ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, February 21, 2021

ಕೀಟಾಣು

' ನೆರೆಯ ರಾಷ್ಟ್ರದಲ್ಲಿ ಕಾಲಿನ ಮೂಲಕ ಶರೀರವನ್ನು ಪ್ರವೇಶಿಸುವ ಸೂಕ್ಷ್ಮ ಜೀವಿಯೊಂದಿದೆ, ಅದು ಹೃದಯವನ್ನು ಘಾಸಿಗೊಳಿಸುತ್ತದೆ, ಎಲ್ಲಾ ರಾಷ್ಟ್ರಗಳಿಗೆ ಅದು ಹಬ್ಬಲಿದೆ' ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಜಗತ್ತಿನ ಕಿವಿಗೆ ತಲುಪಿತು!

ದೇಶದ ಗಡಿಗಳನ್ನು ಭದ್ರಪಡಿಸಲಾಯಿತು. ವಿದೇಶದಲ್ಲಿರುವವರೆಲ್ಲ ಮರಳಲು ಒಂದು ವಾರದ ಗಡುವು ಕೊಡಲಾಯಿತು.

ಕಾಲಿಗೆ ಸಾಕ್ಸ್ ಧರಿಸುವುದು, ಶೂ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಧರಿಸದೆ ಬೀದಿಗಿಳಿಯುವವರ ಕಾಲು ಮುರಿಯಲಾಯಿತು. 

ಬಗೆಬಗೆಯ ಸಾಕ್ಸುಗಳು, ಶೂಗಳು ಮಾರುಕಟ್ಟೆಗೆ ಬಂದವು. ಅವುಗಳನ್ನು ಶುಚಿಗೊಳಿಸಲು ಸೋಪುಗಳು, ಪೌಡರುಗಳು, ಬ್ರಶ್ಶುಗಳು, ಪಾಲಿಶ್ಶುಗಳು, ಬಟ್ಟೆಗಳು.. 

ಹೊರಬರಲಾರದೆ ಜನ ಹಸಿವಿನಿಂದ ಸತ್ತರು. ಭಯದಿಂದ ಸತ್ತರು. ಎಷ್ಟೋ ಮಂದಿ ಹೃದಯಾಘಾತವಾಗಿ ಸತ್ತರು. ನಡೆದು ದಣಿದು ಸತ್ತರು...

 ಅವರ ಹೃದಯಗಳನ್ನು ಒಟ್ಟಿಗೆ  ಸುಡಲಾಯಿತು. 

ಹೀಗೇ ಮುಂದುವರಿಯಿತು. ತಿಂಗಳುಗಳ ನಂತರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳತೊಡಗಿತು.

'ಎಲ್ಲರೂ ಕಡ್ಡಾಯವಾಗಿ ಹೃದಯ ಪರೀಕ್ಷೆ ಮಾಡಿಸಬೇಕು ' ಎಂಬ ಆದೇಶ ಹೊರಬಂತು.

ಪರೀಕ್ಷೆ ನಡೆಯಿತು. ಅನೇಕ ಜನರಿಗೆ 'ಹೃದಯವೇ ಇಲ್ಲ' ಎಂಬ ವರದಿ ಹೊರಬಂದಿತು. ಅಂಥವರನ್ನು ಕೂಡಿಹಾಕಲಾಯಿತು.

ಕಡೆಗೆ ಒಂದು ಮಾತ್ರೆಯನ್ನು ಕಂಡುಹಿಡಿಯಲಾಯಿತು. ಬಲವಂತವಾಗಿ ಅದನ್ನು ನುಂಗಿಸಲಾಯಿತು. ಅದನ್ನು ನುಂಗಿದ ಕೆಲವರು ಸತ್ತರು.

ಕಾಡಂಚಿನ ಜನರು ಪರೀಕ್ಷೆ ಮಾಡಿಸಿಕೊಳ್ಳುವ ಭಯದಿಂದ, ಮಾತ್ರೆ ನುಂಗುವ ಭಯದಿಂದ  ಕಾಡಿನಲ್ಲಿ ಅಡಗಿ ಕುಳಿತರು. ಗೆಡ್ಡೆ ಗೆಣಸುಗಳನ್ನು ತಿಂದು, ಮೀನುಗಳನ್ನು ಸುಟ್ಟು ತಿಂದು ಸುಖೀ ಜೀವನ ನಡೆಸಿದರು.

*


ಕಾಜೂರು ಸತೀಶ್ 

Tuesday, February 16, 2021

ಕುರ್ಚಿ



-೧-
ಖರ್ಚಿಗೆ ಏನೂ ಇಲ್ಲದವನಂತೆ ಸುಮ್ಮನೆ ಕುಳಿತುಕೊಂಡಿದೆ ಕುರ್ಚಿ
ನಾಲ್ಕು ಕಾಲಿನ ಪ್ರಾಣಿ ಅಥವಾ ಎರಡು ಕೈ ಎರಡು ಕಾಲಿನ ಮನುಷ್ಯ
ಅಥವಾ ಧ್ಯಾನಕ್ಕೆ ಕುಳಿತ ಕಾಲೇ ಕಾಣದ ಒಂದು ಆಕೃತಿ
ಕುಳಿತಿದೆ ಅಥವಾ ನಿಂತಿದೆ ಅಥವಾ ಮಲಗಿದೆ ಅಥವಾ ಇದೆ
ಬೆನ್ನು ಬಾಗಿದೆ ಬೆನ್ನಿಗೆ ಆತುಕೊಂಡಿದ್ದರ ಕುರುಹಿಗಾಗಿ ತುಸು ಸವೆದಿದೆ ಕೈಯ ಹಿಡಿಯೂ

ಗಾಳಿಯ ಒಂದು ಭಾಗ ಬಂದು ಅದರ ಮೇಲೆ ಕುಳಿತಿದೆ ಅಂಡನ್ನೂ ಊರದಂತೆ
ಕುಳಿತೇ ಜಂಗಮನಾಗುವ ಸಂತನಂತೆ ಅವನ ಕಾಣದ ಮನಸ್ಸಿನಂತೆ
ಗಾಳಿಯ ತಲೆ ಮೇಲ್ಛಾವಣಿಗೆ ಬಡಿಯುತಿದೆ ಕೈ ಕಿಟಕಿಯೊಳಗೆ ತೂರಿಕೊಳುತಿದೆ ಒತ್ತಕ್ಷರವಿಲ್ಲದಂತೆ
ನಿಮ್ಮ ಕೆನ್ನೆಯನ್ನೊಮ್ಮೆ ಅದರ ತಂಪು ಮೈಗೆ ತಾಕಿಸಿ ನೋಡಿ
ಎಷ್ಟು ನಯ ಎಷ್ಟು ವಿನಯ ತುಟಿಯನೂ ಚಾಚಿ ಅದೇನೂ ಅಶ್ಲೀಲವಲ್ಲ ಬಿಡಿ

-೨-

ಒಂದೊಮ್ಮೆ ಅದರ ಕಾಲು ಮುರಿದರೆ? ಹಾಗೆ ಯೋಚಿಸುವುದು ತಪ್ಪು
ಆದರೂ ಮುರಿದರೆ ಅದು ಕೋಣೆಯೊಳಗೆ ಬಂಧಿಯಾಗಿರುವುದಿಲ್ಲ
ಜಂಗಮನಾಗಿ ಗೂಡ್ಸ್ ಆಟೋ ಏರುತ್ತದೆ
ಮತ್ತದಕ್ಕೆ ದೂರ ತೀರ ಯಾನ
ವಿಸ್ತಾರ ಜಗತ್ತು

-೩-

ಇಷ್ಟಗಲದ ದೇಹ ಆವರಿಸಿಕೊಂಡರೆ ಕುರ್ಚಿಯೊಳಗೆ
ನೆತ್ತಿ ಛಾವಣಿಗೂ ಮುಟ್ಟುವುದಿಲ್ಲ
ಕೈ ಕಿಟಕಿಯೊಳಗೂ ತೂರುವುದಿಲ್ಲ

ಆದರೂ ಅದರ ಹೆಸರಲ್ಲಿ
ಒಂದು ಹೂವು ಯಾಕಾಗಿ ಸಾಯುತ್ತದೋ
ಹನಿ ರಕುತ ಯಾಕಾಗಿ ಕೆಂಪಾಗಿ ನಾಚುವುದೋ
ಅಷ್ಟಗಲದ ಗಾಳಿ ಯಾಕಾಗಿ ಉಸಿರುಗಟ್ಟುವುದೋ

ಹೇಗೆ ಏರಿದರೂ
ನಾಲ್ಕೇ ನಾಲ್ಕು ಕಾಲು
ಮುಂದೆ ಇಬ್ಬರು
ಹಿಂದೆ ಇಬ್ಬರು!
*


ಕಾಜೂರು ಸತೀಶ್