಂಟು ಮಡಚಿಕೊಂಡು ಅಗಲವಾದ ಕೊಡೆ ಹಿಡಿದು ಮತ್ತ್ಯಾರೂ ಕಾಣಿಸದ ಆ ರಸ್ತೆ ಬದಿಯಲ್ಲಿ ನಿಂತು ಈ ಮಳೆಯ ಕುರಿತೋ ಅಥವಾ ರಾಜಕೀಯದ ಕುರಿತೋ ಅಥವಾ ತಾವು ಮೇಯಿಸುವ ಹಸುವಿನ ಕುರಿತೋ ಮಾತನಾಡುತ್ತಿದ್ದರು. ನಾನು ನಿಲ್ಲಿಸಿದೆ. 'ಏನು ಇಲ್ಲಿ' ಎಂದೆ. 'ಗೊತ್ತಾಗಲಿಲ್ಲ' ಎಂದರು. 'ನನಗೆ ನಿಮ್ಮನ್ನು ಗೊತ್ತು' ಎಂದೆ. 'ಎಲ್ಲಿಗೆ' ಎಂದರು.
ನಿಜಕ್ಕೂ ತಬ್ಬಿಬ್ಬಾದೆ!! ನಾನು ಮುಂದೆ ಸಿಗಬಹುದಾದ ಒಂದು ಊರಿನ ಹೆಸರು ಹೇಳಿ ' ಬದುಕಿದೆಯಾ ಬಡಜೀವವೇ' ಎಂದು ನಿಟ್ಟುಸಿರಿಟ್ಟೆ(ನಿಜಕ್ಕೂ ನಾನು ಎಲ್ಲಿಗೆ ಹೋಗುತ್ತಿರುವುದೆಂದು ನನಗೆ ಗೊತ್ತಿರಲಿಲ್ಲ).
'ಹೋಗಿ ಅವರ ಜೊತೆ' ಎಂದರು ನನಗೆ ಅಪರಿಚಿತರಾಗಿದ್ದ ಆ ಮತ್ತೊಬ್ಬರು.
'ಬೇಡ ಬೇಡ.. ನಾನು ಇಲ್ಲೇ ಹೋಗ್ತೇನೆ, ಮಳೆ ಜಾಸ್ತಿ ಆದ್ರೆ ಕಷ್ಟ' ಎಂದು ತುಸು ಸಂಕೋಚದಿಂದ ಇವರೆಂದರು.
'ಬನ್ನಿ' ಎಂದಾಗ ಬಂದರು. ಸ್ವಲ್ಪ ಮುಂದೆ ಹೋದಾಗ ಕಳೆದ ವರ್ಷ ನೋಡಿದ್ದ ಕುರಿಂಜಿ ಹೂಗಳು! 'ಅರೆ! ಈ ಹೂವು ಈ ವರ್ಷವೂ ಅರಳಿದೆಯಲ್ಲಾ?' ಕೇಳಿದೆ. 'ಈ ವರ್ಷ ಕಟ್ಟೆ ಬರ್ತದೆ ಮುಂದಿನ ವರ್ಷ ಆಗಲ್ಲ.'
'ಏನು ಹೇಳ್ತೀರಿ ಇದಕ್ಕೆ' ಕೇಳಿದೆ.
ನನ್ನ ಪರಿಚಯ ಹೇಳಿದೆ. ಆಗ ಮತ್ತಷ್ಟೂ ಪ್ರೀತಿಯಿಂದ ಮಾತನಾಡಿದರು. ಪೂವಯ್ಯ ಮಾಷ್ಟ್ರು. CRPF ನಲ್ಲಿ 12 ವರ್ಷ ಕೆಲಸ ಮಾಡಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೇಷ್ಟ್ರಾಗಿ ಕೆಲಸ ಮಾಡುತ್ತಿರುವವರು. ಶಾಲೆಯಿಂದ ಮನೆಗೆ ಸುಮಾರು ಐದಾರು ಕಿಮೀ ದೂರ. ಒಂದು ಒಳದಾರಿಯನ್ನು ಕಂಡುಕೊಂಡು (ಜಿಗಣೆಗಳಿಗೆ ರಕ್ತದಾನ ಮಾಡದೆ) ಅಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವವರು. ಕುರಿಂಜಿಗೂ ಈ ಆರ್ಲ್ ಪೂವಿಗೂ ವ್ಯತ್ಯಾಸ ಹೇಳಿದಾಗ ನನಗೆ ಖುಷಿಯಾಯಿತು. ಏಕೆಂದರೆ ಹಲವರನ್ನು ನಾನು ಕೇಳಿದ್ದೇನೆ. ಸಾಕ್ರಟೀಸನ ಹಾಗೆ ತಲೆ ತಿಂದಿದ್ದೇನೆ. ಅವರಲ್ಲಿ ಪೂವಯ್ಯ ಮಾಷ್ಟ್ರ ಮಾತು ಹಿಡಿಸಿತು. ನಿಖರವಾಗಿ ಖಚಿತವಾಗಿ ಅವರು ಮಾಹಿತಿ ನೀಡಿದರು.
ಈ ಹೂವಿಗೆ ಕಟ್ಟೆ ಬರುವ ಕುರಿತು, ಕೊಟ್ಟಿಗೆಯಲ್ಲಿ ಬಳಸುವ ಕುರಿತು ಅವರು ಮಾತನಾಡಿದರು. ಹುತ್ತರಿ ,ಮಂದ್, ಕೋಲಾಟ, ಒಕ್ಕ.. ಹೀಗೆ ಮಾತನಾಡುತ್ತಾ ದಾರಿ ಸಾಗಿದ್ದೇ ತಿಳಿಯಲಿಲ್ಲ .
'ಮನೆ ತೋರಿಸುತ್ತೇನೆ' ಎಂದು ದೂರದಲ್ಲಿ 'ಓ ಅಲ್ಲಿ ' ಎಂದು ಚಿಕ್ಕದರಲ್ಲಿ ನಾವು ಮನೆಯಾಟ ಆಡುತ್ತಿದ್ದೆವಲ್ಲಾ ಅಷ್ಟೇ ಕಿರಿದಾಗಿ ಕಾಣುತ್ತಿದ್ದ ಒಂದು ಮನೆಯ ಆಕೃತಿಯನ್ನು ತೋರಿಸಿದರು. ಮಂಜು 'ಆ' ಮಾಡಿ ಆ ಜಾಗವನ್ನು ನುಂಗಿಹಾಕುವ ಧಾವಂತದಲ್ಲಿತ್ತು.
ಎಲ್ಲಿಗೆ ಹೋಗಬೇಕೆಂಬ ಗುರಿಯಿಲ್ಲದೆ ಹೊರಟ ನನಗೆ ಇವರ ಬದುಕು ಮುಂದೆ ಸಾಗಲಿರುವ ಹಾದಿಗೆ ಸ್ಫೂರ್ತಿಯಾಯಿತು. ಹೊರಟೆ. ತುಸು ಮುಂದೆ ಹೋದರೆ ನೀಲಿ ನೀಲಿ. ಮಳೆಮಳೆಯಾಗಿ ಕಾಣುತ್ತಿದ್ದ ಹೂವುಗಳು!
ಹಾಗೆ ಎಲ್ಲೋ ಸಾಗಿ, 'ಮನುಷ್ಯರೇ ಇಲ್ಲದ ಈ ಜಗತ್ತು ಎಷ್ಟು ಚಂದ ಅಲ್ವಾ ಸತೀಶ' ಎಂದು ನನಗೇ ಕೇಳಿಸುವಂತೆ ಜೋರಾಗಿ ಕೇಳಿ ಒದ್ದೆಯಾದ ಮನಸ್ಸಲ್ಲಿ ಮನೆ ಸೇರಿದೆ. ಅದನ್ನು ಹಿಂಡಿ ಒಣಗಿಸಬೇಕೆಂಬ ಮನಸ್ಸಾಗಲಿಲ್ಲ!
*
2008, ಜನವರಿ 5. ಗೆಳೆಯ ಜಾನ್ ಸರ್ ಜೊತೆಗೆ ಬೆಳಿಗ್ಗೆ 6 ಗಂಟೆಗೆ ನಾವು ತಡಿಯಂಡಮೋಳ್ ಬೆಟ್ಟಕ್ಕೆ ಹೊರಟಿದ್ದೆವು. ಗಡಗಡ ಚಳಿ. ಕ್ಯಾಮರಾದ ರೀಲು ಮುಗಿದಿತ್ತು. ಮೊಬೈಲು ಇಲ್ಲ. ಗುಡ್ಡದ ತುದಿಗೆ 'ಎತ್ತಿದರೆ' ಒಂದು ಜಾತಿಯ ಗಿಡಗಳು ಬೆಟ್ಟಕ್ಕೆ ಬೇಲಿ ಹಾಕಿದ ಹಾಗೆ ಬೆಳೆದು ನಿಂತಿದ್ದವು. 'ಇವೇನು ಸರ್' ಕೇಳಿದ್ದೆ. 'ಇವೇ ಸಾರ್ ಕುರುಂಜಿ' ಎಂದಿದ್ದರು.
*
ಈ ವರ್ಷ ಮಾಂದಲ್ಪಟ್ಟಿ ,ತಡಿಯಂಡಮೋಳ್, ಪುಷ್ಪಗಿರಿ , ಕೋಟೆಬೆಟ್ಟ ಮುಂತಾದ ಕಡೆಗಳಲ್ಲಿ ಒಂದು ಜಾತಿಯ ಹೂವರಳಿದೆ. ಅದು ಆರೇಳು ವರ್ಷಗಳಿಗೊಮ್ಮೆ ಪೂರ್ಣವಾಗಿ ಅರಳುವ ಹೂವು. ಕೆಲವೊಮ್ಮೆ ಪ್ರತೀ ವರ್ಷ ಅಲ್ಲಲ್ಲಿ ಕಣ್ಣಿಗೆ ಬೀಳುವುದೂ ಉಂಟು. Strobilanthes sessilis ಎನ್ನುವ ಈ ಹೂವು ಮಾಳ ಕಾರ್ವಿ ಅಥವಾ ಟೋಪಲೀ ಕಾರ್ವಿ. ಪೂರ್ಣ ಅರಳಿದ ಮೇಲೆ 'ಕಟ್ಟೆ ' ಬಂದು ಗಿಡ ಒಣಗಿ ಬೀಜಗಳು ಮಣ್ಣಿಗೆ ಬಿದ್ದು, ಮಣ್ಣು ಪುಳಕಗೊಂಡು, ಅದನ್ನು ತನ್ನೊಳಗೆ ಜತನವಾಗಿ ಕಾಪಿಟ್ಟು, ಮತ್ತೆ ಅವಕ್ಕೆ ಹಸಿರು ಕೈಕಾಲುಗಳು ಮೊಳೆತು ಹೂವಾಗಬೇಕೆಂದರೆ ಎಷ್ಟೆಲ್ಲಾ ಸಂಕಟಗಳು (ತಾಯಂದಿರಿಗೇ ಗೊತ್ತು!). ಆಮೇಲೆ ಪಡ್ಡೆ ಹುಡುಗರು ಬಂದು ಹೂವಿನ ಪಕ್ಕ ನಿಂತು, ಮಲಗಿ, ಕುಣಿದು, ಎಣ್ಣೆ ಕುಡಿದು, ದಮ್ಮು ಹೊಡೆದು, 'ಲೋ ಮಚ್ಚಾ' ಎಂದು ಕಣ್ಣರಳಿಸಿ , ತುಟಿ ಉಬ್ಬಿಸಿ ಪಟ ತೆಗೆದುಕೊಳ್ಳುವುದನ್ನು ಆ ಹೂವುಗಳೇನಾದರೂ ನೋಡಿದರೆ ಮುಂದೆ ಅರಳುವುದನ್ನೇ ನಿಲ್ಲಿಸಿಬಿಟ್ಟಾವು!
ಇರಲಿ, ಅವು ಅರಳಿ ನಿಂತಿತೆಂದರೆ ನೀಲಿಬೆಟ್ಟ. ಬೆಟ್ಟಕ್ಕೆ ನೀಲಿ ಶಾಲುಹೊದಿಸಿ ಸನ್ಮಾನ ಮಾಡಿದ ಹಾಗೆ. ಮಾಧ್ಯಮಗಳು ಗೂಗಲಿಸಿ ಅದನ್ನು strobilanthes kunthiana ಎಂದು ನಂಬಿಸಿ ಅರಳಿನಿಂತ ಆ ಹೂವುಗಳಿಗಿಂತಲೂ ಖುಷಿಪಡುತ್ತಾರೆ. Youtuberಗಳ ಆಟ ನೋಡಬೇಕು!
ಆದರೆ 12 ವರ್ಷಗಳಿಗೊಮ್ಮೆ ಅರಳುವ ಕುರಿಂಜಿ 2018ರಲ್ಲಿ ಅರಳಿತ್ತು. ಇಷ್ಟು ಅಗಾಧವಾಗಿ ಅವು ಕಣ್ಣಿಗೆ ಬೀಳಲಿಲ್ಲ.
ಒಳ್ಳೆಯದೇ ಆಯಿತು!
*
ಕಾಜೂರು ಸತೀಶ್